ಒಂದೇ ವಾರದಲ್ಲಿ ಬೆಂಗಳೂರು ಸೇರಿ 3 ಕಡೆ ಚಿನ್ನ ಕಳ್ಳಸಾಗಣೆ: ಪರಸ್ಪರ ಇಂಟರ್ ಲಿಂಕ್? – GOLD SMUGGLING CASES
ದೆಹಲಿ, ಬೆಂಗಳೂರು ಮತ್ತು ಮುಂಬೈ ವಿಮಾಣ ನಿಲ್ದಾಣಗಳಲ್ಲಿ ಒಂದೇ ವಾರದಲ್ಲಿ ಪತ್ತೆಯಾದ ಚಿನ್ನ ಕಳ್ಳಸಾಗಣೆ ಪ್ರಕರಣಗಳಲ್ಲಿ ಲಿಂಕ್ ಇರುವ ಬಗ್ಗೆ ಡಿಆರ್‌ಐ ಅಧಿಕಾರಿಗಳು ಶಂಕಿಸಿದ್ದಾರೆ.
ಒಂದೇ ವಾರದಲ್ಲಿ ಬೆಂಗಳೂರು ಸೇರಿ 3 ಕಡೆ ಚಿನ್ನ ಕಳ್ಳ ಸಾಗಣೆ ಪ್ರಕರಣ |
ಬೆಂಗಳೂರು: ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಡಿ ಬಂಧಿಸಲ್ಪಟ್ಟಿರುವ ನಟಿ ರನ್ಯಾ ರಾವ್ ಹಿಂದೆ ಕಳ್ಳಸಾಗಣೆ ಜಾಲವೇ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳು ಶಂಕಿಸಿದ್ದಾರೆ. ಮಾರ್ಚ್ ಆರಂಭದಿಂದ ಒಂದು ವಾರದ ಅವಧಿಯಲ್ಲಿ ದೆಹಲಿ, ಬೆಂಗಳೂರು ಹಾಗೂ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆರು ಜನರನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದಾರೆ.
ಮೂರು ಪ್ರಕರಣಗಳ ಮಧ್ಯೆ ಲಿಂಕ್ ಇರುವ ಬಗ್ಗೆ ಶಂಕೆ ಹಾಗೂ ಮತ್ತಷ್ಟು ಚಿನ್ನ ಕಳ್ಳಸಾಗಣಿಕೆ ಪ್ರಕರಣಗಳು ಬಯಲಾಗುವ ಸಾಧ್ಯತೆಯಿದೆ ಎಂದು ಸಿಬಿಐ ಅಧಿಕಾರಿಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಕುರಿತು ಡಿಆರ್‌ಐ ಮೂಲಗಳು ತಿಳಿಸಿವೆ.
- ಮಾರ್ಚ್ 2ರಂದು ಮಯನ್ಮಾರ್‌ನಿಂದ 2 ಕೆ.ಜಿ, 158 ಗ್ರಾಂ ಚಿನ್ನದ ಸಮೇತ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೂವರು ಆರೋಪಿಗಳನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ಬಂಧಿತರ ಶೂಗಳಲ್ಲಿ ಚಿನ್ನ ಸಿಕ್ಕಿತ್ತು.
- ಮಾರ್ಚ್ 3ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಇಂಟರ್ನ್ಯಾಷನಲ್ ಏರ್‌ಪೋರ್ಟ್‌ಗೆ ಬಂದಿಳಿದಿದ್ದ ರನ್ಯಾ ರಾವ್ ಬಳಿ 14 ಕೆ.ಜಿ 200 ಗ್ರಾಂ ಚಿನ್ನದ ಗಟ್ಟಿ ಪತ್ತೆಯಾಗಿತ್ತು.
- ಮಾರ್ಚ್ 6ರಂದು ದುಬೈನಿಂದ ಮುಂಬೈನ ಛತ್ರಪತಿ ಶಿವಾಜಿ ಇಂಟರ್ನ್ಯಾಷನಲ್ ಏರ್‌ಪೋರ್ಟ್‌ಗೆ ಬಂದಿಳಿದ ಯುಎಇ ಹಾಗೂ ಒಮಾನ್ ಪ್ರಜೆಗಳಿಬ್ಬರನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ಆರೋಪಿಗಳು ಧರಿಸಿದ್ದ ಬೆಲ್ಟ್‌ಗಳಲ್ಲಿ ಒಟ್ಟು 21 ಕೆ.ಜಿ 281 ಗ್ರಾಂ ಚಿನ್ನದ ಗಟ್ಟಿಗಳು ದೊರೆತಿದ್ದವು.
-
ಒಂದು ವಾರದ ಅವಧಿಯಲ್ಲಿ ಬಯಲಾಗಿರುವ 3 ಪ್ರಕರಣಗಳ ನಡುವೆ ಪರಸ್ಪರ ಲಿಂಕ್ ಇರುವುದರ ಕುರಿತು ಶಂಕಿಸಿರುವ ಡಿಆರ್‌ಐ ಅಧಿಕಾರಿಗಳು, ಸಿಬಿಐ ಅಧಿಕಾರಿಗಳಿಗೂ ಮಾಹಿತಿ ರವಾನಿಸಿದ್ದಾರೆ. ಈ ಹಿಂದೆಯೂ ಸಹ ಸಾಕಷ್ಟು ಸಂದರ್ಭಗಳಲ್ಲಿ ಎರಡೂ ತನಿಖಾ ಸಂಸ್ಥೆಗಳು ಜಂಟಿಯಾಗಿ ಕಾರ್ಯಾಚರಣೆ ಕೈಗೊಂಡಿವೆ.
- 2018ರಲ್ಲಿ ದೆಹಲಿ ಇಂಟರ್ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ 17.73 ಕೆ.ಜಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಡಿಆರ್‌ಐ ಬಯಲಿಗೆಳೆದಿತ್ತು. ಬಳಿಕ ಪ್ರಕರಣದ ತನಿಖೆ ಕೈಗೊಂಡಿದ್ದ ಸಿಬಿಐ ಅಧಿಕಾರಿಗಳು, 2021ರಲ್ಲಿ ಇಬ್ಬರು ಮಾಜಿ ಕಸ್ಟಮ್ಸ್ ಅಧಿಕಾರಿಗಳು ಸೇರಿದಂತೆ 11 ಜನರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಿಕೊಂಡಿದ್ದರು.
- 2021ರಲ್ಲಿ ಸಿಬಿಐ ಹಾಗೂ ಡಿಆರ್‌ಐ ಅಧಿಕಾರಿಗಳು ಜಂಟಿಯಾಗಿ ತಪಾಸಣೆ ನಡೆಸಿ ಚಿನ್ನ ಕಳ್ಳಸಾಗಣೆ ಜಾಲವನ್ನು ಬಯಲಿಗೆಳೆದಿದ್ದರು. ಅದೇ ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸೇರಿದಂತೆ 30 ಜನರ ವಿರುದ್ಧ ಜನವರಿ 2023ರಲ್ಲಿ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿತ್ತು.
- 2019ರ ಆರಂಭದಲ್ಲಿ, ದುಬೈನಿಂದ ಕೇರಳದ ತಿರುವನಂತಪುರಂ ಇಂಟರ್ನ್ಯಾಷನಲ್ ಏರ್‌ಪೋರ್ಟ್‌ಗೆ ಸಾಗಿಸಲಾಗುತ್ತಿದ್ದ 25 ಕೆ.ಜಿ ಚಿನ್ನದ ಗಟ್ಟಿಗಳನ್ನು ಡಿಆರ್‌ಐ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ನಂತರ ಓರ್ವ ಕಸ್ಟಮ್ಸ್ ಅಧಿಕಾರಿ ಸೇರಿದಂತೆ 9 ಜನರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.