ಜಿದ್ದಾಜಿದ್ದಿನ ಪಂದ್ಯದಲ್ಲಿ ಗೆದ್ದು ಬೀಗಿದ ಅಫ್ಘಾನಿಸ್ತಾನ; ಇರ್ಫಾನ್ ಪಠಾಣ್ ಜಿಲೇಬಿ ಡ್ಯಾನ್ಸ್ – IRFAN PATHAN DANCE
ಚಾಂಪಿಯನ್ಸ್ ಟ್ರೋಫಿಯ ಜಿದ್ದಾಜಿದ್ದಿನ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ್ ತಂಡ ಜಯ ಸಾಧಿಸಿದ್ದಕ್ಕೆ ಇರ್ಫಾನ್ ಪಠಾಣ್ ನೃತ್ಯದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಅವರ ನೃತ್ಯದ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಲಾಹೋರ್ : ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 8 ರನ್ಗಳ ಭರ್ಜರಿ ಜಯ ಸಾಧಿಸಿದ ಅಫ್ಘಾನಿಸ್ತಾನವನ್ನು ಕ್ರಿಕೆಟ್ ಜಗತ್ತು ಶ್ಲಾಘಿಸುತ್ತಿದೆ. ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ತಮ್ಮದೇಯಾದ ಸ್ಟೈಲ್ನಲ್ಲಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಫ್ಘಾನಿಸ್ತಾನ್ ತಂಡವನ್ನು ಇರ್ಫಾನ್ ಪಠಾಣ್ ಅಭಿನಂದಿಸಿದ್ದಾರೆ. ಸದ್ಯ ಅವರ ನೃತ್ಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಲಾಹೋರ್ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡವು ಆರಂಭಿಕ ಆಟಗಾರ ಇಬ್ರಾಹಿಂ ಝದ್ರನ್ ಅವರ ಅಮೋಘ ಆಟದಿಂದ 325 ರನ್ ಗಳಿಸಿತು. ರೋಮಾಂಚಕ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 8 ರನ್ಗಳಿಂದ ಸೋಲುವ ಮೂಲಕ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದಲೇ ಹೊರಬಿದ್ದಿತು. ಬಲಿಷ್ಠ ತಂಡವೊಂದನ್ನು ಮಣಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟ ಅಫ್ಘಾನಿಸ್ತಾನ ತಂಡಕ್ಕೆ ಇರ್ಫಾನ್ ಪಠಾಣ್ ನೃತ್ಯದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ‘ಇಂಗ್ಲೆಂಡ್ ವಿರುದ್ಧ ಅಫ್ಘಾನಿಸ್ತಾನಕ್ಕೆ ಮತ್ತೊಂದು ಐಸಿಸಿ ಗೆಲುವು’ ಎಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಬಾಲಿವುಡ್ನ ಹಾಡು ಅಫ್ಘಾನ್ ಜಿಲೇಬಿಗೆ ನೃತ್ಯ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಇರ್ಫಾನ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ವಿಡಿಯೋಗೆ ಅಫ್ಘಾನಿಸ್ತಾನ್ ತಂಡದ ಸ್ಟಾರ್ ಆಟಗಾರ ರಶೀದ್ ಖಾನ್ ಪ್ರತಿಕ್ರಿಯಿಸಿದ್ದು, ನಾನಿಲ್ಲದೇ ನೀವು ಡ್ಯಾನ್ಸ್ ಮಾಡಿದ್ದು ತಪ್ಪು ಎಂದು ಕಾಲೆಳೆದಿದ್ದಾರೆ. ಅಲ್ಲದೆ ಇರ್ಫಾನ್ ಪಠಾಣ್ ಅವರ ಬೆಂಬಲಕ್ಕೆ ಧನ್ಯವಾದವನ್ನು ಸಹ ಅರ್ಪಿಸಿದ್ದಾರೆ. ಈ ಹಿಂದೆ 2023ರ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ್ ತಂಡವನ್ನು ಸೋಲಿಸಿದ್ದ ಅಫ್ಘಾನಿಸ್ತಾನ್ ತಂಡದ ಜೊತೆ ಇರ್ಫಾನ್ ಪಠಾಣ್ ಮೈದಾನದಲ್ಲೇ ಡ್ಯಾನ್ಸ್ ಮಾಡಿದ್ದರು. ಅಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟಿಗ ರಶೀದ್ ಖಾನ್ ಅವರೊಂದಿಗೆ ಮೈದಾನದ ಮಧ್ಯದಲ್ಲಿ ನೃತ್ಯ ಮಾಡುವ ಮೂಲಕ ಇರ್ಫಾನ್ ಪಠಾಣ್ ಅವರು ಇರ್ಫಾನ್ ಪಠಾಣ್ ತಂಡದ ಆಟಗಾರರಿಗೆ ಹತ್ತಿರವಾಗಿದ್ದರು.
ಲಾಹೋರ್ನ ಗಢಾಫಿ ಸ್ಟೇಡಿಯಂನಲ್ಲಿ ಬುಧವಾರ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ಪರ ಆರಂಭಿಕ ಆಟಗಾರ ಇಬ್ರಾಹಿಂ ಝದ್ರಾನ್ (177) ಭರ್ಜರಿ ಶತಕ ಸಿಡಿಸಿದ್ದರು. ಈ ಶತಕದ ನೆರವಿನಿಂದ ಅಫ್ಘಾನಿಸ್ತಾನ್ ತಂಡ 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 325 ರನ್ ಕಲೆಹಾಕಿತ್ತು. ಈ 326 ಬೃಹತ್ ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ಪರ ಜೋ ರೂಟ್ (120) ಸೆಂಚುರಿ ಬಾರಿಸಿದ್ದರು. ಇದಾಗ್ಯೂ ಇಂಗ್ಲೆಂಡ್ ತಂಡ 49.5 ಓವರ್ಗಳಲ್ಲಿ 317 ರನ್ಗಳಿಸಲಷ್ಟೇ ಶಕ್ತರಾದರು. ಕ್ಷಣ ಕ್ಷಣಕ್ಕೂ ಕುತೂಹಲಕ್ಕೆ ಮೂಡಿಸಿದ್ದರಿಂದ ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲೇ ಇದೊಂದು ಅತ್ಯಂತ ರೋಮಾಂಚಕ ಪಂದ್ಯವಾಗಿದೆ.