ನ್ಯಾಟೊ, ವಿಶ್ವಸಂಸ್ಥೆಯಿಂದ ಯುಎಸ್ ಹೊರಬರಲಿ: ಎಲೋನ್ ಮಸ್ಕ್ ಪುನರುಚ್ಚಾರ – ELON MUSK
ಅಮೆರಿಕ ನ್ಯಾಟೊದಿಂದ ಹೊರಬರಬೇಕೆಂಬ ವಾದಕ್ಕೆ ಮಸ್ಕ್ ಬೆಂಬಲ ನೀಡಿದ್ದಾರೆ.
ವಾಷಿಂಗ್ಟನ್: ಉಕ್ರೇನ್ ಯುದ್ಧದ ಬಗ್ಗೆ ಯುಎಸ್ ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳ ನಡುವೆ ಹೆಚ್ಚಾಗುತ್ತಿರುವ ಭಿನ್ನಾಭಿಪ್ರಾಯಗಳ ಮಧ್ಯೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಕಟ ಸಲಹೆಗಾರ ಮತ್ತು ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥ ಎಲೋನ್ ಮಸ್ಕ್ ಅವರು ನ್ಯಾಟೋ ಮತ್ತು ಯುಎನ್ ಎರಡರಿಂದಲೂ ಯುಎಸ್ ಹಿಂದೆ ಸರಿಯುವುದನ್ನು ಸಾರ್ವಜನಿಕವಾಗಿ ಬೆಂಬಲಿಸಿದ್ದಾರೆ.
“ಇದು ನ್ಯಾಟೋ ಮತ್ತು ಯುಎನ್ ಗಳನ್ನು ತೊರೆಯುವ ಸಮಯ” ಎಂದು ರಾಜಕೀಯ ವಿಶ್ಲೇಷಕ ಮತ್ತು ಮ್ಯಾಗಾ ಕಾರ್ಯಕರ್ತ (MAGA activist) ಗುಂಥರ್ ಈಗಲ್ಮನ್ ಅವರು ಎಕ್ಸ್ನಲ್ಲಿ ಮಾಡಿದ ಪೋಸ್ಟ್ಗೆ ಎಲೋನ್ ಮಸ್ಕ್ ಅವರು, “ನಾನು ಇದನ್ನು ಒಪ್ಪುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ. ಇದೇ ರೀತಿಯ ಕ್ರಮಕ್ಕೆ ಕರೆ ನೀಡಿದ ರಿಪಬ್ಲಿಕನ್ ಸೆನೆಟರ್ ಮೈಕ್ ಲೀ ಅವರ ಪೋಸ್ಟ್ ಅನ್ನು ಮಸ್ಕ್ ಹಂಚಿಕೊಂಡಿದ್ದಾರೆ.
ಫೆಬ್ರವರಿಯಲ್ಲಿ, ಉತಾಹ್ನ ಸೆನೆಟರ್ ಲೀ ಅವರು ವಿಶ್ವಸಂಸ್ಥೆಯಿಂದ ಯುಎಸ್ ಸಂಪೂರ್ಣವಾಗಿ ಹೊರಬರಬೇಕೆಂದು ಹೇಳಿದ್ದರು. ಅಮೆರಿಕದಿಂದ ಅಪಾರ ಧನಸಹಾಯದ ಹೊರತಾಗಿಯೂ ಯುದ್ಧ, ನರಮೇಧಗಳು, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಾಧ್ಯವಾಗದ ವಿಶ್ವಸಂಸ್ಥೆಯು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ಮೇಲೆ ದಾಳಿ ಮಾಡುವ ನಿರಂಕುಶಾಧಿಕಾರಿಗಳ ವೇದಿಕೆ ಎಂದು ಅವರು ಆರೋಪಿಸಿದ್ದರು.
ಆ ಸಂದರ್ಭದಲ್ಲಿ ಮಸ್ಕ್ ಲೀ ಅವರ ನಿಲುವನ್ನು ಬೆಂಬಲಿಸಿದ್ದರು. “ಯುಎನ್ ಮತ್ತು ಸಂಬಂಧಿತ ಸಂಸ್ಥೆಗಳಿಗೆ ಅಮೆರಿಕ ಅಪಾರ ಪ್ರಮಾಣದ ಧನ ಸಹಾಯ ಮಾಡುತ್ತದೆ ” ಎಂದು ಮಸ್ಕ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು.
ನ್ಯಾಟೋದಲ್ಲಿ ಯುಎಸ್ ಸದಸ್ಯತ್ವವನ್ನು ಮಸ್ಕ್ ಪ್ರಶ್ನಿಸುತ್ತಿರುವುದು ಇದೇ ಮೊದಲಲ್ಲ. ನ್ಯಾಟೋದಲ್ಲಿ ಯುಎಸ್ ಸದಸ್ಯನಾಗಿರುವುದು “ಅನಾಕ್ರೋನಿಸ್ಟಿಕ್” ಎಂದು ಕಳೆದ ತಿಂಗಳು ಅವರು ಇದನ್ನು ಮಸ್ಕ್ ಕರೆದಿದ್ದರು ಮತ್ತು ಶೀತಲ ಸಮರದ ನಂತರದ ಯುಗದಲ್ಲಿ ಇದು ಪ್ರಸ್ತುತವಲ್ಲ ಎಂದು ಹೇಳಿದ್ದರು.
ಯುರೋಪಿನ ರಕ್ಷಣಾ ವೆಚ್ಚದ ಗಮನಾರ್ಹ ಭಾಗವನ್ನು ಅಮೆರಿಕದ ತೆರಿಗೆದಾರರು ಭರಿಸುವುದರ ಹಿಂದಿನ ತಾರ್ಕಿಕತೆಯನ್ನು ಪ್ರಶ್ನಿಸಿದ ಅವರು, ಯುಎಸ್ ತನ್ನ ಜಿಡಿಪಿಯ ಕೇವಲ 3.5 ಪ್ರತಿಶತವನ್ನು ರಕ್ಷಣೆಗಾಗಿ ಖರ್ಚು ಮಾಡಿದರೂ, ನ್ಯಾಟೋದ ಮಿಲಿಟರಿ ವೆಚ್ಚದ ಸುಮಾರು 67 ಪ್ರತಿಶತವನ್ನು ಪಾವತಿಸುತ್ತದೆ ಎಂದು ಒತ್ತಿ ಹೇಳಿದ್ದರು.
ಯುರೋಪಿಯನ್ ಭದ್ರತೆಗೆ ಯುಎಸ್ ಅಸಮರ್ಥನೀಯ ಆರ್ಥಿಕ ಹೊರೆಯನ್ನು ಭರಿಸುತ್ತಿದೆ ಎಂದ ಟ್ರಂಪ್, ಸದಸ್ಯ ರಾಷ್ಟ್ರಗಳು ತಮ್ಮ ಪಾಲಿನ ರಕ್ಷಣಾ ವೆಚ್ಚಗಳನ್ನು ಹೆಚ್ಚಿಸದಿದ್ದರೆ ನ್ಯಾಟೋದಿಂದ ಹಿಂದೆ ಸರಿಯುವುದಾಗಿ ಹೇಳಿದ್ದರು.