ಪಾಕ್ನಲ್ಲಿ ಬಲೂಚಿಸ್ತಾನ್ ಬಂಡುಕೋರರ ದಂಗೆ: 9 ಬೋಗಿಗಳ ರೈಲು ಹೈಜಾಕ್, ಒತ್ತೆಯಾಳಾದ 400 ಪ್ರಯಾಣಿಕರು! – PAKISTAN TRAIN HIJACK
ಪಾಕಿಸ್ತಾನದಿಂದ ಬಲೂಚಿಸ್ತಾನವನ್ನು ಪ್ರತ್ಯೇಕಿಸಬೇಕೆಂದು ಹೋರಾಟ ನಡೆಸುತ್ತಿರುವ ಬಲೂಚ್ ಲಿಬರೇಶನ್ ಆರ್ಮಿಯು ರೈಲು ಅಪಹರಿಸಿ, ಸುಮಾರು 400 ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ.
ಪಾಕ್ನಲ್ಲಿ ರೈಲು ಹೈಜಾಕ್ (IANS) |
ಬಲೂಚಿಸ್ತಾನ್(ಪಾಕಿಸ್ತಾನ): ಪಾಕಿಸ್ತಾನದಲ್ಲಿ ಹೈಜಾಕ್ ಮಾಡಲಾದ ಜಾಫರ್ ಎಕ್ಸ್ ಪ್ರೆಸ್ ರೈಲಿನ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿರುವುದಾಗಿ ಬಲೂಚ್ ಲಿಬರೇಶನ್ ಆರ್ಮಿ ಮಂಗಳವಾರ ತಿಳಿಸಿದೆ. ಪಾಕಿಸ್ತಾನದ ಭದ್ರತಾ ಪಡೆಗಳು ಕಾರ್ಯಾಚರಣೆ ಪ್ರಾರಂಭಿಸಿದರೆ ಒತ್ತೆಯಾಳುಗಳನ್ನು ಹತ್ಯೆ ಮಾಡುವುದಾಗಿ ಬಲೂಚ್ ಲಿಬರೇಶನ್ ಆರ್ಮಿ ಎಚ್ಚರಿಕೆ ನೀಡಿದೆ.
ಒಂಬತ್ತು ಬೋಗಿಗಳಲ್ಲಿ ಸುಮಾರು 400 ಪ್ರಯಾಣಿಕರನ್ನು ಹೊತ್ತ ಜಾಫರ್ ಎಕ್ಸ್‌ಪ್ರೆಸ್, ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರ್‌ಗೆ ತೆರಳುತ್ತಿದ್ದಾಗ, ಬಲೂಚ್ ಲಿಬರೇಶನ್ ಆರ್ಮಿ ರೈಲಿನ ಮೇಲೆ ಗುಂಡು ಹಾರಿಸಿದೆ, ಇದರಲ್ಲಿ ರೈಲಿನ ಚಾಲಕ ಗಾಯಗೊಂಡು ರೈಲನ್ನು ನಿಲ್ಲಿಸಿದಾಗ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಜಾಫರ್ ಎಕ್ಸ್‌ಪ್ರೆಸ್ ಹೈಜಾಕ್ ನಂತರ ಪಾಕಿಸ್ತಾನಿ ಸೇನೆಯ ದಾಳಿಯನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಲಾಗಿದೆ. 100ಕ್ಕೂ ಹೆಚ್ಚು ಪಾಕಿಸ್ತಾನದ ಆರ್ಮಿ ಅಧಿಕಾರಿಗಳೂ ವಶದಲ್ಲಿದ್ದಾರೆ ಎಂದು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪ್ರಕಟಣೆಯಲ್ಲಿ ತಿಳಿಸಿದೆ.
ತೀವ್ರ ಘರ್ಷಣೆ ನಂತರ, ಪಾಕಿಸ್ತಾನದ ಭೂ ಸೇನೆ ಹಿಂದೆ ಸರಿಯಬೇಕಾಯಿತು, ಆದರೆ ಹೆಲಿಕಾಪ್ಟರ್ಗಳು ಮತ್ತು ಡ್ರೋನ್ ಮೂಲಕ ವೈಮಾನಿಕ ದಾಳಿ ಮುಂದುವರೆದಿವೆ.
ವೈಮಾನಿಕ ಬಾಂಬ್ ನಿಲ್ಲಿಸದಿದ್ದರೆ ಒತ್ತೆಯಾಳುಗಳ ಹತ್ಯೆ : ವೈಮಾನಿಕ ಬಾಂಬ್ ದಾಳಿಯನ್ನು ತಕ್ಷಣವೇ ನಿಲ್ಲಿಸದಿದ್ದರೆ, ಮುಂದಿನ ಒಂದು ಗಂಟೆಯೊಳಗೆ ಎಲ್ಲಾ ಒತ್ತೆಯಾಳುಗಳನ್ನು ಹತ್ಯೆ ಮಾಡಲಾಗುವುದು ” ಎಂದು ಬಿಎಲ್‌ಎ ಅಂತಿಮ ಎಚ್ಚರಿಕೆ ನೀಡಿದೆ.
ಪಾಕಿಸ್ತಾನ ಪಡೆಗಳಿಗೆ ವೈಮಾನಿಕ ದಾಳಿಯನ್ನು ನಿಲ್ಲಿಸಲು ಮತ್ತು ತಮ್ಮ ಸೈನಿಕರನ್ನು ರಕ್ಷಿಸಿಕೊಳ್ಳಲು ಇನ್ನೂ ಅವಕಾಶವಿದೆ. ಇಲ್ಲದಿದ್ದರೆ ಎಲ್ಲಾ ಒತ್ತೆಯಾಳುಗಳನ್ನು ಹತ್ಯೆ ಮಾಡಿದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ಪಾಕಿಸ್ತಾನ ಮಿಲಿಟರಿ ಹೊರಬೇಕಾಗುತ್ತದೆ ” ಎಂದು ಬಲೂಚ್ ಲಿಬರೇಶನ್ ಆರ್ಮಿಯ ವಕ್ತಾರ ಜೀಯಾಂಡ್ ಬಲೂಚ್ ತಿಳಿಸಿದ್ದಾರೆ.
ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ಇಂದು ಮುಂಜಾನೆ ವರದಿ ಮಾಡಿದ ಪ್ರಕಾರ, ಜಾಫರ್ ಎಕ್ಸ್‌ಪ್ರೆಸ್ ರೈಲು ಪಾಕಿಸ್ತಾನದ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರ್‌ಗೆ ತೆರಳುತ್ತಿದ್ದಾಗ ಬಲೂಚಿಸ್ತಾನ್‌ನಲ್ಲಿ ರೈಲಿನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ ಮತ್ತು 450ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಗಿದೆ ಎಂದು ವರದಿ ಮಾಡಿವೆ.