Last Updated:
ಸವಣಾಲು ಗ್ರಾಮದ ಭೈರವ ಕಲ್ಲು ಬೆಟ್ಟದ ದೈವಸ್ಥಾನವು ಭಕ್ತರನ್ನು ಸೆಳೆಯುತ್ತದೆ. ಪುರುಷರಾಯ ದೈವದ ನೇಮೋತ್ಸವದಲ್ಲಿ ಭಕ್ತರು ಶ್ರದ್ದಾಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ದೈವದ ಆರಾಧನೆ, ನಂಬಿಕೆಗಳು ಇಂದಿಗೂ ಜೀವಂತವಾಗಿವೆ.
ದಕ್ಷಿಣ ಕನ್ನಡ: ತುಳುನಾಡಿನಲ್ಲಿ ಬೆಟ್ಟದ ಮೇಲಿರುವ ದೈವಸ್ಥಾನಗಳು (Devotional Places) ಹಲವಾರು ಇವೆ. ಆ ಬೆಟ್ಟಗಳ ಇತಿಹಾಸ, ಅಲ್ಲಿನ ಶ್ರದ್ಧೆ, ಜನರ ಆರಾಧನೆ ಎಲ್ಲವೂ ವೈಶಿಷ್ಟ್ಯವಾಗಿದೆ. ಈ ರೀತಿ ಬೆಟ್ಟದ ಮೇಲಿರುವ ದೈವಸ್ಥಾನಗಳ ಪೈಕಿ ಬೆಳ್ತಂಗಡಿ (Belthangady) ತಾಲೂಕಿನ ಸವಣಾಲು ಗ್ರಾಮದ ಭೈರವ ಕಲ್ಲು ಬೆಟ್ಟವೂ ಒಂದು. ಗುಡ್ಡದ ಮೇಲ್ಭಾಗದಲ್ಲಿ ಕಲ್ಲಿನ ಮೇಲೆ ನೆಲೆಯಾಗಿರುವ ಭೈರವ, ಮೂಜಿಲ್ನಾಯ, ಪುರುಷರಾಯ ದೈವದ ಸಹಿತ ಸಾನಿಧ್ಯ ದೂರದೂರದ ಭಕ್ತರನ್ನು (Devotees) ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಸುತ್ತಲೂ ಕುದುರೆಮುಖ ಗಿರಿಶಿಖರ ಶ್ರೇಣಿ, ನಡುವಿನಲ್ಲಿರುವ ಕಲ್ಲಿನ ಮೇಲೆ ನಡೆದ ದೈವದ ನೇಮೋತ್ಸದಲ್ಲಿ ಜನ ಶ್ರದ್ದಾಭಕ್ತಿಯಿಂದ ಪಾಲ್ಗೊಂಡಿದ್ದಾರೆ.
ಈ ದೇವಸ್ಥಾನದ ನೇಮೋತ್ಸವದ ಪೈಕಿ ವಿಶೇಷ ಆಕರ್ಷಣೆ ಪುರುಷರಾಯ ದೈವದ ನೇಮೋತ್ಸವ. ಘಟ್ಟದ ಮೇಲಿಂದ ತುಳುನಾಡಿಗೆ ಕಾಲಿಟ್ಟ ಪುರುಷರಾಯ ತುಳುನಾಡಿನ ಹಲವು ಭಾಗಗಳಲ್ಲಿ ನೆಲೆನಿಂತಿದ್ದಾನೆ.ಭೈರವ ಕಲ್ಲಿನಲ್ಲೂ ಭೈರವ, ಮೂಜಿಲ್ನಾಯನ ನೇಮೋತ್ಸವದ ನಡುವಿನಲ್ಲಿ ಪುರುಷರಾಯ ದೈವದ ನೇಮೋತ್ಸವ ನಡೆಯುತ್ತದೆ.
ದೈವದ ನೇಮೋತ್ಸವಕ್ಕೆ ಎಣ್ಣೆ ಭೂಳ್ಯ ನೀಡುವ ಸಂದರ್ಭದಲ್ಲೇ ದೈವ ಪಾತ್ರಿಗೆ ಪುರುಷರಾಯ ದೈವದ ಆವೇಶವಾಗುತ್ತದೆ. ಬಳಿಕ ಎಲ್ಲರೂ ಪಾತ್ರಿಯನ್ನು ಹಿಡಿದುಕೊಂಡೇ ದೈವದ ಪೋಷಾಕುಗಳನ್ನು ಪಾತ್ರಿಗೆ ಉಡಿಸುತ್ತಾರೆ. ಬಳಿಕವೂ ಆವೇಶದಲ್ಲೇ ನರ್ತನ ಸೇವೆ ನಡೆಯಲಿದೆ.
ಸಂಪೂರ್ಣ ಕನ್ನಡದಲ್ಲೇ ಸಂವಹನ ನಡೆಸುವ ಪುರುಷರಾಯನಿಗೆ ಜನ ಒಪ್ಪಿಸುವ ಪ್ರಮುಖ ಹರಕೆ ಬೀಡಿ. ದೈವದ ಭಾರಣೆಯ ಸಂದರ್ಭದಲ್ಲಿ ಪ್ರಸಾದ ರೂಪದಲ್ಲಿ ಜನ ದೈವದ ಜೊತೆಗೆ ಬೀಡಿ ಸೇದುವುದು ವಿಶೇಷ. ಕಾಲ ಎಷ್ಟೇ ಬದಲಾದರೂ, ಜನ ಮಾತ್ರ ಇಂದಿಗೂ ತಾವು ನಂಬಿದ ದೈವದ ಆರಾಧನೆ, ಹಿರಿಯರು ತೋರಿಸಿದ ಆರಾಧನೆಯ ಮಾರ್ಗವನ್ನು ಬದಲಾಯಿಸದೇ ಇರೋದು, ದೈವದ ಮೇಲಿನ ನಂಬಿಕೆಗೆ ಸಾಕ್ಷಿಯಾಗಿದೆ.
Dakshina Kannada,Karnataka