ರಾಜಮೌಳಿ – ಮಹೇಶ್ ಬಾಬು ಸಿನಿಮಾ ಶೂಟಿಂಗ್ಗೆ ಬೃಹತ್ ಸೆಟ್: SSMB29 ಫೋಟೋ ವೈರಲ್ – SSMB29
ಮಹೇಶ್ ಬಾಬು ಹಾಗೂ ಎಸ್ಎಸ್ ರಾಜಮೌಳಿ ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರದ ಶೂಟಿಂಗ್ ಸೆಟ್ ಫೋಟೋ ವೈರಲ್ ಆಗಿದೆ.
‘SSMB 29’ ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ಕಾಂಬಿನೇಶನ್ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ. ಸಿನಿಮಾಗೆ ಸಂಬಂಧಿಸಿದಂತೆ ಮಾಹಿತಿಯನ್ನು ಆರಂಭದಿಂದಲೂ ಗೌಪ್ಯವಾಗಿಡಲಾಗಿದೆ. ಪೂಜಾ ಕಾರ್ಯಕ್ರಮ, ಚಿತ್ರೀಕರಣ ಆರಂಭ ಅಥವಾ ಪಾತ್ರವರ್ಗದ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ಮಾಹಿತಿಯನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದ್ರೀಗ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಶೂಟಿಂಗ್ ಸೆಟ್ ಫೋಟೋ ವೈರಲ್: ಸಿನಿಮಾಗೆ ಸಂಬಂಧಿಸಿದಂತೆ ಫೋಟೋವೊಂದು ವೈರಲ್ ಆಗುತ್ತಿದೆ. ಈ ಸೆಟ್ ಅನ್ನು ಹೈದರಾಬಾದ್‌ನಲ್ಲಿ ನಿರ್ಮಿಸಲಾಗಿದೆ ಎಂದು ತೋರುತ್ತಿದೆ. ಈ ಬೃಹತ್ ಸೆಟ್‌ನಲ್ಲಿ ವಾರಾಣಸಿ ದೇವಾಲಯ ಗೋಚರಿಸಿದೆ. ಈ ಹಿಂದೆ, ಮಹೇಶ್ ಬಾಬು ವಾರಾಣಸಿ ಸೆಟ್‌ನಲ್ಲಿ ಶೂಟಿಂಗ್ ನಡೆಸಲಿದ್ದಾರೆ ಎಂಬ ವರದಿಗಳು ಬಂದಿದ್ದವು. ಅದೇ ಸೆಟ್‌ನಂತೆ ತೋರುವ ಫೋಟೋಗಳೀಗ ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ವೈರಲ್ ಆಗುತ್ತಿವೆ. ಅಲ್ಲದೇ ಮಹೇಶ್ ಬಾಬು ಅವರ ಮುಂದಿನ ಚಿತ್ರೀಕರಣ ಅಲ್ಲೇ ನಡೆಯಲಿದೆ ಎಂದು ಬರೆದು ನೆಟ್ಟಿಗರು ಈ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದಾರೆ. ಒಡಿಶಾ ಶೆಡ್ಯೂಲ್ ನಂತರ ‘ಎಸ್ಎಸ್ಎಂಬಿ 29’ ಚಿತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಮಹೇಶ್ ಬಾಬು ಸಿನಿಮಾದಲ್ಲಿ ಮಲಯಾಳಂ ಸ್ಟಾರ್: ಈ ದೊಡ್ಡ ಪ್ರಾಜೆಕ್ಟ್ನಲ್ಲಿ ಮಲಯಾಳಂನ ಬಹುಬೇಡಿಕೆ ನಟ ಪೃಥ್ವಿರಾಜ್ ಸುಕುಮಾರನ್ ನಟಿಸಲಿದ್ದಾರೆ ಎಂಬ ವರದಿಗಳು ಬಹಳ ಸಮಯದಿಂದಲೂ ಇದೆ. ಅದರಂತೆ ಸೌತ್ ಸೂಪರ್ ಸ್ಟಾರ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದರು. ಇದು SSMB29ರ ಸುಳಿವು ನೀಡುತ್ತಿದೆ ಎಂದು ನೆಟ್ಟಿಗರು ತಿಳಿಸಿದ್ದರು. “ನಿರ್ದೇಶಕನಾಗಿ ನಾನು ನನ್ನ ಕೈಯಲ್ಲಿರುವ ಎಲ್ಲಾ ಸಿನಿಮಾಗಳನ್ನು ಪೂರ್ಣಗೊಳಿಸಿದ್ದೇನೆ. ಅವುಗಳಿಗೆ ಸಂಬಂಧಿಸಿದ ಮಾರ್ಕೆಟಿಂಗ್ ಕೆಲಸವೂ ಪೂರ್ಣಗೊಂಡಿದೆ. ಇದೀಗ ನಟನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲು ತಯಾರಿ ನಡೆಸುತ್ತಿದ್ದೇನೆ. ನಾನು ವಿದೇಶಿ ಭಾಷೆಯ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ. ಇದರಲ್ಲಿ ದೊಡ್ಡ ಡೈಲಾಗ್ಸ್ ಇವೆ ಎಂಬುದನ್ನು ತಿಳಿದು ನನಗೆ ಸ್ವಲ್ಪ ಭಯವಾಗುತ್ತಿದೆ” ಎಂದು ಸುಕುಮಾರನ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು. ಹಾಗಾಗಿ, ರಾಜಮೌಳಿ-ಮಹೇಶ್ ಬಾಬು ಕಾಂಬಿನೇಶನ್ನ ಚಿತ್ರಕ್ಕಾಗಿ ಪೃಥ್ವಿರಾಜ್ ತಮ್ಮೆಲ್ಲಾ ಸಿನಿಮಾ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆಂದು ನೆಟ್ಟಿಗರು ಊಹಿಸಿದ್ದಾರೆ.
ಇದನ್ನೂ ಓದಿ: ‘ನನಗೂ ಹಾಗನಿಸಿದೆ, ಓರ್ವ ತಂದೆಯಾಗಿ ಈ ಮಾತನ್ನು ಹೇಳುತ್ತಿಲ್ಲ’: ನೆಪೋಟಿಸಂ ಬಗ್ಗೆ ಅಮಿತಾಭ್ ಬಚ್ಚನ್ ಹೇಳಿದ್ದಿಷ್ಟು
ಕಾಡಿನ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಮಹೇಶ್ ಬಾಬು ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈವರೆಗೆ ನಿರ್ವಹಿಸದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಪ್ರೇಕ್ಷಕರನ್ನು ಮನರಂಜಿಸುವ ಭರವಸೆಯಿದೆ. ಸಿನಿಮಾಗೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸುತ್ತಿದ್ದರೆ, ವಿಜಯೇಂದ್ರ ಪ್ರಸಾದ್ ಕಥೆ ಒದಗಿಸಿದ್ದಾರೆ.