ಮೊಬೈಲ್‌ನಲ್ಲಿ Airplane Mode ಇರೋದ್ಯಾಕೆ? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? | What is the purpose of airplane mode here is the different ways to use it

ಮೊಬೈಲ್‌ನಲ್ಲಿ Airplane Mode ಇರೋದ್ಯಾಕೆ? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? | What is the purpose of airplane mode here is the different ways to use it

Last Updated:

Airplane Mode: ನಾವು ವಿಮಾನದಲ್ಲಿ ಹೋಗದಿದ್ದರೆ, ಸ್ಮಾರ್ಟ್‌ಫೋನ್‌ನಲ್ಲಿರುವ ಈ ಮೋಡ್ನಿಂದ ಯಾವುದೇ ಪ್ರಯೋಜನವಿಲ್ಲ, ಹಾಗಾದರೆ ಈ ಆಪ್ಷನ್ ಅನ್ನು ಏಕೆ ಇಟ್ಟುಕೊಳ್ಳಬೇಕು? ಎಂದು ಜನರು ಯೋಚಿಸುತ್ತಾರೆ. ಆದರೆ ಈ ‘ಏರ್‌ಪ್ಲೇನ್ ಮೋಡ್’ ವಿಮಾನ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿಲ್ಲ, ಅದನ್ನು ವಿಭಿನ್ನ ಸಂದರ್ಭಗಳಲ್ಲಿ ಬಳಸಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ. ಹಾಗಾದ್ರೆ, ಈ ಮೋಡ್ ನಿಖರವಾಗಿ ಏನು ಮಾಡುತ್ತದೆ? ಎನ್ನುವುದಕ್ಕೆ ಇಲ್ಲಿದೆ ಉತ್ತರ:

ಏರ್‌ಪ್ಲೇನ್ ಮೋಡ್ಏರ್‌ಪ್ಲೇನ್ ಮೋಡ್
ಏರ್‌ಪ್ಲೇನ್ ಮೋಡ್

Airplane Mode: ನೀವು ವಿಮಾನ ಪ್ರಯಾಣಕ್ಕೆ (Airplane travel) ಹೋಗುವಾಗ ಟೇಕ್‌ಆಫ್ ಮುನ್ನ ಏನು ಮಾಡುತ್ತೀರಿ ಎಂದು ಕೇಳಿದರೆ, ಬಹುತೇಕ ಜನರು ಒಂದು ಸಲ ಫೋನ್ (Phone) ಅನ್ನು ಏರ್‌ಪ್ಲೇನ್ ಮೋಡ್‌ಗೆ (Airplane Mode) ಹಾಕುವುದು ಎಂದು ಹೇಳುತ್ತಾರೆ. ಅದು ಅಲ್ಲಿ ಟಿಕೆಟ್ ತೋರಿಸುವಷ್ಟು ಮುಖ್ಯದ ಕೆಲಸವಾಗಿದೆ! ಆದರೆ, ಈ ಏರ್‌ಪ್ಲೇನ್ ಮೋಡ್ ಅಂದರೆ ನಿಖರವಾಗಿ ಏನು? ಅದು ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಏನು ಕೆಲಸ ಮಾಡುತ್ತದೆ? ಯಾಕೆ ಇದನ್ನು ವಿಮಾನದಲ್ಲಿ ಪ್ರಯಾಣಿಸುವಾಗ (Travel by plane) ಅನಿವಾರ್ಯವಾಗಿ ಬಳಸುವಂತೆ ಹೇಳುತ್ತಾರೆ? ಎನ್ನುವದಕ್ಕೆ ಇಲ್ಲಿದೆ ಉತ್ತರ:

ಏರ್‌ಪ್ಲೇನ್ ಮೋಡ್ ಎಂದರೇನು?

ಸಾಧಾರಣವಾಗಿ, ನಿಮ್ಮ ಫೋನ್‌ನಲ್ಲಿರುವ ನೆಟ್‌ವರ್ಕ್ ಸೆಟ್ಟಿಂಗ್‌ಗಳಲ್ಲಿ ಏರ್‌ಪ್ಲೇನ್ ಮೋಡ್‌ನ್ನು ಹುಡುಕಬಹುದು. ಇದನ್ನು ಆನ್ ಮಾಡಿದಾಗ, ನಿಮ್ಮ ಸಾಧನದ ಎಲ್ಲಾ ವೈರ್‌ಲೆಸ್ ಸಂಪರ್ಕಗಳು; ಉದಾಹರಣೆಗೆ: ಮೊಬೈಲ್ ನೆಟ್‌ವರ್ಕ್, ವೈ-ಫೈ, ಬ್ಲೂಟೂತ್, GPS ತಕ್ಷಣವೇ ಡಿಸೇಬಲ್ ಆಗುತ್ತವೆ. ಅಂದರೆ, ನಿಮ್ಮ ಫೋನ್ ಯಾವುದೇ ರೀತಿಯ ರೇಡಿಯೋ ಸಿಗ್ನಲ್ ಅನ್ನು ಹೊರಗೆ ಕಳುಹಿಸುವುದನ್ನು ಅಥವಾ ಸ್ವೀಕರಿಸುವುದನ್ನು ನಿಲ್ಲಿಸುತ್ತದೆ. ಏತನ್ಮಧ್ಯೆ, ಕೆಲವೊಂದು ಫೋನ್‌ಗಳಲ್ಲಿ ಬ್ಲೂಟೂತ್ ಅಥವಾ ವೈಫೈ ಅನ್ನು ಏರ್‌ಪ್ಲೇನ್ ಮೋಡ್ ಆನ್ ಇದ್ದಾಗಲೂ ಆನ್ ಮಾಡಬಹುದಾಗಿದೆ.

ಇನ್ನು, ಈ ವೈಶಿಷ್ಟ್ಯವನ್ನು ಯಾಕೆ “ಏರ್‌ಪ್ಲೇನ್” ಮೋಡ್ ಎನ್ನುತ್ತಾರೆ ಎಂಬುದಕ್ಕೆ ಪ್ರಮುಖ ಕಾರಣವಿದೆ. ವಿಮಾನದಲ್ಲಿ ಮೊಬೈಲ್ ಸಿಗ್ನಲ್‌ಗಳು ನೇವಿಗೇಷನ್ ಸಾಧನಗಳಲ್ಲಿ ಹಸ್ತಕ್ಷೇಪ ಮಾಡಬಹುದಾದ ಸಾಧ್ಯತೆಯಿಂದಾಗಿ, ಪ್ರಯಾಣದ ವೇಳೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ಈ ಮೋಡ್‌ಗೆ ಹಾಕುವಂತೆ ಸೂಚಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಈ ಆಯ್ಕೆ ಪ್ರಯಾಣಿಕರ ಸುರಕ್ಷತೆಗಾಗಿ ಅವಶ್ಯಕವಾಗುತ್ತದೆ.

ಏರ್‌ಪ್ಲೇನ್ ಮೋಡ್‌ನ ಇತರ ಉಪಯೋಗಗಳು

  • ಬ್ಯಾಟರಿ ಉಳಿತಾಯ: ಒಂದು ಮುಖ್ಯ ಪ್ರಯೋಜನವೆಂದರೆ ಬ್ಯಾಟರಿ ಉಳಿತಾಯ. ಫೋನ್‌ಗಳು ಯಾವಾಗಲೂ ಸಿಗ್ನಲ್‌ಗಾಗಿ ಶೋಧಿಸುತ್ತಿರುತ್ತವೆ. ಇದು ಹೆಚ್ಚು ಶಕ್ತಿಯನ್ನು ಬಳಕೆಮಾಡುತ್ತದೆ. ನೀವು ಯಾವಾಗಲೂ ನೆಟ್‌ವರ್ಕ್‌ಅಗತ್ಯವಿಲ್ಲದ ಸಂದರ್ಭದಲ್ಲಿ ಏರ್‌ಪ್ಲೇನ್ ಮೋಡ್ ಬಳಸಿದರೆ, ಬ್ಯಾಟರಿ ದೀರ್ಘಕಾಲ ಚಲಿಸುತ್ತದೆ. ಉದಾಹರಣೆಗೆ, ಕಡಿಮೆ ಸಿಗ್ನಲ್ ಇರುವ ಪ್ರದೇಶದಲ್ಲಿ ಈ ಮೋಡ್ ಬಳಸಿದರೆ ಬ್ಯಾಟರಿ ಉಳಿತಾಯವಾಗುತ್ತದೆ.
  • ನಿರಂತರ ನೋಟಿಫಿಕೇಶನ್​ಗಳಿಂದ ವಿರಾಮ: ಇಂದಿನ ಜಗತ್ತಿನಲ್ಲಿ, ಸಾಮಾಜಿಕ ಮಾಧ್ಯಮ, ಇಮೇಲ್‌ಗಳು ಮತ್ತು ಸಂದೇಶಗಳಿಂದ ನಿರಂತರ ನೋಟಿಫಿಕೇಶನ್​ಗಳು ಬರುತ್ತವೆ. ಏರ್‌ಪ್ಲೇನ್ ಮೋಡ್ ಆನ್ ಮಾಡುವುದರಿಂದ ಈ ನೋಟಿಫಿಕೇಶನ್​ಗಳಿಂದ ತಾತ್ಕಾಲಿಕ ವಿರಾಮ ಸಿಗುತ್ತದೆ, ಇದು ಮಾನಸಿಕ ಶಾಂತಿಯನ್ನು ಒದಗಿಸುತ್ತದೆ.
  • ವೇಗವಾದ ಚಾರ್ಜಿಂಗ್: ಏರ್‌ಪ್ಲೇನ್ ಮೋಡ್‌ನಲ್ಲಿ ಫೋನ್ ಯಾವುದೇ ನೆಟ್‌ವರ್ಕ್‌ಗೆ ಸಂಪರ್ಕಗೊಳ್ಳದ ಕಾರಣ, ಚಾರ್ಜಿಂಗ್ ಪ್ರಕ್ರಿಯೆ ವೇಗವಾಗಿರುತ್ತದೆ. ಇದು ತುರ್ತು ಸಂದರ್ಭಗಳಲ್ಲಿ ಫೋನ್ ಶೀಘ್ರವಾಗಿ ಚಾರ್ಜ್ ಮಾಡಲು ಸಹಾಯಕವಾಗಿದೆ.
  • ನೆಟ್‌ವರ್ಕ್‌ನಿಂದ ಸ್ವತಂತ್ರವಾಗಿರುವುದು: ರೈಲು, ಬಸ್ ಅಥವಾ ನೆಟ್‌ವರ್ಕ್ ಸಿಗ್ನಲ್‌ಗಳು ಸತತವಾಗಿ ಬದಲಾಗುವ ಸ್ಥಳಗಳಲ್ಲಿ ಫೋನ್ ಸಿಗ್ನಲ್‌ಗಾಗಿ ಹುಡುಕುವುದರಿಂದ ಬ್ಯಾಟರಿ ಖಾಲಿಯಾಗುವುದಲ್ಲದೆ, ಫೋನ್ ಬಿಸಿಯಾಗಬಹುದು. ಹಾಗಾಗಿ, ಏರ್‌ಪ್ಲೇನ್ ಮೋಡ್ ಇಂತಹ ಸಂದರ್ಭಗಳಲ್ಲಿ ಫೋನ್‌ನ ಕಾರ್ಯಕ್ಷಮತೆಯನ್ನು ಉಳಿಸಿಕೊಳ್ಳಲು ಸಹಾಯಕವಾಗಿದೆ.
  • ಗೇಮಿಂಗ್ ಅಥವಾ ಓದುವಿಕೆಗೆ: ಆಫ್‌ಲೈನ್ ಗೇಮ್‌ಗಳನ್ನು ಆಡುವಾಗ ಅಥವಾ ಇ-ಪುಸ್ತಕಗಳನ್ನು ಓದುವಾಗ, ಏರ್‌ಪ್ಲೇನ್ ಮೋಡ್ ಆನ್ ಮಾಡುವುದರಿಂದ ಅನಗತ್ಯ ಅಡಚಣೆಗಳಿಲ್ಲದೆ ಗಮನ ಕೇಂದ್ರೀಕರಿಸಬಹುದು.

ಇಷ್ಟು ಮುಖ್ಯವಾದ ವೈಶಿಷ್ಟ್ಯ ಬಹುಪಾಲು ಜನರ ಗಮನಕ್ಕೆ ಬಾರದಿರುವುದು ಆಶ್ಚರ್ಯಕರವೇ ಸರಿ. ಹೀಗಾಗಿ, ನಿಮ್ಮ ಫೋನ್‌ನಲ್ಲಿ ಇರುವ ಈ ಸರಳ ಆಯ್ಕೆಯನ್ನು ಸೂಕ್ತ ಸಂದರ್ಭಗಳಲ್ಲಿ ಬಳಸುವುದರಿಂದ, ನೀವು ಹೆಚ್ಚಿನ ಲಾಭ ಪಡೆಯಬಹುದು.