Last Updated:
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶುದ್ಧ ಎಳ್ಳೆಣ್ಣೆ ವಿತರಣೆ ಆರಂಭವಾಗಿದೆ. ಸ್ಥಳೀಯವಾಗಿ ಗಾಣದಿಂದ ತಯಾರಿಸಿದ ಎಳ್ಳೆಣ್ಣೆಯನ್ನು ದೇವರಿಗೆ ಸಮರ್ಪಿಸಲು ಭಕ್ತರಿಗೆ ನೀಡಲಾಗುತ್ತಿದೆ.
ದಕ್ಷಿಣ ಕನ್ನಡ: ದೇವರಿಗೆ (God) ಸಮರ್ಪಿಸುವ ಎಲ್ಲಾ ವಸ್ತುಗಳು ಪರಿಶುದ್ಧವಾಗಿರಬೇಕೆಂಬ ನಂಬಿಕೆಯಿದೆ. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ವಸ್ತುಗಳೂ ಕಲಬೆರೆಕೆಯಿಂದಲೇ ಸಿದ್ಧವಾಗಿರೋ ಕಾರಣ, ಪರಿಶುದ್ಧತೆಯನ್ನು ಹುಡುಕಿಕೊಂಡು ಹೋಗೋದು ಸಾಮಾನ್ಯದ ಕೆಲಸವೇ ಅಲ್ಲ. ಅದರಲ್ಲೂ ದೇವರಿಗೆ ಪ್ರತಿನಿತ್ಯ ದೀಪ ಹಚ್ಚಲು ಬೇಕಾದ ಎಳ್ಳೆಣ್ಣೆ ಇಂದು ದೀಪದ ಎಣ್ಣೆಯ ಹೆಸರಿನಲ್ಲಿ ಮಾರಾಟವಾಗುತ್ತಿದೆ. ಸಂಪೂರ್ಣ ಪೆಟ್ರೋಲಿಯಂ ಉತ್ಪನ್ನದಿಂದ ತಯಾರಿಸಿರುವ ಈ ಎಣ್ಣೆಯನ್ನೇ ಇಂದು ಬಹುತೇಕ ಎಲ್ಲಾ ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ರೂಪದಲ್ಲಿ ಬಳಸಲಾಗುತ್ತಿದೆ. ಆದರೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇದೀಗ ದೇವರಿಗೆ ಪರಿಶುದ್ಧವಾದ ಎಳ್ಳೆಣ್ಣೆಯನ್ನೇ ಭಕ್ತರು ಸಲ್ಲಿಸುವ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ. ಸ್ಥಳೀಯವಾಗಿ ಗಾಣದಿಂದ ತೆಗೆದ ಶುದ್ಧ (Pure) ಎಳ್ಳೆಣ್ಣೆಯನ್ನು ದೇವಸ್ಥಾನದ (Temple) ಆವರಣದಲ್ಲೇ ವಿತರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವರಿಗೆ ಪರಿಶುದ್ಧ ಎಳ್ಳೆಣ್ಣೆಯನ್ನು ಮಾತ್ರ ಸಮರ್ಪಿಸಬೇಕು ಎನ್ನುವ ವಿಚಾರ ಕ್ಷೇತ್ರದಲ್ಲಿ ನಡೆಸಲಾಗಿದ್ದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಹಿನ್ನಲೆಯಲ್ಲಿ ಈ ವ್ಯವಸ್ಥೆಯನ್ನು ಇದೀಗ ಕ್ಷೇತ್ರದಲ್ಲಿ ಆರಂಭಿಸಲಾಗಿದೆ. 100 ಗ್ರಾಂ ನಿಂದ 2.5 ಲೀಟರ್ ವರೆಗಿನ ಬಾಟಲಿಗಳಲ್ಲಿ ಎಳ್ಳೆಣ್ಣೆಯನ್ನು ಇಲ್ಲಿ ಭಕ್ತರಿಗೆ ವಿತರಿಸಲಾಗುತ್ತಿದೆ.
ದೇವರ ಗರ್ಭಗುಡಿ ಸೇರಿದಂತೆ ಎಲ್ಲಾ ಕಡೆಗಳಲ್ಲಿ ನಿರಂತರವಾಗಿ ಉರಿಯುವ ದೀಪಕ್ಕೆ ಎಳ್ಳೆಣ್ಣೆಯನ್ನೇ ಬಳಸಬೇಕೆಂಬ ಸೂಚನೆಯ ಹಿನ್ನಲೆಯಲ್ಲಿ ಈ ಕ್ರಮವನ್ನು ಕ್ಷೇತ್ರದಲ್ಲಿ ಪ್ರಾರಂಭಿಸಿದ್ದಾರೆ. ಈ ಹಿಂದೆ ಅಂಗಡಿಗಳಲ್ಲಿ ಎಳ್ಳೆಣ್ಣೆ ಎಂದು ಪೆಟ್ರೋಲಿಯಂ ಉತ್ಪನ್ನದಿಂದ ತಯಾರಿಸಿದ ಎಣ್ಣೆಯನ್ನು ದೇವರಿಗೆ ತಂದು ಒಪ್ಪಿಸುತ್ತಿದ್ದ ಭಕ್ತರಿಗೂ ಕ್ಷೇತ್ರದಲ್ಲೇ ಶುದ್ಧ ಎಣ್ಣೆಯ ವ್ಯವಸ್ಥೆಯನ್ನು ಕಲ್ಪಿಸಿರೋದು ಖುಷಿ ತಂದಿದೆ.
ಪುತ್ತೂರಿನ ಕೊಂಬೆಟ್ಟು ಎಂಬಲ್ಲಿ ಗಾಣದಿಂದ ತಯಾರಿಸಿದ ಎಳ್ಳೆಣ್ಣೆಯನ್ನು ಸಂಪೂರ್ಣವಾಗಿ ಎಳ್ಳನ್ನೇ ಬಳಸಿಕೊಂಡು ಮಾಡಲಾಗುತ್ತಿದೆ. ಯಾವುದೇ ರೀತಿಯ ಕಲಬೆರಕೆಯನ್ನು ದೇವರಿಗೆ ನೀಡುವ ಈ ಎಣ್ಣೆಯಲ್ಲಿ ಮಾಡಲಾಗುತ್ತಿಲ್ಲ ಎನ್ನುವ ಗ್ಯಾರಂಟಿಯೊಂದಿಗೆ ಇಲ್ಲಿ ಎಳ್ಳೆಣ್ಣೆಯನ್ನು ಭಕ್ತರಿಗೆ ಮಾರಾಟ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ಈ ವ್ಯವಸ್ಥೆ ಆರಂಭಗೊಂಡು ಮೂರ್ನಾಲ್ಕು ತಿಂಗಳು ಕಳೆದಿದ್ದು, ಅಷ್ಟಮಂಗಲ ಪ್ರಶ್ನೆಯಲ್ಲಿ ದೇವರಿಗೆ ಭಕ್ತರು ಸಲ್ಲಿಸುವ ಮತ್ತು ದೇವಸ್ಥಾನದಲ್ಲಿ ಉಪಯೋಗಿಸಲಾಗುತ್ತಿರುವ ಎಣ್ಣೆಯ ಬಗ್ಗೆ ಚಿಂತನೆಯನ್ನು ಮಾಡಲಾಗಿತ್ತು.
Dakshina Kannada,Karnataka
July 14, 2025 2:52 PM IST