ಬ್ಯಾಟಿಂಗ್ ಹೈದರಾಬಾದ್ ತಂಡದ ಶಕ್ತಿ
ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಸನ್‌ರೈಸರ್ಸ್ ತಂಡವು ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್ ಮತ್ತು ಹೆನ್ರಿಕ್ ಕ್ಲಾಸೆನ್‌ರಂತಹ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಕಳೆದ ಪಂದ್ಯದಲ್ಲಿ ಇಶಾನ್ ಕಿಶನ್ 47 ಎಸೆತಗಳಲ್ಲಿ ಅಜೇಯ 106 ರನ್ ಗಳಿಸಿ (11 ಬೌಂಡರಿ, 6 ಸಿಕ್ಸರ್‌ಗಳು) ತಮ್ಮ ಮೊದಲ ಐಪಿಎಲ್ ಶತಕವನ್ನು ಬಾರಿಸಿದರು. ಇವರ ಜೊತೆಗೆ ಟ್ರಾವಿಸ್ ಹೆಡ್ 34 ಎಸೆತಗಳಲ್ಲಿ 62 ರನ್ (5 ಬೌಂಡರಿ, 4 ಸಿಕ್ಸರ್‌ಗಳು) ಮತ್ತು ಹೆನ್ರಿಕ್ ಕ್ಲಾಸೆನ್ 19 ಎಸೆತಗಳಲ್ಲಿ 43 ರನ್ (3 ಬೌಂಡರಿ, 3 ಸಿಕ್ಸರ್‌ಗಳು) ಗಳಿಸಿ ತಂಡದ ಸ್ಕೋರ್ ಅನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದರು. ಇದರ ಜೊತೆಗೆ ನಿತೀಶ್ ಕುಮಾರ್ ರೆಡ್ಡಿ ಕೂಡ 28 ರನ್ (15 ಎಸೆತಗಳು) ಗಳಿಸಿ ತಂಡದ ಆಳವಾದ ಬ್ಯಾಟಿಂಗ್ ಶಕ್ತಿಯನ್ನು ತೋರಿಸಿದರು. ಈ ಪ್ರದರ್ಶನದೊಂದಿಗೆ ಸನ್‌ರೈಸರ್ಸ್ ತಂಡವು ಐಪಿಎಲ್ ಇತಿಹಾಸದಲ್ಲಿ ತನ್ನ ಗರಿಷ್ಠ ಸ್ಕೋರ್ (277/3, 2024ರಲ್ಲಿ) ದಾಖಲೆಯನ್ನು ಮುರಿಯುವ ಸನಿಹಕ್ಕೆ ಬಂದಿತ್ತು.
ಪೂರನ್, ಮಾರ್ಷ್ ಅದ್ಭುತ ಫಾರ್ಮ್
ಮತ್ತೊಂದೆಡೆ, ರಿಷಭ್ ಪಂತ್, ಲಕ್ನೋ ಸೂಪರ್ ಜೈಂಟ್ಸ್ ತಂಡವು ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ ಒಂದು ವಿಕೆಟ್‌ನಿಂದ ಸೋತು ನಿರಾಶೆ ಅನುಭವಿಸಿದೆ. ಆ ಪಂದ್ಯದಲ್ಲಿ ಮಿಚೆಲ್ ಮಾರ್ಷ್ 72 ರನ್ (36 ಎಸೆತಗಳು) ಮತ್ತು ನಿಕೋಲಸ್ ಪೂರನ್ 75 ರನ್ (30 ಎಸೆತಗಳು) ಗಳಿಸಿ ಅರ್ಧಶತಕ ಬಾರಿಸಿದರೂ, ರಿಷಭ್ ಪಂತ್(0) ಸೇರಿ ಹಲವು ಸ್ಟಾರ್ ಕ್ರಿಕೆಟಿಗರು ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರಿಂದ ಸೋಲು ಕಾಣಬೇಕಾಯಿತು. ಆದರೆ ಈ ಪಂದ್ಯದಲ್ಲಿ ಲಕ್ನೋಗೆ ಗೆಲ್ಲುವ ಅವಕಾಶ ಇತ್ತಾದರೂ, ನಿರ್ಣಾಯಕ ಹಂತದಲ್ಲಿ ಪಂತ್ ವಿಕೆಟ್ ಕೀಪಿಂಗ್‌ನಲ್ಲೂ ವಿಫಲರಾದರು. ಕೊನೆಯ ವಿಕೆಟ್ ಸ್ಟಂಪಿಂಗ್ ಅವಕಾಶವನ್ನು ಕೈಚೆಲ್ಲಿ ಸೋಲಿಗೆ ಕಾರಣರಾಗಿದ್ದರು. ಲಕ್ನೋದ ಬೌಲಿಂಗ್ ವಿಭಾಗವು ಗಾಯದ ಸಮಸ್ಯೆಯಿಂದ ಕೂಡಿದ್ದು, ಪ್ರಮುಖ ವೇಗಿ ಮೊಹ್ಸಿನ್ ಖಾನ್ ಬದಲಿಗೆ ತಂಡ ಸೇರಿರುವ ಶಾರ್ದೂಲ್ ಠಾಕೂರ್ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ. ರವಿ ಬಿಷ್ಣೋಯ್ ಉತ್ತಮ ಪ್ರದರ್ಶನ ನೀಡುತ್ತಿದ್ದರಾದರೂ, ಉಳಿದವರು ಅವರಿಗೆ ಸಾಥ್ ನೀಡಬೇಕಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಗೆದ್ದ ಆಟಗಾರನಿಗೆ ನೋ ಚಾನ್ಸ್! ಸುಂದರ್ ಪಿಚ್ಚೈಗೂ ಅಚ್ಚರಿ ತರಿಸಿದ ಗಿಲ್ ನಡೆ!
ರೋಚಕ ಹಣಾಹಣಿ ನಿರೀಕ್ಷೆ
ಈ ಪಂದ್ಯದಲ್ಲಿ ಲಕ್ನೋ ತಂಡಕ್ಕೆ ಸನ್‌ರೈಸರ್ಸ್‌ನ ಆಕ್ರಮಣಕಾರಿ ಬ್ಯಾಟಿಂಗ್ ಲೈನ್‌ಅಪ್ ಅನ್ನು ನಿಯಂತ್ರಿಸಲು ಸ್ಪಷ್ಟ ಯೋಜನೆಯ ಅಗತ್ಯವಿದೆ. ಸಣ್ಣ ತಪ್ಪುಗಳು ದೊಡ್ಡ ಮೊತ್ತಕ್ಕೆ ಕಾರಣವಾಗಬಹುದು ಎಂಬುದು ಕಳೆದ ಪಂದ್ಯದಲ್ಲಿ ಸಾಬೀತಾಗಿದೆ. ಲಕ್ನೋ ತಂಡವು ಮಧ್ಯಮ ಕ್ರಮಾಂಕದಲ್ಲಿ ಸ್ಥಿರತೆಯನ್ನು ಕಂಡುಕೊಳ್ಳಬೇಕಾಗಿದೆ ಮತ್ತು ತನ್ನ ಬೌಲಿಂಗ್ ದಾಳಿಯನ್ನು ಬಲಪಡಿಸಬೇಕಾಗಿದೆ. ಈ ಎರಡು ತಂಡಗಳ ನಡುವಿನ ಈ ಪಂದ್ಯವು ರೋಚಕ ರೀತಿಯಲ್ಲಿ ಕುತೂಹಲ ಮೂಡಿಸಿದೆ.
ಹೆಡ್ ಟು ಹೆಡ್ ದಾಖಲೆ
ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ನಲ್ಲಿ 4 ಪಂದ್ಯಗಳನ್ನಾಡಿದ್ದು, ಇದರಲ್ಲಿ ಲಕ್ನೋ 3ರಲ್ಲಿ ಜಯ ಸಾಧಿಸಿದ್ದರೆ, ಹೈದರಾಬಾದ್ ಒಂದು ಜಯ ಕಂಡಿದೆ. 2022ರಲ್ಲಿ 1, 2023ರಲ್ಲಿ 2 ಪಂದ್ಯಗಳ ಮುಖಾಮುಖಿಯಲ್ಲಿ ಲಕ್ನೋ ಗೆಲುವು ಪಡೆದಿತ್ತು. ಆದರೆ ಕಳೆದ ವರ್ಷ ಮಾತ್ರ ಹೈದರಾಬಾದ್ ತಂಡ ವಿಧ್ವಂಸಕ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಲಕ್ನೋ ನೀಡಿದ್ದ 166ರನ್ಗಳ ಗುರಿಯನ್ನ ಕೇವಲ 9.4 ಓವರ್ಗಳಲ್ಲಿ ಮುಗಿಸುವ ಮೂಲಕ ಭಾರೀ ಅಂತರದಿಂದ ಗೆದ್ದಿದೆ. ಹಾಗಾಗಿ ಅಂಕಿ ಅಂಶಗಳಲ್ಲಿ ಎಲ್ಎಸ್ಜಿ ಮುಂದಿದ್ದರು, ಎಸ್ಆರ್ಹೆಚ್ ಪ್ರಸ್ತುತ ತಂಡದ ಪ್ರದರ್ಶನ ನೋಡಿದರೆ ಸ್ಪಷ್ಟವಾಗಿ ಮೇಲುಗೈ ಸಾಧಿಸಬಹುದು ಎಂದು ನಿರೀಕ್ಷಿಸಬಹುದಾಗಿದೆ.
ಇದನ್ನೂ ಓದಿ: Cricket: ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದು ಸಿಕ್ಸರ್‌ಗೆ ಹೊಡೆಸಿಕೊಳ್ಳದ ಲೆಜೆಂಡರಿ ಬೌಲರ್‌ಗಳಿವರು!
ಸಂಭಾವ್ಯ ಪ್ಲೇಯಿಂಗ್ 11
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಅನಿಕೇತ್ ವರ್ಮಾ, ಪ್ಯಾಟ್ ಕಮ್ಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ, ಆ್ಯಡಮ್ ಜಂಪಾ.
ಲಕ್ನೋ ಸೂಪರ್ ಜೈಂಟ್ಸ್: ಮಿಚೆಲ್ ಮಾರ್ಷ್, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ & ವಿಕೀ), ಡೇವಿಡ್ ಮಿಲ್ಲರ್, ಆಯುಷ್ ಬಡೋನಿ, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ಸಿಂಗ್.
March 27, 2025 7:00 AM IST