Last Updated:
ಎರಡು ಪಂದ್ಯಗಳಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾದ ವಿರಾಟ್ ಕೊಹ್ಲಿ ಪೆವಿಲಿಯನ್ಗೆ ಬೇಸರದಿಂದ ಹಿಂತಿರುಗುತ್ತಿದ್ದರು. ಬೌಂಡರಿ ಸಮೀಪಿಸುತ್ತಿದ್ದಂತೆ ಅವರ ಮುಖದಲ್ಲಿ ನಿರಾಶೆ ಮತ್ತು ಹತಾಶೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಆಸ್ಟ್ರೇಲಿಯಾ ಪ್ರವಾಸ (Australia) ವಿರಾಟ್ ಕೊಹ್ಲಿಗೆ (Virat Kohli) ಮತ್ತೆ ದುಃಸ್ವಪ್ನವಾಗಿ ಪರಿಣಮಿಸುತ್ತಿದೆ. ಪರ್ತ್ ನಂತರ, ಅವರು ತಮ್ಮ ನೆಚ್ಚಿನ ಮೈದಾನವಾದ ಅಡಿಲೇಡ್ನಲ್ಲಿ ಶೂನ್ಯಕ್ಕೆ ಔಟಾಗಿ ಭಾರೀ ನಿರಾಶೆಯನುಭವಿಸಿದ್ದಾರೆ. ಇಂದಿನ ಅವರ ಇನ್ನಿಂಗ್ಸ್ ಕೇವಲ ನಾಲ್ಕನೇ ಎಸೆತದಲ್ಲಿ ಕೊನೆಗೊಂಡಿತು. ಕೊಹ್ಲಿ ಅವರ 17 ವರ್ಷಗಳ ವೃತ್ತಿಜೀವನದಲ್ಲಿ ಸತತ ಎರಡು ಏಕದಿನ ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದು ಇದೇ ಮೊದಲು.
ಎರಡು ಪಂದ್ಯಗಳಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾದ ವಿರಾಟ್ ಕೊಹ್ಲಿ ಪೆವಿಲಿಯನ್ಗೆ ಬೇಸರದಿಂದ ಹಿಂತಿರುಗುತ್ತಿದ್ದರು. ಬೌಂಡರಿ ಸಮೀಪಿಸುತ್ತಿದ್ದಂತೆ ಅವರ ಮುಖದಲ್ಲಿ ನಿರಾಶೆ ಮತ್ತು ಹತಾಶೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಸ್ಟ್ಯಾಂಡ್ಗಳಲ್ಲಿದ್ದ ಭಾರತೀಯ ಅಭಿಮಾನಿಗಳು ತಮ್ಮ ಆಸನಗಳಿಂದ ಎದ್ದು ಭಾರತೀಯ ಸೂಪರ್ಸ್ಟಾರ್ಗೆ ಚಪ್ಪಾಳೆ ತಟ್ಟಿದರು. ವಿರಾಟ್ ಅಭಿಮಾನಿಗಳ ಶುಭಾಶಯಗಳನ್ನು ಸ್ವೀಕರಿಸಿದ ರೀತಿ, ಕೈಯಲ್ಲಿ ಗ್ಲೌಸ್ಗಳನ್ನಿಡಿದು ನಡೆದುಕೊಂಡ ರೀತಿ ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ಮಾಡಿದೆ. ಕೊಹ್ಲಿಯ ದೇಹ ಭಾಷೆ ಅವರ ನಿವೃತ್ತಿ ಸಮಯ ಹತ್ತಿರದಲ್ಲಿದೆ ಎನ್ನುವುದನ್ನ ಸೂಚಿಸುತ್ತುತ್ತು. ಅಕ್ಟೋಬರ್ 25 ರಂದು ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯ ಅವರ ಕೊನೆಯ ಮತ್ತು ನಿವೃತ್ತಿ ಪಂದ್ಯವಾಗಬಹುದಾ ಎಂಬ ಕುತೂಹಲ ಮನೆ ಮಾಡುತ್ತಿದೆ.
ವೇಗಿ ಕ್ಸೇವಿಯರ್ ಬಾರ್ಟ್ಲೆಟ್ ಏಳನೇ ಓವರ್ನ ಮೊದಲ ಎಸೆತದಲ್ಲಿ ಶುಭ್ಮನ್ ಗಿಲ್ ಅವರನ್ನು ಔಟ್ ಮಾಡಿದ ನಂತರ, ಅವರು ಐದನೇ ಎಸೆತದಲ್ಲಿ ಕೊಹ್ಲಿಯನ್ನು ಔಟ್ ಮಾಡಿದರು. ವಿರಾಟ್ ಮಿಡ್-ವಿಕೆಟ್ ಕಡೆಗೆ ಒಳ್ಳೆಯ ಲೈನ್ ಅಂಡ್ ಲೆಂತ್ನಲ್ಲಿ ಬಂದ ಇನ್ಸ್ವಿಂಗರ್ ಅನ್ನು ಫ್ಲಿಕ್ ಮಾಡಲು ಪ್ರಯತ್ನಿಸಿದರು. ಚೆಂಡು ಬ್ಯಾಟ್ ತಪ್ಪಿಸಿ ಅವರ ಪ್ಯಾಡ್ಗಳಿಗೆ ಬಡಿಯಿತು. ಎಲ್ಬಿಡಬ್ಲ್ಯೂಗಾಗಿ ಬಲವಾದ ಮನವಿ ಮಾಡುತ್ತಿದ್ದಂತೆ ಅಂಪೈರ್ ಬೆರಳು ಎತ್ತಿದರು. ವಿರಾಟ್ ತಕ್ಷಣ ಹೋಗಿ ರೋಹಿತ್ ಜೊತೆ ಮಾತನಾಡಿದರು, ಆದರೆ ರಿವ್ಯೂ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಭಾವಿಸಿ ಪೆವಿಲಿಯನ್ ಕಡೆಗೆ ನಡೆಯುವುದನ್ನು ಮುಂದುವರಿಸಿದರು. ಹೀಗಾಗಿ, ಭಾರತವು 17 ರನ್ಗಳಿಗೆ ಎರಡನೇ ವಿಕೆಟ್ ಕಳೆದುಕೊಂಡಿತು.
ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ 4 ಇನ್ನಿಂಗ್ಸ್ಗಳಲ್ಲಿ 244 ರನ್ಗಳಿಸಿದ್ದರು. ಇದರಲ್ಲಿ 2 ಶತಕ ಸಿಡಿಸಿದ್ದರು. ಪಾಕಿಸ್ತಾನದ ವಿರುದ್ಧ 2015ರ ವಿಶ್ವಕಪ್ನಲ್ಲಿ ಹಾಗೂ 2019ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಶತಕ ಸಿಡಿಸಿದ್ದರು. ಆದರೆ ಇಂದು ಖಾತೆ ತೆರೆಯದೇ ನಿರ್ಗಮಿಸಿ ಅಭಿಮಾನಿಗಳಿಗೆ ಬೇಸರ ಮೂಡಿಸಿದರು.
2008ರಲ್ಲಿ ಶ್ರೀಲಂಕಾ ವಿರುದ್ಧ ಒಡಿಐ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭಿಸಿದ ಕೊಹ್ಲಿ, 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮತ್ತು ಟಿ20ಯಲ್ಲಿ 2010ರಲ್ಲಿ ಜಿಂಬಾಬ್ವೆ ವಿರುಧ್ಧ ಆರಂಭಿಸಿದರು. ಕೊಹ್ಲಿ 123 ಟೆಸ್ಟ್ ಪಂದ್ಯಗಳಲ್ಲಿ 30 ಶತಕಗಳೊಂದಿಗೆ 9230 ರನ್ಗಳಿಸಿದ್ದಾರೆ. 303 ಏಕದಿನ ಪಂದ್ಯಗಳಿಂದ 51 ಶತಕ. 72 ಅರ್ಧಶತಕಗಳೊಂದಿಗೆ 14181 ರನ್ ಸಿಡಿಸಿದ್ದಾರೆ.125 ಟಿ20 ಪಂದ್ಯಗಳಿಂದ 1 ಶತಕ, 38 ಅರ್ಧಶತಕಗಳೊಂದಿಗೆ 4188 ರನ್ಗಳಿಸಿದ್ದಾರೆ.
ಈಗಾಗಲೇ ಟಿ20 ಮತ್ತು ಟೆಸ್ಟ್ ಕ್ರಿಕೆಟ್ನಿಂದ ದೂರ ಉಳಿದಿರುವ ಕೊಹ್ಲಿ, ಏಕದಿನದಲ್ಲಿ ಮಾತ್ರ ಆಡುತ್ತಿದ್ದಾರೆ. ಈ ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿದ ನಂತರ ಕೊಹ್ಲಿ ವೃತ್ತಿ ಜೀವನ ಅಂತ್ಯವಾಗುತ್ತಾ ಎನ್ನುವ ಭೀತಿ ಅಭಿಮಾನಿಗಳಲ್ಲಿ ಎದುರಾಗಿದೆ.
October 23, 2025 2:58 PM IST
Virat Kohli: ಆಸ್ಟ್ರೇಲಿಯಾದಲ್ಲೇ ಕೊನೆಯಾಗುತ್ತಾ ಕೊಹ್ಲಿ ಕರಿಯರ್! ಡಕ್ ಔಟ್ ಆಗುತ್ತಿದ್ದಂತೆ ಸುಳಿವು ಕೊಟ್ರ ವಿರಾಟ್? ವಿಡಿಯೋ ವೈರಲ್