Last Updated:
ಮಂಗಳೂರು ರೂಬನ್ ಜೇಸನ್ ಮಚಾದೊ ಕೊಳಲು ನುಡಿಸಿಕೊಂಡು ಬ್ಯಾಕ್‌ಸ್ಟ್ರೋಕ್ ಈಜುತ್ತಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ 800 ಮೀಟರ್ ದಾಖಲೆ ಬರೆದ ಸಾಧಕ.
ಮಂಗಳೂರು: ಸಾಧನೆ (Achievement) ಅಂದ್ರೆ ಹಾಗೇ ಅಲ್ವ? ಹತ್ತರಲ್ಲಿ ಹನ್ನೊಂದು ಕೆಲಸ ಸಾಧನೆ ಆಗೋಲ್ಲ. ಅಸಾಮಾನ್ಯವಾಗಿರೋದನ್ನ ಮಾಡಿದರೆ ಮಾತ್ರ ಅದು ಸಾಧನೆ ಅನಿಸಿಕೊಳ್ಳುತ್ತೆ. ಅಂಥಹದ್ದೇ ವಿಶಿಷ್ಟ ಸಾಧನೆ ಮಾಡಿ ಮಂಗಳೂರಿನ ಯುವಕನೋರ್ವನು (Youth) ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ದಾಖಲೆ ಬರೆದಿದ್ದಾನೆ.
ಹೌದು… ಮಂಗಳೂರಿನ 30 ರ ಹರೆಯದ ರೂಬನ್ ಜೇಸನ್ ಮಚಾದೊ ಕೊಳಲು ನುಡಿಸಿಕೊಂಡು ಬ್ಯಾಕ್‌ಸ್ಟ್ರೋಕ್ ಈಜುತ್ತಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದ್ದಾರೆ. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಈಜುಕೊಳದಲ್ಲಿ ಈ ದಾಖಲೆ ಬರೆದಿದ್ದಾರೆ. ಅಲೋಶಿಯಸ್ ಕಾಲೇಜಿನ ಈಜುಕೊಳದ ಸಂಪೂರ್ಣ ಸುತ್ತಳತೆ 150 ಮೀಟರ್ ಇದ್ದು, ರೂಬನ್ ಜೇಸನ್ ಮಚಾದೊಗೆ ಕೊಳಲು ನುಡಿಸಿಕೊಂಡು ಬ್ಯಾಕ್‌ಸ್ಟ್ರೋಕ್ ಈಜುತ್ತಾ 300ಮೀಟರ್ ದಾಖಲಿಸುವ ಉದ್ದೇಶವಿತ್ತು. ಅಂದರೆ ಈಜುಕೊಳದಲ್ಲಿ ಸಂಪೂರ್ಣ ಎರಡು ಸುತ್ತು ಈಜುವುದು ಇವರ ಗುರಿಯಾಗಿದ್ದರೂ ಐದು ಕಾಲು ಸುತ್ತು ಕೊಳಲು ನುಡಿಸಿಕೊಂಡು ಈಜಿದ್ದಾರೆ. ಈ ಮೂಲಕ 800ಕ್ಕೂ ಅಧಿಕ ಮೀಟರ್ ದಾಖಲಿಸಿದ್ದಾರೆ.
ಡಾ. ಮನೀಷ್ ಬಿಷ್ಣೋಯ್ ಪ್ರಕಾರ ರೂಬನ್ ಜೇಸನ್ ಮಚಾದೊ ಅವರ ಸಾಧನೆ ವಿಶ್ವದ ಎಲ್ಲೂ ದಾಖಲಾಗಿಲ್ಲ. ಇದೇ ಪ್ರಥಮ ಬಾರಿಗೆ ಈಜುಕೊಳದಲ್ಲಿ ಕೊಳಲು ನುಡಿಸಿಕೊಂಡು ಬ್ಯಾಕ್‌ಸ್ಟ್ರೋಕ್ ಈಜುವ ಮೂಲಕ ದಾಖಲೆ ಬರೆಯಲಾಗಿದೆ. ದಾಖಲೆ ಬರೆದ ಮಚಾದೋ ಅವರಿಗೆ ಡಾ. ಮನೀಷ್ ಬಿಷ್ಣೋಯ್ ಅವರು ಸಾಂಕೇತಿಕವಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಹಾಗೂ ಪದಕವನ್ನು ಪ್ರದಾನಿಸಿದರು.
ಕರ್ನಾಟಕದ ಪ್ರಖ್ಯಾತ ಸಂಗೀತಗಾರ ಇವರು!
ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಹಳೆ ವಿದ್ಯಾರ್ಥಿ ಮತ್ತು ಮಾಜಿ ಪತ್ರಿಕೋದ್ಯಮ ಉಪನ್ಯಾಸಕ ರೂಬೆನ್ ಜೇಸನ್ ಮಚಾದೊ, ಸಂಗೀತಕ್ಕೆ ಸಂಪೂರ್ಣ ತಮ್ಮನ್ನು ಅರ್ಪಿಸಿಕೊಳ್ಳುವ ಮೊದಲು 2 ವರ್ಷಗಳ ಕಾಲ ಅಲೋಶಿಯಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು. ಸದ್ಯ ಅವರು ಸಂಗೀತ ಶಿಕ್ಷಕರಾಗಿದ್ದು, ಬಾಲಿವುಡ್, ಸ್ಯಾಂಡಲ್‌ವುಡ್ ಮತ್ತು ಕೋಸ್ಟಲ್‌ವುಡ್ ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ವೃತ್ತಿಪರ ಸಂಗೀತಗಾರ. ರುಬೆನ್ ಶ್ರೇಯಾ ಘೋಶಾಲ್, ಸೋನು ನಿಗಮ್ ಹಾಡಿಗೆ ಕೊಳಲು ವಾದನವನ್ನೂ ನುಡಿಸಿದ್ದಾರೆ.
Mangalore,Dakshina Kannada,Karnataka
October 30, 2025 5:23 PM IST