ಆಳ್ವಾಸ್ ವಿರಾಸತ್‌ಗೆ ಚಾಲನೆ ನೀಡಿದ ಡಾ. ಡಿ ವೀರೇಂದ್ರ ಹೆಗ್ಗಡೆ
ಜೈನ ಕಾಶಿ ಮೂಡಬಿದರೆಯಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ 2024 ಕ್ಕೆ ಚಾಲನೆ ದೊರೆತಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಐದು ದಿನಗಳವರೆಗೆ ನಡೆಯುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ 30ನೇ ವರ್ಷದ ಆಳ್ವಾಸ್ ವಿರಾಸತ್ ಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು.
ಹೃದಯ ಬೆಸೆಯುವ ಕಾರ್ಯಕ್ರಮ
ಮುಸ್ಸಂಜೆಯಲ್ಲಿ ಪ್ರಕೃತಿ ರಮಣೀಯ ವಿಶಾಲ ಸಭಾಂಗಣದಲ್ಲಿ ತುಂಬಿದ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಆಳ್ವಾಸ್ ವಿರಾಸತ್ ಹೃದಯ ಮತ್ತು ಮನಸ್ಸುಗಳನ್ನು ಬೆಸೆಯುವ ಅಪೂರ್ವ ಕಾರ್ಯಕ್ರಮ. ಸಾಂಸ್ಕೃತಿಕತೆ ಮತ್ತು ಸಾಹಿತ್ಯ ಎರಡೂ ಸಾಮಾನ್ಯವಾಗಿ ಒಟ್ಟಿಗೇ ನಡೆಯುವುದಿಲ್ಲ. ಆದರೆ ಇದು ಆಳ್ವಾಸ್ ವಿರಾಸತ್‌ನಲ್ಲಿ ಮೂರ್ತರೂಪ ಪಡೆದಿದೆ. ಇಂತಹ ಹೃದಯ ಬೆಸೆಯುವ ಕಾರ್ಯ ಸದಾ ಮುಂದುವರಿಯಬೇಕು. ನಮ್ಮ ಸಂಸ್ಕೃತಿಯನ್ನು ಎಲ್ಲರೂ ಗೌರವಿಸಬೇಕು. ಈ ಧಾರೆಯು ಹೃದಯ ವೈಶಾಲ್ಯತೆಯುಳ್ಳ ಯುವಶಕ್ತಿಯನ್ನು ರೂಪುಗೊಳಿಸಬೇಕು. ಒಳ್ಳೆಯದೆಲ್ಲವನ್ನೂ ಒಪ್ಪಿ, ಅಪ್ಪಿಕೊಳ್ಳುವ ಮನಸ್ಥಿತಿ ಬರಬೇಕು. ಅದಕ್ಕಾಗಿ ಆಳ್ವಾಸ್ ವಿರಾಸತ್‌ಗೆ ಇನ್ನಷ್ಟು ಜನರು ಬರಬೇಕು, ಡಾ.ಆಳ್ವ ಅವರ ಆಶಯವೂ ಇದೇ ಆಗಿದೆ ಎಂದು ಹೇಳಿದರು.
ಇದನ್ನೂ ಓದಿ: Kung Fu: ಒಡಿಶಾದಲ್ಲಿ ನಡೆದ ಕುಂಗ್ ಫು ಸ್ಪರ್ಧೆಯಲ್ಲಿ ಚಿನ್ನ-ಬೆಳ್ಳಿ ಗೆದ್ದ ಹೊನ್ನಾವರದ ಮಕ್ಕಳು
ಈ ಬಾರಿಯ ವಿರಾಸತ್‌ನ ವಿಶೇಷತೆಯೇನು?
ಉತ್ಸವದ ಅಂಗವಾಗಿ ಭವ್ಯ ಸಾಂಸ್ಕೃತಿಕ ಮೆರವಣಿಗೆಯು ಜಾತ್ರೆಯ ಮೆರುಗನ್ನು ಹೆಚ್ಚಿಸಿತು. ಇಕ್ಕೆಲೆಗಳಲ್ಲಿ ರಥದ ಸ್ವರೂಪ, ಯಕ್ಷ ಕಿರೀಟ, ಮುಖವಾಡ, ನವಿಲು, ಗಣಪ, ಬೃಹತ್ ಕಾಲುದೀಪಗಳಿಂದ ಶೋಭಾಯಮಾನವಾಗಿ ರಾರಾಜಿಸುತ್ತಿತ್ತು. ಸಭಾಂಗಣದಲ್ಲಿ 150ಕ್ಕೂ ಅಧಿಕ ದೇಶೀಯ ಜಾನಪದ ಕಲಾ ತಂಡಗಳಿಂದ 4000ಕ್ಕೂ ಹೆಚ್ಚಿನ ಕಲಾವಿದರನ್ನು ಒಳಗೊಂಡ ಭವ್ಯ ಸಾಂಸ್ಕೃತಿಕ ಮೆರವಣಿಗೆ, ರಥಯಾತ್ರೆ ನಡೆಯಿತು. ಹರಿದ್ವಾರದಿಂದ ಬಂದ ವಿಪುಲ್ ಶರ್ಮಾ ನೇತೃತ್ವದಲ್ಲಿ ನಡೆದ ಗಂಗಾರತಿ ಈ ಬಾರಿಯ ವಿರಾಸತ್‌ನ ವಿಶೇಷ.
ಇಂದ್ರಲೋಕವೇ ಧರೆಗಿಳಿದು ಬಂದಂತೆ ಭಾಸವಾಯಿತು. ಸಭಾಂಗಣದ ಎದುರು ಶಂಖ, ದಾಸಯ್ಯ, ಕೊಂಬು, ರಣ ಕಹಳೆ, ಕಹಳೆ, ಕಾಲ ಭೈರವ, ಕೊರಗಡೋಲು, ಸ್ಯಾಕ್ಸೋಫೋನ್, ಬ್ಲಾಕ್ ಎನಿಮಲ್, ನಂದಿ ಧ್ವಜ, ಸುಗ್ಗಿ ಕುಣಿತ, ಶ್ರೀರಾಮ, ಪರಶುರಾಮ, ಘಟೋತ್ಕಜ , ಊರಿನ ಚೆಂಡೆ, ತಟ್ಟಿರಾಯ, ನಾದಸ್ವರ ತಂಡ, ಕೊಡೆಗಳು, ಪೂರ್ಣಕುಂಭ, ಲಂಗ ದಾವಣಿ ತರುಣಿಯರು, ಅಪ್ಸರೆಯರು, ಯಕ್ಷಗಾನ ವೇಷ, ಗೂಳಿ ಮತ್ತು ಕಟ್ಟಪ್ಪ, ಗೊರವರ ಕುಣಿತ, ಕಿಂದರಿ ಜೋಗಿ, ಸೋಮನ ಕುಣಿತ, ಆಂಜನೇಯ ಮತ್ತು ವಾನರ ಸೇನೆ, ಮಹಾಕಾಳೆಶ್ವರ, ಶಿವ, ಮರಗಾಲು, ತಮಟೆ ವಾದನ, ಆಂಜನೇಯ, ಮಹಿಳಾ ಪಟ ಕುಣಿತ, ಕಂಬಳ ಚಿತ್ರಣ, ಹುಲಿವೇಷ , ತೆಯ್ಯಮ್, ಚಿಟ್ಟೆ ಮೇಳ, ಶಿವ ಮತ್ತು ಅಘೋರಿಗಳು, ಕಿಂಗ್ ಕಾಂಗ್, ಶಿಲ್ಪಾ ಗೊಂಬೆ ಬಳಗ, ಆಳ್ವಾಸ್ ಗೊಂಬೆ ಬಳಗ, ಚೈನೀಸ್ ಡ್ರ‍್ಯಾಗನ್, ಚೈನಾ ಲಯನ್ ಡ್ಯಾನ್ಸ್ ಪಾತ್ರಧಾರಿಗಳ ಮೆರವಣಿಗೆ ನಡೆಯಿತು.
ಐದು ದಿನಗಳ ಕಾಲ ನಡೆಯುವ ಈ ಸಾಂಸ್ಕೃತಿಕ ಉತ್ಸವದಲ್ಲಿ ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ ಆಯೋಜಿಸಲಾಗಿದ್ದು, ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ.
Dakshina Kannada,Karnataka
December 12, 2024 2:06 PM IST