Last Updated:
ವಿಶ್ವ ಆರೋಗ್ಯ ಸಂಸ್ಥೆ ಅಡಿಕೆಯನ್ನು ಕ್ಯಾನ್ಸರ್ ಕಾರಕ ಉತ್ಪನ್ನಗಳ ಸಾಲಿಗೆ ಸೇರಿಸಲು ಚಿಂತನೆ ನಡೆಸುತ್ತಿದೆ. ಈ ನಿರ್ಧಾರದಿಂದ ಕರ್ನಾಟಕದ ಅಡಿಕೆ ಬೆಳೆಗಾರರು ಆತಂಕದಲ್ಲಿದ್ದಾರೆ.
ದಕ್ಷಿಣ ಕನ್ನಡ: ಅಡಿಕೆ (Arecanut) ಬೆಳೆಯನ್ನು ಕ್ಯಾನ್ಸರ್ (Cancer) ಕಾರಕ ಉತ್ಪನ್ನಗಳಾದ ಮದ್ಯ ,ಪಾನೀಯ ಹಾಗೂ ತಂಬಾಕುಗಳ ಸಾಲಿಗೆ ಸೇರ್ಪಡೆ ಮಾಡುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ (World Health Organization) ಉತ್ಸುಕವಾಗಿದೆ. ಈ ಬಗ್ಗೆ ಭಾರತವೂ (India) ಸೇರಿದಂತೆ ಇತರ ರಾಷ್ಟ್ರಗಳ ಸುಮಾರು 160 ಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸಿದ್ದ ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್ ಈಸ್ಟ್ ಏಷ್ಯಾ ರೀಜನ್ ಎಂಬ ವೆಬಿನಾರ್ ನಲ್ಲಿ ಹೊರಹೊಮ್ಮಿರುವುದು ಅತೀ ಹೆಚ್ಚು ಅಡಿಕೆ ಬೆಳೆಯನ್ನು ಬೆಳೆಯುತ್ತಿರುವ ಕರ್ನಾಟಕದ ರೈತರನ್ನು (Farmer) ಕಂಗೆಡುವಂತೆ ಮಾಡಿದೆ. ಜನವರಿ 31 ರಂದು ಶುಕ್ರವಾರ ಈ ವೆಬಿನಾರ್ ನಡೆದಿದ್ದು, ಪುತ್ತೂರಿನ ಕ್ಯಾಂಪ್ಕೋ ವತಿಯಿಂದ ನಿರ್ದೇಶಕರಾದ ಮುರಳಿಕೃಷ್ಣ ಹಾಗೂ ಮಾರುಕಟ್ಟೆ ತಜ್ಞ ಡಾ.ವಿಘ್ನೇಶ್ವರ ವರ್ಮುಡಿ ಅವರು ಈ ವೆಬಿನಾರ್ ನಲ್ಲಿ ಭಾಗವಹಿಸಿದ್ದರು.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಜ್ಞಾನಿಗಳ ಪ್ರಕಾರ ಅಡಿಕೆ ತಿನ್ನುವುದನ್ನು ಒಂದು ಚಟವಾಗಿ ಬಳಸಲಾಗುತ್ತಿದೆ. ಹಾಗಾಗಿ ನಿಯಂತ್ರಣ ಸುಲಭ ಸಾಧುವಲ್ಲ. ಈ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯಂತೆ ಸರ್ಕಾರಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಅಡಿಕೆ ಕ್ಯಾನ್ಸರ್ ಕಾರಕವಾಗಿದ್ದು, ಇದಕ್ಕೆ ಅಗತ್ಯವಾದ ಪ್ರಚಾರ ಹಾಗೂ ತಿಳುವಳಿಕೆಯನ್ನು ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವೆಬಿನಾರ್ ನಲ್ಲಿ ವಿಜ್ಞಾನಿಗಳ ವಿಚಾರಮಂಡನೆಯ ಬಳಿಕ ಸಂವಾದದಲ್ಲಿ ಕ್ಯಾಂಪ್ಕೊ ನಿರ್ದೇಶಕ ಮುರಳಿಕೃಷ್ಣ ಅವರು ಅಡಿಕೆ ಬಗ್ಗೆ ಸರಿಯಾದ ಕ್ಲಿನಿಕಲ್ ಪರೀಕ್ಷೆ ನಡೆಸದೆ ಶೈಕ್ಷಣಿಕ ಸಂಶೋಧನೆಗಳ ಮೂಲಕ ಕೈಗೊಂಡ ಫಲಿತಾಂಶಗಳನ್ನು ನೋಡಿ ಆತುರದ ನಿರ್ಧಾರಕ್ಕೆ ಬರಬಾರದು. ದೊಡ್ಡ ಮಟ್ಟದಲ್ಲಿ ಅಡಿಕೆ ಬಗ್ಗೆ ಕ್ಲಿನಿಕಲ್ ಪರೀಕ್ಷೆ ನಡೆಸಬೇಕು. ಆ ಮೇಲೆ ತೀರ್ಮಾನ ಕೈಗೊಳ್ಳಬೇಕು. ಸಾರ್ವಜನಿಕರ ಸಹಭಾಗಿತ್ವದಲ್ಲಿ ವಿಚಾರಗಳ ಮಂಡನೆ ಮಾಡಬೇಕು. ಆಮೇಲೆ ಸರ್ಕಾರಗಳ ಮುಂದಿಡಬೇಕು ಎಂದು ಮನವಿ ಮಾಡಿದ್ದಾರೆ.
ಕರ್ನಾಟಕದ ಸುಮಾರು 28 ಜಿಲ್ಲೆಗಳಲ್ಲಿ ಅಡಿಕೆ ಬೆಳೆಯನ್ನು ರೈತರು ಬೆಳೆಯುತ್ತಿದ್ದಾರೆ. ಆದರೆ ಅಡಿಕೆಗೆ ಭವಿಷ್ಯ ಬರೆಯಲು ಯಾರೂ ಮುಂದಾಗುತ್ತಿಲ್ಲ. 2014 ರಲ್ಲಿ ನಾನು ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬ ಅಧ್ಯಯನ ಶೀಲ 200 ಪುಟಗಳ ವರದಿಯನ್ನು ಸರ್ಕಾರಕ್ಕೆ ನೀಡಿದ್ದೆ. ಆದರೆ ಯಾವ ಪ್ರಯೋಜನವೂ ಆಗಿಲ್ಲ. ಅಡಿಕೆ ಬೆಳೆಯನ್ನು ತಂಬಾಕಿನಂತಹ ಉತ್ಪನ್ನಗಳ ಸಾಲಿಗೆ ಸೇರ್ಪಡೆಯಾಗುತ್ತಿದ್ದರೂ ಕರ್ನಾಟಕದ ಜನತೆ ಮೌನವಾಗಿದ್ದಾರೆ. ಜನಪ್ರತಿನಿಧಿಗಳು ಮೌನವಾಗಿದ್ದಾರೆ. ಇವರೆಲ್ಲಾ ಮಾತನಾಡದಿದ್ದರೆ ಮುಂದೆ ಅಡಿಕೆ ಬೆಳೆಗಾರರಿಗೆ ಭವಿಷ್ಯವೇ ಇಲ್ಲದಂತಾಗುತ್ತದೆ ಅನ್ನೋದು ಡಾ. ವಿಘ್ನೇಶ್ವರ ವರ್ಮುಡಿ ಅವರ ಅಭಿಪ್ರಾಯವಾಗಿದೆ.
ಮಾರುಕಟ್ಟೆ ತಜ್ಞರಾದ ಡಾ.ವಿಘ್ನೇಶ್ವರ ವರ್ಮುಡಿ ಅವರು ಅಡಿಕೆ ಆಯುರ್ವೇದ ಔಷಧಿ ಪದ್ಧತಿಯಲ್ಲಿ ಬಳಕೆಯಾಗುತ್ತಿದೆ. ಅಡಿಕೆ ಬೆಳೆಯುವ ಹಾಗೂ ಬಳಕೆದಾರರ ಸಾಮಾಜಿಕ -ಆರ್ಥಿಕ ಸ್ಥಿತಿಗಳನ್ನೂ ಗಮನದಲ್ಲಿಟ್ಟುಕೊಂಡು ಅಂತಿಮ ನಿರ್ಧಾರ ಕೈಗೊಳ್ಳಬೇಕು. ಅಡಿಕೆಗೆ ಧಾರ್ಮಿಕ ಮೌಲ್ಯವೂ ಇದೆ. ದಂತ ವೈದ್ಯರು ನೀಡಿದ ಮಾಹಿತಿ ಪ್ರಕಾರ ಅಡಿಕೆ ಜಗಿಯುವುದರಿಂದ ಬಾಯಿಯ ಕ್ಯಾನ್ಸರ್ ಬರುತ್ತಿದೆ ಎಂಬುವುದಕ್ಕೆ ಅಡಿಕೆ ಕಾರಣವಲ್ಲ ಬದಲಾಗಿ ರಾಸಾಯನಿಕ ಮಿಶ್ರಿತ ಉತ್ಪನ್ನಗಳು ಕಾರಣ. ಈ ಹಿನ್ನಲೆಯಿಂದ ಇನ್ನಷ್ಟು ಅಧ್ಯಯನಗಳು ನಡೆಯಬೇಕು ಎಂದು ಆಗ್ರಹಿಸಿದರು. ಅಡಿಕೆ ಬೆಳೆಗಾರರು ಹಾಗೂ ಅದರ ಅವಲಂಬಿತರಿಗೆ ಪ್ರಾದೇಶಿಕಮಟ್ಟದ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ನಡೆಸಿ ಜನರ ಅಭಿಪ್ರಾಯಗಳಿಗೆ ಮಾನ್ಯತೆ ನೀಡಬೇಕು. ದೀರ್ಘ ಕಾಲೀನ ಯೋಜನೆಗಳನ್ನು ಕೈಗೊಂಡು ಮಾಹಿತಿ ನೀಡುವ ಕೆಲಸವಾಗಬೇಕು ಎಂಬ ಡಾ.ವರ್ಮುಡಿ ಅವರ ಸಲಹೆಗೆ ವೆಬಿನಾರ್ ಆಯೋಜಕರೂ ಸಹಮತ ವ್ಯಕ್ತಪಡಿಸಿದರು. ಕ್ಯಾಂಪ್ಕೋ ನಿರ್ದೇಶಕ ಮುರಳಿಕೃಷ್ಣ ಹಾಗೂ ಡಾ.ವರ್ಮುಡಿ ಸುಮಾರು 25 ಪ್ರಶ್ನೆಗಳನ್ನು ಅಡಿಕೆ ವಿಚಾರದ ಬಗ್ಗೆ ಎತ್ತಿದ್ದು, ಮುಂದಿನ ಭಾಗ ವೆಬಿನಾರ್ ಈ ತಿಂಗಳಲ್ಲಿ ನಡೆಯಲಿದೆ.
Dakshina Kannada,Karnataka