Asia Cup: ಮಿಂಚಿದ ಬೌಲರ್ಸ್, ನಿಸ್ಸಾಂಕ ಸಿಡಿಲಬ್ಬರದ ಅರ್ಧಶತಕ; ಬಾಂಗ್ಲಾದೇಶವನ್ನ ಧೂಳೀಪಟ ಮಾಡಿದ ಸಿಂಹಳೀಯರು | Nissanka’s Brilliant Fifty Powers Sri Lanka to Easy Win Over Bangladesh in Asia Cup 2025 | ಕ್ರೀಡೆ

Asia Cup: ಮಿಂಚಿದ ಬೌಲರ್ಸ್, ನಿಸ್ಸಾಂಕ ಸಿಡಿಲಬ್ಬರದ ಅರ್ಧಶತಕ; ಬಾಂಗ್ಲಾದೇಶವನ್ನ ಧೂಳೀಪಟ ಮಾಡಿದ ಸಿಂಹಳೀಯರು | Nissanka’s Brilliant Fifty Powers Sri Lanka to Easy Win Over Bangladesh in Asia Cup 2025 | ಕ್ರೀಡೆ

Last Updated:

ಏಷ್ಯಾಕಪ್ 2025ರ 5ನೇ ಪಂದ್ಯವೂ ಯಾವುದೇ ಪೈಪೋಟಿ ಇಲ್ಲದೆ ಏಕಪಕ್ಷೀಯವಾಗಿ ಅಂತ್ಯವಾಗಿದೆ. ಬಾಂಗ್ಲಾದೇಶ ನೀಡಿದ್ದ 140ರನ್​ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಶ್ರೀಲಂಕಾ ತಂಡ 4 ವಿಕೆಟ್ ಕಳೆದಕೊಂಡು ಗುರಿ ತಲುಪಿತು.

ಶ್ರೀಲಂಕಾ ತಂಡಶ್ರೀಲಂಕಾ ತಂಡ
ಶ್ರೀಲಂಕಾ ತಂಡ

ಶ್ರೀಲಂಕಾ ಏಷ್ಯಾಕಪ್​​ನ ತಮ್ಮ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನ ಬಗ್ಗುಬಡಿದಿದೆ. ಬಾಂಗ್ಲಾದೇಶದ ವಿರುದ್ಧ 140 ರನ್​ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಸಿಂಹಳೀಯ ಪಡೆ ಕೇವಲ 14.4 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಪಾತುಮ್ ನಿಸ್ಸಾಂಕ  ಅರ್ಧಶತಕ ಹಾಗೂ ಕಮಿಲ್ ಮಿಶಾರಾ ಅವರ ಅಜೇಯ 46 ರನ್​ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 139 ರನ್​ಗಳಿಸಿತ್ತು.

140 ರನ್​ಗಳ ಗುರಿ ಬೆನ್ನಟ್ಟಿದ ಲಂಕಾ ತಂಡ 13 ರನ್​ಗಳಾಗುವಷ್ಟರಲ್ಲಿ ಕುಸಾಲ್ ಮೆಂಡಿಸ್ (3) ವಿಕೆಟ್ ಕಳೆದುಕೊಂಡಿತು.  ಆದರೆ ನಿಸ್ಸಾಂಕ ಹಾಗೂ ಕಮಿಲ್ ಮಿಶಾರಾ 95 ರನ್​ ಸೇರಿಸಿ ಬಾಂಗ್ಲಾದೇಶ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡದಂತೆ ಮಾಡಿದರು. ನಿಸ್ಸಾಂಕ 34 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 50 ರನ್​ಗಳಿಸಿದರೆ, ಮಿಶಾರಾ 32 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ಗಳ ಸಹಿತ ಅಜೇಯ 46 ರನ್​ಗಳಿಸಿದರು.  ಕುಸಾಲ್ ಪರೆರಾ 9, ದಾಸುನ್ ಶನಕ 1 ರನ್​ಗಳಿಸಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ನಾಯಕ ಚರಿತ್ ಅಸಲಂಕಾ ಅಜೇಯ 10 ರನ್​ಗಳಿಸಿದರು.

ಬಾಂಗ್ಲಾದೇಶದಪರ ಮೆಹಿದಿ ಹಸನ್ 29ಕ್ಕೆ 2 , ತಾಂಜಿಮ್ ಹಸನ್ ಸಾಕಿಬ್ ಹಾಗೂ ಮುಸ್ತಫಿಜುರ್ ರೆಹಮಾನ್ ತಲಾ  1 ವಿಕೆಟ್ ಪಡೆದರು.

ಟಾಸ್ ಸೋತು ಬ್ಯಾಟಿಂಗ್ ಇಳಿದ ಬಾಂಗ್ಲಾದೇಶ ಖಾತೆ ತೆರೆಯುವ ಮುನ್ನವೇ ತಾಂಜಿನ್ ಹಸನ್ ಎಮಿಮ್ ವಿಕೆಟ್ ಕಳೆದುಕೊಂಡಿತು. ನುವಾನ್ ತುಷಾರ ಮೊದಲ ಓವರ್​ನಲ್ಲೇ ಮೇಡನ್ ಸಹಿತ ವಿಕೆಟ್ ಪಡೆದು ಬಾಂಗ್ಲಾದೇಶಕ್ಕೆ ಆಘಾತ ನೀಡಿದರು. ನಂತರದ ಓವರ್​​ನಲ್ಲಿ ದುಷ್ಮಂತಾ ಚಮೀರಾ ಪರ್ವೇಹ್ ಹೊಸೇನ್ ಎಮಾಮ್ ವಿಕೆಟ್ ಪಡೆದರು. ಬಾಂಗ್ಲಾದೇಶ  ತಂಡ ಮೊದಲೆರಡು ಓವರ್​ಗಳಲ್ಲಿ ಮೇಡನ್ ಮಾಡಿ 2 ವಿಕೆಟ್ ಕಳೆದುಕೊಂಡಿತು. ಪವರ್​ ಪ್ಲೇ ಮುಗಿಯುವ ವೇಳೆಗೆ 3 ವಿಕೆಟ್ ಕಳೆದುಕೊಂಡು 30 ರನ್​ಗಳಿಸಿತ್ತು.

10 ಓವರ್​ಗಳವರೆಗೆ 5 ವಿಕೆಟ್ ಪತನ

ಮತ್ತೆ 8ನೇ ಓವರ್​​ನಲ್ಲಿ ಮೆಹದಿ ಹಸನ್​ ಕೂಡ 9 ರನ್​ಗಳಿಸಿ ಹಸರಂಗ ಬೌಲಿಂಗ್​​ನಲ್ಲಿ ಎಲ್ಬಿಡಬ್ಲ್ಯೂ ಆದರು.  ನಾಯಕ ಲಿಟನ್ ದಾಸ್ ಕೂಡ ದೊಡ್ಡ ಮೊತ್ತ ಗಳಿಸಿಲು ಸಾಧ್ಯವಾಗಲಿಲ್ಲ. ದಾಸ್​ 26 ಎಸೆತಗಳಲ್ಲಿ 4 ಬೌಂಡರಿ ಸಹಿತ 28 ರನ್​ಗಳಿಸಿ ಹಸರಂಗ ಬೌಲಿಂಗ್​​ನಲ್ಲಿ ಕುಸಾಲ್ ಮೆಂಡಿಸ್​ಗೆ ಕ್ಯಾಚ್ ನೀಡಿ ಔಟ್ ಆದರು.

10 ಓವರ್​ ಮುಗಿಯುವ ವೇಳೆಗೆ ಬಾಂಗ್ಲಾದೇಶ ತಂಡ 5 ವಿಕೆಟ್ ಕಳೆದುಕೊಂಡು 54 ರನ್​ ಮಾತ್ರಗಳಿಸಿತ್ತು. ಈ ಹಂತದಲ್ಲಿ ತಂಡದ 100 ರನ್​ಗಳ ಗಡಿ ದಾಟುವುದು ಅನುಮಾನವಾಗಿತ್ತು. ಆದರೆ ಶಮೀಮ್ ಹಾಗೂ ಜಾಕರ್ ಅಲಿ 6ನೇ ವಿಕೆಟ್​ ಜೊತೆಯಾಟದಲ್ಲಿ 60 ಎಸೆತಗಳಲ್ಲಿ  84 ರನ್​ ಸೇರಿಸಿ ತಂಡವನ್ನ ಗೌರವಯುವ ಮೊತ್ತ ದಾಖಲಿಸಲು ನೆರವಾದರು.

ಶಮೀಮ್ 34 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ  ಅಜೇಯ 42 ರನ್​ಗಳಿಸಿದರೆ, ಜಾಕರ್ ಅಲಿ 34 ಎಸೆತಗಳಲ್ಲಿ 2 ಬೌಂಡರಿ ಸಹಿತ 41 ರನ್​ಗಳಿಸಿ ಅಜೇಯರಾಗಿ ಉಳಿದರು.  ಶ್ರೀಲಂಕಾ ಪರ ಹಸರಂಗ 25ಕ್ಕೆ2, ನುವಾನ್ ತುಷಾರ 17ಕ್ಕೆ1, ದುಷ್ಮಂತ ಚಮೀರ 17ಕ್ಕೆ1 ವಿಕೆಟ್ ಪಡೆದು ಮಿಂಚಿದರು.

 ಹೆಡ್ ಟು ಹೆಡ್ ದಾಖಲೆ

ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಟಿ20 ಹೆಡ್-ಟು-ಹೆಡ್ ದಾಖಲೆಯ ಬಗ್ಗೆ ಹೇಳುವುದಾದರೆ, ಎರಡೂ ತಂಡಗಳು ಇಲ್ಲಿಯವರೆಗೆ 20 ಪಂದ್ಯಗಳನ್ನು ಆಡಿವೆ. ಈ ಅವಧಿಯಲ್ಲಿ, ಶ್ರೀಲಂಕಾ 12 ಪಂದ್ಯಗಳನ್ನು ಗೆದ್ದರೆ, ಬಾಂಗ್ಲಾದೇಶ 8 ಪಂದ್ಯಗಳನ್ನು ಗೆದ್ದಿದೆ. ಆದರೆ ಎರಡೂ ತಂಡಗಳ ನಡುವಿನ ಕೊನೆಯ ಐದು ಟಿ20 ಪಂದ್ಯಗಳಲ್ಲಿ ಬಾಂಗ್ಲಾದೇಶ ಮೇಲುಗೈ ಸಾಧಿಸಿದೆ. ಬಾಂಗ್ಲಾದೇಶ ಮೂರು ಪಂದ್ಯಗಳನ್ನು ಗೆದ್ದಿದೆ ಮತ್ತು ಶ್ರೀಲಂಕಾ ಎರಡು ಪಂದ್ಯಗಳನ್ನು ಗೆದ್ದಿದೆ.