Last Updated:
ಏಷ್ಯಾಕಪ್ 2025ರ 5ನೇ ಪಂದ್ಯವೂ ಯಾವುದೇ ಪೈಪೋಟಿ ಇಲ್ಲದೆ ಏಕಪಕ್ಷೀಯವಾಗಿ ಅಂತ್ಯವಾಗಿದೆ. ಬಾಂಗ್ಲಾದೇಶ ನೀಡಿದ್ದ 140ರನ್ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಶ್ರೀಲಂಕಾ ತಂಡ 4 ವಿಕೆಟ್ ಕಳೆದಕೊಂಡು ಗುರಿ ತಲುಪಿತು.
ಶ್ರೀಲಂಕಾ ಏಷ್ಯಾಕಪ್ನ ತಮ್ಮ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನ ಬಗ್ಗುಬಡಿದಿದೆ. ಬಾಂಗ್ಲಾದೇಶದ ವಿರುದ್ಧ 140 ರನ್ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಸಿಂಹಳೀಯ ಪಡೆ ಕೇವಲ 14.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಪಾತುಮ್ ನಿಸ್ಸಾಂಕ ಅರ್ಧಶತಕ ಹಾಗೂ ಕಮಿಲ್ ಮಿಶಾರಾ ಅವರ ಅಜೇಯ 46 ರನ್ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 139 ರನ್ಗಳಿಸಿತ್ತು.
140 ರನ್ಗಳ ಗುರಿ ಬೆನ್ನಟ್ಟಿದ ಲಂಕಾ ತಂಡ 13 ರನ್ಗಳಾಗುವಷ್ಟರಲ್ಲಿ ಕುಸಾಲ್ ಮೆಂಡಿಸ್ (3) ವಿಕೆಟ್ ಕಳೆದುಕೊಂಡಿತು. ಆದರೆ ನಿಸ್ಸಾಂಕ ಹಾಗೂ ಕಮಿಲ್ ಮಿಶಾರಾ 95 ರನ್ ಸೇರಿಸಿ ಬಾಂಗ್ಲಾದೇಶ ಪಂದ್ಯದಲ್ಲಿ ಕಮ್ಬ್ಯಾಕ್ ಮಾಡದಂತೆ ಮಾಡಿದರು. ನಿಸ್ಸಾಂಕ 34 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 50 ರನ್ಗಳಿಸಿದರೆ, ಮಿಶಾರಾ 32 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ಗಳ ಸಹಿತ ಅಜೇಯ 46 ರನ್ಗಳಿಸಿದರು. ಕುಸಾಲ್ ಪರೆರಾ 9, ದಾಸುನ್ ಶನಕ 1 ರನ್ಗಳಿಸಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ನಾಯಕ ಚರಿತ್ ಅಸಲಂಕಾ ಅಜೇಯ 10 ರನ್ಗಳಿಸಿದರು.
ಬಾಂಗ್ಲಾದೇಶದಪರ ಮೆಹಿದಿ ಹಸನ್ 29ಕ್ಕೆ 2 , ತಾಂಜಿಮ್ ಹಸನ್ ಸಾಕಿಬ್ ಹಾಗೂ ಮುಸ್ತಫಿಜುರ್ ರೆಹಮಾನ್ ತಲಾ 1 ವಿಕೆಟ್ ಪಡೆದರು.
ಟಾಸ್ ಸೋತು ಬ್ಯಾಟಿಂಗ್ ಇಳಿದ ಬಾಂಗ್ಲಾದೇಶ ಖಾತೆ ತೆರೆಯುವ ಮುನ್ನವೇ ತಾಂಜಿನ್ ಹಸನ್ ಎಮಿಮ್ ವಿಕೆಟ್ ಕಳೆದುಕೊಂಡಿತು. ನುವಾನ್ ತುಷಾರ ಮೊದಲ ಓವರ್ನಲ್ಲೇ ಮೇಡನ್ ಸಹಿತ ವಿಕೆಟ್ ಪಡೆದು ಬಾಂಗ್ಲಾದೇಶಕ್ಕೆ ಆಘಾತ ನೀಡಿದರು. ನಂತರದ ಓವರ್ನಲ್ಲಿ ದುಷ್ಮಂತಾ ಚಮೀರಾ ಪರ್ವೇಹ್ ಹೊಸೇನ್ ಎಮಾಮ್ ವಿಕೆಟ್ ಪಡೆದರು. ಬಾಂಗ್ಲಾದೇಶ ತಂಡ ಮೊದಲೆರಡು ಓವರ್ಗಳಲ್ಲಿ ಮೇಡನ್ ಮಾಡಿ 2 ವಿಕೆಟ್ ಕಳೆದುಕೊಂಡಿತು. ಪವರ್ ಪ್ಲೇ ಮುಗಿಯುವ ವೇಳೆಗೆ 3 ವಿಕೆಟ್ ಕಳೆದುಕೊಂಡು 30 ರನ್ಗಳಿಸಿತ್ತು.
ಮತ್ತೆ 8ನೇ ಓವರ್ನಲ್ಲಿ ಮೆಹದಿ ಹಸನ್ ಕೂಡ 9 ರನ್ಗಳಿಸಿ ಹಸರಂಗ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಆದರು. ನಾಯಕ ಲಿಟನ್ ದಾಸ್ ಕೂಡ ದೊಡ್ಡ ಮೊತ್ತ ಗಳಿಸಿಲು ಸಾಧ್ಯವಾಗಲಿಲ್ಲ. ದಾಸ್ 26 ಎಸೆತಗಳಲ್ಲಿ 4 ಬೌಂಡರಿ ಸಹಿತ 28 ರನ್ಗಳಿಸಿ ಹಸರಂಗ ಬೌಲಿಂಗ್ನಲ್ಲಿ ಕುಸಾಲ್ ಮೆಂಡಿಸ್ಗೆ ಕ್ಯಾಚ್ ನೀಡಿ ಔಟ್ ಆದರು.
10 ಓವರ್ ಮುಗಿಯುವ ವೇಳೆಗೆ ಬಾಂಗ್ಲಾದೇಶ ತಂಡ 5 ವಿಕೆಟ್ ಕಳೆದುಕೊಂಡು 54 ರನ್ ಮಾತ್ರಗಳಿಸಿತ್ತು. ಈ ಹಂತದಲ್ಲಿ ತಂಡದ 100 ರನ್ಗಳ ಗಡಿ ದಾಟುವುದು ಅನುಮಾನವಾಗಿತ್ತು. ಆದರೆ ಶಮೀಮ್ ಹಾಗೂ ಜಾಕರ್ ಅಲಿ 6ನೇ ವಿಕೆಟ್ ಜೊತೆಯಾಟದಲ್ಲಿ 60 ಎಸೆತಗಳಲ್ಲಿ 84 ರನ್ ಸೇರಿಸಿ ತಂಡವನ್ನ ಗೌರವಯುವ ಮೊತ್ತ ದಾಖಲಿಸಲು ನೆರವಾದರು.
ಶಮೀಮ್ 34 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 42 ರನ್ಗಳಿಸಿದರೆ, ಜಾಕರ್ ಅಲಿ 34 ಎಸೆತಗಳಲ್ಲಿ 2 ಬೌಂಡರಿ ಸಹಿತ 41 ರನ್ಗಳಿಸಿ ಅಜೇಯರಾಗಿ ಉಳಿದರು. ಶ್ರೀಲಂಕಾ ಪರ ಹಸರಂಗ 25ಕ್ಕೆ2, ನುವಾನ್ ತುಷಾರ 17ಕ್ಕೆ1, ದುಷ್ಮಂತ ಚಮೀರ 17ಕ್ಕೆ1 ವಿಕೆಟ್ ಪಡೆದು ಮಿಂಚಿದರು.
ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಟಿ20 ಹೆಡ್-ಟು-ಹೆಡ್ ದಾಖಲೆಯ ಬಗ್ಗೆ ಹೇಳುವುದಾದರೆ, ಎರಡೂ ತಂಡಗಳು ಇಲ್ಲಿಯವರೆಗೆ 20 ಪಂದ್ಯಗಳನ್ನು ಆಡಿವೆ. ಈ ಅವಧಿಯಲ್ಲಿ, ಶ್ರೀಲಂಕಾ 12 ಪಂದ್ಯಗಳನ್ನು ಗೆದ್ದರೆ, ಬಾಂಗ್ಲಾದೇಶ 8 ಪಂದ್ಯಗಳನ್ನು ಗೆದ್ದಿದೆ. ಆದರೆ ಎರಡೂ ತಂಡಗಳ ನಡುವಿನ ಕೊನೆಯ ಐದು ಟಿ20 ಪಂದ್ಯಗಳಲ್ಲಿ ಬಾಂಗ್ಲಾದೇಶ ಮೇಲುಗೈ ಸಾಧಿಸಿದೆ. ಬಾಂಗ್ಲಾದೇಶ ಮೂರು ಪಂದ್ಯಗಳನ್ನು ಗೆದ್ದಿದೆ ಮತ್ತು ಶ್ರೀಲಂಕಾ ಎರಡು ಪಂದ್ಯಗಳನ್ನು ಗೆದ್ದಿದೆ.
September 13, 2025 11:35 PM IST