BAN vs SL: ಶ್ರೀಲಂಕಾ ಬಿಗಿ ಬೌಲಿಂಗ್ ದಾಳಿಗೆ ಬಾಂಗ್ಲಾ ತತ್ತರ! ಸಿಂಹಳೀಯರಿಗೆ 140 ರನ್​ಗಳ ಸಾಧಾರಣ ಗುರಿ | Asia Cup 2025 ban vs sl Sri Lanka restricted bangladesh for 139 runs | ಕ್ರೀಡೆ

BAN vs SL: ಶ್ರೀಲಂಕಾ ಬಿಗಿ ಬೌಲಿಂಗ್ ದಾಳಿಗೆ ಬಾಂಗ್ಲಾ ತತ್ತರ! ಸಿಂಹಳೀಯರಿಗೆ 140 ರನ್​ಗಳ ಸಾಧಾರಣ ಗುರಿ | Asia Cup 2025 ban vs sl Sri Lanka restricted bangladesh for 139 runs | ಕ್ರೀಡೆ
ಖಾತೆ ತೆರೆಯದೇ 2 ವಿಕೆಟ್ ಪತನ

ಟಾಸ್ ಸೋತ ಬ್ಯಾಟಿಂಗ್ ಇಳಿದ ಬಾಂಗ್ಲಾದೇಶ ಖಾತೆ ತೆರೆಯುವ ಮುನ್ನವೇ ತಾಂಜಿನ್ ಹಸನ್ ಎಮಿಮ್ ವಿಕೆಟ್ ಕಳೆದುಕೊಂಡಿತು. ನುವಾನ್ ತುಷಾರ ಮೊದಲ ಓವರ್​ನಲ್ಲೇ ಮೇಡನ್ ಸಹಿತ ವಿಕೆಟ್ ಪಡೆದು ಬಾಂಗ್ಲಾದೇಶಕ್ಕೆ ಆಘಾತ ನೀಡಿದರು. ನಂತರದ ಓವರ್​​ನಲ್ಲಿ ದುಷ್ಮಂತಾ ಚಮೀರಾ ಪರ್ವೇಹ್ ಹೊಸೇನ್ ಎಮಾಮ್ ವಿಕೆಟ್ ಪಡೆದರು. ಬಾಂಗ್ಲಾದೇಶ  ತಂಡ ಮೊದಲೆರಡು ಓವರ್​ಗಳಲ್ಲಿ ಮೇಡನ್ ಮಾಡಿ 2 ವಿಕೆಟ್ ಕಳೆದುಕೊಂಡಿತು. ಪವರ್​ ಪ್ಲೇ ಮುಗಿಯುವ ವೇಳೆಗೆ 3 ವಿಕೆಟ್ ಕಳೆದುಕೊಂಡು 30 ರನ್​ಗಳಿಸಿತ್ತು.

10 ಓವರ್​ಗಳವರೆಗೆ 5 ವಿಕೆಟ್ ಪತನ

ಮತ್ತೆ 8ನೇ ಓವರ್​​ನಲ್ಲಿ ಮೆಹದಿ ಹಸನ್​ ಕೂಡ 9 ರನ್​ಗಳಿಸಿ ಹಸರಂಗ ಬೌಲಿಂಗ್​​ನಲ್ಲಿ ಎಲ್ಬಿಡಬ್ಲ್ಯೂ ಆದರು.  ನಾಯಕ ಲಿಟನ್ ದಾಸ್ ಕೂಡ ದೊಡ್ಡ ಮೊತ್ತ ಗಳಿಸಿಲು ಸಾಧ್ಯವಾಗಲಿಲ್ಲ. ದಾಸ್​ 26 ಎಸೆತಗಳಲ್ಲಿ 4 ಬೌಂಡರಿ ಸಹಿತ 28 ರನ್​ಗಳಿಸಿ ಹಸರಂಗ ಬೌಲಿಂಗ್​​ನಲ್ಲಿ ಕುಸಾಲ್ ಮೆಂಡಿಸ್​ಗೆ ಕ್ಯಾಚ್ ನೀಡಿ ಔಟ್ ಆದರು.

10 ಓವರ್​ ಮುಗಿಯುವ ವೇಳೆಗೆ ಬಾಂಗ್ಲಾದೇಶ ತಂಡ 5 ವಿಕೆಟ್ ಕಳೆದುಕೊಂಡು 54 ರನ್​ ಮಾತ್ರಗಳಿಸಿತ್ತು. ಈ ಹಂತದಲ್ಲಿ ತಂಡದ 100 ರನ್​ಗಳ ಗಡಿ ದಾಟುವುದು ಅನುಮಾನವಾಗಿತ್ತು. ಆದರೆ ಶಮೀಮ್ ಹಾಗೂ ಜಾಕರ್ ಅಲಿ 6ನೇ ವಿಕೆಟ್​ ಜೊತೆಯಾಟದಲ್ಲಿ 60 ಎಸೆತಗಳಲ್ಲಿ  84 ರನ್​ ಸೇರಿಸಿ ತಂಡವನ್ನ ಗೌರವಯುವ ಮೊತ್ತ ದಾಖಲಿಸಲು ನೆರವಾದರು.

ಶಮೀಮ್ 34 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ  ಅಜೇಯ 42 ರನ್​ಗಳಿಸಿದರೆ, ಜಾಕರ್ ಅಲಿ 34 ಎಸೆತಗಳಲ್ಲಿ 2 ಬೌಂಡರಿ ಸಹಿತ 41 ರನ್​ಗಳಿಸಿ ಅಜೇಯರಾಗಿ ಉಳಿದರು.  ಶ್ರೀಲಂಕಾ ಪರ ಹಸರಂಗ 25ಕ್ಕೆ2, ನುವಾನ್ ತುಷಾರ 17ಕ್ಕೆ1, ದುಷ್ಮಂತ ಚಮೀರ 17ಕ್ಕೆ1 ವಿಕೆಟ್ ಪಡೆದು ಮಿಂಚಿದರು.

 ಹೆಡ್ ಟು ಹೆಡ್ ದಾಖಲೆ

ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಟಿ20 ಹೆಡ್-ಟು-ಹೆಡ್ ದಾಖಲೆಯ ಬಗ್ಗೆ ಹೇಳುವುದಾದರೆ, ಎರಡೂ ತಂಡಗಳು ಇಲ್ಲಿಯವರೆಗೆ 20 ಪಂದ್ಯಗಳನ್ನು ಆಡಿವೆ. ಈ ಅವಧಿಯಲ್ಲಿ, ಶ್ರೀಲಂಕಾ 12 ಪಂದ್ಯಗಳನ್ನು ಗೆದ್ದರೆ, ಬಾಂಗ್ಲಾದೇಶ 8 ಪಂದ್ಯಗಳನ್ನು ಗೆದ್ದಿದೆ. ಆದರೆ ಎರಡೂ ತಂಡಗಳ ನಡುವಿನ ಕೊನೆಯ ಐದು ಟಿ20 ಪಂದ್ಯಗಳಲ್ಲಿ ಬಾಂಗ್ಲಾದೇಶ ಮೇಲುಗೈ ಸಾಧಿಸಿದೆ. ಬಾಂಗ್ಲಾದೇಶ ಮೂರು ಪಂದ್ಯಗಳನ್ನು ಗೆದ್ದಿದೆ ಮತ್ತು ಶ್ರೀಲಂಕಾ ಎರಡು ಪಂದ್ಯಗಳನ್ನು ಗೆದ್ದಿದೆ.

ಬಾಂಗ್ಲಾದೇಶ ತಂಡದಲ್ಲಿ ಒಂದು ಬದಲಾವಣೆ

ಬಾಂಗ್ಲಾದೇಶ ಹಾಂಗ್ ಕಾಂಗ್ ವಿರುದ್ಧದ ಪಂದ್ಯವನ್ನು ಏಳು ವಿಕೆಟ್‌ಗಳಿಂದ ಸುಲಭವಾಗಿ ಗೆದ್ದಿರಬಹುದು, ಆದರೆ ಕೆಲವು ವಿಭಾಗಗಳಲ್ಲಿ ಅದರ ದೌರ್ಬಲ್ಯ ಬಯಲಾಗಿದೆ. ಅವುಗಳಲ್ಲಿ ಬೌಲಿಂಗ್ ವಿಭಾಗವು ಪ್ರಮುಖವಾಗಿದೆ. ವೇಗದ ಬೌಲರ್ ತಸ್ಕಿನ್ ಅಹ್ಮದ್ ಮತ್ತು ಲೆಗ್ ಸ್ಪಿನ್ನರ್ ರಿಷದ್ ಹುಸೇನ್ ವಿಕೆಟ್ ಪಡೆದರೂ ರನ್ ನೀಡಿದರು. ಶ್ರೀಲಂಕಾ ವಿರುದ್ಧದ ಯಾವುದೇ ತಪ್ಪು ಬಾಂಗ್ಲಾದೇಶಕ್ಕೆ ದುಬಾರಿಯಾಗಬಹುದು.

ಈ ಪಂದ್ಯದಲ್ಲಿ ಬಾಂಗ್ಲಾದೇಶ ತನ್ನ ಪ್ಲೇಯಿಂಗ್ ಇಲೆವೆನ್​​ನಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ಬಾಂಗ್ಲಾದೇಶ ವೇಗಿ ತಸ್ಕಿನ್ ಅಹ್ಮದ್ ಬದಲಿಗೆ ಶೋರಿಫುಲ್ ಇಸ್ಲಾಂ ಅವರನ್ನು ಸೇರಿಸಿಕೊಂಡಿದೆ.

ಶ್ರೀಲಂಕಾ ಬಲಾಬಲ

ಇತ್ತ ಶ್ರೀಲಂಕಾ ತಂಡವು ಮೂರು ವಿಭಾಗಗಳಲ್ಲಿ ಸಮತೋಲನದಿಂದ ಕೂಡಿದೆ. ಇದು ಬಲವಾದ ಟಾಪ್ ಆರ್ಡರ್, ಬಲವಾದ ಮಧ್ಯಮ ಕ್ರಮಾಂಕ ಮತ್ತು ಯುಎಇಯ ಪರಿಸ್ಥಿತಿಗಳಿಗೆ ಸೂಕ್ತವಾದ ಸ್ಪಿನ್ ದಾಳಿಯನ್ನು ಹೊಂದಿದೆ. ಸ್ನಾಯು ಸೆಳೆತದ ಗಾಯದಿಂದ ಚೇತರಿಸಿಕೊಂಡಿರುವ ಸ್ಟಾರ್ ಸ್ಪಿನ್ನರ್ ವನಿಂದು ಹಸರಂಗ ತಂಡಕ್ಕೆ ಮರಳಿರುವುದರಿಂದ ತಂಡವು ಮತ್ತಷ್ಟು ಬಲಗೊಂಡಿದೆ. ಹಸರಂಗ, ಮಹೇಶ್ ತೀಕ್ಷಣ ಮತ್ತು ದುನಿತ್ ವೆಲಾಲಗೆ ಯುಎಇಯ ನಿಧಾನಗತಿಯ ಪಿಚ್‌ಗಳಲ್ಲಿ ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು.

ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್

ಬಾಂಗ್ಲಾದೇಶ: ಪರ್ವೇಜ್ ಹೊಸೈನ್ ಎಮನ್, ತಂಜಿದ್ ಹಸನ್ ತಮೀಮ್, ಲಿಟನ್ ದಾಸ್ (wk/c), ತೌಹೀದ್ ಹೃದಯ್, ಜೇಕರ್ ಅಲಿ, ಶಮೀಮ್ ಹೊಸೈನ್, ಮಹೇದಿ ಹಸನ್, ರಿಶಾದ್ ಹೊಸೈನ್, ತಂಝಿಮ್ ಹಸನ್ ಸಾಕಿಬ್, ಶೋರಿಫುಲ್ ಇಸ್ಲಾಂ, ಮುಸ್ತಫಿಜುರ್ ಇಸ್ಲಾಂ

ಶ್ರೀಲಂಕಾ : ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ಡಬ್ಲ್ಯೂ), ಕಮಿಲ್ ಮಿಶ್ರಾ, ಕುಸಲ್ ಪೆರೆರಾ, ಚರಿತ್ ಅಸಲಂಕಾ(ನಾಯಕ), ಕಮಿಂದು ಮೆಂಡಿಸ್, ದಸುನ್ ಶನಕ, ವನಿಂದು ಹಸರಂಗ, ದುಷ್ಮಂತ ಚಮೀರಾ, ಮಥೀಶ ಪತಿರಾನ, ನುವಾನ್ ತುಷಾರ