Last Updated:
ಪುತ್ತೂರು ತಾಲೂಕಿನಲ್ಲಿ ಒಟ್ಟು 32 ಗ್ರಾಮಗಳಿದ್ದು, 22 ಗ್ರಾಮ ಪಂಚಾಯತ್ಗಳಿವೆ. ಒಟ್ಟು 31,115 ಮನೆಗಳಿದ್ದು, ಈ ಪೈಕಿ ಕೇವಲ ಶೇ.20 ರಷ್ಟು ಮನೆಗಳಿಂದ ತ್ಯಾಜ್ಯ ಸಂಗ್ರಹಣೆ ಮಾಡಲಾಗುತ್ತಿದೆ.
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ(Dakshina Kannada District) ಸ್ವಚ್ಛತಾ ಅಭಿಯಾನಕ್ಕೆ(Swacchata Campaign) ಮುಂದಿನ ಅಕ್ಟೋಬರ್ 2 ಕ್ಕೆ 20 ವರ್ಷಗಳು ಪೂರ್ಣಗೊಳ್ಳುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಪುತ್ತೂರು ತಾಲೂಕಿನಾದ್ಯಂತ ಹತ್ತು ದಿನಗಳ ಕಾಲದ ಸ್ವಚ್ಛತಾ ಅಭಿಯಾನ ಜನವರಿ 21 ರಿಂದ ಆರಂಭಗೊಂಡಿದೆ. ಜನವರಿ 31 ರವರೆಗೆ ಭರದಿಂದ ನಡೆದಿದೆ. ಪುತ್ತೂರು ತಾಲೂಕು ಪಂಚಾಯತ್, ಪುತ್ತೂರು ನಗರಸಭೆ, ಗ್ರಾಮ ಪಂಚಾಯತ್ಗಳು, ವಿವಿಧ ಸಂಘ ಸಂಸ್ಥೆಗಳು ಸ್ವಚ್ಛ ಪುತ್ತೂರಿನ ಸಂಕಲ್ಪದೊಂದಿಗೆ ಆರೋಗ್ಯಕರ ಸಮಾಜದ ನಿರ್ಮಾಣದ ಮಹತ್ತರವಾದ ಹೆಜ್ಜೆಯನ್ನಿಟ್ಟಿದೆ. ಸ್ವಚ್ಛತೆಯಲ್ಲಿ ಪುತ್ತೂರನ್ನು ಮಾದರಿ ತಾಲೂಕನ್ನಾಗಿ(Puttur Model Taluk) ಮಾಡಲು ಶ್ರಮಿಸಲಾಗುತ್ತಿದೆ.
ಇದೀಗ ಪುತ್ತೂರಿನಲ್ಲಿ ಹಮ್ಮಿಕೊಂಡಿರುವ ಸ್ವಚ್ಛತೆಗಾಗಿ ವಿಶೇಷ ಮಹಾ ಶ್ರಮದಾನ, ಶೂನ್ಯ ಕಸ ನಿರ್ವಹಣೆಯ ಲಕ್ಷಣಕ್ಕೆ ಮೂಲವಾಗುವ ಸಾಧ್ಯತೆ ಕಂಡು ಬರುತ್ತಿದೆ. ಆದರೆ, ಸ್ವಚ್ಛತೆಗೆ ಸತ್ಯ-ಸಂವಾದ ನಡೆಯಬೇಕಾಗಿದೆ. ಇದು ಯಾರದೋ ಕೆಲಸ ಅಲ್ಲ. ನಮ್ಮ ಕೆಲಸ. ಹಾಗಾಗಿ ಪ್ರತೀ ಮನೆಯವರೂ ಸ್ವಚ್ಛ ಮನೆ ಬಗ್ಗೆ ಸ್ವಯಂ ಘೋಷಣೆ ಮಾಡಬೇಕು. ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ನಗರಸಭಾ ಅಧ್ಯಕ್ಷೆ ಲೀಲಾವತಿ ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಅವರು ನಗರಸಭೆಯ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಿಕ್ಷಾ ಚಾಲಕರ ಜತೆ ಬೀದಿಗಿಳಿದು ಕಸ-ಕಡ್ಡಿಗಳನ್ನು ಆಯುವ ಕಾರ್ಯದಲ್ಲಿ ಮಗ್ನರಾಗಿದ್ದರು. ಈ ನಿಟ್ಟಿನಲ್ಲಿ ಪೌರಾಯುಕ್ತ ಮಧು ಎಸ್. ಮನೋಹರ್ ಅವರ ಪರಿಶ್ರಮವೂ ಶ್ಲಾಘನೀಯವಾಗಿದೆ.
ಇದನ್ನೂ ಓದಿ: Mandya: ಮೇಲುಕೋಟೆಯಲ್ಲಿ ಜರುಗಿದ ಅದ್ದೂರಿ ರಥಸಪ್ತಮಿ ರಥೋತ್ಸವ!
ಪುತ್ತೂರು ತಾಲೂಕಿನಲ್ಲಿ ಒಟ್ಟು 32 ಗ್ರಾಮಗಳಿದ್ದು, 22 ಗ್ರಾಮ ಪಂಚಾಯತ್ಗಳಿವೆ. ಒಟ್ಟು 31,115 ಮನೆಗಳಿದ್ದು, ಈ ಪೈಕಿ ಕೇವಲ ಶೇ.20 ರಷ್ಟು ಮನೆಗಳಿಂದ ತ್ಯಾಜ್ಯ ಸಂಗ್ರಹಣೆ ಮಾಡಲಾಗುತ್ತಿದೆ. 2110 ವಾಣಿಜ್ಯ ಮಳಿಗೆಗಳಿದ್ದು, ಶೇ.80 ರಷ್ಟು ಕಸ ಸಂಗ್ರಹಣೆ ಕಾರ್ಯ ನಡೆಸಲಾಗುತ್ತಿದೆ. ಒಟ್ಟು 16 ತ್ಯಾಜ್ಯ ಸಂಕೀರ್ಣ ಘಟಕಗಳಿದ್ದರೆ, 5 ತಾತ್ಕಾಲಿಕ ಸಂಕೀರ್ಣಗಳು ಕಾರ್ಯ ನಿರ್ವಹಿಸುತ್ತಿವೆ. 22 ಸ್ವಚ್ಛತಾ ವಾಹಿನಿ(ವಾಹನ)ಗಳಿದ್ದು, 66 ಸ್ವಚ್ಛತಾ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಪುತ್ತೂರು ನಗರಸಭೆಯು 31 ವಾರ್ಡ್ಗಳನ್ನು ಒಳಗೊಂಡಿದ್ದು, 32.23 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಒಟ್ಟು 16,064 ಮನೆಗಳು ಮತ್ತು 3345 ವಾಣಿಜ್ಯ ಸಂಕೀರ್ಣಗಳಿವೆ. ನಗರಸಭೆಯಲ್ಲಿ ಮನೆ -ಮನೆ ಕಸಗಳನ್ನು ಸಂಗ್ರಹಿಸುವ 13 ವಾಹನಗಳು, 4 ದೊಡ್ಡ ವಾಹನಗಳು, 1 ಗ್ಯಾಂಗ್ ವಾಹನಗಳಿವೆ. ಜೊತೆಗೆ 51 ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬನ್ನೂರಿನಲ್ಲಿ 7.15 ಎಕರೆ ಲ್ಯಾಂಡ್ಫಿಲ್ ಪ್ರದೇಶವಿದೆ. ಹಸಿ ತ್ಯಾಜ್ಯ ಸಂಸ್ಕರಣೆಗೆ ಬಯೋ ಸಿಎನ್ಜಿ, ಕಂಪೋಸ್ಟಿಂಗ್ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗಿದೆ.
ತ್ಯಾಜ್ಯ ನಿರ್ವಹಣೆಗೆ ಬಯೋಮೈನಿಂಗ್ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದೆ. ತ್ಯಾಜ್ಯಗಳಿಂದ ವಸ್ತುಗಳನ್ನು ಪ್ರತ್ಯೇಕಿಸುವ ಮತ್ತು ಪುಸರ್ಸಂಸ್ಕರಣೆ ಮಾಡುವಂತಹ ಮೆಟೀರಿಯಲ್ ರಿಕವರಿ ಫೆಸಿಲಿಟಿ (ಎಂಆರ್ಎಫ್) ಘಟಕ ನಿರ್ಮಾಣ ಹಂತದಲ್ಲಿದೆ. ಸ್ವಚ್ಛತೆ ಕೇವಲ ಆಂದೋಲನ, ಅಭಿಯಾನಕ್ಕಷ್ಟೇ ಸೀಮಿತವಾಗದೆ ವರ್ಷದ 365 ದಿನಗಳಲ್ಲೂ ಸಾರ್ವಜನಿಕರು ಸ್ವಚ್ಛತೆಯ ಕಳಕಳಿಯೊಂದಿಗೆ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಸಂಕಲ್ಪ ಮಾಡಬೇಕಾಗಿದೆ.
Dakshina Kannada,Karnataka
February 06, 2025 12:37 PM IST