Last Updated:
ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ 2025 ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ 11 ವಿಕೆಟ್‌ಗಳನ್ನು ಕಬಳಿಸಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು. 2021 ಟಿ20 ವಿಶ್ವಕಪ್ ವೈಫಲ್ಯದ ನಂತರದ ಕಠಿಣ ಹೋರಾಟವನ್ನು ಅವರು ಹಂಚಿಕೊಂಡಿದ್ದಾರೆ.
2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy) ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ (Varun Chakravarthy) ತಮ್ಮ ವೃತ್ತಿಜೀವನದ ಏಳು-ಬೀಳುಗಳ ಬಗ್ಗೆ ಇತ್ತೀಚೆಗೆ ಒಂದು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ದುಬೈಯಲ್ಲಿ ನಡೆದ ಈ ಟೂರ್ನಮೆಂಟ್‌ನಲ್ಲಿ ವರುಣ್ 3 ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದು, ಭಾರತವು 3ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ತನ್ನದಾಗಿಸಿಕೊಂಡಿತು. ಆದರೆ ಈ ಯಶಸ್ಸಿನ ಹಿಂದೆ ತಮ್ಮ ಜೀವನದ ಕಠಿಣ ಹೋರಾಟಗಳನ್ನು ನೆನಪಿಸಿಕೊಂಡ ಅವರು, 2021 ರ ಟಿ20 ವಿಶ್ವಕಪ್‌ನಲ್ಲಿ (T20 World Cup) ಭಾರತದ ಹೀನಾಯ ಸೋಲಿನ ನಂತರ ಎದುರಿಸಿದ ಭಯಾನಕ ಪರಿಸ್ಥಿತಿಗಳ ಬಗ್ಗೆ ವಿವರಿಸಿದ್ದಾರೆ.
2021ರ ವಿಶ್ವಕಪ್‌ನಲ್ಲಿ ವೈಫಲ್ಯ
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 2021 ರ ಟಿ20 ವಿಶ್ವಕಪ್‌ನಲ್ಲಿ ಆಡಿದ್ದ ವರುಣ್ ಚಕ್ರವರ್ತಿ, ಆ ಸಮಯದಲ್ಲಿ ತಂಡದ ಪ್ರಮುಖ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದರು. ಆದರೆ ಗುಂಪು ಹಂತದಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಸೋಲಿನ ನಂತರ ತಂಡ ಹೊರಬಿದ್ದಾಗ, ಅವರ ಮೇಲೆ ತೀವ್ರ ಟೀಕೆಗಳು ಸುರಿಮಳೆಯಾಗಿತ್ತು. ಈ ವೈಫಲ್ಯದ ನಂತರ, ಅವರಿಗೆ ನಿಂದನೆ ಜೊತೆಗೆ ಜೀವ ಬೆದರಿಕೆಗಳನ್ನು ಸಹ ಎದುರಿಸಬೇಕಾಯಿತು ಎಂದು ತಿಳಿಸಿದ್ದಾರೆ.
ಭಾರತಕ್ಕೆ ಮರಳಿದರೆ ಕೊಲೆ
“ನಾನು ಭಾರತಕ್ಕೆ ಹಿಂತಿರುಗಿದರೆ ಕೊಲ್ಲುತ್ತೇವೆ ಎಂಬ ಬೆದರಿಕೆಗಳು ಬಂದವು. ಕೆಲವರು ಬೈಕ್‌ನಲ್ಲಿ ನನ್ನನ್ನು ಹಿಂಬಾಲಿಸಿ ಭಯಭೀತರಾಗಿಸಿದ್ದರು. ಇದರಿಂದ ನಾನು ಖಿನ್ನತೆಗೆ ಒಳಗಾಗಿ, ಮೂರು ವರ್ಷಗಳ ಕಾಲ ಭಾರತ ತಂಡದಿಂದ ದೂರವಿದ್ದೆ ” ಎಂದು ಅವರು ತಮ್ಮ ಕಷ್ಟದ ಕ್ಷಣಗಳನ್ನು ಹೇಳಿಕೊಂಡಿದ್ದಾರೆ.
ಕಠಿಣ ಶ್ರಮದಿಂದ ಫಾರ್ಮ್ಗೆ ವಾಪಸ್
ಈ ದುಃಖದ ಸಮಯದಲ್ಲಿ ವರುಣ್ ತಮ್ಮ ಆಟದ ಮೇಲೆ ಕೇಂದ್ರೀಕರಿಸಿ, ಅಭ್ಯಾಸದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿಕೊಂಡೆ ಎಂದು ತಿಳಿಸಿದ್ದಾರೆ. ” ನಾನು ಒಂದು ಸೆಷನ್‌ನಲ್ಲಿ 50 ಎಸೆತಗಳನ್ನು ಎಸೆಯುತ್ತಿದ್ದೆ. ಆದರೆ ನನ್ನ ದೃಢ ನಿಶ್ಚಯದಿಂದ ಅದನ್ನು 100ಕ್ಕೆ ಏರಿಸಿದೆ. ಆದರೆ ಆಯ್ಕೆದಾರರು ನನ್ನನ್ನು ಮರೆತಿದ್ದರು. ಟೀಮ್ ಇಂಡಿಯಾ ಭರವಸೆ ಕಳೆದುಕೊಂಡ ನಂತರ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಪ್ರಯತ್ನ ಮಾಡಿದೆ,” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಐಪಿಎಲ್ ಇತಿಹಾಸದಲ್ಲಿ ಹೆಚ್ಚು ನಾಯಕರನ್ನ ಪ್ರಯೋಗಿಸಿದ ತಂಡ ಯಾವುದು? ಎಲ್ಲಾ ತಂಡಗಳ ವಿವರ ಇಲ್ಲಿದೆ
ಚಾಂಪಿಯನ್ಸ್ ಟ್ರೋಫಿಯಲ್ಲಿ ಮಿಂಚಿನ ಪ್ರದರ್ಶನ
2024 ರ ಐಪಿಎಲ್ ಸೀಸನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಪರ ಅಮೋಘ ಆಟವಾಡಿದ ಅವರು, ತಂಡವು ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಯಶಸ್ಸು ಅವರಿಗೆ ಮತ್ತೆ ಟೀಮ್ ಇಂಡಿಯಾಕ್ಕೆ ಮರಳಲು ದಾರಿ ತೋರಿತು. ಇದರಲ್ಲಿ ಮುಖ್ಯ ಕೋಚ್ ಗೌತಮ್ ಗಂಭೀರ್‌ನ ಬೆಂಬಲ ಪ್ರಮುಖವಾಗಿತ್ತು. ಗಂಭೀರ್ ಅವರ ಮೇಲೆ ನಂಬಿಕೆಯಿಟ್ಟು ಮೊದಲು ಟಿ20 ತಂಡಕ್ಕೆ ನಂತರ ಏಕದಿನ ತಂಡಕ್ಕೂ ಆಯ್ಕೆ ಮಾಡಿದರು. ಮೊದಲು ಇದಕ್ಕೆ ಟೀಕೆ ಎದುರಿಸಿದರಾದರೂ, ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಮೂಲಕ ಎಲ್ಲರ ಟೀಕೆಗಳಿಗೆ ತಿರುಗೇಟು ನೀಡಿದರು.
First Published :
March 15, 2025 6:07 PM IST