Last Updated:
ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಭಾಗದ ಕೃಷಿಕರು ಹೆಚ್ಚಾಗಿ ಅವಲಂಬಿಸಿರುವ ಅಡಿಕೆ ಬೆಳೆಗೆ ಇತ್ತೀಚೆಗೆ ರೋಗಗಳ ಬಾಧೆ ಹೆಚ್ಚಾಗಿದೆ. ಹೀಗಾಗಿ ಪರ್ಯಾಯ ಬೆಳೆಗಳತ್ತ ಕೃಷಿಕರು ಮುಖಮಾಡುತ್ತಿದ್ದು ಕರಾವಳಿ ಭಾಗದ ರೈತರು ರಾಮಪತ್ರೆ ಬೆಳೆಯುವತ್ತ ಆಸಕ್ತಿ ತೋರಿಸುತ್ತಿದ್ದಾರೆ.
ದಕ್ಷಿಣ ಕನ್ನಡ: ಕರಾವಳಿ, ಮಲೆನಾಡು ಭಾಗದ ಕೃಷಿಕರ ಪಾಲಿಗೆ ವರವಾಗಿದ್ದ ಅಡಿಕೆ ಬೆಳೆಗೆ ಈಗ ರೋಗಬಾಧೆ ಹೆಚ್ಚಾಗಿದೆ (Arecanut Farming). ಹೀಗಾಗಿ ವಾಣಿಜ್ಯ ಬೆಳೆ ಅಡಿಕೆಯನ್ನು ಅವಲಂಬಿಸಿರುವ ರೈತರು ಪರ್ಯಾಯ ಬೆಳೆಗಳತ್ತ ಮುಖಮಾಡುತ್ತಿದ್ದಾರೆ. ಅವುಗಳಲ್ಲಿ ಕಾಡುತ್ಪತ್ತಿಯಾದ ರಾಮಪತ್ರೆಯೂ ಒಂದು. ತೋಟಗಳಲ್ಲಿ ರಾಮಪತ್ರೆ ಗಿಡಗಳನ್ನು ಬೆಳೆಯಲು ಕರಾವಳಿ ರೈತರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ (Dakshina Kannada News).
ತಮ್ಮ ತೋಟಗಳಲ್ಲಿ ರಾಮಪತ್ರೆ ಗಿಡಗಳನ್ನು ಬೆಳೆಸಲು ದಕ್ಷಿಣ ಕನ್ನಡ ಜಿಲ್ಲೆಯ ರೈತರು ಆಸಕ್ತಿ ತೋರಿಸುತ್ತಿದ್ದಾರೆ. ಸ್ಥಳೀಯ ಭಾಷೆಯಲ್ಲಿ ಕಾಣಾಜೆ ಎಂದು ಕರೆಸಿಕೊಳ್ಳುವ ರಾಮಪತ್ರೆಯನ್ನು ಈಗಾಗಲೇ ಸುಳ್ಯ ತಾಲೂಕಿನ ಹಲವು ರೈತರು ತಮ್ಮ ತೋಟದಲ್ಲಿ ಬೆಳೆಯುತ್ತಿದ್ದಾರೆ.
ರಾಮಪತ್ರೆ ಕಾಯಿಯ ತಿರುಳಿಗಿದೆ ಬೇಡಿಕೆ
ಇನ್ನು, ಅರಣ್ಯ ಇಲಾಖೆಯೂ ಕೃಷಿಕರಿಗೆ ರಾಮಪತ್ರೆ ಗಿಡಗಳನ್ನು ನೀಡುತ್ತಿದ್ದು, ಈ ಗಿಡಗಳನ್ನು ನೆಟ್ಟ 5 ವರ್ಷಕ್ಕೆ ಫಸಲು ಬರಲು ಆರಂಭಿಸುತ್ತದೆ. ಕೃಷಿಕರು ರಾಮಪತ್ರೆಯ ಕಾಯಿಯನ್ನು ಕೊಯ್ದು, ಅದರ ಒಳಗಿರುವ ತಿರುಳನ್ನು ತೆಗೆದು ಮಾರಾಟ ಮಾಡುತ್ತಾರೆ. ಈ ತಿರುಳಿಗೆ ಸದ್ಯ ಮಾರುಕಟ್ಟೆ ಬೆಲೆ ಕೆಜಿಗೆ 800 ರೂಪಾಯಿ ಇದೆ.
ಪೇಂಟ್ ತಯಾರಿಕೆಯಲ್ಲಿ ಬಳಕೆ
ರಾಮಪತ್ರೆ ಕಾಯಿಯ ತಿರುಳನ್ನು ಪೇಂಟ್ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅಲ್ಲದೇ ತಿರುಳು ತೆಗೆದ ಬಳಿಕ ಸಿಗುವ ಕಾಯಿಗೂ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ಈ ಕಾಯಿಗಳನ್ನು ಡಾಂಬರು ತಯಾರಿಕೆಯ ಸಂದರ್ಭದಲ್ಲಿ ಬಳಕೆ ಮಾಡುತ್ತಾರೆ. ಹೀಗಾಗಿ ತಿರುಳು ತೆಗೆದ ಬಳಿಕ ಉಳಿಯುವ ರಾಮಪತ್ರೆ ಕಾಯಿಗೆ ಪ್ರತಿಕಿಲೋಗೆ 25 ರೂಪಾಯಿ ಬೆಲೆಯಿದೆ.
ಇದನ್ನೂ ಓದಿ: Dakshina Kannada: ಕನ್ನಡ ಸಾಹಿತ್ಯ ಸಮ್ಮೇಳನ ಪ್ರಚಾರ ರಥಕ್ಕೆ ದಕ್ಷಿಣ ಕನ್ನಡದಲ್ಲಿ ಭವ್ಯ ಸ್ವಾಗತ; ಹೇಗಿತ್ತು ಕಾರ್ಯಕ್ರಮ?
ರಾಮಪತ್ರೆ ಗಿಡಗಳನ್ನು ಎಲ್ಲಿ ಬೇಕಾದರೂ ಬೆಳೆಸುವುದು ಸಾಧ್ಯವಿದೆ. ಅಲ್ಲದೇ ಈ ಗಿಡಗಳಿಗೆ ಅಡಿಕೆ ಸಸಿಗಳಂತೆ ಆರೈಕೆ ಮಾಡುವ ಅಗತ್ಯವಿಲ್ಲ. ಹೀಗಾಗಿ ಅಡಿಕೆ ರೋಗಗಳಿಂದ ಕಂಗೆಟ್ಟಿರುವ ಕೃಷಿಕರು ಉಪಬೆಳೆಯಾಗಿ ರಾಮಪತ್ರೆ ಬೆಳೆಯಲು ಮುಂದಾಗುತ್ತಿದ್ದಾರೆ.
ಉತ್ತಮ ಗುಣಮಟ್ಟದ ರಾಮಪತ್ರೆ ಸಸಿಗಳನ್ನು ವಿತರಿಸುವ ಕಾರ್ಯ ಸರ್ಕಾರದಿಂದ ನಡೆಯಬೇಕೆಂಬುದು ಕರಾವಳಿ ಭಾಗದ ಕೃಷಿಕರ ಮನವಿಯಾಗಿದೆ.
Dakshina Kannada,Karnataka
November 10, 2024 7:30 AM IST