Last Updated:
ದಕ್ಷಿಣ ಕನ್ನಡದಲ್ಲಿ ಮಾವು, ಹಲಸಿನ ಸೀಸನ್ ನಡುವೆ ನೇರಳೆ ಹಣ್ಣು ಭಾರೀ ಬೇಡಿಕೆ ಹೊಂದಿದೆ. ಪುತ್ತೂರಿನ ಮೊಟ್ಟತ್ತಡ್ಕದಲ್ಲಿ NRCC ಗೇರುಬೀಜದ ನಡುವೆ ನೇರಳೆ ಗಿಡಗಳನ್ನು ನೆಟ್ಟಿದ್ದು, ಜನರು ಕಲ್ಲೆಸೆದು ಹಣ್ಣು ತಿನ್ನುತ್ತಿದ್ದಾರೆ.
ದಕ್ಷಿಣ ಕನ್ನಡ: ಏಪ್ರಿಲ್, ಮೇ ತಿಂಗಳು ಬಂತೆಂದರೆ ಸಾಕು ಮಾವಿನ ಹಣ್ಣು (Mango Fruit), ಹಲಸಿನ ಹಣ್ಣುಗಳ (Jackfruit) ಘಮ ಘಮ ಮೂಗಿಗೆ ಬಡಿಯುತ್ತವೆ. ಈ ಮಾವು, ಹಲಸಿನ ಹಣ್ಣಿನ ಸೀಸನ್ ನಡುವೆ ಇನ್ನೊಂದು ಹಣ್ಣು ತನ್ನ ಬಣ್ಣ ಮತ್ತು ರುಚಿಯಿಂದ ಗಮನ ಸೆಳೆಯುತ್ತಿದೆ. ರಸ್ತೆಯ ಬದಿಗಳಲ್ಲಿ ಭಾರೀ ಗಾತ್ರದ ಮರದಲ್ಲಿ ಆಗುವ ಈ ಹಣ್ಣಿಗೆ (Jamun Fruit) ಭಾರೀ ಬೇಡಿಕೆ. ಅಷ್ಟಕ್ಕೂ ಇದು ಯಾವ ಹಣ್ಣು, ಇದರಿಂದಾಗುವ ಪ್ರಯೋಜನಾವಾದ್ರೂ ಏನು ಅಂತಿರಾ ಈ ವರದಿ ನೋಡಿ.
ಹೀಗೆ ರಸ್ತೆಯ ಬದಿಗಳಲ್ಲಿ ಜನರು ಹೆಕ್ಕಿ ಹೆಕ್ಕಿ ತಿನ್ನುತ್ತಿರುವುದಾದ್ರೂ ಏನು? ಅಯ್ಯೊ ಆ ಬೃಹತ್ ಗಾತ್ರದ ಮರಕ್ಕೆ ಕಲ್ಲು ಎಸೆದು ರಸ್ತೆಗೆ ಬಿದ್ದಿರುವುದನ್ನು ಗಬಗಬನೆ ತಿನ್ನುತ್ತಾರಲ್ಲ ಏನದು ಅನ್ಕೊಂಡ್ರಾ? ಹೌದು ಇದು ಸದ್ಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇರುವ ನೇರಳೆ ಹಣ್ಣು. ಈಗಿನ ಮಾವು, ಹಲಸಿನ ಸೀಸನ್ ಗಳ ನಡುವೆ ಸಿಗುವಂತ ಭಾರೀ ಬೇಡಿಕೆಯ ಹಣ್ಣು. ಅಷ್ಟಕ್ಕೂ ಈ ದೃಶ್ಯ ಕಂಡುಬಂದಿದ್ದು ಪುತ್ತೂರಿನ ಮೊಟ್ಟತ್ತಡ್ಕದ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ಸಮೀಪ.
ಇಲ್ಲಿ NRCC ಅವರು ಗೇರುಬೀಜದ ನಡುವೆ ರಸ್ತೆಯ ಬದಿಗಳಲ್ಲಿ ನೇರಳೆ ಹಣ್ಣಿನ ಗಿಡಗಳನ್ನ ನೆಟ್ಟಿದ್ದಾರೆ. ಹಿಂದೆ ಗಿಡವಾಗಿದ್ದದ್ದು ಈಗ ಮರವಾಗಿ ಬೆಳೆದು ಅದರಿಂದ ಹಣ್ಣಿನ ಆಸ್ವಾದ ಜನರಿಗೆ ಸಿಗುತ್ತಿದೆ. ಈ ರಸ್ತೆ ನೇರಳೆ ಹಣ್ಣಿನ ಸ್ಟ್ರೀಟ್ ಆಗಿ ಮಾರ್ಪಟ್ಟಿದೆ. ಜನರು ಅತ್ತಿಂದ ಇತ್ತ ಹೋಗುವಾಗ ಅಲ್ಲಿ ಒಮ್ಮೆ ನಿಂತು ಮರದಲ್ಲಿರುವ ನೇರಳೆ ಹಣ್ಣಿಗೆ ಕಲ್ಲೆಸೆದು ಕೆಳಗೆ ಬಿದ್ದದ್ದನ್ನ ಹೆಕ್ಕಿ ತಿಂದು ಹೋಗುವುದು ಸಾಮಾನ್ಯವಾಗಿಬಿಟ್ಟಿದೆ.
ಈ ನೇರಳೆ ಹಣ್ಣಿನ ಬಣ್ಣವೇ ತುಂಬಾ ಆಕರ್ಷಕ. ಇನ್ನು ಇದನ್ನು ತಿಂದರಂತೂ ಬಾಯಿಯೆಲ್ಲಾ ನೇರಳೆಯೇ ನೇರಳೆ. ಈ ಹಣ್ಣಿಗೂ ನಮ್ಮ ಬಾಲ್ಯಕ್ಕೂ ಅವಿನಾಭಾವ ಸಂಬಂಧವಿದೆ. ಸಣ್ಣವರಿರುವಾಗ ಈ ನೇರಳೆ ಹಣ್ಣಿನ ಬಗ್ಗೆ ಏನೋ ವಿಪರೀತ ಆಕರ್ಷಣೆಯಿರುತ್ತದೆ. ಅಂದಯ ಕಾಡು ಹಣ್ಣಾಗಿದ್ದ ನೇರಳೆ ಈಗ ಮಾರುಕಟ್ಟೆಯಲ್ಲಿ ಪ್ರಮುಖ ಹಣ್ಣಾಗಿ ಗಮನ ಸೆಳೆಯುತ್ತಿದೆ. ಅದರಲ್ಲೂ ಮಾನ್ಸೂನ್ ಸೀಸನ್‌ನಲ್ಲಿ ಈ ಹಣ್ಣು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆರೋಗ್ಯಕ್ಕೂ ಒಳ್ಳೆಯದು ಎಂಬ ಕಾರಣಕ್ಕೆ ಬಹುತೇಕ ಜನರು ಈ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಮಾರುಕಟ್ಟೆಯಲ್ಲೂ ಈ ಹಣ್ಣಿನ ದರ ಕೆಜಿಗೆ 550 ರೂಪಾಯಿಗೂ ಹೆಚ್ಚು.
ಈ ಹಣ್ಣನ್ನು ಹಾಗೆಯೇ ತಿಂದರೂ ಚೆಂದ. ನೇರಳೆ ಹಣ್ಣು ಕಬ್ಬಿಣ, ಪೊಟಾಷಿಯಂ ಮತ್ತು ವಿಟಮಿನ್ ಸಿ ಯ ಆಗರವಾಗಿದೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಈ ಹಣ್ಣಿನ ಬಳಕೆ ಹೆಚ್ಚು. ಮಧುಮೇಹಿಗಳಿಗೆ ಈ ಹಣ್ಣಿನ ಸೇವನೆ ತುಂಬಾ ಒಳ್ಳೆಯದು. ಈ ಹಣ್ಣಿಗೆ ಉಪ್ಪು ಉದುರಿಸಿ ತಿಂದರೂ ತುಂಬಾ ಟೇಸ್ಟಿಯಾಗಿರುತ್ತದೆ. ಒಟ್ಟಿನಲ್ಲಿ ಮಾವು, ಹಲಸಿನ ಸೀಸನ್ ನಡುವೆ ಜನರಿಗೆ ಇನ್ನಷ್ಟು ಹತ್ತಿರವಾದ ನೇರಳೆ ಹಣ್ಣಿನ ರುಚಿಯನ್ನ ಮರೆಯುವಂತಿಲ್ಲ.
Chikmagalur,Chikmagalur,Karnataka