Last Updated:
ಆ ಅಪಘಾತ ಪೂರ್ಣಿಮಾ ಅವರ ಬದುಕನ್ನೇ ಕತ್ತಲಿನ ದಾರಿಯತ್ತ ಕೊಂಡೊಯ್ಯುವ ಯತ್ನ ಮಾಡಿತು. ನಡೆದಾಡಲು ಆಗದ ಸ್ಥಿತಿ, ಬೆನ್ನಿನ ಕೆಳಗಿನ ಸ್ವಾಧೀನವೇ ಕಳೆದುಕೊಳ್ಳುವ ಪರಿಸ್ಥಿತಿಯಿಂದಾಗಿ ವ್ಹೀಲ್ ಚೇರ್ ನಲ್ಲೇ ಓಡಾಡುವ ಸನ್ನಿವೇಶ ನಿರ್ಮಾಣವಾಗಿತ್ತು.
ದಕ್ಷಿಣ ಕನ್ನಡ: ಸಮಸ್ಯೆಗಳು(Problems) ಎದುರಾದಾಗ ಅದಕ್ಕೆ ಹೆದರಿ ಬದುಕೋದೋ ಅಥವಾ ಅದನ್ನು ಎದುರಿಸುವುದೋ ಎಂಬ ಪ್ರಶ್ನೆಗಳ ಗೊಂದಲಗಳು ಮನದಲ್ಲಿ ಮೂಡೋದು ಸಾಮಾನ್ಯ ತನ್ನ ಸಮಸ್ಯೆಗಳನ್ನು ಮೂರನೇ ವ್ಯಕ್ತಿಯಲ್ಲಿ ಚರ್ಚಿಸಿದರೆ, ಎದುರಿಸಿ ಮುನ್ನುಗ್ಗಿ ಎನ್ನುವ ಸಲಹೆಗಳು ಬರಬಹುದು. ಆದರೆ ಅದನ್ನು ಅಳವಡಿಸಿಕೊಳ್ಳೋದು ಹೇಳಿದಷ್ಟು ಸುಲಭವಲ್ಲ.. ಅಂಥದ್ದೇ ಒಂದು ಸನ್ನಿವೇಶ ದಕ್ಷಿಣ ಕನ್ನಡ ಜಿಲ್ಲೆಯ(Dakshina Kannada District) ಕಡಬ ತಾಲೂಕಿನ ಕುಂತೂರು ಗ್ರಾಮದ ಪೆರಾಬೆಯ ಪೂರ್ಣಿಮಾ ಭಟ್ ಅವರ ಬದುಕಿನಲ್ಲಾಯಿತು.
ಹಲವಾರು ಹೊಡೆತಗಳು ಬಿದ್ದಾಗ ಮಾನಸಿಕವಾಗಿ, ದೈಹಿಕವಾಗಿ ಜರ್ಝರಿತರಾದರು. ಕೊನೆಗೂ ಗೆದ್ದದ್ದು ಆತ್ಮವಿಶ್ವಾಸ. ಈಗ Facebook ಮತ್ತು instagramನಲ್ಲಿ crochet on wheels ಎಂದು ಹುಡುಕಿದರೆ, ಅವರು ತಯಾರಿಸಿದ ಆಕರ್ಷಕ ವಿನ್ಯಾಸದ ಕುಸುರಿ ಕೆಲಸಗಳಿರುವ ಗೊಂಬೆಗಳು ಅವರ ಕಸೂತಿಯಲ್ಲೇ ತಯಾರಾಗಿವೆ. ಸ್ನೇಹಿತರನೇಕರು ನನಗೆ ತಯಾರಿಸಿಕೊಡಿ ಎಂದು ಹೇಳುತ್ತಿದ್ದಾರೆ. ಬದುಕನ್ನು ಎದುರಿಸುವ ಆತ್ಮವಿಶ್ವಾಸವೂ ಪೂರ್ಣಿಮಾ ಅವರಿಗೆ ದೊರಕಿದೆ.
2016 ರಲ್ಲಿ ವಾಹನದಲ್ಲಿ ಪೂರ್ಣಿಮಾ ಸಂಚರಿಸುತ್ತಿದ್ದ ವೇಳೆ ಅಪಘಾತವಾಗಿತ್ತು. ಸಣ್ಣಪುಟ್ಟ ಅಪಘಾತವಾದರೆ ಸಾವರಿಸಿಕೊಳ್ಳಬಹುದು. ಆದರೆ ಆ ಅಪಘಾತ ಪೂರ್ಣಿಮಾ ಅವರ ಬದುಕನ್ನೇ ಕತ್ತಲಿನ ದಾರಿಯತ್ತ ಕೊಂಡೊಯ್ಯುವ ಯತ್ನ ಮಾಡಿತು. ನಡೆದಾಡಲು ಆಗದ ಸ್ಥಿತಿ, ಬೆನ್ನಿನ ಕೆಳಗಿನ ಸ್ವಾಧೀನವೇ ಕಳೆದುಕೊಳ್ಳುವ ಪರಿಸ್ಥಿತಿಯಿಂದಾಗಿ ವ್ಹೀಲ್ ಚೇರ್ ನಲ್ಲೇ ಓಡಾಡುವ ಸನ್ನಿವೇಶ ನಿರ್ಮಾಣವಾಗಿತ್ತು. ಆ ಒಂದು ಅಪಘಾತದಿಂದಾಗಿ ಬೇರೆ ಬೇರೆ ರೀತಿಯಲ್ಲಿ ಸಾಕಷ್ಟು ಸಂಕಟಗಳನ್ನು ಅನುಭವಿಸಿದ್ದರು. ಒಂದು ಹಂತದಲ್ಲಿ ಅವರಿಗೆ ಬದುಕೇ ಬೇಡ ಎನ್ನುವಂಥ ಸ್ಥಿತಿ ನಿರ್ಮಾಣವಾಗಿತ್ತು. ಹೀಗೆ ಖಿನ್ನತೆಗೆ ಒಳಗಾಗಿದ್ದ ಪೂರ್ಣಿಮಾಗೆ ನೆನಪಾದದ್ದು, ತಾನು ವಿದ್ಯಾಭ್ಯಾಸ ಮಾಡುತ್ತಿದ್ದಾಗ ಕಲಿತಿದ್ದ ಕಸೂತಿ ಕೆಲಸಗಳು.
ಬಂಟ್ವಾಳ ತಾಲೂಕಿನ ಮೂರ್ಗಜೆಯಲ್ಲಿರುವ ಮೈತ್ರೇಯಿ ಗುರುಕುಲದಲ್ಲಿ ಇವರು ಕಲಿತಿದ್ದರು. ಅಲ್ಲಿ ಕೇವಲ ಪಠ್ಯಪುಸ್ತಕವನ್ನಷ್ಟೇ ಬೋಧಿಸುವುದಲ್ಲ. ಬದುಕಿನ ಪಾಠವನ್ನೂ ಕಲಿಸುತ್ತಾರೆ. ಅಲ್ಲಿ ಕಲಿತ ವಿದ್ಯೆ ಪೂರ್ಣಿಮಾಗೆ ಮತ್ತೆ ಜೀವನದ ದಾರಿಯಲ್ಲಿ ಮುಂದೆ ಸಾಗುವ ಆತ್ಮವಿಶ್ವಾಸ ದೊರಕಿಸಿತು. ಇನ್ನೇನು ಬಾಡಿಹೋಗುವ ಬದುಕು ಅರಳಿತು. ಕಸೂತಿ ಕೆಲಸಗಳಲ್ಲೇ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡ ಪೂರ್ಣಿಮಾ, ಬಿಕಾಂ ಪದವೀಧರೆಯಾಗಿದ್ದು, ಸೋಶಿಯಲ್ ಮೀಡಿಯಾ ಬಳಕೆದಾರರೂ ಆಗಿದ್ದ ಕಾರಣ, 2020ರಲ್ಲಿ ಫೇಸ್ ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ತಾನು ಮಾಡಿದ ಕಸೂತಿಗಳನ್ನು ಶೇರ್ ಮಾಡಿದರು. ಅದಕ್ಕೊಂದು ಪುಟ್ಟ ಹೆಸರಿಟ್ಟರು. ಅದುವೇ crochet on wheels.
ಬದುಕಿನಲ್ಲಾದ ಕಹಿ ಘಟನೆಯನ್ನು ಯೋಚಿಸಿ, ಖಿನ್ನತೆಗೆ ಒಳಗಾಗುವುದನ್ನು ಮರೆಯಲು ಮಾಡಿದ ಕುಸುರಿ ಕೆಲಸಗಳು ನನ್ನ ದಿನಚರಿಯ ಭಾಗವಾಯಿತು. ಸೋಶಿಯಲ್ ಮೀಡಿಯಾದಲ್ಲಿ ಹಾಕತೊಡಗಿದ ಮೇಲೆ ನನಗೆ ಅಂಥದ್ದೇ ಮಾಡಿಕೊಡಿ ಎಂದು ಸ್ನೇಹಿತ ಬಳಗದಿಂದ ಬೇಡಿಕೆಗಳೂ ಬರತೊಡಗಿದವು. ಯಾಕೆ ಇದನ್ನು ಮುಂದುವರಿಸಬಾರದು ಎಂದು ಯೋಚಿಸಿ, ಮಾಡಲು ಆರಂಭಿಸಿದೆ. ಆನ್ಲೈನ್ ಹಿನ್ನೆಲೆಯಲ್ಲಿ ಜಗತ್ತು ಹತ್ತಿರವಾಗುವ ಈ ಹೊತ್ತಿನಲ್ಲಿ ಬೇಕಾದ ಮೆಟೀರಿಯಲ್ಸ್ ಅನ್ನು ಆನ್‌ಲೈನ್ ನಲ್ಲೇ ತರಿಸಿಕೊಂಡೆ. ಉತ್ತಮ ಗುಣಮಟ್ಟದ ಗೊಂಬೆಗಳ ಕುಸುರಿ ರಚನೆಗೆ ಕನಿಷ್ಠ ನಾಲ್ಕೈದು ದಿನ ಬೇಕು. ಆದರೆ ಅದಕ್ಕೆ ದೊರಕುವ ಪ್ರತಿಕ್ರಿಯೆಗಳ ನಂತರ ಮತ್ತಷ್ಟು ರಚಿಸುವ ಹುಮ್ಮಸ್ಸು ಮೂಡಿದೆ ಎನ್ನುತ್ತಾರೆ ಪೂರ್ಣಿಮಾ.
ಪೂರ್ಣಿಮಾ ಅವರು ರಚಿಸಿದ ನೂರಾರು ಕುಸುರಿ ಕೆಲಸಗಳ ಪೈಕಿ ಮಕ್ಕಳಿಗೆ ಒಪ್ಪುವ, ಶೋಕೇಸ್ ನಲ್ಲಿ ಇಟ್ಟುಕೊಳ್ಳುವ, ಅಲಂಕಾರಿಕವಾಗಿ ಇರಿಸಿಕೊಳ್ಳುವ ಗೊಂಬೆಗಳು, ರಚನೆಗಳು ಅನೇಕ. ಇವು ಹತ್ತಾರು ಮನೆಗಳನ್ನು ಸೇರಿವೆ. ಹೊಸ ಬೇಡಿಕೆಗಳಿಗೆ ಸ್ಪಂದಿಸಿ ಕಾರ್ಯನಿರತರಾಗಿರುವ ಪೂರ್ಣಿಮಾ ಮಾತಿನಲ್ಲೀಗ ಆತ್ಮವಿಶ್ವಾಸವಿದೆ. ಕಳೆದುಕೊಂಡದ್ದನ್ನೆಲ್ಲವನ್ನೂ ಪಡೆಯುವ ಹುಮ್ಮಸ್ಸಿದೆ.
Dakshina Kannada,Karnataka