Last Updated:
ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಚಂಪಾಷಷ್ಠಿಯಲ್ಲಿ ದೊಡ್ಡಮಟ್ಟದಲ್ಲಿ ಸಿಡಿಮದ್ದು ಪ್ರದರ್ಶನಕ್ಕೆ ಭಕ್ತರು ಒತ್ತಾಯಿಸಿದ ಹಿನ್ನೆಲೆ ಪರಿಸರ ಸ್ನೇಹಿ ಹಸಿರು ಸಿಡಿಮದ್ದು ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ.
ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯದಲ್ಲಿ(Kukke Subramanya) ನವೆಂಬರ್ 26ರಿಂದ ಚಂಪಾಷಷ್ಠಿ ಮಹೋತ್ಸವ(Champashashti Mahotsav) ಆರಂಭಗೊಳ್ಳಲಿದೆ. ಪಂಚಮಿಯ ದಿನ ರಾತ್ರಿ ಸುಬ್ರಹ್ಮಣ್ಯ ಸ್ವಾಮಿಗೆ ರಥೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ರಥವು ಕ್ಷೇತ್ರದ ರಥಬೀದಿಯಲ್ಲಿ ನಿಂತಾಗ ಸಣ್ಣ ಪ್ರಮಾಣದಲ್ಲಿ ಸಿಡಿಮದ್ದು ಪ್ರದರ್ಶನವನ್ನು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಆಕರ್ಷಕ ಹಸಿರು ಪಟಾಕಿಗಳ(Green Firecracker) ಸಿಡಿಮದ್ದು ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ.
ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನವೆಂಬರ್ 26ರಿಂದ ಚಂಪಾಷಷ್ಠಿ ಮಹೋತ್ಸವ ಆರಂಭಗೊಳ್ಳಲಿದೆ. ಕ್ಷೇತ್ರದಲ್ಲಿ ಚಂಪಾಷಷ್ಠಿಯ ಪ್ರಮುಖ ಸೇವೆಗಳಲ್ಲಿ ಎಡೆ ಮಡೆಸ್ನಾನವೂ ಒಂದು. ಚೌತಿ, ಪಂಚಮಿ ಮತ್ತು ಷಷ್ಠಿಯಂದು ಮಧ್ಯಾಹ್ನದ ಮಹಾಪೂಜೆಯ ಬಳಿಕ ಈ ಸೇವೆ ನಡೆಯುತ್ತದೆ. ಈ ಸೇವೆಯ ಬಳಿಕ ಚಂಪಾಷಷ್ಠಿಯ ಪ್ರಮುಖ ಆಕರ್ಷಣೆ ಸುಬ್ರಹ್ಮಣ್ಯ ಸ್ವಾಮಿಯ ಪಂಚಮಿ ಮತ್ತು ಬ್ರಹ್ಮರಥೋತ್ಸವ ನಡೆಯುತ್ತದೆ.
ಹಸಿರು ಪಟಾಕಿಗಳ ಸಿಡಿಮದ್ದು ಪ್ರದರ್ಶನಕ್ಕೆ ನಿರ್ಧಾರ
ಪಂಚಮಿಯ ದಿನ ರಾತ್ರಿ ಸುಬ್ರಹ್ಮಣ್ಯ ಸ್ವಾಮಿಗೆ ಪಂಚಮಿ ರಥೋತ್ಸವ ನಡೆಯುತ್ತದೆ. ಈ ಸಂದರ್ಭದಲ್ಲಿ ರಥವು ಕ್ಷೇತ್ರದ ರಥಬೀದಿಯಲ್ಲಿ ನಿಂತಾಗ ಸಣ್ಣ ಪ್ರಮಾಣದಲ್ಲಿ ಸಿಡಿಮದ್ದು ಪ್ರದರ್ಶನ ನಡೆಸಲಾಗುತ್ತದೆ. ಆದರೆ ಈ ಬಾರಿ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ ಆಕರ್ಷಕ ಹಸಿರು ಪಟಾಕಿಗಳ ಸಿಡಿಮದ್ದು ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ. ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಜಾತ್ರೋತ್ಸವದ ಪೂರ್ವಭಾವಿ ಸಭೆಯಲ್ಲಿ ಭಕ್ತಾದಿಗಳು ಅಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತಂದಿದ್ದರು.
ಇದನ್ನೂ ಓದಿ: Belagavi: ಬೆಳಗಾವಿಯ ಗೆಣಸಿಗೆ ಉತ್ತರ ಭಾರತದಲ್ಲಿ ಫುಲ್ ಡಿಮ್ಯಾಂಡ್; ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಂಪು ಗೆಣಸು!
ದೊಡ್ಡಮಟ್ಟದಲ್ಲಿ ಸಿಡಿಮದ್ದು ಪ್ರದರ್ಶನಕ್ಕೆ ಮನವಿ
ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ವಾರ್ಷಿಕ ಜಾತ್ರೋತ್ಸವದ ವೇಳೆ ನಡೆಯುವ ಸಿಡಿಮದ್ದು ಪ್ರದರ್ಶನ ಹೆಚ್ಚಿನ ಭಕ್ತರನ್ನು ಆಕರ್ಷಿಸುತ್ತದೆ. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲೂ ಚಂಪಾಷಷ್ಠಿಯ ವೇಳೆ ದೊಡ್ಡಮಟ್ಟದಲ್ಲಿ ಸಿಡಿಮದ್ದು ಪ್ರದರ್ಶನ ನಡೆಯಬೇಕು ಎಂದು ಅಧಿಕಾರಿಗಳ ಎದುರು ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಭಕ್ತರ ಅಭಿಪ್ರಾಯಕ್ಕೆ ಮನ್ನಣೆ
ಭಕ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಿರುವ ಕ್ಷೇತ್ರದ ಆಡಳಿತಾಧಿಕಾರಿ, ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ಹಸಿರು ಪಟಾಕಿ ಪ್ರದರ್ಶನ ನೀಡುವ ಸಂಸ್ಥೆಗಳ ಜೊತೆ ಮಾತುಕತೆ ನಡೆಸಿದ್ದಾರೆ.
ಪರಿಸರ ಸ್ನೇಹಿ ಪಟಾಕಿ ಬಳಕೆ, ಇನ್ನೊಂದು ಸುತ್ತಿನ ಚರ್ಚೆ
ಪರಿಸರ ಸ್ನೇಹಿ ಪಟಾಕಿಗಳನ್ನು ಮಾತ್ರವೇ ಸಿಡಿಮದ್ದು ಪ್ರದರ್ಶನದಲ್ಲಿ ಬಳಸಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಸಿಡಿಮದ್ದು ಪ್ರದರ್ಶನ ಆಯೋಜಿಸುವ ಸಂಸ್ಥೆಗಳೊಂದಿಗೆ ಇನ್ನೊಂದು ಸುತ್ತು ಚರ್ಚಿಸುತ್ತೇವೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಾವ ರೀತಿ ಸಿಡಿಮದ್ದು ಪ್ರದರ್ಶನ ನಡೆಯುತ್ತದೆಯೋ, ಅದೇ ರೀತಿಯಲ್ಲಿ ಇಲ್ಲೂ ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ. ಅಲ್ಲದೆ ಈ ಬಾರಿ ಜಾತ್ರೆಯನ್ನು ಅಚ್ಚುಕಟ್ಟಾಗಿ ನಡೆಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ತಿಳಿಸಿದ್ದಾರೆ.
Dakshina Kannada,Karnataka
November 24, 2024 9:55 AM IST