Dakshina Kannada: ಕೃಷಿಕರು ಕಟ್ಟಿದ ಗ್ರಾಮಜನ್ಯ ಸಂಸ್ಥೆಯ ಜೇನಿನ ಬ್ರ್ಯಾಂಡ್ ಮಾರುಕಟ್ಟೆಗೆ ಸಿದ್ಧ! | Dakshina Kannada Honey bee gramajanya brand ready to launch in market

Dakshina Kannada: ಕೃಷಿಕರು ಕಟ್ಟಿದ ಗ್ರಾಮಜನ್ಯ ಸಂಸ್ಥೆಯ ಜೇನಿನ ಬ್ರ್ಯಾಂಡ್ ಮಾರುಕಟ್ಟೆಗೆ ಸಿದ್ಧ! | Dakshina Kannada Honey bee gramajanya brand ready to launch in market

Last Updated:

ಮುಂದಿನ ಫೆಬ್ರವರಿ ತಿಂಗಳಲ್ಲಿ ಸಂಸ್ಥೆಯ ನೂತನ ಜೇನು ಸಂಸ್ಕರಣಾ ಘಟಕ ಮತ್ತು ಅತ್ಯಾಧುನಿಕ ಲ್ಯಾಬ್ ಕೂಡಾ ಶುಭಾರಂಭಗೊಳ್ಳಲಿದೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಕೃಷಿಗಾಗಿ, ಕೃಷಿಕರಿಗೋಸ್ಕರ, ಕೃಷಿಕರಿಂದ ಪ್ರಾರಂಭಗೊಂಡ ಸಂಸ್ಥೆಯೊಂದು ಇದೀಗ ತನ್ನ ಜಾಲವನ್ನು ಮತ್ತಷ್ಟು ವಿಸ್ತರಿಸಲು ಆರಂಭಿಸಿದೆ. ಮೂರು ವರ್ಷಗಳ ಹಿಂದೆ ಪ್ರಾರಂಭಗೊಂಡ ಗ್ರಾಮಜನ್ಯ(Gramajanya) ಎನ್ನುವ ಕೃಷಿಕರನ್ನೊಳಗೊಂಡ ಕೃಷಿ ಉತ್ಪನ್ನಗಳ ಸಂಸ್ಥೆ ಇದೀಗ ತನ್ನ ಸಂಸ್ಥೆಯ ಬ್ರ್ಯಾಂಡ್‌ನಲ್ಲಿ(Brand) ಜೇನು ಕೃಷಿ, ಬಿದಿರು ಕೃಷಿ, ಹಲಸಿನ ವಿವಿಧ ಉತ್ಪನ್ನಗಳ ತಯಾರಿಗೆ ಮುಂದಾಗಿದೆ. ಕೃಷಿಕರಿಗೆ ಕೃಷಿಕರದ್ದೇ ಆದ ಮಾರುಕಟ್ಟೆ ಸೃಷ್ಟಿಸಬೇಕು ಎನ್ನುವ ಉದ್ಧೇಶದಿಂದ ಆರಂಭಗೊಂಡ ಈ ಸಂಸ್ಥೆಗೆ ಇದೀಗ ಕೇಂದ್ರ ಸರಕಾರದ(Central Government) ಅನುದಾನ ಕೂಡಾ ಬರಲಾರಂಭಿಸಿದೆ.

ಮಾರುಕಟ್ಟೆಗೆ ಬರಲು ಸಿದ್ಧಗೊಂಡ ಗ್ರಾಮಜನ್ಯ

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಕೆಲವು ಪ್ರಗತಿಪರ ಕೃಷಿಕರು 2020 ರಲ್ಲಿ ಪ್ರಾರಂಭಿಸಿದ ಗ್ರಾಮಜನ್ಯ ಎನ್ನುವ ಕೃಷಿಕರ ಸಂಸ್ಥೆ ಇದೀಗ ಕೃಷಿಕರ ಉತ್ಪನ್ನಗಳನ್ನು ಬ್ರ್ಯಾಂಡಿಂಗ್‌ ಮೂಲಕ ಮಾರುಕಟ್ಟೆಗೆ ಪರಿಚಯಿಸುವ ಹಂತಕ್ಕೆ ತಲುಪಿದೆ. ಆರಂಭದಲ್ಲಿ ದೇಶದಲ್ಲಿ ಹೆಚ್ಚು ಬೇಡಿಕೆಯಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉತ್ಪತ್ತಿಯಾಗುವ ಜೇನನ್ನು ಜೇನು ಕೃಷಿಕರಿಂದ ಸಂಗ್ರಹಿಸಿ, ಇನ್ನೊಂದೆಡೆ ಕೃಷಿಕರ ತೋಟದಲ್ಲಿ ಬಾಡಿಗೆ ರೂಪದಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಜೇನು ಉತ್ಪಾದಿಸಲು ಆರಂಭಿಸಿದ್ದ ಗ್ರಾಮಜನ್ಯ ಸಂಸ್ಥೆ ಇದೀಗ ಕೃಷಿಕರು ಉತ್ಪಾದಿಸಿದ ಜೇನಿಗೆ ಗ್ರಾಮಜನ್ಯದ ಬ್ರ್ಯಾಂಡ್ ನೀಡಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಅಲ್ಲದೆ ಜೇನಿನ ಮೇಣದಿಂದ ತಯಾರಿಸಿದ ಹಲವು ಉತ್ಪನ್ನಗಳನ್ನು ಕೂಡಾ ಮಾರುಕಟ್ಟೆಗೆ ಬಿಡಲು ಸಿದ್ಧತೆ ಆರಂಭಿಸಿದೆ.

ಇದನ್ನೂ ಓದಿ:Women Empowerment: ಕೋಲಾರದಲ್ಲಿ ಮಹಿಳೆಯರ ಸ್ವಾವಲಂಬಿ ಜೀವನ- ಗ್ರಾಮಾಭಿವೃದ್ಧಿಗೆ ಕೈ ಜೋಡಿಸಿದ ಸ್ತ್ರೀಯರು!

ಕೃಷಿಕನಿಗೆ ಸ್ಥೈರ್ಯ ತುಂಬಿದ ಗ್ರಾಮಜನ್ಯ ಸಂಸ್ಥೆ

ಮುಂದಿನ ಫೆಬ್ರವರಿ ತಿಂಗಳಲ್ಲಿ ಸಂಸ್ಥೆಯ ನೂತನ ಜೇನು ಸಂಸ್ಕರಣಾ ಘಟಕ ಮತ್ತು ಅತ್ಯಾಧುನಿಕ ಲ್ಯಾಬ್ ಕೂಡಾ ಶುಭಾರಂಭಗೊಳ್ಳಲಿದೆ. ಜೇನು ಉತ್ಪಾದನೆಯ ಬಳಿಕ ಅದನ್ನು ಮಾರುಕಟ್ಟೆಗೆ ಪರಿಚಯಿಸೋದು ಎನ್ನುವ ಗೊಂದಲದಲ್ಲಿದ್ದ ಕೃಷಿಕನಿಂದ ಜೇನು ಖರೀದಿಸಿ ಕೃಷಿಕನಿಗೆ ಸ್ಥೈರ್ಯ ತುಂಬಿದ ಸಂಸ್ಥೆ ಗ್ರಾಮಜನ್ಯವಾಗಿದೆ.

ಹಲಸಿಗೂ ಬಂತು ಬೇಡಿಕೆ

ಇದೀಗ ಜೇನು ಕೃಷಿಯ ಜೊತೆಗೆ ಬಿದಿರು ಹಾಗೂ ಹಲಸಿನ ವಿವಿಧ ಉತ್ಪನ್ನಗಳನ್ನು ತಯಾರಿಸಲೂ ಈ ಸಂಸ್ಥೆ ಆರಂಭಿಸಿದೆ. ಈ ಉತ್ಪನ್ನಗಳ ಸಂಸ್ಕರಣೆ ಸೇರಿದಂತೆ ಇತರ ಕೆಲಸಗಳಿಂದ ಶ್ರೀ ಶಕ್ತಿ ಗುಂಪುಗಳನ್ನೂ ತನ್ನ ಜೊತೆ ಜೋಡಿಸಿಕೊಂಡಿದೆ. ಆ ಮೂಲಕ ಮಹಿಳೆಯರಿಗೂ ತರಬೇತಿಯನ್ನು ನೀಡಿ ಅವರನ್ನು ಸ್ವಾವಲಂಬಿಯನ್ನಾಗಿಸುವ ಉದ್ದೇಶವೂ ಈ ಸಂಸ್ಥೆಯದ್ದಾಗಿದೆ. ಹಲಸಿನ ಚಿಪ್ಸ್ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸುವ ಮೂಲಕ ಬೇಡವೆಂದು ಎಸೆಯುತ್ತಿದ್ದ ಹಲಸಿಗೂ ಬೇಡಿಕೆ ಬರುವಂತೆ ಮಾಡಲಾಗುತ್ತಿದೆ.

ಬಿದಿರಿನ ಬೆಳೆಗೂ ಪ್ರೋತ್ಸಾಹ

ಜೇನಿನ ಜೊತೆಗೆ ಬಿದಿರನ್ನೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೆಳೆಸುವ ನಿಟ್ಟಿನಲ್ಲೂ ಸಂಸ್ಥೆ ಯೋಜನೆಗಳನ್ನು ಆರಂಭಿಸಿದೆ. ಸಂಸ್ಥೆಯ ಕೃಷಿಪರ ಚಟುವಟಿಕೆಯನ್ನು ಗುರುತಿಸಿ‌ ಕೇಂದ್ರ ಸರಕಾರ 2022-23 ರ ಸಾಲಿನಲ್ಲಿ 2.22 ಕೋಟಿ ಅನುದಾನವನ್ನೂ ಸಂಸ್ಥೆಗೆ ನೀಡಿದ್ಧು,ಕೃಷಿಗೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರವೂ ಗ್ರಾಮಜನ್ಯ ಸಂಸ್ಥೆಯೊಂದಿಗೆ ಕೈ ಜೋಡಿಸಿದೆ.