Dakshina Kannada: ತಾಳೆ ಕೃಷಿಯಲ್ಲಿ ದಕ್ಷಿಣ ಕನ್ನಡದ ಕೃಷಿಕರ ಹೊಸ ಹೆಜ್ಜೆ; ಕಡಿಮೆ ಬಂಡವಾಳ, ಹೆಚ್ಚಿನ ಲಾಭ | Palm tree farming Boost for Dakshina Kannada Farmers

Dakshina Kannada: ತಾಳೆ ಕೃಷಿಯಲ್ಲಿ ದಕ್ಷಿಣ ಕನ್ನಡದ ಕೃಷಿಕರ ಹೊಸ ಹೆಜ್ಜೆ; ಕಡಿಮೆ ಬಂಡವಾಳ, ಹೆಚ್ಚಿನ ಲಾಭ | Palm tree farming Boost for Dakshina Kannada Farmers

Last Updated:

ದಕ್ಷಿಣಕನ್ನಡ ಜಿಲ್ಲೆಯ 200 ಕೃಷಿಕರು ತಾಳೆ ಕೃಷಿಯಲ್ಲಿ ತೊಡಗಿದ್ದು, 2000 ಟನ್ ತಾಳೆ ಉತ್ಪಾದನೆ ಮಾಡುತ್ತಿದ್ದಾರೆ. ತಾಳೆ ಹಣ್ಣಿಗೆ ಕಿಲೋವೊಂದಕ್ಕೆ 18 ರೂಪಾಯಿ ಬೆಲೆ ಇದೆ.

X

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಅಡಿಕೆ ಬೆಳೆಯನ್ನೇ ನೆಚ್ಚಿಕೊಂಡ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕೃಷಿಕರು ಇತ್ತೀಚಿನ ಕೆಲವು ವರ್ಷಗಳಲ್ಲಿ ಇತರ ಉಪಬೆಳೆಗಳನ್ನು ಬೆಳೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇಂತಹ ಉಪಬೆಳೆಗಳಲ್ಲಿ ತಾಳೆ ಕೃಷಿಯೂ (Oil Palm Plantation) ಒಂದಾಗಿದ್ದು, ಈ ಬೆಳೆಯು ಮೇ ತಿಂಗಳಿನಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. ಹೀಗೆ ಕಟಾವು ಮಾಡಿದ ತಾಳೆ ಹಣ್ಣನ್ನು ಕೃಷಿಕರು (Farmers) ತಮಗೆ ಸುಲಭವಾಗುವ ಜಾಗದಲ್ಲಿ ರಾಶಿ ಹಾಕಿ, ಅವುಗಳನ್ನು ತಾಳೆ ಎಣ್ಣೆ ಖರೀದಿಸುವ ಕಂಪನಿಗೆ ನೀಡುವುದು ಜಿಲ್ಲೆಯಲ್ಲಿ ಹಿಂದಿನಿಂದಲೂ ಬಂದಂತಹ ಪ್ರಕ್ರಿಯೆ.

ಕರಾವಳಿಯ ತಾಳೆ ಕೃಷಿ

ಜಿಲ್ಲೆಯಲ್ಲಿ ಸುಮಾರು 200 ಕೃಷಿಕರು ತಮ್ಮ ತೋಟಗಳಲ್ಲಿ ತಾಳೆ ಬೆಳೆಯನ್ನು ಬೆಳೆಯುತ್ತಿದ್ದು, ಸುಮಾರು 2000 ಟನ್ ವರೆಗೆ ಕರಾವಳಿ ಭಾಗದಲ್ಲಿ ತಾಳೆಯನ್ನು ಬೆಳೆಯಲಾಗುತ್ತಿದೆ. ಸದ್ಯದ ಮಾರುಕಟ್ಟೆಯಲ್ಲಿ ತಾಳೆ ಹಣ್ಣಿಗೆ ಕಿಲೋವೊಂದಕ್ಕೆ 18 ರೂಪಾಯಿಯಷ್ಟು ಬೆಲೆಯಿದ್ದು, ಇತ್ತೀಚೆಗೆ ಕೇಂದ್ರ ಸರಕಾರ ಎಣ್ಣೆ ವಸ್ತುಗಳ ಆಮದು ಮೇಲೆ 10 ಶೇಕಡಾ ತೆರಿಗೆ ಕಡಿತ ಮಾಡಿರುವ ಹಿನ್ನಲೆಯಲ್ಲಿ ಈ ಬೆಲೆಯಲ್ಲಿ ಕೊಂಚ ಇಳಿಕೆಯಾಗುವ ಸಾಧ್ಯತೆಯಿದೆ. ಆದರೂ ಜಿಲ್ಲೆಯ ಕೃಷಿಕರು ಈ ಬೆಳೆಯನ್ನು ಅಡಿಕೆ ತೋಟದ ಮಧ್ಯೆ‌ ಹಾಗು ಪ್ರತ್ಯೇಕವಾಗಿ ಬೆಳೆಯುತ್ತಿದ್ದು, ಈ ಕೃಷಿಗೆ ಹೆಚ್ಚಿನ ಬಂಡವಾಳದ ಅಗತ್ಯವಿಲ್ಲದ ಕಾರಣ ತಾಳೆಗೆ ಎಷ್ಟು‌ ಬೆಲೆ ಸಿಕ್ಕಿದರೂ ಅದು ಕೃಷಿಕರಿಗೆ ಸದ್ಯದ ಮಟ್ಟಿಗೆ ತೃಪ್ತಿಯನ್ನೇ ನೀಡಿದೆ.

ಎಣ್ಣೆ ತೆಗೆಯಲು ಸಿದ್ಧಗೊಂಡ ತಾಳೆಹಣ್ಣು

ಕರಾವಳಿ‌ ಭಾಗದಲ್ಲಿ ಬೆಳೆಯುವ ತಾಳೆಯನ್ನು ಸರಕಾರದ ತೋಟಗಾರಿಕಾ ಇಲಾಖೆ ನಿಗದಿಪಡಿಸಿದ ತ್ರಿಬಲ್ ಎಫ್ ಕಂಪನಿಯು ಖರೀದಿಸುತ್ತಿದ್ದು, ಈ ತಾಳೆಯು ಬಾಗಲಕೋಟೆಯಲ್ಲಿರುವ ತಾಳೆ ಎಣ್ಣೆ ಪ್ಯಾಕ್ಟರಿಯಲ್ಲಿ ಸಂಸ್ಕರಣೆಯಾಗುತ್ತದೆ. ಜಿಲ್ಲೆಗೆ ಸದ್ಯಕ್ಕೆ ದಿನಕ್ಕೆ 2000 ಟನ್ ಗಳಷ್ಟು ತಾಳೆ ಪೂರೈಕೆಯ ಸಾಮರ್ಥ್ಯವಿದ್ದು, ಪ್ರತಿ ದಿನ ಸುಮಾರು 5000 ಟನ್ ಉತ್ಪಾದನೆ ಮಾಡಿದಲ್ಲಿ ಮಾತ್ರ ಜಿಲ್ಲೆಯಲ್ಲೇ ತಾಳೆ ಹಣ್ಣು ಸಂಸ್ಕರಿಸುವ ಘಟಕ ಆರಂಭಿಸುವ ಅವಕಾಶವೂ ಇದೆ.

ದಕ್ಷಿಣ ಕನ್ನಡದಿಂದ ಆಹಾರ ಉದ್ಯಮಕ್ಕೆ ಕೊಡುಗೆ

ರಾಜ್ಯದಲ್ಲಿ ಶಿವಮೊಗ್ಗ, ಉಡುಪಿ,ಚಿಕ್ಕಮಗಳೂರು ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ತಾಳೆ ಬೆಳೆಗಾರರಿದ್ದು, ಈ ಬೆಳೆಗಾರರನ್ನು ಸಂಘಟನೆ ಮಾಡಲು ಬೆಳೆಗಾರರ ಸೊಸೈಟಿಯನ್ನು ಆರಂಭಿಸಲಾಗಿದೆ. ದೇಶಕ್ಕೆ ಬೇಕಾದಷ್ಟು ಪ್ರಮಾಣದ ತಾಳೆ ಬೆಳೆ ದೇಶದಲ್ಲಿ ಉತ್ಪಾದನೆಯಾಗದ ಕಾರಣಕ್ಕೆ ಮಲೇಶಿಯಾ, ಇಂಡೋನೇಷ್ಯಾ ಮತ್ತು ಆಫ್ರಿಕಾದ ಕೆಲವು ದೇಶಗಳಿಂದ ತಾಳೆಯನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆಯೂ ನಡೆಯುತ್ತಿದೆ.

ತಾಳೆ ಎಣ್ಣೆಯನ್ನು ಹೆಚ್ಚಾಗಿ ಆಹಾರ ಉತ್ಪನ್ನಗಳಲ್ಲೇ ಬಳಸಲಾಗುತ್ತಿದ್ದು, ಹೆಚ್ಚಿನ ಬೇಡಿಕೆಯೂ ಇದೆ. ಬೇಕರಿ ಉತ್ಪನ್ನಗಳಾದ ಬಿಸ್ಕಿಟ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಇದೇ ಎಣ್ಣೆ ಬಳಸಿ ತಯಾರಿಸಲಾಗುತ್ತದೆ. ಅಲ್ಲದೇ ಚಾಕಲೇಟು ತಯಾರಿಕೆಯಲ್ಲೂ ಇದನ್ನು ಬಳಸಲಾಗುತ್ತದೆ. ತಾಳೆ ಹಣ್ಣನ್ನು ಸಂಸ್ಕರಿಸುವ ಸಂದರ್ಭದಲ್ಲಿ ಎಣ್ಣೆಯ ಬಣ್ಣ ಕೆಂಪು ಬಣ್ಣದಾಗಿರುತ್ತದೆ. ಬಳಿಕ ಅದನ್ನು ಹಳದಿ ಬಣ್ಣಕ್ಕೆ ತಿರುಗಿಸಲಾಗುತ್ತಿದ್ದು, ಈ ಪ್ರಕ್ರಿಯೆಯಲ್ಲಿ ಕೊಂಚ ಪ್ರಮಾಣದ ರಾಸಾಯನಿಕವನ್ನೂ ಬಳಸಲಾಗುತ್ತದೆ.