Dakshina Kannada: ಮಣ್ಣಲ್ಲಿ ಹುದುಗಿದ್ದ ದೈವಶಕ್ತಿ 300 ವರ್ಷಗಳ ಬಳಿಕ ಗೋಚರ- ದೇಗುಲ ನಿರ್ಮಾಣಕ್ಕೆ ನಿಂತ ಊರಜನ | The divine power buried in the soil appears after 300 years in dakshina Kannada

Dakshina Kannada: ಮಣ್ಣಲ್ಲಿ ಹುದುಗಿದ್ದ ದೈವಶಕ್ತಿ 300 ವರ್ಷಗಳ ಬಳಿಕ ಗೋಚರ- ದೇಗುಲ ನಿರ್ಮಾಣಕ್ಕೆ ನಿಂತ ಊರಜನ | The divine power buried in the soil appears after 300 years in dakshina Kannada

Last Updated:

ಏನೂ ಹಣವಿಲ್ಲದಿದ್ದರೂ ಊರಿನವರದ್ದೇ ಸಮಿತಿಯನ್ನು ನಿರ್ಮಿಸಿ ದೈವಸ್ಥಾನ ನಿರ್ಮಾಣಕ್ಕೆ ಮುಂದಡಿ ಇಡಲಾಯ್ತು. ದೇವಸ್ಥಾನವಿದ್ದ ಜಾಗ ಲೀಲಾವತಿ ಪದ್ಮನಾಭ ರಾವ್ ಎಂಬುವರ ಹೆಸರಲ್ಲಿತ್ತು. ಅವರು ಆ ಸ್ಥಳವನ್ನು ಬಿಟ್ಟುಕೊಟ್ಟರು.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಅದು 700ವರ್ಷಗಳ ಹಿಂದೆ ರಾಜನಿಂದಲೇ ಮಾನಿತವಾಗುತ್ತಿದ್ದ ದೈವಸ್ಥಾನ. ಆದರೆ ಏನು ಕಾರಣವೋ ದೈವಸ್ಥಾನ 300‌ ವರ್ಷಗಳ ಹಿಂದೆ ನೆಲಸಮವಾಯಿತು. ನಂತರದ ಪೀಳಿಗೆ ಅಲ್ಲೊಂದು ದೈವಸ್ಥಾನವಿದ್ದುದನ್ನು ಮರತೇ ಬಿಟ್ಟಿತು‌. ಆದರೆ ದೈವಸಂಕಲ್ಪವೇ(Daiva Sankalpa) ಬೇರೆಯೇ ಇತ್ತು. ವರ್ಷಗಳ ಹಿಂದೆ ಮತ್ತೆ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಊರವರು ಅಡಿಗಲ್ಲು ಹಾಕಿಯೇ ಬಿಟ್ಟರು. ನೋಡನೋಡುತ್ತಿದ್ದಂತೆ ದೈವಸ್ಥಾನ ನಿರ್ಮಾಣ(Temple Construction) ಕಾರ್ಯವೂ ಪೂರ್ಣಗೊಂಡು, ಫೆಬ್ರವರಿಯಲ್ಲಿ ಬ್ರಹ್ಮಕಲಶಕ್ಕೆ(Brahmakalasha) ಅಣಿಯಾಗುತ್ತಿದೆ. ಇದ್ಯಾವ ದೈವಸ್ಥಾನವೆಂಬ ಕುತೂಹಲವೇ? ಅದಕ್ಕೆ ಈ ಸುದ್ದಿ ನೋಡಿ.

ಹೌದು, ಮಂಗಳೂರಿನ ಹೊರವಲಯದ ನೀರುಮಾರ್ಗದ ಪೆದಮಲೆಗೆ ಬಂದರೆ ಈ ದೈವಸ್ಥಾನವನ್ನು ಕಾಣಬಹುದು. ಅಡಿಕೆ ತೋಟದ ಹಸುರಿನ ನಡುವೆ ದೈವಸ್ಥಾನ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಅದು ವಾಜಿಲ್ಲಾಯ ಎಂಬ ಅರಸುದೈವದ ದೈವಸ್ಥಾನ. ಊರಿನವರು ಏಳಿಗೆ ಕಾಣದೆ, ಸದಾ ಮನೆಗೆ ಬರುತ್ತಿದ್ದ ನಾಗರಹಾವಿನ ಭೀತಿಯಿಂದ ಪ್ರಶ್ನಾಚಿಂತನೆಯಿಟ್ಟರೆ, ಪುರಾತನದಲ್ಲಿ ಆರಾಧನೆಗೊಳ್ಳುತ್ತಿದ್ದ ದೈವದ ಅಸ್ತಿತ್ವ ಇರುವುದು ತಿಳಿದುಬಂತು. ಆದರೆ ಎಲ್ಲಿತ್ತು ದೈವಸ್ಥಾನ ಎಂದು ಯಾರಿಗೂ ಗೊತ್ತಿಲ್ಲ. ಆದರೂ ಹುಡುಕೋಣ ಎಂದು ಊರವರು ಶ್ರಮವಹಿಸಿ ಅಲ್ಲಿನ ನಾಗಬನವೊಂದರ ಬೃಹತ್ ಬಿಳಲು, ಕುರುಚಲು ಪೊದೆಯನ್ನು ಬಿಡಿಸಿದಾಗ ದೈವಸ್ಥಾನವಿದ್ದ ಕುರುಹು ಪತ್ತೆಯಾಯ್ತು.

ಇದನ್ನೂ ಓದಿ: Chikkamagaluru: ಈ ಸಾಫ್ಟ್‌ವೇರ್‌ ಮೂಲಕವೇ ಡೈರಿ ಹಾಲಿನ ಹಣ ರೈತರಿಗೆ ಹೋಗೋದು!

ಅದರಲ್ಲೂ ದೈವಸ್ಥಾನದ ಧ್ವಜಸ್ತಂಭ ನೆಡುವ ದಂಬೆಕಲ್ಲು ಪತ್ತೆಯಾಯ್ತು. ಪುರಾತತ್ವ ತಜ್ಞರು ಇದು 700 ವರ್ಷಗಳ ಹಿಂದಿನ ಕಲ್ಲು ಎಂದು ಪರಿಶೀಲಿಸಿ ಹೇಳಿದಾಗ ಊರವರಿಗೇ ಸೋಜಿಗ. ಏನೂ ಹಣವಿಲ್ಲದಿದ್ದರೂ ಊರಿನವರದ್ದೇ ಸಮಿತಿಯನ್ನು ನಿರ್ಮಿಸಿ ದೈವಸ್ಥಾನ ನಿರ್ಮಾಣಕ್ಕೆ ಮುಂದಡಿ ಇಡಲಾಯ್ತು. ದೇವಸ್ಥಾನವಿದ್ದ ಜಾಗ ಲೀಲಾವತಿ ಪದ್ಮನಾಭ ರಾವ್ ಎಂಬುವರ ಹೆಸರಲ್ಲಿತ್ತು. ಅವರು ಆ ಸ್ಥಳವನ್ನು ಬಿಟ್ಟುಕೊಟ್ಟರು. ಅದೇ ರೀತಿ ರಸ್ತೆಗೆ ಬೇಕಾದ ಸ್ಥಳವನ್ನು ಕ್ರಿಶ್ಚಿಯನ್ ಸಮುದಾಯದವರೊಬ್ಬರು ಉದಾರವಾಗಿ ಬಿಟ್ಟುಕೊಟ್ಟರು. ದೈವಸ್ಥಾನ ನಿರ್ಮಾಣಕ್ಕೆ ಬೇಕಾದ ಹಣವೂ ಅನಾಯಾಸವಾಗಿ ಒಟ್ಟಾಗುತ್ತಾ ಹೋಯ್ತು.

1 ವರ್ಷದ ಹಿಂದೆ ಆರಂಭವಾದ ದೈವಸ್ಥಾನ ನಿರ್ಮಾಣ ಕಾರ್ಯ ಈಗ ಪೂರ್ಣಗೊಳ್ಳುತ್ತಾ ಬಂದಿದೆ. ಫೆ.18ರಿಂದ 22ರವರೆಗೆ ದೈವಸ್ಥಾನದ ಬ್ರಹ್ಮಕಲಶವೂ ನಿಗದಿಯಾಗಿದೆ. ನೂರಾರು ವರ್ಷಗಳ ಹಿಂದೆ ನೆಲಸಮವಾಗಿದ್ದ ದೈವಸ್ಥಾನ ಈ ಕಾಲದಲ್ಲಿ ಮತ್ತೆ ಜೀರ್ಣೋದ್ಧಾರ ಆಗುತ್ತಿರುವುದು ದೈವಪವಾಡ ಎಂಬುದೇ ಊರಿನವರ ನಂಬಿಕೆ.