Dakshina Kannada: ಮಳೆಗಾಲದಲ್ಲಿ ತೆಂಗಿನಕಾಯಿ ಹಿಡಿಯುವ ಫೇವರಿಟ್ ಸ್ಪಾಟ್ ಕೊಡಂಗಾಯಿ!| Dakshina Kannada: Kodangai is the favorite spot for picking coconuts during the rainy season!

Dakshina Kannada: ಮಳೆಗಾಲದಲ್ಲಿ ತೆಂಗಿನಕಾಯಿ ಹಿಡಿಯುವ ಫೇವರಿಟ್ ಸ್ಪಾಟ್ ಕೊಡಂಗಾಯಿ!| Dakshina Kannada: Kodangai is the favorite spot for picking coconuts during the rainy season!

Last Updated:

ದಕ್ಷಿಣ ಕನ್ನಡ ಜಿಲ್ಲೆಯ ಕೊಡಂಗಾಯಿ ಪ್ರದೇಶದಲ್ಲಿ ಮಳೆಗಾಲದಲ್ಲಿ ತೆಂಗಿನಕಾಯಿ ಹಿಡಿಯುವ ಜನರ ಫೇವರೇಟ್ ಸ್ಪಾಟ್. ಪ್ರವಾಹದ ನೀರಿನಲ್ಲಿ ಕೊಚ್ಚಿ ಬರುವ ವಸ್ತುಗಳನ್ನು ಸುಲಭವಾಗಿ ಹಿಡಿಯುತ್ತಾರೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಮಳೆಗಾಲ(Rainy Season) ಬಂತೆಂದರೆ ನದಿ-ಹಳ್ಳ, ತೋಡು- ತೊರೆಗಳಲ್ಲಿ ನೀರೇ ನೀರು. ಪ್ರವಾಹ(Flood) ಬಂತೆಂದರೆ ನೀರಿನ ಜೊತೆಗೆ ಮರ-ಮುಟ್ಟು, ಕಸ-ಕಡ್ಡಿ ಹೀಗೆ ಎಲ್ಲವೂ ಹರಿದು ಬರೋದು ಸಾಮಾನ್ಯ. ಹೀಗೆ ಹರಿದು ಬರುವ ವಸ್ತುಗಳನ್ನೇ ಹಿಡಿದು ಜೀವನ ಸಾಗಿಸುವ ಕೆಲವರಿದ್ದು, ಈ ಮಂದಿಯ ಫೇವರಿಟ್ ಸ್ಪಾಟ್(Favorite Spot) ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೊಡಂಗಾಯಿ ಎನ್ನುವ ಪ್ರದೇಶವಾಗಿದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಈ‌ ಕೊಡಂಗಾಯಿ ಹಳ್ಳದಲ್ಲಿ ಪ್ರವಾಹದ ನೀರು ಬಂತೆಂದರೆ ನೀರಿನಲ್ಲಿ ಸತ್ತ, ಬದುಕಿದ, ನಿರ್ಜೀವವುಳ್ಳ ಹೀಗೆ ಎಲ್ಲಾ ತರಹದ ವಸ್ತುಗಳೂ ಕೊಚ್ಚಿ ಹೋಗುತ್ತೆ. ಹೀಗೆ ಕೊಚ್ಚಿ ಹೋಗುವ ವಸ್ತುಗಳಲ್ಲಿ‌ ಬೇಕಾದವುಗಳನ್ನು‌ ನೀರಿನಿಂದ ಅತ್ಯಂತ ಸುಲಭವಾಗಿ ತೆಗೆಯುವ ಜನರು(People) ಈ ಹಳ್ಳದ ಪಕ್ಕ ರೆಡಿಯಾಗುತ್ತಾರೆ.

ಉದ್ದದ ಬಿದಿರಿನ‌ ಕೋಲಿಗೆ ಬಲೆಯನ್ನು ವೃತ್ತಾಕಾರದಲ್ಲಿ ಕಟ್ಟಿ, ಅದರ ಒಂದು‌ ಭಾಗವನ್ನು ತೆರೆದಿಡಲಾಗುತ್ತದೆ. ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುವ ತೆಂಗಿನಕಾಯಿ, ಅಡಿಕೆ, ಫಲವಸ್ತುಗಳನ್ನು ಇದೇ ಕೋಲಿನ ಮೂಲಕ ಹಿಡಿದು ಮೇಲೆ ಹಾಕಲಾಗುತ್ತದೆ. ಭಾರೀ ಪ್ರವಾಹದ ನೀರು ಹಳ್ಳದಲ್ಲಿ ಹರಿದರೆ ಕೇವಲ ಒಂದು ಗಂಟೆಯೊಳಗೆ ನೂರಕ್ಕೂ ಮಿಕ್ಕಿದ ತೆಂಗಿನಕಾಯಿಗಳು ಇವರ ಬಲೆಗೆ ಬೀಳುತ್ತೆ. ಅಲ್ಲದೇ ಕಿಲೋಗಟ್ಟಲೆ ಅಡಿಕೆಗಳೂ ಇವರ ಕೈ ಸೇರುತ್ತೆ. ಕೃಷಿ ತೋಟಗಳ ಮಧ್ಯೆ ಹರಿಯುವ ಈ ಕೊಡಂಗಾಯಿ ಹಳ್ಳದಲ್ಲಿ ಪ್ರವಾಹ ನೀರು ಹೆಚ್ಚಾದಲ್ಲಿ ಹಳ್ಳದ ನೀರು ಪಕ್ಕದ ಕೃಷಿತೋಟಗಳಿಗೂ ನುಗ್ಗಿ ಹರಿಯುತ್ತದೆ.

ಹೀಗೆ ಹರಿಯುವ ನೀರು ತೋಟದಲ್ಲಿ ಬಿದ್ದ ತೆಂಗಿನಕಾಯಿ, ಅಡಿಕೆ ಹಾಗೂ ಇತರ ಫಲವಸ್ತುಗಳನ್ನೂ ತನ್ನ ಜೊತೆಗೆ ಸೇರಿಸಿಕೊಂಡು ಹರಿಯುತ್ತೆ. ಈ ಬಗ್ಗೆ ಮೊದಲೇ ತಿಳಿದುಕೊಳ್ಳುವ ಈ ಜನ ಕೊಡಂಗಾಯಿ ಸೇತುವೆಯ ಮೇಲೆ ನಿಂತು ಕಾಯುತ್ತಿರುತ್ತಾರೆ. ತಮಗೆ ಬೇಕಾದ ವಸ್ತುಗಳ ಬಂದ ತಕ್ಷಣವೇ ತಮ್ಮ ಕೋಲನ್ನು ನೀರಿನ ಹರಿವು ಮತ್ತು ವಸ್ತುವಿಗೆ ಸರಿಯಾಗಿ ಅಡ್ಜಸ್ಟ್ ಮಾಡಿಕೊಂಡು ವಸ್ತುಗಳನ್ನು ನಾಜೂಕಿನಿಂದ ಮೇಲೆತ್ತುತ್ತಾರೆ. ಕೆಲವು ಮಂದಿ ಹೀಗೆ ಹಿಡಿದ ತೆಂಗಿನಕಾಯಿ ಅಥವಾ ಇತರ ವಸ್ತುಗಳನ್ನು ತಮ್ಮ ಮನೆಯ ಉಪಯೋಗಕ್ಕೆ ಬಳಸಿಕೊಂಡರೆ, ಇನ್ನು ಕೆಲವರು ಸಿಕ್ಕಿದ್ದನ್ನು ಮಾರಾಟ ಮಾಡಿ ಹಣ ಪಡೆಯುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ಸೇತುವೆಗಳ ಮೇಲೂ ಮಳೆಗಾಲದಲ್ಲಿ ಈ ದೃಶ್ಯಗಳು ಸಾಮಾನ್ಯವಾಗಿದ್ದು, ಕೆಲವು ಕಡೆಗಳಲ್ಲಿ ಸುರಕ್ಷತೆಯ ಕಾರಣಕ್ಕೆ ಹೀಗೆ ಹಿಡಿಯುವುದನ್ನು ನಿಷೇಧಿಸಲಾಗಿದೆ.