Last Updated:
ನಂದಿನಿ ನದಿಯಲ್ಲಿ ಕಲುಷಿತ ನೀರಿನ ಕಾರಣದಿಂದ ಖಂಡಿಗೆ ಶ್ರೀಧರ್ಮಅರಸು ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆಯ ಮತ್ಸ್ಯಬೇಟೆ ನಿರಾಶಾದಾಯಕವಾಗಿತ್ತು. ಮೀನುಗಳ ಅಭಾವದಿಂದ ಭಕ್ತರಲ್ಲಿ ನಿರಾಶೆ ಮೂಡಿತು.
ದಕ್ಷಿಣ ಕನ್ನಡ: ಹಳೆಯಂಗಡಿ ಸಮೀಪದ ಕಂಡೇವು ಎಂದು ತುಳುವಿನಲ್ಲಿ (Tulunadu) ಕರೆಯಲ್ಪಡುವ ಖಂಡಿಗೆ ಶ್ರೀಧರ್ಮಅರಸು ಉಳ್ಳಾಯ ದೈವಸ್ಥಾನದ (Sri Dharma Arasu Ullaya Devasthanam) ವಾರ್ಷಿಕ ಜಾತ್ರೆ ಅಂಗವಾಗಿ ನಂದಿನಿ ನದಿಯಲ್ಲಿ ನಾಮಕಾವಸ್ಥೆಗೆ ಮತ್ಸ್ಯಬೇಟೆ ನಡೆಯಿತು. ನಂದಿನಿ ನದಿ (Nandini River) ಕಲುಷಿತಗೊಂಡ ಕಾರಣ ಮೀನು ಹಿಡಿಯುವ (Fishing) ಆಸಕ್ತರಿಲ್ಲದೇ ಮತ್ಸ್ಯಬೇಟೆ ಸಂಪೂರ್ಣ ಸೊರಗಿದ್ದು, ಮೀನುಗಳ ಅಭಾವ ಭಕ್ತರಲ್ಲಿ ನಿರಾಶೆ ಮೂಡಿಸಿತು. ಖಂಡಿಗೆ ಜಾತ್ರೆಯ ಪ್ರಯುಕ್ತ ವೃಷಭ ಸಂಕ್ರಮಣದ ದಿನದಂದು ಮೀನಿನ ಹಿಡಿಯುವ ಜಾತ್ರೆ ನಡೆಯುತ್ತದೆ. ಹಳೆಯಂಗಡಿ ಸಮೀಪದ ನಂದಿನಿ ನದಿಗೆ ಏಕಕಾಲದಲ್ಲಿ ನೂರಾರು ಮಂದಿ ಹಾರಿ ಮೀನು ಹಿಡಿಯಲಾರಂಭಿಸುತ್ತಾರೆ. ಈ ಮತ್ಸ್ಯಬೇಟೆಯ ಹಿಂದೆ ತುಳುನಾಡಿನ ವಿಶಿಷ್ಟ ಆಚರಣೆಯ ಹಿನ್ನೆಲೆಯಿದೆ.
ಉಳ್ಳಾಯ ದೈವದ ದೈವಸ್ಥಾನದ ಮುಂಭಾಗದ ನಂದಿನಿ ಹೊಳೆಯನ್ನು ಕಂಡೇವು ಕರಿಯ ಎನ್ನುತ್ತಾರೆ. ಆದ್ದರಿಂದ ಉತ್ಸವದ ಅಂಗವಾಗಿ ನಿಗದಿಪಡಿಸಿದ ದಿನದಂದು ಇಲ್ಲಿನ ಗ್ರಾಮದ ಜನರು ಕಂಡೇವು ಕರಿಯದಲ್ಲಿ ಮೀನು ಹಿಡಿಯುತ್ತಾರೆ. ಈ ದಿನದ ಹೊರತು ಬೇರೆ ದಿನಗಳಲ್ಲಿ ಇಲ್ಲಿ ಮೀನು ಹಿಡಿಯುವುದು ನಿಷೇಧವಿದೆ. ಸಂಪ್ರದಾಯ ಮೀರಿ ಮೀನು ಹಿಡಿದರೆ ಬಲೆಗೆ ಹಾವು ಬೀಳುತ್ತದೆ ಎಂಬ ನಂಬಿಕೆಯಿದೆ.
ನಂದಿನಿ ನದಿಯಲ್ಲಿ ತ್ಯಾಜ್ಯ ನೀರಿನ ಹರಿವು ಹೆಚ್ಚಾಗಿದ್ದು, ನದಿಯ ತುಂಬಾ ಅಂತರಗಂಗೆ ಕಳೆ ಬೆಳೆದಿದೆ. ನದಿ ಕಲುಷಿತಗೊಂಡ ಹಿನ್ನೆಲೆಯಲ್ಲಿ ನದಿಯಲ್ಲಿ ಮತ್ಸ್ಯಕ್ಷಾಮ ಉಂಟಾಗಿದೆ. ಕಳೆದ ಏಳೆಂಟು ವರ್ಷಗಳಿಂದ ಇಲ್ಲಿನ ವಸತಿ ಸಮುಚ್ಚಯಗಳ ಯುಜಿಡಿ ತ್ಯಾಜ್ಯ ನೇರವಾಗಿ ನಂದಿನಿ ನದಿಯನ್ನು ಸೇರಿ ನದಿ ಕೊಳಚೆ ಕೊಂಪೆಯಾಗಿದೆ.
ನದಿ ಕಲುಷಿತಗೊಂಡ ಕಾರಣ ಗ್ರಾಮದವರೇ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಉಪ ಲೋಕಾಯುಕ್ತರು ಭೇಟಿ ನೀಡಿ ಈ ಬಗ್ಗೆ ತನಿಖೆಗೆ ಆದೇಶಿಸಿದ್ದರು. ಆ ಬಳಿಕ ನದಿಯಲ್ಲಿ ಬೆಳೆದ ಅಂತರಗಂಗೆ ಕಳೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆದಿತ್ತು. ಆದರೂ ಜನ ಮಾತ್ರ ಈ ಬಾರಿ ನದಿಗಿಳಿದು ಮೀನು ಹಿಡಿಯಲು ಉತ್ಸುಕರಾಗಿಲ್ಲ. ಕೆಲವೇ ಕೆಲವು ಮಂದಿ ಮಾತ್ರ ಮತ್ಸ್ಯಬೇಟೆ ಆಡಿದ್ದರಿಂದ ಈ ಬಾರಿಯ ಖಂಡೇವು ಆಯನದ ಮತ್ಸ್ಯಬೇಟೆ ನಿರಾಶಾದಾಯಕವಾಗಿತ್ತು.
Dakshina Kannada,Karnataka
May 16, 2025 12:57 PM IST