Dakshina Kannada: ವಿದ್ಯಾರ್ಥಿಗಳಿಗಾಗಿ ಕಾರನ್ನೇ ಜಾಹೀರಾತು ಮಾಧ್ಯಮವಾಗಿ ಬದಲಿಸಿದ ಉಪನ್ಯಾಸಕಿ! | Dakshina Kannada: Lecturer turns car into advertising medium for students!

Dakshina Kannada: ವಿದ್ಯಾರ್ಥಿಗಳಿಗಾಗಿ ಕಾರನ್ನೇ ಜಾಹೀರಾತು ಮಾಧ್ಯಮವಾಗಿ ಬದಲಿಸಿದ ಉಪನ್ಯಾಸಕಿ! | Dakshina Kannada: Lecturer turns car into advertising medium for students!

Last Updated:

ಉಪನ್ಯಾಸಕಿ ವೇದಶ್ರೀ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ, ತಮ್ಮ ಕಾರನ್ನು ಜಾಹೀರಾತು ಮಾಧ್ಯಮವಾಗಿ ಬಳಸಿಕೊಂಡು ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಸರಕಾರಿ ಉದ್ಯೋಗದಲ್ಲಿರುವವರು(Government Job) ತಮ್ಮ ಕೆಲಸಕ್ಕಷ್ಟೇ ಸೀಮಿತವಾಗಿರೋದು ಸಾಮಾನ್ಯ. ಇನ್ನು ಕೆಲವು ಸಿಬ್ಬಂದಿಗಳು ಸರಕಾರ ತಮಗೆ ನೀಡುವ ಸಂಬಳಕ್ಕೆ ಸರಿಯಾಗಿ ದುಡಿಯದೇ ಇರುವ ಜನರೂ ಇದ್ದಾರೆ. ನಾವಾಯ್ತು, ನಮ್ಮ ಕೆಲಸವಾಯ್ತು ಎಂದು ತಮಗೆ ತಾವೇ ಲಕ್ಷ್ಮಣರೇಖೆಯನ್ನು ಎಳೆದುಕೊಂಡವರ ಮಧ್ಯೆ ತಮ್ಮಿಂದಾಗಿ ಮೂರನೇ ವ್ಯಕ್ತಿಗೆ, ಸಮಾಜಕ್ಕೆ ಉಪಯೋಗವಾಗಬೇಕು ಎನ್ನುವ ಒಳ್ಳೆ ಮನಸ್ಸಿನ ಉದ್ಯೋಗಿಗಳೂ(Employees) ಸರಕಾರದ ವ್ಯವಸ್ಥೆಯೊಳಗಿದ್ದಾರೆ. ಇಂತಹ ಸಿಬ್ಬಂದಿಗಳ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕಿಯೊಬ್ಬರೂ ಸೇರಿಕೊಳ್ಳುತ್ತಾರೆ.

ಹೌದು, ಇದು ಪುತ್ತೂರಿನ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎಕನಾಮಿಕ್ಸ್ ಉಪನ್ಯಾಸಕಿ ವೇದಶ್ರೀ ಎನ್ನುವ ಸರಕಾರಿ ಉದ್ಯೋಗಿಯ ಚಿಕ್ಕ ಸಮಾಜಸೇವೆಯ ಸ್ಟೋರಿ. ವೇದಶ್ರೀಯವರು ತಾನು ಕಲಿಸುತ್ತಿರುವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು ಎನ್ನುವ ಕಾರಣಕ್ಕೆ ತನ್ನ ಸ್ವಂತ ಕಾರನ್ನೇ ಕಾಲೇಜಿನ ಜಾಹೀರಾತು ಸಾಧನವನ್ನಾಗಿ ಮಾಡಿಕೊಂಡಿದ್ದಾರೆ.

ಸರಕಾರಿ ಉದ್ಯೋಗಿಗಳಿಗೆ ತಮ್ಮ ಸಂಬಳ ಬಂದರೆ ಸಾಕು, ಉಳಿದ ವಿಷಯಗಳ ಉಸಾಬರಿ ತಮಗೇಕೆ ಎಂದುಕೊಳ್ಳುವವರೇ ಹೆಚ್ಚಾಗಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬರಲಿ, ಬರದಿರಲಿ ಎನ್ನುವ ಮನಸ್ಥಿತಿಗಳ ನಡುವೆ ವೇದಶ್ರೀ ಅವರು ಮಕ್ಕಳು ಸರಕಾರಿ ಕಾಲೇಜಿಗೆ ಸೇರಲಿ, ಕಡಿಮೆ ಶುಲ್ಕದ ಜೊತೆಗೆ ಉತ್ತಮ ಶಿಕ್ಷಣವನ್ನು ಪಡೆಯಲಿ ಎನ್ನುವ ಉದ್ಧೇಶದಿಂದ ಈ ರೀತಿಯ ಕಾರ್ಯಕ್ಕೆ ಮುಂದಾಗಿದ್ದಾರೆ.

ವೇದಶ್ರೀ ಕಾರು ಹೋದಲ್ಲೆಲ್ಲಾ ಪುತ್ತೂರಿನ ಮಹಿಳಾ ಕಾಲೇಜಿನಲ್ಲಿರುವ ಅವಕಾಶಗಳನ್ನು ಜನರು ನೋಡಿ, ಓದುವಂತೆ ಮಾಡಿದೆ. ವೇದಶ್ರೀಯವರು ಈ ಹಿಂದೆ ಬಂಟ್ವಾಳದ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಇದ್ದ ಸಂದರ್ಭದಲ್ಲೂ ಇದೇ ರೀತಿಯ ಪ್ರಯತ್ನವನ್ನು ಮಾಡಿದ್ದರು. ಅಂದು ವೇದಶ್ರೀ ಪ್ರಯತ್ನಕ್ಕೆ ಉತ್ತಮ ಸ್ಪಂದನೆಯೂ ದೊರೆತಿತ್ತು.

ಖಾಸಗಿ ಶಾಲಾ-ಕಾಲೇಜುಗಳು ವಿವಿಧ ಪ್ರಕಾರದ ಪ್ರಸಾರ ಮಾಧ್ಯಮಗಳನ್ನು ಬಳಸಿಕೊಂಡು ತಮ್ಮ ವಿದ್ಯಾಸಂಸ್ಥೆಗಳ ಬಗ್ಗೆ ಜಾಹೀರಾತುಗಳನ್ನು ಹೊರಡಿಸಿದರೆ, ಸರಕಾರಿ ವ್ಯವಸ್ಥೆಯಲ್ಲಿ ಈ ಅವಕಾಶವೇ ಇಲ್ಲ. ಈ ರೀತಿಯ ವ್ಯವಸ್ಥೆಗಳನ್ನು ಮಾಡಿ ಮಕ್ಕಳನ್ನು ಸರಕಾರಿ ಶಾಲಾ- ಕಾಲೇಜುಗಳತ್ತ ಬರುವಂತೆ ಮಾಡುವ ಕಾಳಜಿ ಸಂಬಂಧಪಟ್ಟ ಇಲಾಖೆ ಮತ್ತು ಸರಕಾರಗಳಲ್ಲಿ ಇಲ್ಲದ ಕಾರಣ ಸರಕಾರಿ ಶಾಲಾ- ಕಾಲೇಜಗಳು ಒಂದೋ ಮುಚ್ಚಿ ಹೋಗುತ್ತವೆ, ಇಲ್ಲವೇ ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತವೆ.

ಮಕ್ಕಳೇ ಇಲ್ಲದ ಕಾಲೇಜುಗಳಲ್ಲಿ ಉಪನ್ಯಾಸಕರು ಇದ್ದರೇನು ಪ್ರಯೋಜನ ಎನ್ನುವ ಉದ್ಧೇಶದಿಂದ ಮಕ್ಕಳನ್ನು ಸರಕಾರಿ ಕಾಲೇಜುಗಳತ್ತ ಕರೆತರುವ ಪುಟ್ಟ ಪ್ರಯತ್ನವನ್ನು ವೇದಶ್ರಿ ಆರಂಭಿಸಿದ್ದು, ಪಾಸಿಟಿವ್ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ.