Dakshina Kannada: ಶ್ರೀನಿವಾಸ-ಪದ್ಮಾವತಿ `ಕಲ್ಯಾಣೋತ್ಸವ ಲೀಲೆ’ ಕಂಡು ಪುನೀತರಾದ ಭಕ್ತರು! | Srinivasa-Padmavati Kalyanotsava held at Puttur devotees blessed

Dakshina Kannada: ಶ್ರೀನಿವಾಸ-ಪದ್ಮಾವತಿ `ಕಲ್ಯಾಣೋತ್ಸವ ಲೀಲೆ’ ಕಂಡು ಪುನೀತರಾದ ಭಕ್ತರು! | Srinivasa-Padmavati Kalyanotsava held at Puttur devotees blessed

ಮಹಾಲಕ್ಷ್ಮೀ ತನ್ನನ್ನು ತ್ಯಜಿಸಿದ ದುಃಖದಲ್ಲಿರುವ ವೈಕುಂಠಾಧಿಪತಿ ಮಹಾವಿಷ್ಣು ಸಾಮಾನ್ಯ ಮಾನವನಂತೆ ಶ್ರೀನಿವಾಸನೆಂಬ ಹೆಸರಿನಲ್ಲಿ ಧರೆಯಲ್ಲಿ ಅವತರಿಸಿ ತಿರುಮಲ ಬೆಟ್ಟದ ಮೇಲೆ ಮಾನವನಂತೆ ಬದುಕುತ್ತಾನೆ. ದೂರವಾದ ಲಕ್ಷ್ಮಿ ಕೊನೆಗೂ ಈ ವಿರಹಕ್ಕೆ ತಿಲಾಂಜಲಿ ನೀಡಲು ಆಕಾಶರಾಜನ ಮಗಳು ಪದ್ಮಾವತಿಯಾಗಿ ಅವತರಿಸುತ್ತಾಳೆ. ರಾಜಕುಮಾರಿ ಪದ್ಮಾವತಿ ಮತ್ತು ಸಾಮಾನ್ಯ ಯುವಕ ಶ್ರೀನಿವಾಸರ ಭೇಟಿ ಬೆಟ್ಟದ ಮೇಲೆ ಆಕಸ್ಮಿಕವಾಗಿ ನಡೆದು ವಿಧಿ ಲಿಖಿತವೆಂಬಂತೆ ಅವರಿಬ್ಬರಲ್ಲೂ ಪ್ರೇಮಾಂಕುರವಾಗುತ್ತದೆ.

ಇದನ್ನೂ ಓದಿ: Dakshina Kannada: ವಿಚಿತ್ರ ನಿಯಮ ಹೇರಿಕೊಂಡು ಕ್ರಿಕೆಟ್‌ ಆಡುವ ಕರಾವಳಿಯ ತಂಡ- ಆ ಕಂಡೀಷನ್‌ ಏನು ಗೊತ್ತಾ?

ಶ್ರೀಮನ್ನಾರಾಯಣ- ಮಹಾಲಕ್ಷ್ಮೀಯರ ಮರುಮಿಲನ ಯುಗಾಂತರದ ಬಳಿಕ ಕೂಡಿ ಬರುತ್ತದೆ. ಮಗಳ ಮದುವೆ ಶ್ರೀನಿವಾಸನ ಜತೆ ಮಾಡಲು ನಿರಾಕರಿಸಿದ್ದ ಆಕಾಶರಾಜ ಕೊನೆಗೂ ಒಪ್ಪುತ್ತಾನೆ. ರಾಜಕುಮಾರಿಯನ್ನು ವರಿಸಲು ಶ್ರೀನಿವಾಸ ಕುಬೇರನಿಂದ ಅಗಣಿತ ವರಾಹ ಸಾಲ ಪಡೆಯುತ್ತಾನೆ. ಅಂತಿಮವಾಗಿ ಭೂಮಿಯ ಮೇಲೆ ಅವತರಿಸಿದ ಶ್ರೀಹರಿ- ಮಹಾಲಕ್ಷ್ಮೀಯರ ವಿವಾಹ ಶ್ರೀನಿವಾಸ ಕಲ್ಯಾಣ ಎಂಬ ಹೆಸರಿನಲ್ಲಿ ಅದ್ದೂರಿಯಿಂದ ನಡೆಯುತ್ತದೆ. ದೇವಾನುದೇವತೆಗಳು ಪುಷ್ಪವೃಷ್ಟಿ ಸುರಿಸುತ್ತಾರೆ. ಎಲ್ಲರೂ ಲೋಕಸೃಷ್ಟಿಯ ಅಪೂರ್ವ ಕಲ್ಯಾಣವನ್ನು ಕಣ್ತುಂಬಿ ಜನ್ಮ ಪಾವನ ಮಾಡಿಕೊಳ್ಳುತ್ತಾರೆ.

ಶ್ರೀನಿವಾಸ – ಪದ್ಮಾವತಿ ಕಡೆಯವರ ದಿಬ್ಬಣ, ಕಾಶೀ ಯಾತ್ರೆ ವಿಧಿ, ವಧೂ ವರರ ಎದುರುಗೊಳ್ಳುವಿಕೆ, ಮಂಗಳ ವಾದ್ಯಗಳ ಸಮ್ಮಿಲನ, ಗಣಪತಿ ಪ್ರಾರ್ಥನೆ, ಲಕ್ಷ್ಮೀ – ಪದ್ಮಾವತಿ ಪೂಜೆ, ಶ್ರಿ ವೆಂಕಟರಮಣ ಪೂಜೆ, ಸಂಕೀರ್ತನೆ ಸೇವೆ, ರಾಜೋಪಚಾರ ಪೂಜೆ, ಕಲ್ಯಾಣ ಕಥಾ ಶ್ರವಣ, ಪನ್ನೀರ ಸಿಂಚನ, ಸುಮಂಗಲಿಯರ ಕಲಶ ನಿವೇದನ, ಹೋಮಾದಿ ಪವಿತ್ರ ಕಾರ್ಯಗಳ ಮೂಲಕ ಮಂಟಪದಲ್ಲಿ ಧಾರ್ಮಿಕ ಕಾರ್ಯಗಳು ವಿಧಿವತ್ತಾಗಿ ನಡೆಯಿತು. ಹಾರಾರ್ಪಣೆ, ಮಾಂಗಲ್ಯ ಧಾರಣೆ, ವೇದ ಮಂತ್ರ ಪಠಣ, ವಧೂ ವರರಿಗೆ ಬಂಧು ಮಿತ್ರರಿಂದ ಆರತಕ್ಷತೆಯ ಸಮರ್ಪಣೆ, ಹಿರಿಯರ ಆಶೀರ್ವಾದ, ಕಿರಿಯರ ಶುಭ ಹಾರೈಕೆ.. ಹೀಗೆ ಒಂದು ವಿವಾಹದಲ್ಲಿ ನಡೆಯುವ ಎಲ್ಲ ವಿಧಿಗಳನ್ನೂ ಪುರೋಹಿತರು ಮುಂದೆ ನಿಂತು ಮಾಡಿದರು. ಶ್ರೀನಿವಾಸ- ಪದ್ಮಾವತಿಯರ ಪ್ರತಿಮೆಗಳಿಗೆ ಮಾಡಲಾದ ವಧೂ ವರರ ಶೃಂಗಾರ ವಿಶೇಷ ಆಕರ್ಷಣೆಯಾಗಿತ್ತು.

ಮದುವೆಯ ಕೊನೆಯಲ್ಲಿ ಶ್ರೀನಿವಾಸ- ಪದ್ಮಾವತಿಯರಿಗೆ ಮಹಾ ಪೂಜೆ, ಮಹಾಮಂಗಳಾರತಿ ನಡೆಯುವ ಮೂಲಕ ಧಾರ್ಮಿಕ ಸೇವೆಯ ಉತ್ತುಂಗ ದಾಖಲಾಯಿತು. ನೆರೆದ ಭಕ್ತರು ಕಲ್ಯಾಣ ಮಹೋತ್ಸವದ ಭೋಜನದ ಜತೆಯಲ್ಲಿ ಏಳು ಬೆಟ್ಟದೊಡೆಯನ ಪೂಜೆಯ ಪ್ರಸಾದವನ್ನೂ ಸವಿದು ಕೃತಾರ್ಥರಾದರು. ರಾಜಾ ಹೋಮ, ಕಾಶಿಯಾತ್ರೆ ವಿಧಿ, ದಿಬ್ಬಣ ಆಗಮನ, ದಿಬ್ಬಣ ಸ್ವಾಗತ, ಗಣಪತಿ ಪೂಜೆ, ಲಕ್ಷ್ಮೀ ಪದ್ಮಾವತಿ ಪೂಜೆ, ಶ್ರೀ ವೆಂಕಟರಮಣ ಪೂಜೆ, ಕಲ್ಯಾಣ ಶ್ರವಣ, ಸಂಕೀರ್ತನ ಸೇವೆ, ವಧು ನಿರೀಕ್ಷಣ, ಕನ್ಯಾದಾನ, ಕಂಕಣ ಧಾರಣೆ, ಹಾರಾರ್ಪಣೆ, ಮಾಂಗಲ್ಯ ಪೂಜೆ, ಮಾಂಗಲ್ಯ ಧಾರಣೆ, ಅಕ್ಷತಾರೋಣ ಸೇವೆ, ನಾದೋಪಾಸನಾ ಸೇವೆ, ಮಾಲಾಧಾರಣ ಸೇವೆ, ಉಡುಗೊರೆ ಸೇವೆ, ಅಷ್ಟಾವಧಾನ ಸೇವೆ, ಲೀಲಾ ವಿನೋದ ಸೇವೆಯೂ ಭಕ್ತರ ಗಮನ ಸೆಳೆಯಿತು.