ಕ್ರಿ.ಶದ ಪ್ರಾರಂಭದಿಂದಲೂ ಈ ದೇವಸ್ಥಾನದ ಹೆಸರನ್ನು ಉಲ್ಲೇಖಿಸಲಾಗಿದೆ. ಅಶೋಕನ ಶಾಸನದಲ್ಲಿ ವಿದೇಶಿ ಪ್ರವಾಸದ ಕಥನಗಳಲ್ಲಿ ಪೊಳಲಿ ರಾಜರಾಜೇಶ್ವರಿಯ ಉಲ್ಲೇಖ ಮಾಡಲಾಗಿದೆ. ಸುಮಾರು 2000 ವರ್ಷಗಳ ಹಿಂದೆ ಸುರತ ಮಹಾರಾಜ ರಾಜ್ಯವನ್ನು ಆಳುತ್ತಿದ್ದರು. ವೈರಿಗಳ ಆಕ್ರಮಣದಿಂದ ರಾಜ್ಯವನ್ನು ಕಳೆದುಕೊಂಡು ರಾಜ್ಯಭ್ರಷ್ಟನಾಗಿ ಮೂರು ವರ್ಷ ತಪಸ್ಸನ್ನು ಮಾಡಿದರು. ಆಮೇಲೆ ಅವರಿಗೆ ದೇವಿಯ ಸ್ವಪ್ನವಾಣಿ ಕಂಡುಬರುತ್ತದೆ. ಸುಬ್ರಮಣ್ಯ, ಮಹಾಗಣಪತಿ, ರಾಜರಾಜೇಶ್ವರಿ, ಭದ್ರಕಾಳಿಯ ಪ್ರಧಾನ ವಿಗ್ರಹಗಳನ್ನು ಮೃಣ್ಮಯ ಮೂರ್ತಿಗಳನ್ನು ಸುರತ ಮಹಾರಾಜರು ಪ್ರತಿಷ್ಠಾಪಿಸಿದರು. ಆರಾಧನೆ ಮಾಡುತ್ತಾ ಬಂದರು. ಆ ಬಳಿಕ ಅವರು ಕಳೆದುಕೊಂಡ ರಾಜ್ಯವನ್ನೆಲ್ಲಾ ಮರಳಿ ಪಡೆದರು̤
ರಾಜರಾಜೇಶ್ವರಿಯ ವಿಶೇಷತೆ ಬಗ್ಗೆ ಹೇಳಬೇಕೆಂದರೆ ಸಾಮಾನ್ಯವಾಗಿ ದೇವತಾ ಮೂರ್ತಿಗಳು ಕಲ್ಲಿನದ್ದಾಗಿರುತ್ತದೆ. ಆದರೆ ಪೊಳಲಿ ಶ್ರೀ ರಾಜರಾಜೇಶ್ವರಿಯದ್ದು ವಿಶಿಷ್ಠವಾದ ಮಣ್ಣಿನ ವಿಗ್ರಹ.. ಸಾವಿರಾರು ವರ್ಷಗಳಿಂದಲೂ ಇಲ್ಲಿ ಮಣ್ಣಿನ ಮೂರ್ತಿಯನ್ನೇ ಪೂಜಿಸುತ್ತಾ ಬರಲಾಗಿದೆ..ಇದು ಅಂತಿಂಥ ಮಣ್ಣಿನ ಮೂರ್ತಿಯಲ್ಲ ಕಲ್ಲಿನಷ್ಟೇ ಗಟ್ಟಿಯಾದದ್ದು ಮಣ್ಣಿನ ಮೂರ್ತಿಯನ್ನು ಮರಗಳ ವಿಶಿಷ್ಠ ರಸಗಳನ್ನು ಬಳಸಿ ಮಣ್ಣಿಗೆ ಕಲ್ಲಿನ ಬಲ ಬರುವಂತೆ ಮಾಡಲಾಗಿದೆ. ಈ ವಿಧಾನವು ಬಹಳ ಪುರಾತನವಾದದ್ದು.
ಪೊಳಲಿಯ ಶ್ರೀ ರಾಜರಾಜೇಶ್ವರಿಯ ಮೂರ್ತಿಯು ಸುಮಾರು 9 ಅಡಿಗಳಿಗಿಂತಲೂ ಜಾಸ್ತಿ ಎತ್ತರವಿದೆ. ಇಡೀ ಭಾರತದಲ್ಲಿ ಇಷ್ಟು ದೊಡ್ಡದಾದ ಮಣ್ಣಿನ ಮೂರ್ತಿ ಬೇರೆಲ್ಲೂ ಇಲ್ಲ. ತಾಯಿಯ ವಿಗ್ರಹವು ತನ್ನ ಗಾತ್ರದಿಂದ ಅಷ್ಟೇ ಅಲ್ಲ ಕಲಾತ್ಮಕವಾಗಿಯೂ ಮೂರ್ತಿಯು ಅತ್ಯಾಕರ್ಷಕವಾದ ವಜ್ರದ ಕಿರೀಟವನ್ನು ಹೊಂದಿದೆ. ಈ ಕಿರೀಟವನ್ನು ಸುರತ ಮಹಾರಾಜರು ದೇವಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ. ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಸನ್ನಿಧಿಯ ಎದುರು ನಿಂತಾಗ ನಮ್ಮೆಲ್ಲಾ ದುಃಖ ನಾಶವಾಗಿ ಸುಖ ನೆಮ್ಮದಿ ಮನೆ ಮಾಡುತ್ತದೆ ಎಂಬುವುದು ದೇವಿ ಭಕ್ತರ ಮಾತು.
ಇದನ್ನೂ ಓದಿ: Dakshina Kannada: ಸರ್ಕಾರಿ ಶಾಲೆಗೆ ಹೊಸ ರೂಪ ಕೊಟ್ಟ ಹಳೆಯ ವಿದ್ಯಾರ್ಥಿಗಳು & ಶಿಕ್ಷಕರು!
ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನವು ಅತೀ ಪುರಾತನ ದೇವಾಲಯಗಳಲ್ಲಿ ಒಂದು. ಸುಮಾರು ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ದೇವಸ್ಥಾನವನ್ನು ಸುರಥ ಮಹಾರಾಜನು ನಿರ್ಮಿಸಿದನೆಂದು ಪುರಾಣವಿದೆ. ಪುಳಿನ, ಪೊಳಲ್ ಎಂದರೆ ಮಣ್ಣು ಎಂಬ ಅರ್ಥದಿಂದ ಶ್ರೀ ದೇವಿಯ ಕ್ಷೇತ್ರಕ್ಕೆ ಪುಳಿನಾಪುರ, “ಪೊಳಲಿ” ಎಂಬ ಹೆಸರು ಬಂತು. ಪ್ರಧಾನ ದೇವತೆ ಶ್ರೀ ರಾಜರಾಜೇಶ್ವರೀ, ಎಡಗಡೆಯಲ್ಲಿ ಭದ್ರಕಾಳಿ, ಬಲಕಡೆಯಲ್ಲಿ ಶ್ರೀ ಸುಬ್ರಹ್ಮಣ್ಯ, ಶ್ರೀ ಮಹಾಗಣಪತಿ, ಬ್ರಹ್ಮವಟು, ವಿಷ್ಣುವಟು, ಶೂಲಿನಿ, ದಂಡಿನಿ, ಮುಂಡಿನಿ ಪರಿವಾರ ಗಣಗಳ ಸಾನಿಧ್ಯವು ಶ್ರೀ ಕ್ಷೇತ್ರದಲ್ಲಿದೆ.
ಶ್ರೀ ಕ್ಷೇತ್ರದ ಹೊರಾಂಗಣದ ಬಲಬದಿಯಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಿಯ ಗುಡಿಯಿದ್ದು ಸುಮೇಧ ಮುನಿಯು ಪ್ರತಿಷ್ಟಾಪಿಸಿದನೆಂದು ಪುರಾಣದಲ್ಲಿದೆ. ಎಡಬದಿಯಲ್ಲಿ ಶ್ರೀ ಕ್ಷೇತ್ರಪಾಲನ ಸನ್ನಿಧಿಯಿದೆ. ದೈನಂದಿನ ಪೂಜೆಗಳಲ್ಲಿ ಪ್ರಥಮ ಪೂಜೆ ದುರ್ಗಾಪರಮೇಶ್ವರಿಗೆ ನಡೆಯುತ್ತದೆ. ನಂತರ ಶ್ರೀ ರಾಜರಾಜೇಶ್ವರೀ ದೇವಿಗೆ ಹಾಗೂ ಪರಿವಾರ ದೇವತೆಗಳಿಗೆ ಪೂಜೆ ನಡೆಯುತ್ತದೆ. ಇದು ಇಲ್ಲಿಯ ವಿಶೇಷತೆ.
ಶ್ರೀ ಕ್ಷೇತ್ರದಲ್ಲಿ ಶ್ರೀ ರಾಜರಾಜೇಶ್ವರೀಯ ಸಾನಿಧ್ಯದಷ್ಟೇ ಶ್ರೀ ಸುಬ್ರಹ್ಮಣ್ಯನ ಸಾನಿಧ್ಯವಿದ್ದು ಜಾತ್ರೋತ್ಸವಗಳು ಶ್ರೀ ಸುಬ್ರಹ್ಮಣ್ಯನಿಗೆ ನಡೆಯುವುದು ವಿಶೇಷ…ದೈನಂದಿನ ದಿನಗಳಲ್ಲಿ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಹೀಗೆ ಮೂರು ಹೊತ್ತು ಪೂಜೆ ನಡೆಯುತ್ತದೆ. ಮಂಗಳವಾರ, ಗುರುವಾರ ಆದಿತ್ಯವಾರಗಳಲ್ಲಿ ಶೀ ಭದ್ರಕಾಳಿ ದೇವರಿಗೆ ರಾತ್ರಿ ಗಾಯತ್ರಿ ಪೂಜೆ ನಡೆಯುತ್ತದೆ. ವರ್ಷಂಪ್ರತಿ ನಡೆಯುವ ವಿಶೇಷ ಹಬ್ಬಗಳ ಆಚರಣೆ ಇಲ್ಲಿದೆ. ಇಲ್ಲಿಯ ಜಾತ್ರೋತ್ಸವ ಲೋಕಪ್ರಸಿದ್ಧವಾದುದು, ಹದಿನಾರು ಮಾಗಣೆ ಒಳಪಟ್ಟ ಈ ದೇವಸ್ಥಾನವು ಸಾವಿರ ಸೀಮೆಯ ದೇವಸ್ಥಾನವೆಂದೇ ಪ್ರಸಿದ್ಧಿ ಪಡೆದಿದೆ.
ಪ್ರಧಾನ ದೇವತೆ ಶ್ರೀ ರಾಜರಾಜೇಶ್ವರೀ, ಶ್ರೀ ಭದ್ರಕಾಳಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ ಆಳೆತ್ತರದ ಕುಳಿತ ಭಂಗಿಯ ವಿಗ್ರಹಗಳಾಗಿದ್ದು ಇದು ಭಾರತದಲ್ಲೇ ಪ್ರಥಮ ಎಂದು ಹೇಳಿದರೂ ತಪ್ಪಗಲಾರದು. ಶ್ರೀದೇವಿಗೆ ತೊಡಲು ಹದಿನೆಂಟು ಮೊಳದ ಸೀರೆ ವಿಶೇಷ.
Dakshina Kannada,Karnataka
April 08, 2025 11:29 AM IST