Last Updated:
ಎರಡು ಅಂತಸ್ತಿನಲ್ಲಿ ತಲಾ 8 ರಂತೆ ಒಟ್ಟು 16 ವಿಶಾಲ ಭವನಗಳಿದ್ದು ಪ್ರತಿ ಭವನದಲ್ಲಿ 800 ಮಂದಿಯಂತೆ ಸುಮಾರು 12 ಸಾವಿರ ಮಂದಿ ತಂಗಲು ಅವಕಾಶವಿದೆ. ಇಡೀ ಸಂಕೀರ್ಣ ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ.
ದಕ್ಷಿಣ ಕನ್ನಡ: ರಾಜ್ಯದ ಪುಣ್ಯ ಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ(Dharmastala Manjunathaswamy) ದರ್ಶನ ಪಡೆಯಲು ಗಂಟೆಗಟ್ಟಲೆ ಸರತಿ ಸಾಲಿನಲ್ಲೇ ನಿಲ್ಲಬೇಕಿತ್ತು. ಅದರಲ್ಲೂ ವೀಕೆಂಡ್, ರಜಾ ದಿನಗಳು ಬಂತೆಂದರೆ ಸರತಿ ಸಾಲಿನ ಕಷ್ಟ ಹೇಳತೀರದು. ಭಕ್ತರ ಈ ಕಷ್ಟವನ್ನರಿತ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ಇದಕ್ಕೊಂದು ಬದಲಿ ಆರಾಮದಾಯಕ ವ್ಯವಸ್ಥೆಯನ್ನ ಮಾಡಿದ್ದಾರೆ. ಅವರ ಪರಿಕಲ್ಪನೆಯ ಈ ವ್ಯವಸ್ಥೆ ರಾಜ್ಯದಲ್ಲೇ ಪ್ರಥಮ ಎನಿಸಿಕೊಂಡಿದ್ದು, ಇಂದು ಲೋಕಾರ್ಪಣೆಗೊಳ್ಳಲಿದೆ.
ಕ್ಯೂ ಕಾಂಪ್ಲೆಕ್ಸ್ ವ್ಯವಸ್ಥೆ
ತಿರುಪತಿ, ಶಿರಡಿ ಕ್ಷೇತ್ರಗಳಲ್ಲಿ ದರ್ಶನ ಪಡೆಯಬೇಕಾದ್ರೆ ಕ್ಯೂ ಕಾಂಪ್ಲೆಕ್ಸ್ ಮೂಲಕ ಹೋಗುವುದನ್ನು ನೋಡಿದ್ದೀರಿ. ಇದೀಗ ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಮೊದಲು ಎಂಬಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಕ್ಯೂ ಕಾಂಪ್ಲೆಕ್ಸ್ ವ್ಯವಸ್ಥೆ ಮಾಡಲಾಗಿದೆ. ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ಹತ್ತಾರು ಗಂಟೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ವೀಕೆಂಡ್ ಹಾಗೂ ರಜಾ ದಿನಗಳಲ್ಲಿ ಇನ್ನೂ ಹೆಚ್ಚು ಗಂಟೆಗಳ ಕಾಲ ಕ್ಯೂ ನಲ್ಲಿ ನಿಲ್ಲಬೇಕಾಗುತ್ತದೆ.
ಇದನ್ನೂ ಓದಿ: Chikkamagaluru: ಜನವರಿ 28ಕ್ಕೆ ಫಲ ಪಾಕ ಸ್ಪರ್ಧೆ- ಆಸಕ್ತರು ತಪ್ಪದೇ ಹೆಸರು ನೋಂದಾಯಿಸಿಕೊಳ್ಳಿ!
2 ಅಂತಸ್ತಿನ ಕಟ್ಟಡ
ಮಕ್ಕಳು, ಮಹಿಳೆಯರು, ವಯಸ್ಸಾದವರು ಸೇರಿದಂತೆ ಎಲ್ಲರೂ ಸಣ್ಣದಾದ ಈ ಸರತಿ ಸಾಲಿನಲ್ಲಿ ನಿಂತುಕೊಂಡೇ ಸಾಗಬೇಕಾಗುತ್ತದೆ. ಭಕ್ತರ ಈ ಕಷ್ಟವನ್ನರಿತ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಆಕರ್ಷಕವಾದ ವಿನ್ಯಾಸದ ತನ್ನದೇ ಪರಿಕಲ್ಪನೆಯ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌ನ್ನು ನಿರ್ಮಿಸಿದ್ದಾರೆ. ದೇವಸ್ಥಾನದ ಹಿಂಭಾಗದಲ್ಲಿ ಬರೋಬ್ಬರಿ ಎರಡು ಲಕ್ಷದ 75 ಸಾವಿರದ 177 ಚದರ ಅಡಿ ವಿಸ್ತೀರ್ಣದ ಎರಡು ಅಂತಸ್ತಿನ ಕ್ಯೂ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗಿದೆ.
ಈ ಕಾಂಪ್ಲೆಕ್ಸ್‌ನಲ್ಲಿ ಏನೆಲ್ಲಾ ಸೌಲಭ್ಯಗಳಿವೆ?
ಶ್ರೀ ಸಾನ್ನಿಧ್ಯ ಅನ್ನೋ ಈ ಕ್ಯೂ ಕಾಂಪ್ಲೆಕ್ಸ್ ಬಹಳಷ್ಟು ವಿಶಿಷ್ಟತೆಯಿಂದ ಕೂಡಿದ್ದು, ಭಕ್ತರು ಸರತಿ ಸಾಲಿನಲ್ಲಿ ನಿಲ್ಲದೇ ವಿಶಾಲವಾದ ಭವನದಲ್ಲಿ ಕುರ್ಚಿಯಲ್ಲಿ ಕುಳಿತು ಕ್ರಮೇಣವಾಗಿ ಮುಂದಿನ ಭವನಗಳಿಗೆ ಸ್ಥಳಾಂತರಗೊಳ್ಳಬಹುದು. ಎರಡು ಅಂತಸ್ತಿನಲ್ಲಿ ತಲಾ 8 ರಂತೆ ಒಟ್ಟು 16 ವಿಶಾಲ ಭವನಗಳಿದ್ದು ಪ್ರತಿ ಭವನದಲ್ಲಿ 800 ಮಂದಿಯಂತೆ ಸುಮಾರು 12 ಸಾವಿರ ಮಂದಿ ತಂಗಲು ಅವಕಾಶವಿದೆ. ಇಡೀ ಸಂಕೀರ್ಣ ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಕ್ಯೂ ಕಾಂಪ್ಲೆಕ್ಸ್‌ಗೆ ಎಂಟ್ರಿಯಾಗುತ್ತಿದ್ದಂತೆ ಎ.ಐ ತಂತ್ರಜ್ಞಾನದ ಕ್ಯಾಮೆರಾ ಎಲ್ಲಾ ಭಕ್ತರ ಸಂಖ್ಯೆಗಳನ್ನು ಲೆಕ್ಕ ಹಾಕುತ್ತದೆ. ಆರಂಭದಲ್ಲೇ ಸೇವಾ ರಶೀದಿ ಕೌಂಟರ್ ಇದ್ದು, ಬಳಿಕ ಕೊಠಡಿಗೆ ಎಂಟ್ರಿ ನೀಡಲಾಗುತ್ತದೆ. ಸುಂದರ ಕಲಾಕೃತಿಗಳಿಂದ ಆಕರ್ಷಿಸುವ ಈ ಕ್ಯೂ ಕಾಂಪ್ಲೆಕ್ಸ್ ನ ಪ್ರತೀ ಕೊಠಡಿಯೊಳಗೂ ಸುಸಜ್ಜಿತ ಆಸನಗಳು, ನೀರಿನ ವ್ಯವಸ್ಥೆ, ಶೌಚಾಲಯ, ಮಕ್ಕಳ ಆರೈಕೆ ಕೊಠಡಿ, ಟಿವಿ, ಉಚಿತ ಉಪಾಹಾರದ ವ್ಯವಸ್ಥೆ ಇದ್ದು ಇಡೀ ಕೊಠಡಿ 27 ಡಿಗ್ರಿ ಸೆಲ್ಸಿಯಸ್ ಕೂಲಿಂಗ್ ಸಿಸ್ಟಮ್ ನಿಂದ ಕೂಡಿದೆ. ಇಂತಹ ಸುಸಜ್ಜಿತ ಆಧುನಿಕ ತಂತ್ರಜ್ಞಾನ ಕ್ಯೂ ಕಾಂಪ್ಲೆಕ್ಸ್ ಬೇರೆಲ್ಲೂ ಇಲ್ಲ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.
ಕಳೆದ ಹಲವಾರು ವರ್ಷಗಳಿಂದ ಸರತಿ ಸಾಲಿನಲ್ಲೇ ಬಂದು ಮಂಜುನಾಥ ಸ್ವಾಮಿಯ ದರ್ಶನ ಪಡೆಯುತ್ತಿದ್ದ ಭಕ್ತರಿಗೆ, ಇನ್ನು ಮುಂದೆ ಉತ್ತಮ ರೀತಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಕ್ಯೂ ಕಾಂಪ್ಲೆಕ್ಸ್ ನ್ನು ಇಂದು ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್ ಉದ್ಘಾಟಿಸಲಿದ್ದು ಕೆಲವೇ ದಿನಗಳಲ್ಲಿ ಭಕ್ತರ ಉಪಯೋಗಕ್ಕೆ ಸಿಗಲಿದೆ.
Dakshina Kannada,Karnataka
January 07, 2025 4:40 PM IST