Last Updated:
ಪುತ್ತೂರು ನಗರಸಭೆಯ ನಗರಾಯುಕ್ತ ಮಧು.ಎಸ್.ಮನೋಹರ್ ಅವರ ವರ್ಗಾವಣೆಗೆ ಭಾವುಕರಾದ ಸಿಬ್ಬಂದಿ, ಕಾರ್ಪೋರೇಟರ್ ಗಳು ಕಣ್ಣೀರು ಹಾಕಿದ ಸನ್ನಿವೇಶ. ಮಧು.ಎಸ್.ಮನೋಹರ್ ಅವರ ಪ್ರಾಮಾಣಿಕ ಸೇವೆ ಜನಪ್ರತಿನಿಧಿಗಳಿಂದ ಮೆಚ್ಚುಗೆ.
ದಕ್ಷಿಣ ಕನ್ನಡ: ದಿನ ಪೂರ್ತಿ 4 ಗೋಡೆಗಳ ನಡುವೆ ದುಡಿಯುವವರಿಗೆ (Workers) ಒಂದು ಬಾಂಧವ್ಯ (Relation) ದಕ್ಕಿರುತ್ತದೆ. ಖುಷಿ-ದುಃಖ, ವಿರಸ-ಸಮರಸಗಳ ಭಾವ ವಿನಿಮಯದ (Emotional exchange) ನಂತರವೂ ಅದು ಸುಪ್ತವಾಗಿದ್ದರೂ ಸ್ಫೋಟಗೊಳ್ಳುವುದು ವಿದಾಯದ ವೇಳೆಯಲ್ಲಿ! ಸರ್ಕಾರಿ ಕೆಲಸಗಳಲ್ಲಂತೂ ದಿನವೂ ಜನ ಸಾಮಾನ್ಯರ ಜೊತೆ ಪಳಗುವ ಅಧಿಕಾರಿಗಳು (Officers) ಸ್ವಲ್ಪ ಒಳ್ಳೆಯ ಮನುಷ್ಯರಾಗಿದ್ದರೆ ಸ್ನೇಹಜೀವಿ ಗಳಾಗಿಬಿಡುತ್ತಾರೆ. ಸರಕಾರಿ ಅಧಿಕಾರಿಗಳು ಜನಾನುರಾಗಿಯಾಗಿದ್ದು, ಒಂದು ಕಛೇರಿಯಿಂದ ಇನ್ನೊಂದು ಕಡೆಗೆ ವರ್ಗಾವಣೆ ಹೊಂದುವ ಸಮಯದಲ್ಲಿ ಅಂತಹ ಅಧಿಕಾರಿಗಳನ್ನು ಬೀಳ್ಕೊಡುವ ಸಮಯದಲ್ಲಿ ಜನ, ಸಿಬ್ಬಂದಿ,ಜನಪ್ರತಿನಿಧಿಗಳು ಕೊಂಚ ಭಾವುಕರಾಗುತ್ತಾರೆ. ಅಂತಹುದೇ ಒಂದು ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ನಗರಸಭೆಯಲ್ಲೂ ನಡೆದಿದೆ.
ಪುತ್ತೂರು ನಗರಸಭೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಗರಾಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದ ಮಧು.ಎಸ್.ಮನೋಹರ್ ಎನ್ನುವ ಅಧಿಕಾರಿಗೆ ಬೇರೊಂದು ಕಡೆ ವರ್ಗಾವಣೆ ಆದೇಶ ಬಂದಾಗ ಇಡೀ ನಗರಸಭೆಯ ಸಿಬ್ಬಂದಿಗಳು, ಕಾರ್ಪೋರೇಟರ್ ಗಳು ಒಟ್ಟಾಗಿ ಭಾವುಕರಾಗಿ ಕಣ್ಣೀರು ಹಾಕಿದ ಸನ್ನಿವೇಶ ನೋಡುಗರ ಮನ ಮಿಡಿಸಿದೆ.
ನಗರದ ಸ್ವಚ್ಛತೆ ಬಗ್ಗೆ ಅಪಾರ ಕಳಕಳಿಯ ಸೇವೆ ಒದಗಿಸಿದ್ದ ಅಧಿಕಾರಿ
ಪುತ್ತೂರು ನಗರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಮತ್ತು ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ ಪರಿಣಾಮ ಸಾಮಾನ್ಯ ಜನರಿಂದ ಹಿಡಿದು ಜನಪ್ರತಿನಿಧಿಗಳ ಮಧ್ಯೆ ಸೇತುವೆಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಧು ಮನೋಹರ್ ರನ್ನು ಪುತ್ತೂರಿನಿಂದ ಬಿಟ್ಟು ಕೊಡುವ ಸಂದರ್ಭ ಇಲ್ಲಿನ ಜನ ಕೊಂಚ ವಿಚಲಿತರಾಗಿದ್ದರು. ನಗರದ ಸ್ವಚ್ಛತೆ, ಮಧ್ಯವರ್ತಿಗಳ ನಿಯಂತ್ರಣ ಸೇರಿದಂತೆ ಹಲವು ಜನಪರ ಕೆಲಸಗಳನ್ನು ಮಾಡಿದ್ದ ಪರಿಣಾಮ ಈ ಅಧಿಕಾರಿ ಬೇರೆಡೆಗೆ ವರ್ಗಾವಣೆ ಹೊಂದಿದ ಸಂದರ್ಭದಲ್ಲಿ ಕಾರ್ಪೋರೇಟರ್ ಗಳು, ಕಿರಿಯ ಅಧಿಕಾರಿಗಳು, ಟೆಂಪರರಿ ಸಿಬ್ಬಂದಿಗಳು ಹೀಗೆ ಎಲ್ಲರೂ ಸೇರಿ ಅಧಿಕಾರಿಗೆ ಗೌರವ ವಿದಾಯ ಹೇಳಿದ್ದಾರೆ. ಜನರ, ಸಿಬ್ಬಂದಿಗಳ ಪ್ರೀತಿಗೆ ಭಾವುಕರಾಗಿಯೇ ಪ್ರತಿಕ್ರಿಯಿಸಿದ ಮಧು.ವಿ.ಮನೋಹರ್ ಪುತ್ತೂರಿನ ಜನರ ಪ್ರೀತಿ, ಸ್ನೇಹಕ್ಕೆ ಕೃತಜ್ಞತೆಯನ್ನು ಸಲ್ಲಿಸಿ ಬೇರೆ ಊರಿಗೆ ಪ್ರಯಾಣ ಬೆಳೆಸಿದರು.
Dakshina Kannada,Karnataka
July 26, 2025 4:51 PM IST