IND vs AUS: ರೋಹಿತ್-ಅಯ್ಯರ್ ಅರ್ಧಶತಕ; ಆಸೀಸ್​ಗೆ 265 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದ ಭಾರತ | India Sets 265 Target: Rohit, Shreyas, and Axar Patel Shine in Adelaide | ಕ್ರೀಡೆ

IND vs AUS: ರೋಹಿತ್-ಅಯ್ಯರ್ ಅರ್ಧಶತಕ; ಆಸೀಸ್​ಗೆ 265 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದ ಭಾರತ | India Sets 265 Target: Rohit, Shreyas, and Axar Patel Shine in Adelaide | ಕ್ರೀಡೆ

Last Updated:

ರೋಹಿತ್ ಶರ್ಮಾ 73, ಶ್ರೇಯಸ್ ಅಯ್ಯರ್ 61, ಅಕ್ಷರ್ ಪಟೇಲ್ 44 ಹಾಗೂ  ರಾಣಾ ಅಜೇಯ 24 ರನ್​ಗಳ ನೆರವಿನಿಂದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 264 ರನ್​ಗಳಿಸಿದೆ.

ರೋಹಿತ್ ಶರ್ಮಾ
ರೋಹಿತ್ ಶರ್ಮಾ

ಭಾರತ ತಂಡದ ಅಡಿಲೇಡ್​​ನಲ್ಲಿ ನಡೆಯುತ್ತಿರುವ 2ನೇ ಪಂದ್ಯದಲ್ಲೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 264 ರನ್​ಗಳಿಸಿದೆ. ರೋಹಿತ್ ಶರ್ಮಾ 73, ಶ್ರೇಯಸ್ ಅಯ್ಯರ್ 61, ಅಕ್ಷರ್ ಪಟೇಲ್ 44 ರನ್​ಗಳಿಸಿ ಹಾಗೂ  ರಾಣಾ ಅಜೇಯ 24 ತಂಡದ ಮೊತ್ತ 250ರ ಗಡಿ ದಾಟಲು ನೆರವಾದರು.

ಸತತ 2ನೇ ಪಂದ್ಯದಲ್ಲಿ ಟಾಸ್ ಸೋಲು ಕಂಡ ಟೀಮ್ ಇಂಡಿಯಾ ಕೇವಲ 17 ರನ್​ಗಳಾಗುವಷ್ಟರಲ್ಲಿ ನಾಯಕ ಶುಭ್​ಮನ್ ಗಿಲ್(9) ಹಾಗೂ ವಿರಾಟ್ ಕೊಹ್ಲಿ (0) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. 3ನೇ ವಿಕೆಟ್​ಗೆ ಜೊತೆಯಾದ ರೋಹಿತ್​-ಶ್ರೇಯಸ್ ಅಯ್ಯರ್ ಶತಕದ ಜೊತೆಯಾಟ ನಡೆಸಿದರು. ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ರೋಹಿತ್ ಇಂದು ಆರಂಭದಲ್ಲಿ ರನ್​ಗಳಿಸಲು ಪರದಾಡಿದರು. ಆದರೆ ಆ ನಂತರ ಚೇತರಿಸಿಕೊಂಡು ಉತ್ತಮ ಶಾಟ್ಗಳ ಮೂಲಕ ಅದ್ಭುತವಾಗಿ ರನ್​ ಕಲೆಹಾಕಿ ಭಾರತಕ್ಕೆ ಚೇತರಿಕೆ ನೀಡಿದರು.

ಆದರೆ ಅರ್ಧಶತಕ ಪೂರೈಸಿ ಶತಕದತ್ತ ಮುನ್ನಗ್ಗುತ್ತಿದ್ದ ರೋಹಿತ್​ ಸ್ಟಾರ್ಕ್ ಬೌಲಿಂಗ್​​ನಲ್ಲಿ ಹೇಜಲ್​ವುಡ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. 97 ಎಸೆತಗಳನ್ನೆದುರಿಸಿ ಹಿಟ್​ಮ್ಯಾನ್ 7 ಬೌಂಡರಿ, 2 ಸಿಕ್ಸರ್​ಗಳ ಸಹಿತ 73 ರನ್​ಗಳಿಸಿದರು. ರೋಹಿತ್ ವಿಕೆಟ್ ಒಪಪ್ಇಸಿದ ಕೇವಲ 14 ರನ್​ಗಳ ಅಂತರದಲ್ಲಿ ಅಯ್ಯರ್ ಕೂಡ ಔಟ್ ಆದರು. ಅಯ್ಯರ್ 77 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 61 ರನ್​ಗಳಿಸಿ ನಿರ್ಗಮಿಸಿದರು. ಇವರಿಬ್ಬರ ನಂತರ ಭಾರತದ ರನ್​ಗತಿಗೆ ಕಡಿವಾಣ ಬಿದ್ದಿತು.

ಒಂದು ಕಡೆ ಅಕ್ಷರ್ ಪಟೇಲ್ ಉತ್ತಮವಾಗಿ ರನ್​ಗಳಿಸುತ್ತಿದ್ದರೆ, ಮತ್ತೊಂದು ಕಡೆ ಯಾರು ಸಾಥ್ ನೀಡದೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರು. ಆಪತ್ಭಾಂಧವ ರಾಹುಲ್ ಕೂಡ ಇಂದು ಕೈಕೊಟ್ಟರು. 15 ಎಸೆತಗಳಲ್ಲಿ 11 ರನ್​ಗಳಿಸಿ ಜಂಪಾ ಬೌಲಿಂಗ್​ನಲ್ಲಿ ಕ್ಲೀನ್ ಬೌಲ್ಡ್ ಆದರು. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ 12ಕ್ಕೆ ಸೀಮಿತವಾದರು. 41 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ 41 ರನ್​ಗಳಿಸಿದ್ದ ಅಕ್ಷರ್ ಪಟೇಲ್ ಜಂಪಾ ಬೌಲಿಂಗ್​​ನಲ್ಲಿ ಸಿಕ್ಸರ್​ ಹೊಡೆಯುವ ಯತ್ನದಲ್ಲಿ ಸ್ಟಾರ್ಕ್​ಗೆ ವಿಕೆಟ್ ಒಪ್ಪಿಸಿದರು. ಅದೇ ಓವರ್​ನಲ್ಲಿ ಆಲ್​ರೌಂಡರ್ ಕೋಟಾದಲ್ಲಿ ಚಾನ್ಸ್ ಪಡೆದಿದ್ದ ನಿತೀಶ್ ಕುಮಾರ್ ರೆಡ್ಡಿ ಕೇವಲ 8 ರನ್​ಗಳಿಸಿ ಔಟ್ ಆದರು.

ಭಾರತ 45 ಓವರ್​ಗಳಲ್ಲಿ 8ವಿಕೆಟ್ ಕಳೆದುಕೊಂಡು 226 ರನ್​ಗಳಿಸಿತ್ತು. 250 ರನ್​ಗಳಿಸುವುದು ಅನುಮಾನ ಎನ್ನುವ ಸ್ಥಿತಿಗೆ ತಲುಪಿತ್ತು. ಆದರೆ ಹರ್ಷಿತ್ ರಾಣಾ ಹಾಗೂ ಅರ್ಷದೀಪ್ ಸಿಂಗ್ 9ನೇ ವಿಕೆಟ್ ಜೊತೆಯಾಟದಲ್ಲಿ 37 ರನ್​ ಸೇರಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ರಾಣಾ 18 ಎಸೆತಗಳಲ್ಲಿ ಅಜೇಯ 24 ರನ್​ಗಳಿಸಿದರೆ, ಅರ್ಷದೀಪ್ ಸಿಂಗ್ 13 ರನ್​ಗಳಿಸಿದರು.

ಆಸ್ಟ್ರೇಲಿಯಾ ಪರ ಆ್ಯಡಂ ಜಂಪಾ 10 ಓವರ್​ಗಳಲ್ಲಿ 60 ರನ್​ ನೀಡಿ 4 ವಿಕೆಟ್ ಪಡೆದು ಟಾಪ್ ಬೌಲರ್ ಎನಿಸಿಕೊಂಡರು. ಕ್ಷೇವಿಯರ್ ಬಾರ್ಟ್ಲೆಟ್ 39 ರನ್​ ನೀಡಿ 3 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್​ 62 ರನ್​ ನೀಡಿ 2 ವಿಕೆಟ್ ಪಡೆದರು. ಹೇಜಲ್​ವುಡ್ ವಿಕೆಟ್ ಪಡೆಯದಿದ್ದರೂ 10 ಓವರ್​ಗಳಲ್ಲಿ ಕೇವಲ 29 ರನ್​ ನೀಡಿ ಭಾರತದ ರನ್​ಗತಿಗೆ ಕಡಿವಾಣ ಹಾಕಿದರು.