ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಮೊದಲ ಟಿ20 ಪಂದ್ಯ ಬುಧವಾರ ಕ್ಯಾನ್‌ಬೆರಾದಲ್ಲಿ ನಡೆಯಲಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಭಾರತ ತಂಡ ಗೆಲುವಿನ ನಿರೀಕ್ಷೆಯಲ್ಲಿದೆ. ಸೂರ್ಯಕುಮಾರ್ ಕೆಲವು ಸಮಯದಿಂದ ಫಾರ್ಮ್‌ನಲ್ಲಿಲ್ಲ. ಹೀಗಾಗಿ ಈ ಸರಣಿಯಲ್ಲಿ ಅವರು ಬಿಗ್ ಇನ್ನಿಂಗ್ಸ್ ಆಡುವ ನಿರೀಕ್ಷೆಯಿದೆ. ನಾಯಕ ಸೂರ್ಯಕುಮಾರ್ ಬಿಟ್ಟು ಟೀಮ್ ಇಂಡಿಯಾದ ಪ್ಲೇಯಿಂಗ್ 11 ರಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗುತ್ತದೆ? ಎಂಬುದುರ ಬಗ್ಗೆ ಇಲ್ಲಿದೆ ಮಾಹಿತಿ.
ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದ ಭಾರತ ತಂಡದ ಆಡುವ ಹನ್ನೊಂದರ ಬಳಗ ಆಡುವುದು ಬಹುತೇಕ ಖಚಿತವಾಗಿದೆ. ಭಾರತ ಬಲಿಷ್ಠ ಟಿ20 ತಂಡವನ್ನು ಹೊಂದಿದ್ದು, ಕಳೆದ 10 ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದಿದೆ. ಉಳಿದ ಎರಡಲ್ಲಿ ಒಂದರಲ್ಲಿ ಸೋತರೆ, ಇನ್ನೊಂದು ಪಂದ್ಯ ಪಂದ್ಯ ಟೈ ಆಗಿದೆ. ಕಾಂಗರೂ ಪಡೆ ಕೂಡ ಫಾರ್ಮ್‌ನಲ್ಲಿರುವುದರಿಂದ ಮತ್ತು ಭಾರತದಂತೆಯೇ, ಕಳೆದ 10 ಪಂದ್ಯಗಳಲ್ಲಿ ಎಂಟರಲ್ಲಿ ಗೆದ್ದಿದ್ದರೆ, ಒಂದು ಪಂದ್ಯದಲ್ಲಿ ಸೋತಿರುವುದರಿಂದ ಭಾರತ ತಂಡಕ್ಕೆ ಸವಾಲು ಸುಲಭವಲ್ಲ. ಆಸ್ಟ್ರೇಲಿಯಾದ ಒಂದು ಪಂದ್ಯವೂ ಮಳೆಯಿಂದಾಗಿ ರದ್ದಾಗಿತ್ತು.
ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಮತ್ತೊಮ್ಮೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಅಭಿಷೇಕ್ ಶರ್ಮಾ ಏಷ್ಯಾಕಪ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಆದರೆ ಅಭಿಷೇಕ್ ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಸವಾಲುಗಳನ್ನು ಎದುರಿಸಲಿದ್ದಾರೆ. ಶುಭಮನ್ ಗಿಲ್ ಅವರಿಗೆ ಆಸ್ಟ್ರೇಲಿಯಾ ಪಿಚ್ಗಳ ಪರಿಸ್ಥಿತಿಗಳ ಬಗ್ಗೆ ಈಗಾಗಲೇ ತಿಳಿದಿದೆ. ಆದರೆ, ಅವರಿಂದ ಬಿಗ್ ಇನ್ನಿಂಗ್ಸ್ ನಿರೀಕ್ಷೆಯಿದೆ. ಮೂರನೇ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಅವರ ಕೊಡುಗೆ ನಿರ್ಣಾಯಕವಾಗಿದೆ.
ತಿಲಕ್ ವರ್ಮಾ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ, ಶಿವಂ ದುಬೆ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರದರ್ಶನ ನೀಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಏಷ್ಯಾಕಪ್ ಫೈನಲ್‌ನಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ ತಿಲಕ್ ವರ್ಮಾ ಮತ್ತು ಅಕ್ಸರ್ ಪಟೇಲ್ ಮಧ್ಯಮ ಕ್ರಮಾಂಕವನ್ನು ನಿರ್ವಹಿಸಲಿದ್ದಾರೆ. ಆದರೆ ಭಾರತ ಹೆಚ್ಚುವರಿ ಬ್ಯಾಟರ್ಸ್ನೊಂದಿಗೆ ಬಂದರೆ, ರಿಂಕು ಸಿಂಗ್ ಕೂಡ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯಬಹುದು.
ಐಪಿಎಲ್ 2025 ರಲ್ಲಿ ಆರ್‌ಸಿಬಿ ಚಾಂಪಿಯನ್ ಮಾಡುವಲ್ಲಿ ಜಿತೇಶ್ ಶರ್ಮಾ ಪ್ರಮುಖ ಪಾತ್ರವಹಿಸಿದ್ದರು. ಇದಾದ ಬಳಿಕ ಅವರನ್ನು ಏಷ್ಯಾಕಪ್ 2025 ಟೂರ್ನಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಜಿತೇಶ್ ಶರ್ಮಾ ಏಷ್ಯಾಕಪ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಆಡಿರಲಿಲ್ಲ. ಈಗ ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಜಿತೇಶ್ ಶರ್ಮಾ ಅವರಿಗೆ ಆಡುವ ಅವಕಾಶ ಸಿಗುತ್ತದೆಯೇ? ಎಂಬ ಪ್ರಶ್ನೆ ಎದುರಾಗಿದೆ. ಜಿತೇಶ್ ಶರ್ಮಾ ಅವರಿಗಿಂತ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿ ಮೊದಲ ಆದ್ಯತೆ ಪಡೆಯುವ ಸಾಧ್ಯತೆ ಇದೆ. ಏಷ್ಯಾ ಕಪ್ ಉದ್ದಕ್ಕೂ ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿದ್ದರು. ಆದ್ದರಿಂದ, ಜಿತೇಶ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಕಾಯಬೇಕಾಗಬಹುದು.
ಬೌಲಿಂಗ್ನಲ್ಲಿ ಅಕ್ಸರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ಸ್ಪಿನ್ ವಿಭಾಗದ ಜವಾಬ್ದಾರಿಯನ್ನು ಹೊತ್ತಿಕೊಳ್ಳಬಹುದು. ಆದರೆ ಭಾರತ ಇಬ್ಬರು ಅನುಭವಿ ಬೌಲರ್ಸ್ ಅನ್ನು ಆಡಿಸಬಹುದು. ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಬುಮ್ರಾ ಏಕದಿನ ಸರಣಿಯ ಭಾಗವಾಗಿರಲಿಲ್ಲ. ಆದರೆ ಟಿ20 ಸರಣಿಗೆ ಭಾರತ ತಂಡಕ್ಕೆ ಮರಳಲಿದ್ದಾರೆ.
ಕ್ಯಾನ್‌ಬೆರಾದ ಮನುಕಾ ಓವಲ್‌ನ ಪಿಚ್ ಬೌನ್ಸ್ ಆಗುವ ನಿರೀಕ್ಷೆಯಿದೆ. ಹೀಗಾಗಿ ಟೀಮ್ ಇಂಡಿಯಾ ಮೂವರು ವೇಗದ ಬೌಲರ್‌ಗಳನ್ನು ಆಯ್ಕೆ ಮಾಡಿದರೆ, ಬುಮ್ರಾ, ಅರ್ಷದೀಪ್ ಮತ್ತು ಹರ್ಷಿತ್ ರಾಣಾ ಜೊತೆಯಾಗಲಿದ್ದಾರೆ. ಇಂತಹ ಸಂದರ್ಭದಲ್ಲಿ ರಿಂಕು ಪ್ಲೇಯಿಂಗ್ 11 ರಿಂದ ಹೊರಗುಳಿಯಬಹುದು.
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್-11
ಭಾರತ: ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಸರ್ ಪಟೇಲ್, ರಿಂಕು ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್.
ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ (ನಾಯಕ), ಮ್ಯಾಥ್ಯೂ ಶಾರ್ಟ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಟಿಮ್ ಡೇವಿಡ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಓವನ್, ಸೀನ್ ಅಬಾಟ್, ನಾಥನ್ ಎಲ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಜೋಶ್ ಹ್ಯಾಜಲ್‌ವುಡ್.
October 28, 2025 5:30 PM IST