IND vs PAK: ದುಬೈ ಪಿಚ್‌ಗಳಲ್ಲಿ IND vs PAK ರೆಕಾರ್ಡ್‌ ಹೇಗಿದೆ? ಯಾರದ್ದು ಮೇಲುಗೈ, ಇವತ್ತು ಏನಾಗುತ್ತೆ?IND vs PAK Dubai Stadium Record Team India Faces Tough Challenge | ಕ್ರೀಡೆ

IND vs PAK: ದುಬೈ ಪಿಚ್‌ಗಳಲ್ಲಿ IND vs PAK ರೆಕಾರ್ಡ್‌ ಹೇಗಿದೆ? ಯಾರದ್ದು ಮೇಲುಗೈ, ಇವತ್ತು ಏನಾಗುತ್ತೆ?IND vs PAK Dubai Stadium Record Team India Faces Tough Challenge | ಕ್ರೀಡೆ

ಏಷ್ಯಾ ಕಪ್ ಇತಿಹಾಸದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ್ದೇ ಮೇಲುಗೈ. ಆದರೆ, ದುಬೈ ಮೈದಾನ ಮಾತ್ರ ಟೀಂ ಇಂಡಿಯಾಗೆ ಪದೇ ಪದೇ ಕೈಕೊಡುತ್ತಿದೆ. ಇಲ್ಲಿನ ಅಂಕಿಅಂಶಗಳು ಪಾಕಿಸ್ತಾನದ ಪರವಾಗಿದ್ದು, ಸೂರ್ಯಕುಮಾರ್‌‌ ಪಡೆಗೆ ಇದು ದೊಡ್ಡ ಸವಾಲಾಗಿದೆ.

ದುಬೈ ದಾಖಲೆ: ಪಾಕಿಸ್ತಾನಕ್ಕೆ ಮೇಲುಗೈ!

ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈನ ಈ ಮೈದಾನದಲ್ಲಿ ಈವರೆಗೆ ಮೂರು ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಮೂರರಲ್ಲಿ ಪಾಕಿಸ್ತಾನ ಎರಡು ಪಂದ್ಯಗಳನ್ನು ಗೆದ್ದಿದ್ದರೆ, ಭಾರತ ಗೆದ್ದಿರುವುದು ಕೇವಲ ಒಂದರಲ್ಲಿ.

2021ರ ಟಿ20 ವಿಶ್ವಕಪ್ (ಅಕ್ಟೋಬರ್ 24): ಈ ಪಂದ್ಯವನ್ನು ಭಾರತೀಯ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಪಾಕಿಸ್ತಾನವು ಭಾರತವನ್ನು ಒಂದೂ ವಿಕೆಟ್ ಕಳೆದುಕೊಳ್ಳದೆ, ಬರೋಬ್ಬರಿ 10 ವಿಕೆಟ್‌ಗಳಿಂದ ಸೋಲಿಸಿತ್ತು. ಇದು ಭಾರತಕ್ಕೆ ಅತಿದೊಡ್ಡ ಆಘಾತ ನೀಡಿತ್ತು.

2022ರ ಏಷ್ಯಾ ಕಪ್ (ಆಗಸ್ಟ್ 28): ಈ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿತ್ತು. ರೋಚಕ ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಜಯ ಸಾಧಿಸಿತ್ತು.

2022ರ ಏಷ್ಯಾ ಕಪ್, ಸೂಪರ್ ಫೋರ್ (ಸೆಪ್ಟೆಂಬರ್ 4): ಅದೇ ಟೂರ್ನಿಯಲ್ಲಿ ಮತ್ತೆ ಮುಖಾಮುಖಿಯಾದಾಗ, ಪಾಕಿಸ್ತಾನವು ಭಾರತವನ್ನು 5 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ಗೆ ಹತ್ತಿರವಾಗಿತ್ತು.

ಈ ಅಂಕಿಅಂಶಗಳು ಸ್ಪಷ್ಟವಾಗಿ ಹೇಳುವಂತೆ, ದುಬೈ ಪಿಚ್‌ನಲ್ಲಿ ಪಾಕಿಸ್ತಾನದ ಆಟಗಾರರು ಹೆಚ್ಚು ಯಶಸ್ಸು ಕಂಡಿದ್ದಾರೆ. ಹಾಗಾಗಿ, ಹಳೆಯ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಇದು ಅತ್ಯುತ್ತಮ ಅವಕಾಶ.

ಪಿಚ್ ರಿಪೋರ್ಟ್: ಬ್ಯಾಟ್ಸ್‌ಮನ್‌ಗಳ ಹಬ್ಬಾನಾ? ಬೌಲರ್‌ಗಳ ದರ್ಬಾರಾ?

ದುಬೈ ಪಿಚ್ ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇಲ್ಲಿನ ಪಿಚ್‌ನಲ್ಲಿ ವೇಗದ ಬೌಲರ್‌ಗಳಿಗೂ ಉತ್ತಮ ಸಹಕಾರ ಸಿಗುತ್ತಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ತಮ್ಮ ಮೊದಲ ಪಂದ್ಯವನ್ನು ಗೆಲ್ಲುವಲ್ಲಿ ಸ್ಪಿನ್ನರ್‌ಗಳ ಪಾತ್ರ ದೊಡ್ಡದಿತ್ತು.

ಆದರೆ, ಏನೇ ಆದರೂ, ದುಬೈ ಪಿಚ್ ಅಂತಿಮವಾಗಿ ಬ್ಯಾಟ್ಸ್‌ಮನ್‌ಗಳ ಸ್ವರ್ಗ. ಇಲ್ಲಿ ರನ್‌ಗಳ ಹೊಳೆಯೇ ಹರಿಯುವ ಸಾಧ್ಯತೆ ಇದೆ. ಹೀಗಾಗಿ, ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ದುಕೊಂಡು, ಎದುರಾಳಿಯನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಲು ಪ್ರಯತ್ನಿಸಬಹುದು.

ಒಂದೇ ಟೂರ್ನಿಯಲ್ಲಿ ಮೂರು ಬಾರಿ ಇಂಡೋ-ಪಾಕ್ ಕದನ?

ಹೌದು, ಈ ಬಾರಿಯ ಏಷ್ಯಾ ಕಪ್‌ನಲ್ಲಿ ಅಭಿಮಾನಿಗಳಿಗೆ ಮೂರು ಬಾರಿ ಭಾರತ-ಪಾಕಿಸ್ತಾನ ಪಂದ್ಯವನ್ನು ನೋಡುವ ಅವಕಾಶ ಸಿಗಬಹುದು! ಗುಂಪು ಹಂತದ ನಂತರ, ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡಿ ಸೂಪರ್ ಫೋರ್ ಹಂತಕ್ಕೆ ಪ್ರವೇಶಿಸಿದರೆ, ಸೆಪ್ಟೆಂಬರ್ 21 ರಂದು ಮತ್ತೊಮ್ಮೆ ಮುಖಾಮುಖಿಯಾಗಲಿವೆ.

ಒಂದು ವೇಳೆ ಎರಡೂ ತಂಡಗಳು ಫೈನಲ್‌ಗೆ ಲಗ್ಗೆ ಇಟ್ಟರೆ, ಸೆಪ್ಟೆಂಬರ್ 28 ರಂದು ನಡೆಯುವ ಫೈನಲ್‌ನಲ್ಲಿ ಮೂರನೇ ಬಾರಿಗೆ ಈ ಹೈ-ವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಬಹುದು.