Last Updated:
ಇಂಥಹ ಸಮಯದಲ್ಲಿ ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೀತಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಬೆಂಗಳೂರಿನ ಸಾರ್ವಜನಿಕರು ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. (ವರದಿ: ಮುನಿರಾಜು, ನ್ಯೂಸ್18 ಕನ್ನಡ, ಬೆಂಗಳೂರು)
ಬೆಂಗಳೂರು (ಸೆ.14): ಏಷ್ಯಾಕಪ್‌ನಲ್ಲಿ ಇಂದು ಭಾರತ- ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯವು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೀತಿದೆ. ಆದ್ರೆ ಭಾರತ-ಪಾಕ್ ಕ್ರಿಕೆಟ್ ಮ್ಯಾಚ್ಗೆ ಬೆಂಗಳೂರಿನಲ್ಲಿ ವಿರೋಧ ವ್ಯಕ್ತವಾಗಿದೆ. ಪೆಹಲ್ಗಾಮ್ ದಾಳಿ, ಯುದ್ಧ ಭೀತಿ ನಡುವೆ ಎರಡು ದೇಶಗಳ ನಡುವೆ ಈ ಪಂದ್ಯ ಆಯೋಜಿಸಿದ್ದೆ ತಪ್ಪು ಎಂದು ಸಾರ್ವಜನಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ವರದಿ ಆಗಿದೆ.
ಪೆಹಲ್ಗಾಮ್ ದಾಳಿ ಭಾರತದ ಹಾಗೂ ಪಾಕಿಸ್ತಾನದ ನಡುವೆ ದೊಡ್ಡ ಅಂತರವನ್ನೇ ಸೃಷ್ಟಿಸಿದೆ. ವ್ಯಾಪಾರ-ವಹಿವಾಟು ಬಂದ್ ಆಗಿದೆ. ಸಂಪರ್ಕದಕೊಂಡಿ ಕಳಚಿದೆ. ಗಡಿಯಲ್ಲಿ ಯುದ್ಧ ಭೀತಿಯ ಕಿಡಿ ಸಂಪೂರ್ಣವಾಗಿ ಹಾರಿಲ್ಲ. ಇಂಥಹ ಸಮಯದಲ್ಲಿ ಭಾರತ-ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೀತಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಬೆಂಗಳೂರಿನ ಸಾರ್ವಜನಿಕರು ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಭಾರತ ಯಾವುದೇ ಕಾರಣಕ್ಕೂ ಪಾಕಿಸ್ತಾನದ ಜೊತೆ ಕ್ರಿಕೆಟ್ ಮ್ಯಾಚ್ ಆಡಬಾರದು. ಅವರಿಗೆ ತಕ್ಕ ಪಾಠ ಕಲಿಸ್ಬೇಕು. ಪಾಕಿಸ್ತಾನದಿಂದ ಉಗ್ರರನ್ನ ಹೊರ ಹಾಕುವವರೆಗೆ ಅವರ ಜೊತೆ ಯಾವುದೇ ವ್ಯವಹಾರ ಮಾಡಬಾರದು. ಪೆಹಲ್ಗಾಮ್ ದಾಳಿಯಲ್ಲಿ ಅಮಾಯಕರು ಬಲಿಯಾದ್ರು. ಅವರ ಗೌರವಾರ್ಥ ಇವತ್ತು ಮ್ಯಾಚ್ ಬಹಿಷ್ಕಾರ ಮಾಡ್ಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ಕ್ರಿಕೆಟ್ ತಂಡವು ಇಂದು ಪಾಕಿಸ್ತಾನ ಟೀಮ್ ಎದುರಿಸಲು ಸಿದ್ಧವಾಗಿದೆ. ಈ ಭಾರತ-ಪಾಕ್ ಪಂದ್ಯವನ್ನು ನಾವು ನೋಡಲ್ಲ ಎಂದು ಬೆಂಗಳೂರಿಗರು ಹೇಳ್ತಿದ್ದಾರೆ. ಜೊತೆಗೆ ಇವತ್ತು ಯಾರು ಕೂಡ ಮ್ಯಾಚ್ ನೋಡಬೇಡಿ, ಇದೇ ನಾವು ಅವ್ರಿಗೆ ನೀಡುವ ಗೌರವ. ಇಲ್ಲಿ ಪಂದ್ಯಕ್ಕಿಂತ ದೇಶ ಮತ್ತು ದೇಶದ ಗೌರವ ಮುಖ್ಯ. ಈ ಮ್ಯಾಚ್ ಆಡೋದು ಬೇಡ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ ಎಂದು ವರದಿ ಆಗಿದೆ.
ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಇದುವರೆಗೆ ಒಟ್ಟು 19 ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ 10 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 6 ಪಂದ್ಯಗಳನ್ನು ಗೆದ್ದಿದೆ. ಆದರೆ 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಟಿ20 ಏಷ್ಯಾಕಪ್‌ನಲ್ಲಿ ಎರಡೂ ತಂಡಗಳು 3 ಬಾರಿ ಮುಖಾಮುಖಿಯಾಗಿವೆ, ಇದರಲ್ಲಿ ಭಾರತ 2 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಕೇವಲ 1 ಪಂದ್ಯವನ್ನು ಗೆದ್ದಿದೆ. ಈ ಬಾರಿ ಗೆಲುವು ಯಾರ ಪಾಲಾಗುತ್ತೆ ಕಾದು ನೋಡಬೇಕಿದೆ.
(ವರದಿ: ಮುನಿರಾಜು, ನ್ಯೂಸ್18 ಕನ್ನಡ, ಬೆಂಗಳೂರು)
September 14, 2025 9:15 AM IST