Last Updated:
ಪುಟ್ಟಪುಟ್ಟ ಗಾಳಿಪಟಗಳಿಂದ ಹಿಡಿದು ಬೃಹತ್ ಗಾತ್ರದ ಗಾಳಿಪಟಗಳು ಗಾಳಿಯ ಬೀಸುವಿಕೆಗೆ ತಕ್ಕಂತೆ ಓಲಾಡಿ, ಹಾರಾಡಿ, ಕುಲುಕಾಡಿ ಎಲ್ಲರನ್ನೂ ತಮ್ಮತ್ತ ಸೆಳೆಯುತ್ತಿದ್ದವು.
ದಕ್ಷಿಣ ಕನ್ನಡ: ಬಾನೆತ್ತರಕ್ಕೆ ನೋಡಿದರೆ ಬಾನಾಡಿಗಳಂತೆ ಹಾರುತ್ತಿರುವ ಗಾಳಿಪಟಗಳು(Kites). ಒಂದಕ್ಕಿಂತ ಮತ್ತೊಂದು ಆಕರ್ಷಣೀಯ. ಮತ್ತೊಂದಕ್ಕಿಂತ ಮಗದೊಂದು ಭಿನ್ನ. ಕಣ್ಣುಹಾಯಿಸಿದಷ್ಟು ದೂರ ಗಾಳಿಪಟಗಳದ್ದೇ ಕಾರುಬಾರು. ಹೌದು, ಈ ದೃಶ್ಯ ಕಂಡು ಬಂದಿದ್ದು ಟೀಮ್ ಮಂಗಳೂರು(Team Mangaluru) ಆಶ್ರಯದಲ್ಲಿ ನಗರದ ತಣ್ಣೀರುಬಾವಿ ಬೀಚ್‌ನಲ್ಲಿ(Tanneeru Baavi Beach) ನಡೆದ 8ನೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ(International Kite Festival). ONGC MRPL ಪ್ರಾಯೋಜಕತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಹಕಾರದೊಂದಿಗೆ ಶನಿವಾರ ಮತ್ತು ರವಿವಾರ ಮಧ್ಯಾಹ್ನ 3ರಿಂದ ರಾತ್ರಿ 9ರವರೆಗೆ ಗಾಳಿಪಟಗಳು ಹಾರಾಡಿವೆ.
ಕುದುರೆ, ಕೋನ್ ಐಸ್‌ಕ್ರೀಂ, ಮೀನು, ಆಕ್ಟೋಪಸ್, ಹುಲಿ, ಗಣಪತಿ, ಕಥಕ್ಕಳಿ, ಸನ್‌ಫ್ಲವರ್, ಏರೋಪ್ಲೇನ್, ಚಿರತೆ, ಟೆಡ್ಡಿಬೇರ್, ಕ್ರಿಕೆಟ್, ಪಿನಾಕಿಯೋ, ಕೋಳಿ, ಡ್ರ್ಯಾಗನ್, ಇಂಡಿಯಾ ಫ್ಲ್ಯಾಗ್ ಹೀಗೆ ನೂರಾರು ವೈವಿಧ್ಯಮಯ ಗಾಳಿಪಟಗಳು ನೋಡುಗರ ಕಣ್ಮನ ಸೆಳೆಯುತ್ತಿತ್ತು. ಪುಟ್ಟಪುಟ್ಟ ಗಾಳಿಪಟಗಳಿಂದ ಹಿಡಿದು ಬೃಹತ್ ಗಾತ್ರದ ಗಾಳಿಪಟಗಳು ಗಾಳಿಯ ಬೀಸುವಿಕೆಗೆ ತಕ್ಕಂತೆ ಓಲಾಡಿ, ಹಾರಾಡಿ, ಕುಲುಕಾಡಿ ಎಲ್ಲರನ್ನೂ ತಮ್ಮತ್ತ ಸೆಳೆಯುತ್ತಿದ್ದವು.
ಇದನ್ನೂ ಓದಿ: Kolar: ಕೋಲಾರದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ- ಪ್ರೈವೇಟ್ ಕಂಪನಿಯಿಂದ ಉಚಿತ ಹೆಲ್ಮೆಟ್ ವಿತರಣೆ
ಇಂಗ್ಲೆಂಡ್, ಜರ್ಮನಿ, ನೆದರ್ಲ್ಯಾಂಡ್, ಕ್ಲೋವೆನಿಯಾ, ಇಟಲಿ, ಸ್ವೀಡನ್, ಇಂಡೋನೇಶಿಯಾ, ಪೋರ್ಚುಗಲ್, ಈಸ್ಟೋನಿಯಾ, ಗ್ರೀಸ್‌ನ ವಿದೇಶಿ ಗಾಳಿಪಟ ತಂಡಗಳು ಮತ್ತು ಒಡಿಶಾ, ರಾಜಸ್ತಾನ್, ಮಹಾರಾಷ್ಟ್ರ, ತೆಲಂಗಾಣ, ಕೇರಳ, ಗುಜರಾತ್ ರಾಜ್ಯಗಳಿಂದ ಆಗಮಿಸಿದ ಗಾಳಿಪಟ ತಂಡಗಳು ಈ ಉತ್ಸವದಲ್ಲಿ ಭಾಗವಹಿಸಿದೆ. 22 ಅಂತಾರಾಷ್ಟ್ರೀಯ ಗಾಳಿಪಟ ಹಾರಿಸುವವರು ಸೇರಿದಂತೆ 60ಕ್ಕೂ ಅಧಿಕ ಗಾಳಿಪಟ ಹಾರಿಸುವವರು ಇಲ್ಲಿದ್ದರು.
‘ಒಂದೇ ಆಕಾಶ, ಒಂದೇ ಭೂಮಿ, ಒಂದೇ ಕುಟುಂಬ’ ಎಂಬ ಧ್ಯೇಯ ವಾಕ್ಯದಲ್ಲಿ ಈ ಗಾಳಿಪಟ ಉತ್ಸವವು ಜರಗುತ್ತಿದ್ದು, ದೇಶ-ವಿದೇಶಗಳ ನಡುವೆ ಸಂಸ್ಕೃತಿಯನ್ನು ಬೆಸೆಯುವ ಉದ್ದೇಶ ಹೊಂದಿದೆ. ಬಾನಿನಲ್ಲಿ ಜಿಗಿದಾಡುವ ಸ್ಟಂಟ್ ಗಾಳಿಪಟಗಳು, ಏರೋಫಾಯ್ಸ್ ಗಾಳಿಪಟಗಳು(ಗಾಳಿ ತುಂಬಿ ಬಲೂನ್ ರೀತಿಯಲ್ಲಿ ಹಾರಾಡುವ ಬ್ರಹತ್ ಗಾಳಿಪಟಗಳು) ಸೀರೀಸ್ ಕೈಟ್(ಏಕ ದಾರದಲ್ಲಿ ನೂರಾರು ಗಾಳಿಪಟಗಳು) ರೆಕ್ಕೆಬಿಚ್ಚಿ ಹಕ್ಕಿಯಂತೆ ಹಾರಾಡುವ ಗಾಳಿಪಟಗಳು ಜನಾಕರ್ಷಣೆಗೆ ಪಾತ್ರವಾದವು.
Dakshina Kannada,Karnataka
January 21, 2025 6:27 AM IST