Last Updated:
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ತಂಡ ತೊರೆಯಲಿದ್ದಾರೆ ಎಂಬ ವದಂತಿ ಕೇಳಿ ಬರುತ್ತಿತ್ತು. ಇದೀಗ ಆ ವದಂತಿಗೆ ಪುಷ್ಠಿ ನೀಡುವಂತಹ ಪೋಸ್ಟ್ ಒಂದು ವೈರಲ್ ಆಗ್ತಾ ಇದೆ.
ಐಪಿಎಲ್ 2025 (IPL 2025) ಮುಕ್ತಾಯಗೊಂಡು ಒಂದು ವಾರ ಕಳೆದಿದೆ. ಆದ್ರೆ, ಐಪಿಎಲ್ ಕುರಿತಾದ ಚರ್ಚೆಗಳು ನಡೆಯುತ್ತಲೇ ಇದೆ. ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ (Sanju Samson) ತಂಡ ತೊರೆಯಲಿದ್ದಾರೆ ಎಂಬ ವದಂತಿ ಕೇಳಿ ಬರುತ್ತಿತ್ತು. ಇದೀಗ ಆ ವದಂತಿಗೆ ಪುಷ್ಠಿ ನೀಡುವಂತಹ ಪೋಸ್ಟ್ ಒಂದನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ (Instagram) ಸಂಜು ಸ್ಯಾಮ್ಸನ್ ಹಂಚಿಕೊಂಡಿದ್ದು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಸಂಜು ಹೇಳಿದ್ದೇನು
ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ತಂಡವನ್ನು ತೊರೆಯುವ ಸಾಧ್ಯತೆಯಿದೆ. ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ, ಗಾಯದ ಕಾರಣದಿಂದಾಗಿ ಸಂಜು ಕೆಲವು ಪಂದ್ಯಗಳನ್ನು ಇಂಪ್ಯಾಕ್ಟ್ ಸಬ್ ಆಗಿ ಆಡಿದ್ದರೆ, ಕೆಲವು ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಸಂಜು ಸ್ಯಾಮ್ಸನ್ ಅನುಪಸ್ಥಿತಿಯಲ್ಲಿ, ರಿಯಾನ್ ಪರಾಗ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು. ಸದ್ಯ ಸಂಜು ಸ್ಯಾಮ್ಸನ್ ಹಾಕಿರುವ ಇನ್‌ಸ್ಟಾಗ್ರಾಮ್ ಪೋಸ್ಟ್ ಅವರು ರಾಜಸ್ಥಾನವನ್ನು ತೊರೆಯಲಿದ್ದಾರೆ ಎಂಬ ಚರ್ಚೆ ಹುಟ್ಟುಹಾಕುವಂತೆ ಮಾಡಿದೆ.
ಸಿಎಸ್‌ಕೆ ಸೇರ್ತಾರ ಸಂಜು?
ಸಂಜು ಸ್ಯಾಮ್ಸನ್ ತಮ್ಮ ಪತ್ನಿಯೊಂದಿಗೆ ರಸ್ತೆ ದಾಟುತ್ತಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗೆ “ಮುಂದುವರಿಯುವ ಸಮಯ ಬಂದಿದೆ” ಎಂದು ಶೀರ್ಷಿಕೆ ನೀಡಿದ್ದಾರೆ. ಸಂಜು ಅವರ ಫೋಟೋಗೆ ಅಭಿಮಾನಿಗಳು ಕಾಮೆಂಟ್ ಮಾಡಿದ್ದು, ಅವರು ರಾಜಸ್ಥಾನವನ್ನು ತೊರೆಯುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಮಾತ್ರವಲ್ಲ, ಮುಂದಿನ ಸೀಸನ್‌ನಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳುತ್ತಿದ್ದಾರೆ.
ಈ ಐಪಿಎಲ್ ಸೀಸನ್‌ನಲ್ಲಿ ಸಂಜು ಸ್ಯಾಮ್ಸನ್ 9 ಪಂದ್ಯಗಳನ್ನು ಆಡಿದ್ದು, 140.39 ಸ್ಟ್ರೈಕ್ ರೇಟ್ ಮತ್ತು 35.63 ಸರಾಸರಿಯಲ್ಲಿ 285 ರನ್ ಗಳಿಸಿದ್ದಾರೆ. ಈ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪ್ರದರ್ಶನ ನಿರಾಶಾದಾಯಕವಾಗಿತ್ತು. 14 ಪಂದ್ಯಗಳಲ್ಲಿ ರಾಜಸ್ಥಾನ ಕೇವಲ 4 ಪಂದ್ಯಗಳಲ್ಲಿ ಮಾತ್ರ ಜಯಗಳಿಸಿ 10 ಪಂದ್ಯಗಳಲ್ಲಿ ಸೋತಿದೆ. ರಾಜಸ್ಥಾನ ಪಾಯಿಂಟ್ ಪಟ್ಟಿಯಲ್ಲಿ 9ತನೇ ಸ್ಥಾನದಲ್ಲಿ ತನ್ನ ಅಭಿಯಾನ ಮುಗಿಸಿತು.
ಐಪಿಎಲ್ ಸಮಯದಲ್ಲಿ ವಿವಾದದ ಸುದ್ದಿ
ಈ ನಡುವೆ, ಐಪಿಎಲ್ ಇನ್ನೂ ನಡೆಯುತ್ತಿರುವಾಗ, ಸಂಜು ಸ್ಯಾಮ್ಸನ್ ಆರ್‌ಆರ್ ಫ್ರಾಂಚೈಸಿಯ ನಿರ್ಧಾರಗಳಿಂದ ಅತೃಪ್ತರಾಗಿದ್ದರು ಎಂಬ ವರದಿಗಳು ಹೊರಬಂದಿದ್ದವು. ಮೂಲಗಳ ಪ್ರಕಾರ, ತಂಡದಲ್ಲಿ ಕೆಲವು ಆಟಗಾರರನ್ನು ನಿರಂತರವಾಗಿ ಸೇರಿಸಿಕೊಳ್ಳುವ ತಂಡದ ಆಡಳಿತ ಮಂಡಳಿಯ ತಂತ್ರವನ್ನು ಸಂಜು ವಿರೋಧಿಸುತ್ತಿದ್ದರು ಹಾಗಾಗಿ ಸಂಜು ರಾಜಸ್ಥಾನ ರಾಯಲ್ಸ್ ತೊರೆಯಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು.
ಸಂಜು ಐಪಿಎಲ್ ವೃತ್ತಿಜೀವನ
2021 ರಲ್ಲಿ ಸಂಜು ಸ್ಯಾಮ್ಸನ್ ಅವರನ್ನು ರಾಜಸ್ಥಾನದ ನಾಯಕರನ್ನಾಗಿ ಮಾಡಲಾಯಿತು. ಆ ಸೀಸನ್‌ನಲ್ಲಿ ಅವರು 14 ಇನ್ನಿಂಗ್ಸ್‌ಗಳಲ್ಲಿ 484 ರನ್ ಗಳಿಸಿದರು. 2022 ರಲ್ಲಿಯೂ ಸಹ, ಸಂಜು ತಂಡವನ್ನು ಅದ್ಭುತವಾಗಿ ಮುನ್ನಡೆಸಿದರು. ಆಗ ರಾಜಸ್ಥಾನ ಐಪಿಎಲ್ ಫೈನಲ್ ತಲುಪಿತು. 2022 ರಲ್ಲಿ, ಸಂಜು 28.62 ರ ಸರಾಸರಿಯಲ್ಲಿ 458 ರನ್ ಗಳಿಸಿದರು ಮತ್ತು 2023 ರಲ್ಲಿ 362 ರನ್ ಗಳಿಸಿದರು. ಐಪಿಎಲ್ 2024 ರಲ್ಲಿ ಸಂಜು 531 ರನ್ ಗಳಿಸಿದ್ದರು ಮಾತ್ರವಲ್ಲ ತಂಡವನ್ನು ಪ್ಲೇ-ಆಫ್ ತಲುಪಿಸಿದ್ದರು. ಆದ್ರೆ, ಆದರೆ ಐಪಿಎಲ್ 2025 ರಲ್ಲಿ, ಗಾಯದಿಂದಾಗಿ ಸಂಜು ಹೆಚ್ಚು ಆಡಲು ಸಾಧ್ಯವಾಗಲಿಲ್ಲ, ಇದು ರಾಜಸ್ಥಾನ ರಾಯಲ್ಸ್ ತಂಡದ ಮೇಲೂ ಪರಿಣಾಮ ಬೀರಿತು.
June 09, 2025 7:06 PM IST