Last Updated:
ಮುಂಬೈ ಇಂಡಿಯನ್ಸ್ ರಾಜಸ್ಥಾನ್ ರಾಯಲ್ಸ್ ವಿರುದ್ಧ 100 ರನ್ಗಳ ಸುಲಭ ಜಯ ಸಾಧಿಸಿದೆ. 2025ರ ಅಂಕಪಟ್ಟಿಯಲ್ಲಿ ಮುಂಬೈ ಅಗ್ರಸ್ಥಾನಕ್ಕೇರಿದರೆ, ರಾಯಲ್ಸ್ ಟೂರ್ನಿಯಿಂದ ಹೊರಬಿದ್ದಿದೆ.
ಮುಂಬೈ ಇಂಡಿಯನ್ಸ್ ಅತಿಥೇಯ ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧ ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಸಂಪೂರ್ಣ ಪ್ರಾಬಲ್ಯ ಸಾಧಿಸಿ 100 ರನ್ಗಳ ಬೃಹತ್ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ 5 ಬಾರಿ ಚಾಂಪಿಯನ್ಸ್ 2025ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಇತ್ತ ಹೀನಾಯ ಸೋಲು ಕಂಡ ರಾಯಲ್ಸ್ ಟೂರ್ನಿಯಿಂದ ಹೊರಬಿದ್ದಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ (CSK) ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಕಂಡು ಮೊದಲ ತಂಡವಾಗಿ ಹೊರಬಿದ್ದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 217 ರನ್ಗಳಿಸಿತ್ತು. ಈ ಬೃಹತ್ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಓವರ್ಗಳಲ್ಲಿ ಆಲೌಟ್ ಆಗುವ ಮೂಲಕ ಸೋಲು ಕಂಡಿತು.
218ರನ್ಗಳ ಗುರಿಯನ್ನ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 16.1 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 117 ರನ್ಗಳಿಸಲಷ್ಟೇ ಶಕ್ತವಾಯಿತು. ಬರೋಬ್ಬರಿ 100 ರನ್ಗಳಿಂದ ಗೆಲ್ಲುವ ಮೂಲಕ ಪ್ರಸಕ್ತ ಟೂರ್ನಿಯಲ್ಲೇ ಅತಿ ಹೆಚ್ಚು ದೊಡ್ಡ ರನ್ ಅಂತರದ ಗೆದ್ದ ತಂಡವಾಯಿತು. ರಾಜಸ್ಥಾನ್ ರಾಯಲ್ಸ್ ಪರ ಎಲ್ಲಾ ಕ್ರಮಾಂಕದಲ್ಲೂ ಬ್ಯಾಟರ್ ಸಂಪೂರ್ಣ ವಿಫಲವಾದರು.
ಆರಂಭಿಕರಾದ ವೈಭವ್ ಸೂರ್ಯವಂಶಿ ಇಂದು ಖಾತೆ ತೆರೆಯುವ ಮುನ್ನವೇ ದೀಪಕ್ ಚಾಹರ್ ಬೌಲಿಂಗ್ನಲ್ಲಿ ಔಟ್ ಆದರು. ಮತ್ತೊಬ್ಬ ಸ್ಫೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್ 2ನೇ ಓವರ್ನಲ್ಲಿ ಟ್ರೆಂಟ್ ಬೌಲ್ಡ್ ಬೌಲಿಂಗ್ನಲ್ಲಿ 2 ಸಿಕ್ಸರ್ ಸಿಡಿಸಿ ಅದೇ ಓವರ್ನಲ್ಲಿ ಕ್ಲೀನ್ ಬೌಲ್ಡ್ ಆದರು. ನಿತೀಶ್ ರಾಣಾ 9 ರನ್ಗಳಿಸಿ ಬೌಲ್ಟ್ಗೆ 2ನೇ ಬಲಿಯಾದರೆ, ಜಸ್ಪ್ರೀತ್ ಬುಮ್ರಾ ಎಸೆದ 5ನೇ ಓವರ್ನಲ್ಲಿ ಸತತ ಎರಡು ಎಸೆತಗಳಲ್ಲಿ ನಾಯಕ ರಿಯಾನ್ ಪರಾಗ್ (16) ಹಾಗೂ ಶಿಮ್ರಾನ್ ಹೆಟ್ಮೇಯರ್ (0) ವಿಕೆಟ್ ಪಡೆದು ರಾಜಸ್ಥಾನ್ ತಂಡ ಚೇತರಿಸಿಕೊಳ್ಳದಂತಹ ಆಘಾತ ನೀಡಿದರು.
ಟೂರ್ನಿಯಲ್ಲಿ ಬ್ಯಾಟಿಂಗ್ನಲ್ಲಿ ಸಂಪೂರ್ಣ ವಿಫಲರಾಗಿರುವ ಧ್ರುವ್ ಜುರೆಲ್ 11, ಶುಭಮ್ ದುಬೆ 15 ರನ್ಗಳಿಸಿದರು. ವೇಗದ ಬೌಲರ್ ಜೋಫ್ರಾ ಆರ್ಚರ್ 27 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ಗಳ ಸಹಿತ 30 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆದರು. ಮಹೀಶ್ ತೀಕ್ಷಣ , ಕುಮಾರ್ ಕಾರ್ತಿಕೇಯಾ ತಲಾ 2 ರನ್ಗಳಿಸಿದರೆ, ಆಕಾಶ್ ಮಧ್ವಲ್ ಅಜೇಯ 4ರನ್ಗಳಿಸಿದರು.
ಮಿಂಚಿದ ಮುಂಬೈ ಬೌಲರ್ಗಳು
ಮುಂಬೈ ಇಂಡಿಯನ್ಸ್ ಪರ ಟ್ರೆಂಟ್ ಬೌಲ್ಟ್ 28ಕ್ಕೆ3, ಕರಣ್ ಶರ್ಮಾ 23ಕ್ಕೆ3 ವಿಕೆಟ್, ಜಸ್ಪ್ರೀತ್ ಬುಮ್ರಾ 15ಕ್ಕೆ 2 ವಿಕೆಟ್ ಹಾಗೂ ಹಾರ್ದಿಕ್ ಪಾಂಡ್ಯ, ದೀಪಕ್ ಚಾಹರ್ ತಲಾ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮುಂಬೈ ಇಂಡಿಯನ್ಸ್ 11 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 14 ಅಂಕ ಹಾಗೂ +1.274 ನೆಟ್ ರನ್ರೇಟ್ನೊಂದಿಗೆ ಅಗ್ರಸ್ಥಾನಕ್ಕೇರಿದೆ. ಆರ್ಸಿಬಿ 14 ಅಂಕ ಹೊಂದಿದ್ದರು +0.521 ನೆಟ್ ರನ್ರೇಟ್ನೊಂದಿಗೆ 2ನೇ ಸ್ಥಾನಕ್ಕೆ ಇಳಿದಿದೆ.
ಮುಂಬೈ ಇಂಡಿಯನ್ಸ್ ಇನ್ನಿಂಗ್ಸ್
ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿತ್ತು. ರೋಹಿತ್ ಶರ್ಮಾ 36 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ 53, ರಯಾನ್ ರಿಕಲ್ಟನ್ 38 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ಗಳ ಸಹಿತ 61 ರನ್ಗಳಿಸಿ ಉತ್ತಮ ಆರಂಭ ನೀಡಿದರೆ, ಸೂರ್ಯಕುಮಾರ್ ಯಾದವ್ 23 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ಗಳ ಸಹಿತ ಅಜೇಯ 48 ರನ್ಗಳಿಸಿದರೆ, ನಾಯಕ ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 48 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾಗಿದ್ದರು.
May 01, 2025 11:11 PM IST