Jail: ಏಷ್ಯಾದ ದೊಡ್ಡ ಜೈಲು ನಿರ್ಮಾಣವಾಗುತ್ತಿದೆ ಈ ಜಿಲ್ಲೆಯಲ್ಲಿ, 2ನೇ ಹಂತದ ಕಾಮಗಾರಿ ಮಾತ್ರ ಬಾಕಿ! | Asia’s largest jail | ದಕ್ಷಿಣ ಕನ್ನಡ

Jail: ಏಷ್ಯಾದ ದೊಡ್ಡ ಜೈಲು ನಿರ್ಮಾಣವಾಗುತ್ತಿದೆ ಈ ಜಿಲ್ಲೆಯಲ್ಲಿ, 2ನೇ ಹಂತದ ಕಾಮಗಾರಿ ಮಾತ್ರ ಬಾಕಿ! | Asia’s largest jail | ದಕ್ಷಿಣ ಕನ್ನಡ

Last Updated:

ಮಂಗಳೂರು ಹೊರವಲಯದ ಮುಡಿಪುವಿನಲ್ಲಿ ಏಷ್ಯಾದ ದೊಡ್ಡ ಜೈಲು ನಿರ್ಮಾಣವಾಗುತ್ತಿದ್ದು, ಮೊದಲ ಹಂತದ 110 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣವಾಗಿದೆ.

+

ಇಲ್ಲಿ

ಇಲ್ಲಿ ವಿಡಿಯೋ ನೋಡಿ

ದಕ್ಷಿಣ ಕನ್ನಡ: ಮುಡಿಪುವಿನಲ್ಲಿ (Mudipu) ತಲೆ ಎತ್ತುತ್ತಿದೆ ಏಷ್ಯಾದ ದೊಡ್ಡ ಕಾರಾಗೃಹ (Jail), ಮೊದಲ ಹಂತದ ಕಾಮಗಾರಿ ಮುಕ್ತಾಯವಾಗಿದ್ದು, ಎರಡನೇ ಹಂತದ ಕಾಮಗಾರಿಗೆ ಅನುದಾನಕ್ಕಾಗಿ ಒತ್ತಾಯ ಹಾಕಲಾಗ್ತಿದೆ. ಹೌದು ಮಂಗಳೂರು (Mangaluru) ನಗರದ ಹೊರವಲಯದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ಕಾರಾಗೃಹಕ್ಕೆ ಎರಡನೇ ಹಂತದ ಕಾಮಗಾರಿ ಇದೀಗ ಸದ್ಯಕ್ಕೆ ನಿಂತಿದೆ. ಒಂದನೇ ಹಂತದ ಸುಮಾರು 110 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು ಕಾಮಗಾರಿಯೂ ಪೂರ್ಣಗೊಂಡಿದೆ. ಎರಡನೇ ಹಂತದ ಸುಮಾರು 195 ಕೋಟಿ ರೂಪಾಯಿ ಮೊತ್ತದ ಅಂದಾಜು ಪಟ್ಟಿಯನ್ನು ಸರಕಾರಕ್ಕೆ (Govt) ಈಗಾಗಲೇ ಸಲ್ಲಿಸಲಾಗಿದೆ.

ಏಷ್ಯಾದ ದೊಡ್ಡ ಕಾರಾಗೃಹ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರ್ನಾಡು, ಇರಾ ಮತ್ತು ಚೇಳೂರು ಗ್ರಾಮಗಳನ್ನೊಳಗೊಂಡ ಸುಮಾರು 100 ಎಕರೆ ಪ್ರದೇಶದಲ್ಲಿ ಏಷ್ಯಾದ ದೊಡ್ಡ ಕಾರಾಗೃಹ ನಿರ್ಮಾಣಗೊಳ್ಳುತ್ತಿದ್ದು, ಒಂದನೇ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಎರಡೇ ಹಂತದ ಕಾಮಗಾರಿ ಇನ್ನಷ್ಟೇ ಆರಂಭಗೊಳ್ಳಬೇಕಿದೆ.

110 ಕೋಟಿ ರೂಪಾಯಿ ಮೊತ್ತದಲ್ಲಿ ಕಾಮಗಾರಿ

ಮೊದಲ ಹಂತದಲ್ಲಿ ಲೋಕೋಪಯೋಗಿ ಇಲಾಖೆಯಿಂದ 110 ಕೋಟಿ ರೂಪಾಯಿ ಮೊತ್ತದಲ್ಲಿ ಕಾಮಗಾರಿ ನಡೆದಿದೆ. ಈಗಾಗಲೇ ಜೈಲಿನ ಆವರಣ ಗೋಡೆ ಹಾಗೂ ಬ್ಯಾರಕ್‍ಗಳ ಕಾಮಗಾರಿ ಪೂರ್ಣಗೊಂಡಿದೆ. ಈ ಕಾರಾಗೃಹದಲ್ಲಿ ಸಾವಿರಕ್ಕೂ ಮಿಕ್ಕಿದ ಕೈದಿಗಳನ್ನು ಇರಿಸಲು ಅವಕಾಶವಿದೆ. ಎರಡನೇ ಹಂತದಲ್ಲಿ 195 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಬ್ಬಂದಿಯ ವಸತಿಗೃಹ ನಿರ್ಮಾಣ ಬಾಕಿಯಿದ್ದು, ಸರಕಾರದ ಅನುದಾನಕ್ಕಾಗಿ ಕಾಯಲಾಗುತ್ತಿದೆ. ಈ ಬಗ್ಗೆ ಮಂಗಳೂರು ಶಾಸಕ, ಸ್ಪೀಕರ್ ಯು.ಟಿ.ಖಾದರ್ ಮತ್ತು ಎಂಎಲ್ಸಿ ಐವನ್ ಡಿಸೋಜಾ ಸರಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದಾರೆ.

ಬೆಳಗಾವಿಗೆ ಕಳಿಸುವ ಅನಿವಾರ್ಯತೆ

ಸದ್ಯ ಮಂಗಳೂರಿನ ಕೊಡಿಯಾಲ್‍ಬೈಲ್ ನಲ್ಲಿ ಕಾರ್ಯಾಚರಿಸುತ್ತಿರುವ ಜಿಲ್ಲಾ ಕಾರಾಗೃಹದಲ್ಲಿ 215 ಕೈದಿಗಳಿಗೆ ಮಾತ್ರ ಇರುವ ವ್ಯವಸ್ಥೆಯಿದ್ದು, ಸದ್ಯ ಈ ಜೈಲಿನಲ್ಲಿ 300 ಕ್ಕೂ ಮಿಕ್ಕಿದ ಕೈದಿಗಳಿದ್ದಾರೆ. ಕೇವಲ ವಿಚಾರಣಾಧೀನ ಕೈದಿಗಳನ್ನು ಮಾತ್ರ ಈ ಜೈಲಿನಲ್ಲಿ ಇರಿಸಿಕೊಳ್ಳಲಾಗುತ್ತಿದ್ದು, ಶಿಕ್ಷೆಗೊಳಗಾದ ಕೈದಿಗಳನ್ನು ಬೆಳಗಾವಿ ಅಥವಾ ಬೇರೆ ಜೈಲುಗಳಿಗೆ ಕಳುಹಿಸುವ ಅನಿವಾರ್ಯತೆಯಿದೆ.

ಇದನ್ನೂ ಓದಿ: Arecanut: ಅಡಿಕೆ ಬೆಳೆಗೆ ಕಾಡ್ತಿದೆ ಈ ಕೀಟ, ಬೆಳೆಗಾರರಿಗೆ ತಪ್ಪುತ್ತಿಲ್ಲ ಕಾಟ!

ಮುಡಿಪಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಜೈಲು ಕಾರ್ಯಾಚರಿಸಿದಲ್ಲಿ ಈ ಸಮಸ್ಯೆಗಳು ಇಲ್ಲದಂತಾಗಿ, ವಿಚಾರಣಾಧೀನ ಮತ್ತು ಶಿಕ್ಷೆಗೊಳಪಟ್ಟ ಕೈದಿಗಳನ್ನೂ ಒಂದು ಜೈಲಿನಲ್ಲಿ ಇಡಬಹುದಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸದ್ಯ ಮಂಗಳೂರು ನಗರದ ಮಧ್ಯೆ ಇರುವ ಜೈಲಿನಿಂದಾಗಿ ಸಾರ್ವಜನಿಕರಿಗೆ ಮೊಬೈಲ್ ನೆಟ್ವರ್ಕ್ ಸಮಸ್ಯೆಯೂ ಕಾಡುತ್ತಿದ್ದು, ಒಂದು ವೇಳೆ ಈ ಕಾರಾಗೃಹದ ಕಾಮಗಾರಿ ಮುಗಿದು, ಜೈಲು ಅಧಿಕೃತವಾಗಿ ತೆರೆದುಕೊಂಡಲ್ಲಿ, ಮಂಗಳೂರಿನ ಜನತೆಯ ನೆಟ್ವರ್ಕ್ ಸಮಸ್ಯೆಗೂ ಮುಕ್ತಿ ದೊರಕಲಿದೆ. ಆದರೆ ಸರಕಾರ ಅನುದಾನ ನೀಡುವಲ್ಲಿ ಕೊಂಚ ನಿಧಾನಗತಿಯನ್ನು ತೋರಿಸುತ್ತಿರುವುದು ಕಾಮಗಾರಿ ಮುಗಿಯಲು ಇನ್ನೂ ಹಲವು ವರ್ಷಗಳು ಕಾಯಬೇಕಾದ ಸ್ಥಿತಿಯಿದೆ.