Koragajja Daiva: ತುಳುನಾಡಿನ ಆರಾಧ್ಯ ದೈವ ಕೊರಗಜ್ಜ ಕ್ಷೇತ್ರದ ಎದುರು ರಾತ್ರಿ ಹೆಡ್ ಲೈಟ್ ಕೂಡಾ ಹಾಕುವಂತಿಲ್ಲ! ಯಾಕೆ ಗೊತ್ತಾ? | Kuttaru Koragajja Daiva famous for this reason in Dakshina Kannada

Koragajja Daiva: ತುಳುನಾಡಿನ ಆರಾಧ್ಯ ದೈವ ಕೊರಗಜ್ಜ ಕ್ಷೇತ್ರದ ಎದುರು ರಾತ್ರಿ ಹೆಡ್ ಲೈಟ್ ಕೂಡಾ ಹಾಕುವಂತಿಲ್ಲ! ಯಾಕೆ ಗೊತ್ತಾ? | Kuttaru Koragajja Daiva famous for this reason in Dakshina Kannada

ಕೊರಗಜ್ಜ ದೈವ ಯಾರು?

ಅಷ್ಟಕ್ಕೂ ಕೊರಗಜ್ಜ ದೈವ ಯಾರೆಂದು ಸಂಕ್ಷಿಪ್ತವಾಗಿ ನೋಡಿದ್ರೆ, ಕೊರಗಜ್ಜನೆಂದೇ ಜನರು ಪ್ರೀತಿಯಿಂದ ಆರಾಧಿಸುತ್ತಿರುವ ಈ ದೈವದ ಮೂಲ ಹೆಸರು ಕೊರಗ ತನಿಯ. ಏಳುಕೊಪ್ಪದ ಕೊರಗರೆಲ್ಲಾ ಮಾರಿ ರೋಗಕ್ಕೆ ಬಲಿಯಾಗಿ ಕೊರಗ ತನಿಯನೊಬ್ಬನೇ ಉಳಿಯುತ್ತಾನೆ. ತಿನ್ನಲು, ಉಡಲು, ಉಳಿದುಕೊಳ್ಳಲು ಏನೂ ಇಲ್ಲದೆ ನಿರಾಶ್ರಿತನಾದ ಕೊರಗ ತನಿಯ ದೇಶಾಂತರ ಹೋಗುವೆನೆಂದು ಊರುಬಿಟ್ಟ‌. ಇಂತಹ ಹುಡುಗನಿಗೆ ಆಶ್ರಯದಾತೆಯಾಗಿದ್ದು ಶೇಂದಿ ಮಾರುವ ಬೈರಕ್ಕೆ ಬೈದ್ಯೆತಿ. ಶೇಂದಿ ಮಾರಾಟ ಮಾಡುತ್ತಾ ಬರುವ ಈಕೆಯ ಕಣ್ಣಿಗೆ ಕಾಣಸಿಕ್ಕ ಕೊರಗ ತನಿಯನನ್ನು ಕನಿಕರದಿಂದ ಮನೆಗೆ ಕರೆದುಹೋಗುತ್ತಾಳೆ. ಅಲ್ಲಿ ಮನೆಗೆಲಸದವನಾಗಿ, ಮನೆ ಮಗನಾಗಿಯೇ ಬೆಳೆದ ಕೊರಗ ತನಿಯನಿಗೆ ಒಮ್ಮೆ ತನ್ನ ಸಾಕುತಾಯಿಯ ಮೂಲಸ್ಥಾನದ ಮರ್ಲ್ ಜುಮಾದಿ, ಮಾಡ ಮೈಸಂದಾಯ, ಕಿನ್ನಿಕೊಡಂಗೆದಾರು, ಪದವು ಲೆಕ್ಕೇಸಿರಿ ದೈವಗಳ ಆಯನಕ್ಕೆ ತಂಗಿನ ಎಳೆಗರಿ, ಸೀಯಾಳ ಹೊತ್ತುಕೊಂಡು ಹೋಗುವ ಅನಿವಾರ್ಯತೆ ಎದುರಾಯಿತು.

ಇದನ್ನೂ ಓದಿ: Antaragange Hills: ಮಲೆನಾಡಿನಂತಾಗಿದೆ ಕೋಲಾರದ ಅಂತರಗಂಗೆ ಬೆಟ್ಟ! ಪ್ರವಾಸಿಗರನ್ನು ಕೈಬೀಸಿ ಕರೀತಿದೆ

ಮೇಲ್ವರ್ಗದ ದೈವಗಳ ಕೆಂಗಣ್ಣಿಗೆ ಗುರಿ!

ಅಂದು ಏಳು ಜನ ಹೊರುವ ತಲೆಹೊರೆಯನ್ನು ಹೊತ್ತು ಹೋಗಿ ಮಾಡಕ್ಕೆ ಮುಟ್ಟಿಸಬಾರದು ಎಂದು ಹೇಳಿದ್ದಕ್ಕೆ ಒಳಗಡೆಗೆ ಎತ್ತಿ ಎಸೆದ. ಅಲ್ಲೇ ಕುಳಿತು ಮೇಲೆ ನೋಡಿದ ಅವನಿಗೆ ಕೈಪುರ ಹುಳಿ ಎಂಬ ಅಪೂರ್ವ ಕಾಯಿಗಳು ಬಲಿತಿರುವ ಮರ ಕಾಣಿಸಿತು. ತಾಯಿಗೆ ಹೇಳಿ ಅದರ ಉಪ್ಪಿನಕಾಯಿ ಮಾಡಿಸಬೇಕೆಂದು ಮರ ಹತ್ತಿ ಕೈಪುರ ಹುಳಿ ಕೊಯ್ಯಲಾರಂಭಿಸಿದ. ಕೈಪುರ ಹುಳಿ ಎಟಕುವುದಿಲ್ಲವೆಂದು ಮಾಡದ ಕಲಶಕ್ಕೆ ಒಂದು ಕಾಲನ್ನು ಇರಿಸಿ ಕೊಯ್ಯಲು ಮುಂದಾದ. ಇದರಿಂದ ಮೇಲುವರ್ಗದ ದೈವಗಳ ಕೆಂಗಣ್ಣಿಗೆ ಗುರಿಯಾದ ಕೊರಗ ತನಿಯ ಕಾಯಬಿಟ್ಟು ಮಾಯ ಸೇರಿದ.

ಕೊರಗಜ್ಜ ದೈವವಾಗಿ ಕಾರ್ಣಿಕ

ಹೀಗೆ ದೈವದ ಸೇರಿಗೆಯಲ್ಲಾದ ಕೊರಗ ತನಿಯನಿಗೆ ಕುತ್ತಾರು ಕ್ಷೇತ್ರದಲ್ಲಿ ನೆಲೆ ಕಲ್ಪಿಸಿ ಆರಾಧನೆಗೆ ಒಳಪಡಿಸಿದ್ದು ಪಂಜಂದಾಯ ದೈವ. ತನ್ನ ಕ್ಷೇತ್ರದಲ್ಲಿ ಅರಸು ದೈವಗಳು ಬಂದು ನೆಲೆಯೂರಿದೆ. ಅವುಗಳನ್ನು ಓಡಿಸಿದರೆ ನಿನಗೊಂದು ಸ್ಥಾನ ಕಲ್ಪಿಸಿಕೊಡುತ್ತೇನೆಂದು ಪಂಜಂದಾಯ ದೈವವು ಕೊರಗ ತನಿಯನಿಗೆ ವಾಗ್ದಾನ ಮಾಡುತ್ತದೆ. ಅದರಂತೆ ಕೊರಗ ತನಿಯನು ಮಾಯದ ಕಪಿಲೆ ದನವನ್ನು ಸೃಷ್ಟಿಸಿ, ಅದನ್ನು ಕೊಂದು ಅದರ ಕೆಚ್ಚಲನ್ನು ಕೈಯಲ್ಲಿ ಹಿಡಿದುಕೊಂಡು ಅದನ್ನು ಉದ್ಯಾವರದವರೆಗೆ ಓಡಿಸುತ್ತಾನೆ. ಹಾಗೆ ಕೊಟ್ಟ ವಾಗ್ದಾನದಂತೆ ಪಂಜಂದಾಯ ದೈವವು ಕುತ್ತಾರು ಕ್ಷೇತ್ರದಲ್ಲಿ ಕೊರಗ ತನಿಯನಿಗೆ ಆರಾಧನೆಗೆ ಅವಕಾಶ ಕೊಡುತ್ತಾನೆ. ಅಂದಿನಿಂದ ಕೊರಗ ತನಿಯನಾಗಿ, ಕೊರಗಜ್ಜನಾಗಿ, ಅಜ್ಜನಾಗಿ ನಂಬಿದ ಭಕ್ತರಿಗೆ ಇಂಬು ಕೊಡುವ ದೈವವಾಗಿ ಕೊರಗಜ್ಜ ದೈವವು ಕಾರ್ಣಿಕ ಮೆರೆಯುತ್ತಿದೆ.

ತುಳುವರ ಆರಾಧ್ಯ ದೈವ

ಇನ್ನು ಈ ದೈವದ ಕಾರ್ಣಿಕವನ್ನು ಗಮನಿಸುವುದಾದರೆ, ಕಳೆದುಹೋಗಿರುವ ಅಮೂಲ್ಯ ಸೊತ್ತುಗಳನ್ನು ಮರಳಿ ಪಡೆಯಲು ತುಳುವರು ಕೊರಗಜ್ಜನ ಮೊರೆಹೋಗುತ್ತಾರೆ. “ಓ ಅಜ್ಜಾ ನಮ್ಮ ಇಂತಿಂತಹ ವಸ್ತು ಕಳೆದುಹೋಗಿದೆ. ಮರಳಿ ನಮ್ಮ ಕೈಸೇರುವಂತೆ ಮಾಡು. ನಿನಗೆ ಕಳ್ಳು, ಚಕ್ಕುಲಿ, ಎಲೆ-ಅಡಿಕೆ ಇಡುತ್ತೇವೆ ಎಂದು ಹರಕೆ ಹೇಳುತ್ತಾರೆ. ಪವಾಡವೆಂಬಂತೆ ಆ ವಸ್ತುಗಳು ಹರಕೆ ಹೊತ್ತವರಿಗೆ ಮರಳಿ ಸಿಕ್ಕಿರುವ ಎಷ್ಟೋ ನಿದರ್ಶನ ತುಳುನಾಡಿನಲ್ಲಿದೆ. ಈಗಲೂ ಈ ಪವಾಡ ನಡೆಯುತ್ತಲೇ ಇದೆ. ಅಲ್ಲದೆ ಈ ದೈವಕ್ಕೆ ಅಗೇಲು ಇಡುವುದು ಕೂಡಾ ಇದೆ. ಗೆರಸೆಯಲ್ಲಿ ಅನ್ನ ಬಂಗುಡೆ ಮೀನು ಸಾರು, ಕೋಳಿ ಪದಾರ್ಥ, ಹುರುಳಿ-ಬಸಳೆ ಪದಾರ್ಥ, ಕಳ್ಳು ಅಥವಾ ಶೇಂದಿ, ಚಕ್ಕುಲಿ, ಎಲೆ-ಅಡಿಕೆ ಮನೆಯ ಹೊರಗಡೆ ಇಟ್ಟು ಸ್ವೀಕರಿಸು ಅಜ್ಜಾ ಎಂಬಂತೆ ಪ್ರಾರ್ಥಿಸುತ್ತಾರೆ. ಈ ಮೂಲಕ ತಾವು ಮನಸ್ಸಿನಲ್ಲಿ ಅಂದುಕೊಂಡ ಕಾರ್ಯವನ್ನು ಸಿದ್ಧಿಸಿರುವುದಕ್ಕೆ ದೈವಕ್ಕೆ ವಿನೀತವಾಗಿ ಹರಕೆ ಸಲ್ಲಿಸುತ್ತಾರೆ‌.

ಇದನ್ನೂ ಓದಿ: Digital System: ಪುತ್ತೂರು ವಿಭಾಗದ KSRTC ಬಸ್‌ಗಳಲ್ಲಿ ಕ್ಯಾಶ್‌ಲೆಸ್ ವ್ಯವಸ್ಥೆ!

ಮನದ ಇಷ್ಟಾರ್ಥ ಸಿದ್ಧಿಸುವ ಕೊರಗಜ್ಜ

ಇನ್ನು ಕೊರಗಜ್ಜನ ಆರಾಧನಾ ಕ್ಷೇತ್ರವಾಗಿ ಪ್ರಸಿದ್ಧಿ ಹೊಂದಿರುವ ಕುತ್ತಾರು ಕ್ಷೇತ್ರ ಇಡೀ ತುಳುನಾಡು ಮಾತ್ರವಲ್ಲದೆ, ತುಳುನಾಡಿನಾಚೆಯೂ ಪ್ರಸಿದ್ಧಿ ಹೊಂದಿದೆ. ಈ ಕ್ಷೇತ್ರ ಕೊರಗಜ್ಜನ ಕಟ್ಟೆ ಎಂಬಂತೆಯೇ ಪ್ರಸಿದ್ಧಿ ಹೊಂದಿದೆ. ತುಳುನಾಡಿನ ಎಲ್ಲಾ ಆಸ್ತಿಕರು ಈ ಕ್ಷೇತ್ರಕ್ಕೆ ಆಗಮಿಸಿ ಅಜ್ಜನಿಗೆ ಎಲೆ-ಅಡಿಕೆ, ಚಕ್ಕುಲಿ, ಕಳ್ಳು ಇಟ್ಟು ಭಕ್ತಿಯಿಂದ ಪ್ರಾರ್ಥಿಸಿ ನಡೆದುಕೊಳ್ಳುತ್ತಾರೆ‌‌. ತಮ್ಮ ಮನದ ಇಷ್ಟಾರ್ಥವನ್ನು ಸಿದ್ಧಿಸು ಎಂದು ಪ್ರಾರ್ಥಿಸುತ್ತಾರೆ.

ಈ ಕ್ಷೇತ್ರದಲ್ಲಿ ರಾತ್ರಿ ಹೆಡ್‌ಲೈಟ್ ಕೂಡ ಹಾಕುವಂತಿಲ್ಲ

ಹಿಂದಿನಿಂದ ಬಂದ ನಿಯಮದಂತೆ ಸಂಜೆ ಏಳುಗಂಟೆ ಬಳಿಕ ಮಹಿಳೆಯರು ಯಾರೂ ಕುತ್ತಾರು ಕ್ಷೇತ್ರದಲ್ಲಿ ಇರುವಂತಿಲ್ಲ‌. ಕೊರಗಜ್ಜನ ಕೋಲ ನಡೆಯುವ ವೇಳೆಯೂ ಮಹಿಳೆಯರು ಇರುವಂತಿಲ್ಲ. ಕತ್ತಲೆಯಲ್ಲಿ ತೆಂಬರೆ ನಾದದಲ್ಲಿ ಇಲ್ಲಿ ಕೊರಗಜ್ಜನಿಗೆ ಕೋಲ ನಡೆಯುತ್ತದೆ. ರಾತ್ರಿ ಈ ಕ್ಷೇತ್ರದಲ್ಲಿ ಲೈಟ್ ಉರಿಸುವಂತಿಲ್ಲ.ಕೊರಗಜ್ಜನಿಗೆ ಕೋಲ ಸೇವೆ ನಡೆಯೋದು ಕೂಡಾ ದೀವಿಟಿಗೆಯ ಮಂದಬೆಳಕಿನಲ್ಲಿ.ಸಂಜೆ ಆರು ಗಂಟೆಯಿಂದ ಈ ಕ್ಷೇತ್ರದ ಒಳಭಾಗಕ್ಕೆ ಮಹಿಳೆಯರು ಯಾರೂ ಹೋಗುವಂತಿಲ್ಲ.ಅಲ್ಲದೇ ಕ್ಷೇತ್ರದ ಹೊರಭಾಗದ ರಸ್ತೆಯಲ್ಲಿ ತೆರಳುವ ವಾಹನ ಸವಾರರೂ ವಾಹನದ ಹೆಡ್ ಲೈಟ್ ಆಫ್ ಮಾಡಿ ತೆರಳುತ್ತಾರೆ.ರಾತ್ರಿಯ ಹೊತ್ತು ದಟ್ಟ ಕತ್ತಲಿನಲ್ಲಿ ನಿಗೂಢ ಮೌನ ಆವರಿಸುತ್ತದೆ.ಕುತ್ತಾರು ಕ್ಷೇತ್ರದಲ್ಲಿ ಕಲ್ಲಿನಲ್ಲಿ ನೆಲೆನಿಂತ ಅಜ್ಜನಿಗೆ ಭಕ್ತರು ಈ ಮೂಲಕ ನಮನ ಸಲ್ಲಿಸುತ್ತಾರೆ.

ಸೆಲೆಬ್ರಿಟಿಗಳು & ಕ್ರಿಕೆಟ್‌ ತಾರೆಗಳೂ ಭೇಟಿ

ಇತ್ತೀಚೆಗೆ ಸಿನಿಮಾ ತಾರೆಯರು, ಬಾಲಿವುಡ್ ನಟ-ನಟಿಯರು, ಕ್ರಿಕೆಟ್ ತಾರೆಯರೂ ಕೊರಗಜ್ಜನ ಕ್ಷೇತ್ರಕ್ಕೆ ಆಗಮಿಸುವುದು ಈ ಕ್ಷೇತ್ರದ ಪ್ರಸಿದ್ಧಿಗೆ ಸಾಕ್ಷಿ. ತಾವೇನೇ ಮನಸಂಕಲ್ಪ ಮಾಡಿದರೂ ಅದನ್ನು ಕ್ಷಿಪ್ರವಾಗಿ ಸಿದ್ಧಿಸುವ ದೈವವಾದ್ದರಿಂದಲೇ ಜನಸಾಮಾನ್ಯರಲ್ಲದೆ, ಸಿನಿಮಾ ನಟ-ನಟಿಯರನ್ನು ಈ ಕ್ಷೇತ್ರ ಆಕರ್ಷಿಸುತ್ತಿದೆ. ಕೊರಗಜ್ಜನ ಬಗ್ಗೆ ಜನರ ನಂಬಿಕೆಯೂ ಅಷ್ಟೇ ದೃಢವಾಗಿದೆ.

ಒಟ್ಟಿನಲ್ಲಿ ಕರಾವಳಿ ಭಾಗದಲ್ಲಿ ಪ್ರಸಿದ್ದಿ ಪಡೆದಿದ್ದ ಕೊರಗಜ್ಜ ದೈವ ತಮ್ಮ ಕಾರಣೀಕದಿಂದ ಇದೀಗ ದೇಶ ವಿದೇಶಗಳಿಂದ ಜನರು ಕುತ್ತಾರು ಕ್ಷೇತ್ರಕ್ಕೆ ಬಂದು ತಮ್ಮ ಕಷ್ಟಗಳನ್ನು ಅಜ್ಜನಲ್ಲಿ ಹೇಳಿಕೊಳ್ಳುತ್ತಾರೆ. ಬಳಿಕ ಹರಕೆಯನ್ನು ಸಲ್ಲಿಸಿ ಇಷ್ಟಾರ್ಥವನ್ನು ಈಡೇರಿಸಿಕೊಳ್ಳುತ್ತಿದ್ದಾರೆ.

ಮಾರ್ಗಸೂಚಿ:

ಮಂಗಳೂರಿನಿಂದ ಮುಡಿಪು ಮಾರ್ಗದಲ್ಲಿ 10 ಕಿ.ಮೀ ಸಾಗಿದಾಗ ಕುತ್ತಾರು ಪೇಟೆ ಸಿಗಲಿದೆ.. ಪೇಟೆ ಬಳಿಕ 500ಮೀ ಎಡಕ್ಕೆ ಸಾಗಿದರೆ ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ತಲುಪಬಹುದು.

Disclaimer

ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.