Last Updated:
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರೆ ಕೊಪ್ಪರಿಗೆ ಇಳಿಯುವುದರೊಂದಿಗೆ ಮುಕ್ತಾಯವಾಯಿತು, ಯಶಸ್ವಿ ಆನೆ ನೀರಾಟ ಕಾರ್ಯಕ್ರಮದ ಹೈಲೈಟ್ ಆಗಿತ್ತು.
ದಕ್ಷಿಣ ಕನ್ನಡ: ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ (God) ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ (Festival) ಮಂಗಳವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಮಾಪ್ತಿಗೊಂಡಿತು. ರಾತ್ರಿ ನೀರಿನಲ್ಲಿ ಬಂಡಿ ಉತ್ಸವ ಜರುಗಿತು.
ಮಂಗಳವಾರ ಮುಂಜಾನೆ ಶ್ರೀ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವೈದಿಕ ವಿಧಾನ ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವ ಶಿಷ್ಟ ಸಂಪ್ರದಾಯದ ಪ್ರಕಾರ ಇಳಿಸಲಾಯಿತು. ಎಲ್ಲಾ ದೇವಾಲಯಗಳಲ್ಲಿ ಕೊಡಿ ಏರಿ ಜಾತ್ರೆ ಆರಂಭವಾದರೆ ಕುಕ್ಕೆ ಕ್ಷೇತ್ರದಲ್ಲಿ ಕೊಪ್ಪರಿಗೆ ಏರುವುದರ ಮೂಲಕ ಜಾತ್ರೆ ಆರಂಭವಾಗಿತ್ತು. ಮಂಗಳವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೆ ಸಮಾಪ್ತಿಯಾಯಿತು. ಈ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಶ್ರೀ ದೇವರ ಕೊಪ್ಪರಿಗೆ ಅನ್ನದ ಭೋಜನ ಪ್ರಸಾದ ಸ್ವೀಕರಿಸಿದರು.
ಉತ್ಸವದ ನಿಮಿತ್ತ ಶ್ರೀ ದೇವಳದ ಹೊರಾಂಗಣದ ಸುತ್ತಲೂ ನೀರನ್ನು ಮಧ್ಯಾಹ್ನದ ನಂತರ ತುಂಬಿಸಲಾಗಿತ್ತು. ರಾತ್ರಿ ಮಹಾಪೂಜೆಯ ಬಳಿಕ ನೀರಿನಲ್ಲಿ ಶ್ರೀ ದೇವರ ದೀಪಾರಾಧನೆಯುಕ್ತ ಪಾಲಕಿ ಉತ್ಸವ ಆರಂಭವಾಯಿತು. ನಂತರ ನೀರಿನಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನಡೆಯಿತು. ಬಳಿಕ ವಿವಿಧ ಸಂಗೀತ ಸುತ್ತುಗಳ ಪಾಲಕಿ ಉತ್ಸವ ನೀರಿನಲ್ಲಿ ನಡೆಯಿತು. ಈ ಉತ್ಸವದೊಂದಿಗೆ ಚಂಪಾಷಷ್ಠಿ ಉತ್ಸವಗಳು ಸಮಾಪ್ತಿಯಾಯಿತು.
ಮಂಗಳವಾರ ಬೆಳಗ್ಗೆ ಸುಮುಹೂರ್ತದಲ್ಲಿ ಕೊಪ್ಪರಿಗೆ ಇಳಿಯಿತು. ಆ ಬಳಿಕ ದೇವಳದಲ್ಲಿ ಮಹಾ ಸಂಪ್ರೋಕ್ಷಣಾ ಹೋಮವು ನೆರವೇರಿತು. ಶ್ರೀ ದೇಗುಲದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ವೈದಿಕ ವಿಧಿವಿಧಾನ ನೆರವೇರಿಸಿದರು.
ಯಶಸ್ವಿನಿಯ ನೀರಾಟವೇ ಕಾರ್ಯಕ್ರಮದ ಹೈಲೈಟ್
ಶ್ರೀ ದೇಗುಲ ಆನೆ ಯಶಸ್ವಿಯು ಹೊರಾಂಗಣದಲ್ಲಿ ನೀರು ತುಂಬಿಸಿದುದರಿಂದ ಹೆಚ್ಚಿನ ಸಂಭ್ರಮವನ್ನು ಪಟ್ಟಿತು. ನೀರಿನಲ್ಲಿ ಹೊರಳಾಡಿ ಸಂತೋಷ ಪಡುವುದರೊಂದಿಗೆ, ತನಗೆ ನೀರು ಹಾರಿಸಿದ ಪುಟಾಣಿ ಮಕ್ಕಳ ಮೇಲೆ ತನ್ನ ಕಾಲು ಹಾಗೂ ಸೊಂಡಿಲಿನಿಂದ ನೀರು ಎರಚಿ, ಮಕ್ಕಳೊಂದಿಗೆ ನೀರಾಟವಾಡಿ, ತಾನು ಸಂಭ್ರಮ ಪಡುವುದರೊಂದಿಗೆ, ಭಕ್ತಾಧಿಗಳಿಗೂ ಹೆಚ್ಚಿನ ಸಂತಸವನ್ನು ನೀಡಿತು. ಅಲ್ಲದೆ ನೀರಿನಲ್ಲಿ ಪುಟಾಣಿ ಮಕ್ಕಳು ಒದ್ದೆಯಾಗಿ ಆಟವಾಡುತ್ತಿದ್ದರು.
Dakshina Kannada,Karnataka
December 04, 2025 6:08 PM IST