Mahalingeshwara Temple: ಈ ಕ್ಷೇತ್ರದ ವ್ಯಾಪ್ತಿಗೆ ಆನೆ ಬರುವಂತಿಲ್ಲ! ಈ ನಂಬಿಕೆಯ ಹಿಂದಿದೆ ಬಲು ರೋಚಕ ಕಥೆ

Mahalingeshwara Temple: ಈ ಕ್ಷೇತ್ರದ ವ್ಯಾಪ್ತಿಗೆ ಆನೆ ಬರುವಂತಿಲ್ಲ! ಈ ನಂಬಿಕೆಯ ಹಿಂದಿದೆ ಬಲು ರೋಚಕ ಕಥೆ

Last Updated:

ಶಿವಲಿಂಗಕ್ಕೆ ಕಟ್ಟಿದಂತಹ ಸರಪಳಿಯನ್ನು ಎಳೆಯುವ ಭರದಲ್ಲಿ ಆನೆಯು ಛಿದ್ರ ಛಿದ್ರವಾಗಿ ಒಂದೊಂದು ಕಡೆಗೆ ಎಸೆಯಲ್ಪಟ್ಟರೆ, ಶಿವಲಿಂಗ ಮಾತ್ರ ಆ ಸ್ಥಳದಿಂದ ಸ್ಪಲ್ಪವೂ ಮೇಲೇಳಲೇ ಇಲ್ಲವಂತೆ.

X

ವಿಡಿಯೋ ಇಲ್ಲಿ ನೋಡಿ

ದಕ್ಷಿಣ ಕನ್ನಡ: ಸಾಮಾನ್ಯವಾಗಿ ಎಲ್ಲಾ ದೊಡ್ಡ ದೇವಸ್ಥಾನಗಳಲ್ಲಿ ಆನೆಗಳನ್ನು(Elephant) ಸಾಕಲಾಗುತ್ತದೆ. ದೇವರ ದರ್ಶನ, ಉತ್ಸವ ಮೊದಲಾದ ಸಂದರ್ಭದಲ್ಲಿ ಈ ಆನೆಗಳನ್ನು ಉಪಯೋಗಿಸಿಕೊಳ್ಳಲಾಗುತ್ತದೆ. ಆದರೆ ದಕ್ಷಿಣಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ(Mahalingeshwara Temple) ಆಸುಪಾಸಿಗೂ ಆನೆ ಬರುವಂತಿಲ್ಲ. ಈ ಕ್ಷೇತ್ರದ ಸುತ್ತಮುತ್ತ ಆನೆ ಬರುವಂತಿಲ್ಲ. ಹಾಗಾದ್ರೆ ಈ ಕ್ಷೇತ್ರಕ್ಕೆ ಆನೆ ನಿಶಿದ್ಧವಾಗಲು ಕಾರಣವಾದ ರೋಚಕ ಕಥೆ ಏನು ಅಂತೀರಾ? ಇಲ್ಲಿದೆ ನೋಡಿ.

ದಕ್ಷಿಣಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ಧವಾದ ದೇವಸ್ಥಾನಗಳಲ್ಲಿ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನವೂ ಒಂದು. ಈ ಕ್ಷೇತ್ರಕ್ಕೆ ಸುಮಾರು 1200 ವರ್ಷಗಳ ಇತಿಹಾಸವಿದೆ ಎನ್ನುವುದನ್ನು ಇಲ್ಲಿ ದೊರಕಿರುವ ಶಾಸನಗಳು ಹೇಳುತ್ತವೆ. ಆದರೂ ಈ ದೇವಸ್ಥಾನಕ್ಕೆ ಸಂಬಂಧಪಟ್ಟ ಹಲವು ಕಥೆಗಳು ಈ ದೇವಸ್ಥಾನಕ್ಕೆ ಪೌರಾಣಿಕವಾದ ಸಂಬಂಧವನ್ನು ಬೆಸೆಯುತ್ತವೆ. ಹಿಂದೆ ಕಾಶಿಯಿಂದ ಬಂದಂತಹ ವಿಪ್ರರೊಬ್ಬರು ತನ್ನೊಂದಿಗೆ ತಂದಿದ್ದಂತಹ ಶಿವಲಿಂಗವನ್ನು ಇದೇ ಸ್ಥಳದಲ್ಲಿ ಇರಿಸಿದ್ದರಂತೆ. ಬಳಿಕ ಶಿವಲಿಂಗವನ್ನು ಎತ್ತಿ ತನ್ನೊಂದಿಗೆ ಕೊಂಡೊಯ್ಯುವ ಪ್ರಯತ್ನ ಮಾಡಿದ ವಿಪ್ರನಿಗೆ ಲಿಂಗವನ್ನು ಅಲ್ಲಿಂದ ಎಷ್ಟೇ ಸಾಹಸಪಟ್ಟವೂ ಎತ್ತಲು ಸಾಧ್ಯವಾಗಲಿಲ್ಲವಂತೆ. ಬಳಿಕ ವಿಪ್ರ ಈ ಪ್ರದೇಶವನ್ನು ಆಳುತ್ತಿದ್ದ ಬಂಗ ರಾಜನಲ್ಲಿಗೆ ತೆರಳಿ ತನ್ನ ಅಸಹಾಯಕತೆಯನ್ನು ತೋಡಿಕೊಳ್ಳುತ್ತಾನಂತೆ. ಆ ಸಂದರ್ಭದಲ್ಲಿ ವಿಪ್ರನ ಸಹಾಯಕ್ಕೆ ಬಂದ ರಾಜ, ತನ್ನ ಪಟ್ಟದ ಆನೆಯನ್ನು ಕಳುಹಿಸಿ ಶಿವಲಿಂಗವನ್ನು ಎತ್ತಲು ತನ್ನ ಆಳುಗಳಿಗೆ ಸೂಚಿಸುತ್ತಾನಂತೆ. ಅದೇ ಪ್ರಕಾರ ಆನೆಯೊಂದಿಗೆ ಬಂದಂತಹ ರಾಜನ ಆಳುಗಳು ಶಿವಲಿಂಗಕ್ಕೆ ಸರಪಳಿಯನ್ನು ಬಿಗಿದು ಆನೆಯ ಮೂಲಕ ಅದನ್ನು ಎಳೆಯುವಂತಹ ಪ್ರಯತ್ನವನ್ನು ನಡೆಸುತ್ತಾರೆ. ಶಿವಲಿಂಗಕ್ಕೆ ಕಟ್ಟಿದಂತಹ ಸರಪಳಿಯನ್ನು ಎಳೆಯುವ ಭರದಲ್ಲಿ ಆನೆಯು ಛಿದ್ರ ಛಿದ್ರವಾಗಿ ಒಂದೊಂದು ಕಡೆಗೆ ಎಸೆಯಲ್ಪಟ್ಟರೆ, ಶಿವಲಿಂಗ ಮಾತ್ರ ಆ ಸ್ಥಳದಿಂದ ಸ್ಪಲ್ಪವೂ ಮೇಲೇಳಲೇ ಇಲ್ಲವಂತೆ. ಈ ಆಶ್ಚರ್ಯವನ್ನು ಅರಿತ ರಾಜ ಶಿವಲಿಂಗವಿರುವ ಸ್ಥಳದಲ್ಲಿಯೇ ಈಗಿರುವಂತಹ ದೇವಸ್ಥಾನವನ್ನು ಕಟ್ಟಿಸಿ ಪೂಜಿಸಲು ಆರಂಭಿಸಿದ ಎನ್ನುವುದು ದೇವಸ್ಥಾನದ ಇತಿಹಾಸದಿಂದ ತಿಳಿದುಬರುವ ಸಂಗತಿಯಾಗಿದೆ.

ಆನೆಯು ಶಿವಲಿಂಗವನ್ನು ಎತ್ತಿ ಛಿದ್ರ ಛಿದ್ರವಾಗಿ ಎಸೆಯಲ್ಪಟ್ಟ ಸ್ಥಳಗಳು ಇಂದಿಗೂ ಈ ದೇವಸ್ಥಾನದ ಆಸುಪಾಸಿನಲ್ಲಿರುವುದು ಈ ಕಥೆಯನ್ನು ಸಾಬೀತುಪಡಿಸುತ್ತವೆ. ಆನೆಯ ಕೊಂಬು ಬಿದ್ದ ಸ್ಥಳವು ಇದೀಗ ಕೊಂಬೆಟ್ಟು , ಬಾಲ ಬಿದ್ದ ಸ್ಥಳ ಬಲ್ನಾಡು, ತಲೆ ಬಿದ್ದ ಸ್ಥಳ ತಾಳೆಪ್ಪಾಡಿ, ಕಾಲು ಬಿದ್ದ ಸ್ಥಳ ಕಾರ್ಜಾಲು, ಮೊಣಗಂಟು ಬಿದ್ದ ಸ್ಥಳ ಮೊಟ್ಟೆತ್ತಡ್ಕ, ಬೆನ್ನು ಬಿದ್ದ ಸ್ಥಳ ಬೀದಿಮಜಲು, ಕೈ ಬಿದ್ದ ಸ್ಥಳ ಕೈಪಂಗಳ ಹೀಗೆ ಹಲವು ಹೆಸರುಗಳು ಆನೆಯ ದೇಹದ ವಿವಿಧ ಭಾಗಗಳಿಗೆ ಸಂಬಂಧಪಟ್ಟಂತಹುದೇ ಆಗಿವೆ. ಅಲ್ಲದೇ ಅಂದಿನಿಂದ ಈ ದೇವಸ್ಥಾನದ ಆಸುಪಾಸಿಗೆ ಆನೆಗಳು ಬರಬಾರದೆಂಬ ಸಂಪ್ರದಾಯವು ಪ್ರಸ್ತುತ ಇಂದಿಗೂ ಚಾಲ್ತಿಯಲ್ಲಿದೆ. ದೇವಸ್ಥಾನದ ಗದ್ದೆಯಲ್ಲಿ ಹಲವು ಸರ್ಕಸ್ ಕಂಪನಿಗಳು ಬಂದು ತಮ್ಮ ಪ್ರದರ್ಶನವನ್ನು ನೀಡುವ ಸಂದರ್ಭದಲ್ಲಿ ಆನೆಯನ್ನು ಮಾತ್ರ ಪ್ರದರ್ಶನದಿಂದ ದೂರವೇ ಇರಿಸುವಂತಹ ವ್ಯವಸ್ಥೆ ಇಂದಿಗೂ ನಡೆದುಕೊಂಡು ಬಂದಿದೆ. ಇತ್ತೀಚೆಗೆ ಕೆಲವು ವರ್ಷಗಳ ಹಿಂದೆ ಪುತ್ತೂರು ನಗರದ ಮಧ್ಯೆ ಆನೆಯೊಂದನ್ನು ಸುಳ್ಯ ಭಾಗಕ್ಕೆ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಏಳ್ಮುಡಿ ಎಂಬಲ್ಲಿ ಆನೆಯಿದ್ದ ಲಾರಿಯನ್ನು ನಿಲ್ಲಿಸಲಾಗಿತ್ತು. ಆ ಬಳಿಕ ಆನೆ ಅಲ್ಲೇ ತನ್ನ ಅವಾಂತರವನ್ನು ಆರಂಭಿಸಿತ್ತು. ಬಳಿಕ ಆನೆ ಅದರ ಮಾಹುತನನ್ನೇ ಕೊಂದು ಹಾಕಿತ್ತು.

ಇನ್ನು, ಇಲ್ಲಿ ನೆಲೆ ನಿಂತಂತಹ ಶಿವಲಿಂಗಕ್ಕೆ ರಾಜರು ದೇವಸ್ಥಾನವನ್ನು ಕಟ್ಟಿಸಿ ಪೂಜಿಸಿಕೊಂಡು ಬಂದಿದ್ದಾರೆ. ಇಂತಹ ರಾಜರಿಗೆ ಮರ್ಯಾದೆಯನ್ನು ನೀಡುವ ಕಾರ್ಯವು ದೇವಸ್ಥಾನದಲ್ಲಿ ನಡೆಯುವ ವಿಶೇಷ ಸೇವಾ ಸಂದರ್ಭದಲ್ಲಿ ನಡೆದುಕೊಂಡು ಬರುತ್ತಿದೆ. ಜೀಟಿಗೆ ಸಲಾಂ ಎನ್ನುವ ಮರ್ಯಾದೆಯ ಮೂಲಕ ರಾಜರನ್ನು ನೆನೆಯುವ ಕಾರ್ಯವೂ ಇಲ್ಲಿ ನಡೆಯುತ್ತದೆ.

Disclaimer

ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.