Last Updated:
ದಕ್ಷಿಣ ಕನ್ನಡ: ಕರಾವಳಿಯಲ್ಲಿ ಮಳೆಗಾಲ ಆರಂಭವಾಗಿದೆ. ಮೇ 24ರ ಪತ್ತನಾಜೆ ದಿನದಂದು ಧರ್ಮಸ್ಥಳದಲ್ಲಿ ವಿಶೇಷ ಉತ್ಸವ, ಯಕ್ಷಗಾನ ಮೇಳಗಳ ಸಮಾಪ್ತಿ, ಮತ್ತು ದೈವ ದೇವರ ಸೇವೆಗಳು ನಡೆಯುತ್ತವೆ.
ದಕ್ಷಿಣ ಕನ್ನಡ: ಕರಾವಳಿಯಲ್ಲಿ ಮಳೆಗಾಲ(Rainy Season) ಆರಂಭವಾಗಿದೆ. ತುಳುನಾಡು ಕ್ಯಾಲೆಂಡರ್ ತಿಂಗಳಲ್ಲಿ ವೃಷಭ ಮಾಸದ ಹತ್ತನೇ ದಿನ ತುಳು ಆಡು ಮಾತಿನಲ್ಲಿ ಪತ್ತನಾಜೆ ಎಂದು ಪ್ರತೀತಿ. ಈ ಪತ್ತನಾಜೆ ದೈವ ದೇವರ ಉತ್ಸವಗಳಿಗೆ ಕೊನೆಯ ದಿನ. ಮಳೆಗಾಲದಲ್ಲಿ ಹೊರಾಂಗಣ ಸೇವೆಗಳು ತುಳುನಾಡಿನಲ್ಲಿ ನಡೆಯೋದಿಲ್ಲ. ಮೇ 24ರ ಪತ್ತನಾಜೆ ದಿನ ಹಿಂದೂ ಧಾರ್ಮಿಕ ದೈವ, ದೇವಸ್ಥಾನಗಳಲ್ಲಿ ವಿಶೇಷ ಉತ್ಸವ, ಸೇವೆಗಳು, ನೇಮಗಳು ನಡೆದು ದೇವರು ಗುಡಿಯ ಒಳಗಾಗುವ ವರ್ಷದ ಮಹಾ ಪರ್ವ ದಿನ. ಅಂದಿನಿಂದ ಕಾರ್ತಿಕ ಮಾಸದ ದೀಪಾವಳಿಯವರೆಗೆ ದೈವಸ್ಥಾನ, ದೇವಸ್ಥಾನಗಳಲ್ಲಿ ಯಾವುದೇ ಜಾತ್ರೆ, ವಿಶೇಷ ಉತ್ಸವಗಳು, ಸೇವೆಗಳು, ನೇಮಗಳು ನಡೆಯೋದಿಲ್ಲ. ಅಂದಿನಿಂದ ಮಳೆಗಾಲದ ಕೃಷಿ ಕಾರ್ಯಗಳು ಆರಂಭಗೊಳ್ಳುತ್ತದೆ. ಯಕ್ಷಗಾನ ತಿರುಗಾಟದ ಮೇಳಗಳು ಪ್ರದರ್ಶನ ಮುಕ್ತಾಯಗೊಳಿಸಿ ಕಲಾವಿದರು ಗೆಜ್ಜೆ ಕಳಚಿಡುವ ಸುದಿನ.
ಪತ್ತನಾಜೆಯಂದು ಯಕ್ಷಗಾನ ಮೇಳಗಳ ವಾರ್ಷಿಕ ತಿರುಗಾಟ ಸಮಾಪ್ತಿಗೊಳ್ಳುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಪ್ರಸಕ್ತ ಸಾಲಿನ ತಿರುಗಾಟ ಕೊನೆಗೊಂಡು ಮೇಳದ ಶ್ರೀ ಮಹಾಗಣಪತಿ ದೇವರನ್ನು ವೈಭವದ ಮೆರವಣಿಗೆಯಲ್ಲಿ ಪತ್ತನಾಜೆಯಂದು ಸಂಜೆ ಕ್ಷೇತ್ರಕ್ಕೆ ಸಕಲ ಬಿರುದಾವಳಿಗಳೊಂದಿಗೆ ಬರ ಮಾಡಿಕೊಳ್ಳಲಾಗುತ್ತದೆ. ಇದೇ ರೀತಿ ಇತರ ಮೇಳಗಾಲದ ಕಟೀಲು, ಬಪ್ಪನಾಡು, ಪಾವಂಜೆ, ಹನುಮಗಿರಿ ಸೇರಿದಂತೆ ಇನ್ನುಳಿದ ಮೇಳಗಳು ತಮ್ಮಯಕ್ಷಗಾನ ಬಯಲಾಟದ ತಿರುಗಾಟವನ್ನು ಕೊನೆಗೊಳಿಸುತ್ತದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲೂ ಶ್ರೀ ಮಂಜುನಾಥ ಸ್ವಾಮಿಗೆ ಉತ್ಸವ ಬಲಿ ಸಮಾಪನಗೊಳ್ಳಲಿದೆ. ಅಂದು ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ವಿಶೇಷ ರಂಗ ಪೂಜೆ, ಉತ್ಸವ ಬಲಿ, ವಸಂತ ಪೂಜೆ ನಡೆದು ಧ್ವಜ ಮರ ಇಳಿಸುವ ವಿಧಿವಿಧಾನಗಳು ನಡೆದು ದೇವದ ಉತ್ಸವ ಮೂರ್ತಿ ಗರ್ಭ ಗುಡಿಯನ್ನು ಸೇರುತ್ತದೆ.
ಅಂದಿನಿಂದ ನಿತ್ಯ ಪೂಜೆ, ಸೇವೆಗಳ ಹೊರತಾಗಿ ಯಾವುದೇ ವಿಶೇಷ ಸೇವೆ, ಉತ್ಸವಗಳು ನಡೆಯೋದಿಲ್ಲ. ಬಹುತೇಕ ಎಲ್ಲಾ ಧಾರ್ಮಿಕ ದೇವಾಲಯಗಳಲ್ಲಿ ಪತ್ತನಾಜೆಯಂದು ದೇವರು ಗರ್ಭ ಗುಡಿ ಸೇರೋದು ವಾಡಿಕೆ. ದೈವಗಳಿಗೆ ವಾರ್ಷಿಕ ನೇಮ, ಭೋಗಾದಿಗಳು ನಡೆಯುತ್ತವೆ.
Dakshina Kannada,Karnataka