Last Updated:
2019ರಲ್ಲಿ ಈ ಮಾನ್ಕೌನ್ಸಿ ತಳಿಯನ್ನು ತಂದು ಅಭಿವೃದ್ಧಿಪಡಿಸಿದ್ದು, ಈ ಬಾರಿ ಮರ ಫಲಬಿಟ್ಟಿದೆ. ಹೊಸ ಫಲ ಮತ್ತು ಗ್ರೋಬ್ಯಾಗ್ನಲ್ಲಿರುವುದರಿಂದ ಮರದಲ್ಲಿ ಬರೀ ಮೂರು ಮಾವುಗಳು ಮಾತ್ರ ಬಿಟ್ಟಿದೆ.
ದಕ್ಷಿಣ ಕನ್ನಡ: ಮಂಗಳೂರು ನಗರದಲ್ಲಿ(Mangaluru City) ಮಾವಿನ ಹಣ್ಣಿನ ಮರಗಳಿಗೇನು(Mango Trees) ಬರವಿಲ್ಲ. ಕಾಡುಮಾವುಗಳಿಂದ ಹಿಡಿದು ಥರೇಹವಾರಿ ಮಾವು ಗಿಡಗಳು ಇಲ್ಲಿ ಕಾಣಸಿಗುತ್ತವೆ. ಆದರೆ ಮಂಗಳೂರಿನಲ್ಲೋರ್ವರು ಥೈಲ್ಯಾಂಡ್ ದೇಶದ(Thailand Country) ವಿವಿಧ ತಳಿಗಳ ಮಾವು ಗಿಡಗಳನ್ನು ಬೆಳೆದು ಹೊಸ ಫಲಗಳನ್ನು ಸವಿದಿದ್ದಾರೆ.
ಹೌದು… ಹವ್ಯಾಸಿಯಾಗಿ ನರ್ಸರಿ ಮಾಡಿ ಸೈ ಎನಿಸಿರುವ ಸರ್ವೇಶ್ ರಾವ್ ಥೈಲ್ಯಾಂಡ್ ತಳಿಯ ಮಾವುಗಳನ್ನು ಬೆಳೆದವರು. ಈ ಬಾರಿ ಇವರಲ್ಲಿ ಥೈಲ್ಯಾಂಡ್ನ ಮಾನ್ಕೌನ್ಸಿ, ನಾಮ್ ಡಾಕ್ ಮೈ ಪರ್ಪಲ್, ರೆಡ್ ಐವರಿ ಎಂಬ ಮೂರು ತಳಿಯ ಮಾವು ಗಿಡಗಳು ಹೊಸ ಫಲಗಳನ್ನು ಬಿಟ್ಟಿದೆ.
ಅದರಲ್ಲಿ ಮಾನ್ಕೌನ್ಸಿ ಮಾವು ಹಣ್ಣಾಗಿದ್ದು, ಒಂದು ಮಾವು ಅರ್ಧ ಕೆಜಿ ತೂಗುತ್ತಿದೆ. ಅದ್ಭುತವಾದ ಸವಿಯನ್ನು ಹೊಂದಿರುವ ಇದರ ಸಿಹಿಯನ್ನು ರೆಫ್ರೆಕ್ಟೋಮೀಟರ್ಗೆ ಹಾಕಿ ಪರಿಶೀಲಿಸಿದಾಗ 21ಟಿಎಸ್ಎಸ್ ಸಿಹಿಯನ್ನು ಗುರುತಿಸಿದೆ. ಅಂಗೈಗಿಂತಲೂ ಉದ್ದವಿರುವ ಈ ಮಾವು ಏಳು ಸೆಂಟಿಮೀಟರ್ ಉದ್ದ, 456ಗ್ರಾಂ ತೂಕ ಹೊಂದಿದೆ. 2019ರಲ್ಲಿ ಈ ಮಾನ್ಕೌನ್ಸಿ ತಳಿಯನ್ನು ತಂದು ಅಭಿವೃದ್ಧಿಪಡಿಸಿದ್ದು, ಈ ಬಾರಿ ಮರ ಫಲಬಿಟ್ಟಿದೆ. ಹೊಸ ಫಲ ಮತ್ತು ಗ್ರೋಬ್ಯಾಗ್ನಲ್ಲಿರುವುದರಿಂದ ಮರದಲ್ಲಿ ಬರೀ ಮೂರು ಮಾವುಗಳು ಮಾತ್ರ ಬಿಟ್ಟಿದೆ.
ಅದೇ ರೀತಿ ನಾಮ್ ಡಾಕ್ ಮೈ ಪರ್ಪಲ್, ರೆಡ್ ಐವರಿ ಮಾವಿನ ಮರಗಳು ಹಣ್ಣು ಬಿಟ್ಟಿದೆ. ಇವುಗಳೂ ಗಾತ್ರದಲ್ಲಿ ದೊಡ್ಡದಿದ್ದು, ಇನ್ನಷ್ಟೇ ಹಣ್ಣಾಗಬೇಕಿದೆ. ಈ ಮಾವುಗಳ ಸವಿಯೂ ಉತ್ತಮವಾಗಿರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಸರ್ವೇಶ್ ರಾವ್.
ಅಂತಾರಾಷ್ಟ್ರೀಯ ಗಾಳಿಪಟ ಹಾರಾಟಗಾರರಾದ ಸರ್ವೇಶ್ ರಾವ್ ವಿದೇಶ ಪ್ರವಾಸದಲ್ಲಿರುವಾಗ ಅಲ್ಲಿನ ನರ್ಸರಿಗಳಿಗೆ ಭೇಟಿ ನೀಡುತ್ತಾರೆ. ಅಲ್ಲಿಂದ ಗಿಡಗಳ ತುಂಡುಗಳನ್ನು ತಂದು ಕಸಿಕಟ್ಟಿ ಗ್ರೋಬ್ಯಾಗ್ನಲ್ಲಿ ಬೆಳೆಸುತ್ತಾರೆ. ಬಳಿಕ ಬೇಕಾದವರಿಗೆ ಕಸಿ ಕಟ್ಟಿ ಗಿಡಗಳನ್ನು ನೀಡುತ್ತಾರೆ.
Dakshina Kannada,Karnataka
April 29, 2025 5:42 PM IST