Old Trafford Test: 89 ವರ್ಷಗಳ ಶಾಪ ವಿಮೋಚನೆ ಮಾಡಿಕೊಳ್ಳುತ್ತಾ ಭಾರತ! ಆಂಗ್ಲರ ಭದ್ರಕೋಟೆಯಲ್ಲಿ ಗಿಲ್ ಪಡೆಗೆ ಅಗ್ನಿ ಪರೀಕ್ಷೆ

Old Trafford Test: 89 ವರ್ಷಗಳ ಶಾಪ ವಿಮೋಚನೆ ಮಾಡಿಕೊಳ್ಳುತ್ತಾ ಭಾರತ! ಆಂಗ್ಲರ ಭದ್ರಕೋಟೆಯಲ್ಲಿ ಗಿಲ್ ಪಡೆಗೆ ಅಗ್ನಿ ಪರೀಕ್ಷೆ

Last Updated:

ಬರ್ಮಿಂಗ್​ಹ್ಯಾಮ್​​ನಲ್ಲೂ ಇದೇ ಮೊದಲ ಬಾರಿಗೆ ಗೆಲುವು ಸಾಧಿಸಿದ್ದ ಭಾರತ ಇದೀಗ  ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಈ ಶಾಪವನ್ನು ಮುರಿಯಲು ಮತ್ತು ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ.

ಭಾರತ ತಂಡಭಾರತ ತಂಡ
ಭಾರತ ತಂಡ

ಭಾರತೀಯ ಕ್ರಿಕೆಟ್ ತಂಡವು (Team India) ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ (Manchester Old Trafford) ಕ್ರೀಡಾಂಗಣದಲ್ಲಿ ಜುಲೈ 23, 2025 ರಿಂದ ತಯಾರಿ ನಡೆಸುತ್ತಿದೆ. ಈ ಪಂದ್ಯದ ಭಾರತಕ್ಕೆ ಐತಿಹಾಸಿಕ ಪಂದ್ಯವಾಗಲಿದೆ. ಈ ಮೈದಾನದಲ್ಲಿ ಟೀಮ್ ಇಂಡಿಯಾ ಕಳೆದ 89 ವರ್ಷಗಳಿಂದ ಒಂದೆ ಒಂದು ಗೆಲುವು ಸಾಧಿಸಿಲ್ಲ. ಹಾಗಾಗಿ ಬರ್ಮಿಂಗ್​​ಹ್ಯಾಮ್​​ನಂತೆ ಇಲ್ಲೂ ಗೆದ್ದು ಇತಿಹಾಸ ಸೃಷ್ಟಿಸಲು ಯತ್ನಿಸಲಿದೆ. ಈ ಸರಣಿಯಲ್ಲಿ ಭಾರತವು 1-2 ರಿಂದ ಹಿಂದೆ ಇದ್ದು, ಈ ಪಂದ್ಯವು ಸರಣಿಯನ್ನು ಸಮಗೊಳಿಸಲು ಅಥವಾ ಕನಿಷ್ಠ ಡ್ರಾ ಮಾಡಲು ಬಹಳ ಮುಖ್ಯವಾಗಿದೆ.

ಓಲ್ಡ್ ಟ್ರಾಫರ್ಡ್‌ನಲ್ಲಿ ಭಾರತದ ಇತಿಹಾಸ

ಭಾರತವು ಓಲ್ಡ್ ಟ್ರಾಫರ್ಡ್‌ನಲ್ಲಿ 1936 ರಿಂದ ಒಟ್ಟು 9 ಟೆಸ್ಟ್ ಪಂದ್ಯಗಳನ್ನು ಆಡಿದೆ, ಆದರೆ ಒಂದೂ ಪಂದ್ಯದಲ್ಲಿ ಗೆಲುವು ಸಾಧಿಸಿಲ್ಲ. ಈ 9 ಪಂದ್ಯಗಳಲ್ಲಿ 4 ರಲ್ಲಿ ಸೋಲು ಕಂಡಿದ್ದರೆ, 5 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ. ಈ ಕಾರಣದಿಂದ ಓಲ್ಡ್ ಟ್ರಾಫರ್ಡ್‌ನಲ್ಲಿ ಶಾಪ ವಿಮೋಚನೆಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಬರ್ಮಿಂಗ್​ಹ್ಯಾಮ್​​ನಲ್ಲೂ ಇದೇ ಮೊದಲ ಬಾರಿಗೆ ಗೆಲುವು ಸಾಧಿಸಿದ್ದ ಭಾರತ ಇದೀಗ  ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಈ ಶಾಪವನ್ನು ಮುರಿಯಲು ಮತ್ತು ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಭಾರತದ ಆಟಗಾರರಾದ ಸೈಯದ್ ಮುಷ್ತಾಕ್ ಅಲಿ, ವಿಜಯ್ ಮರ್ಚೆಂಟ್, ಅಬ್ಬಾಸ್ ಅಲಿ ಬೇಗ್, ಪಾಲಿ ಉಮ್ರಿಗರ್, ಸುನಿಲ್ ಗವಾಸ್ಕರ್, ಸಂದೀಪ್ ಪಾಟೀಲ್, ಮೊಹಮ್ಮದ್ ಅಜರುದ್ದೀನ್, ಮತ್ತು ಸಚಿನ್ ತೆಂಡೂಲ್ಕರ್ ಈ ಮೈದಾನದಲ್ಲಿ ಶತಕಗಳನ್ನು ಗಳಿಸಿದ್ದಾರೆ, ಆದರೆ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಿಲ್ಲ. ಅಲ್ಲದೆ 35 ವರ್ಷಗಳಿಂದ ಈ ಮೈದಾನದಲ್ಲಿ ಯಾವೊಬ್ಬ ಭಾರತೀಯ ಆಟಗಾರ ಶಕತವನ್ನೂ ಸಿಡಿಸಿಲ್ಲ. ಈ ಪಂದ್ಯದಲ್ಲಿ ಆ ಮೈಲುಗಲ್ಲು ಕೂಡ ಸ್ಥಾಪನೆಯಾಗಬಹುದು.

ಇಂಗ್ಲೆಂಡ್ ದಾಖಲೆ

ಈ ಮೈದಾನದಲ್ಲಿ ಇಂಗ್ಲೆಂಡ್ ತಂಡ ಇದುವರೆಗೆ 84 ಪಂದ್ಯಗಳನ್ನಾಡಿದ್ದು, ಇದರಲ್ಲಿ 33 ಜಯ ಹಾಗೂ 15 ಸೋಲು ಕಂಡಿದೆ. 2018ರಿಂದ ಈ ಮೈದಾನದಲ್ಲಿ ಸೋಲೇ ಕಂಡಿಲ್ಲ. 15 ಸೋಲುಗಳಲ್ಲಿ ಆಸ್ಟ್ರೆಲಿಯಾ ವಿರುದ್ಧವೇ 8 ಸೋಲು ಕಂಡಿದೆ. ವೆಸ್ಟ್ ಇಂಡೀಸ್ ವಿರುದ್ದ 5, ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನದ ವಿರುದ್ಧ ಒಂದು ಪಂದ್ಯ ಸೋಲು ಕಂಡಿದೆ.

ಸರಣಿಯ ಪ್ರಸ್ತುತ ಸ್ಥಿತಿ

ಈ ಟೆಸ್ಟ್ ಸರಣಿಯಲ್ಲಿ ಭಾರತವು ಮೊದಲ ಪಂದ್ಯ ಲೀಡ್ಸ್‌ನಲ್ಲಿ 5 ವಿಕೆಟ್‌ಗಳಿಂದ ಸೋತಿತು. ಆದರೆ ಎಡ್ಜ್‌ಬಾಸ್ಟನ್‌ನ ಎರಡನೇ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿ ಸರಣಿಯನ್ನು 1-1 ರಿಂದ ಸಮಗೊಳಿಸಿತು. ಆದರೆ, ಲಾರ್ಡ್ಸ್‌ನ ಮೂರನೇ ಟೆಸ್ಟ್‌ನಲ್ಲಿ 22 ರನ್‌ಗಳಿಂದ ರೋಚಕ ಸೋಲು ಕಂಡಿತು, ಇದರಿಂದ ಸರಣಿಯಲ್ಲಿ ಇಂಗ್ಲೆಂಡ್ 2-1 ರಿಂದ ಮುನ್ನಡೆ ಸಾಧಿಸಿದೆ. ಈಗ, ಮ್ಯಾಂಚೆಸ್ಟರ್‌ನ ನಾಲ್ಕನೇ ಟೆಸ್ಟ್‌ನಲ್ಲಿ ಭಾರತವು ಗೆಲುವು ಅಥವಾ ಡ್ರಾ ಸಾಧಿಸದಿದ್ದರೆ, ಸರಣಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ, ಈ ಪಂದ್ಯವು ಭಾರತಕ್ಕೆ ಅತ್ಯಂತ ಮುಖ್ಯವಾಗಿದೆ.

ಓಲ್ಡ್ ಟ್ರಾಫರ್ಡ್‌ನ ಪಿಚ್ ಮತ್ತು ಸವಾಲು

ಓಲ್ಡ್ ಟ್ರಾಫರ್ಡ್‌ನ ಪಿಚ್ ವೇಗದ ಬೌಲರ್‌ಗಳಿಗೆ ಸಹಾಯಕವಾಗಿದೆ ಎಂದು ತಿಳಿದುಬಂದಿದೆ. ಇದರಿಂದ ಇಂಗ್ಲೆಂಡ್‌ನ ವೇಗದ ಬೌಲರ್ ಜೋಫ್ರಾ ಆರ್ಚರ್ ನೇತೃತ್ವದ ತಂಡದ ಬೌಲಿಂಗ್ ದಾಳಿಯು ಭಾರತಕ್ಕೆ ದೊಡ್ಡ ಸವಾಲಾಗಿರಲಿದೆ. ಇಂಗ್ಲೆಂಡ್ ತಂಡವು ಈ ಮೈದಾನದಲ್ಲಿ ಕೊನೆಯ ಬಾರಿಗೆ 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು, ಇದರಿಂದ ಅವರ ಈ ಮೈದಾನದಲ್ಲಿ ಬಲವಾದ ದಾಖಲೆ ಇದೆ. ಭಾರತದ ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ (13 ವಿಕೆಟ್‌ಗಳು) ಮತ್ತು ಮೊಹಮ್ಮದ್ ಸಿರಾಜ್ ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದರೆ ಮೂರನೇ ವೇಗಿಯ ಆಯ್ಕೆ ಕಗ್ಗಂಟಾಗಿದೆ. ಆಕಾಶ್ ದೀಪ್ ಗಾಯಗೊಂಡಿರುವುದರಿಂದ ಅನ್ಸುಲ್ ಕಾಂಬೋಜ್ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಭಾಗ್ಯ ಸಿಗಲಿದೆ.

ತಂಡದ ಸಂಭಾವ್ಯ ಆಯ್ಕೆ ಮತ್ತು ಗಾಯದ ಸಮಸ್ಯೆಗಳು

ಭಾರತ ತಂಡವು ಗಾಯದ ಸಮಸ್ಯೆಗಳಿಂದ ಬಳಲುತ್ತಿದೆ. ರಿಷಭ್ ಪಂತ್‌ರವರು ಲಾರ್ಡ್ಸ್‌ನಲ್ಲಿ ಗಾಯಗೊಂಡಿದ್ದು, ವಿಕೆಟ್‌ಕೀಪಿಂಗ್ ಮಾಡದಿರಲು ಸಾಧ್ಯತೆಯಿದೆ. ಈ ಕಾರಣದಿಂದ ದ್ರುವ್ ಜುರೆಲ್‌ರವರು ವಿಕೆಟ್‌ಕೀಪರ್ ಆಗಿ ಆಡಬಹುದು. ಇದರಿಂದ ತಂಡದ ಆಯ್ಕೆಯಲ್ಲಿ ಕೆಲವು ಬದಲಾವಣೆಗಳಾಗಬಹುದು, ನಿತೀಶ್ ಕುಮಾರ್ ರೆಡ್ಡಿ ಜಾಗದಲ್ಲಿ ಜುರೆಲ್ ಆಡಬಹುದು. ರೆಡ್ಡಿ ಸರಣಿಯಿಂದ ಹೊರಬಿದ್ದಿದ್ದಾರೆ. ಈ ಎರಡು ಬದಲಾವಣೆಯಲ್ಲದೆ, ಫಾರ್ಮ್​ ಸಮಸ್ಯೆ ಎದುರಿಸುತ್ತಿರುವ ಕರುಣ್ ನಾಯರ್​ ಜಾಗಕ್ಕೆ ಸಾಯಿ ಸುದರ್ಶನ್ ಅಥವಾ ಅಭಿಮನ್ಯು ಈಶ್ವರನ್ ಆಯ್ಕೆಯಾಗುವ ಸಾಧ್ಯತೆ ಇದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Old Trafford Test: ಓಲ್ಡ್ ಟ್ರಾಫರ್ಡ್ ಮೈದಾನದ 89 ವರ್ಷಗಳ ಶಾಪ ವಿಮೋಚನೆ ಮಾಡಿಕೊಳ್ಳುತ್ತಾ ಭಾರತ! ಆಂಗ್ಲರ ಭದ್ರಕೋಟೆಯಲ್ಲಿ ಗಿಲ್ ಪಡೆಗೆ ಅಗ್ನಿ ಪರೀಕ್ಷೆ