Railway Update: ಮಂಗಳೂರಿಗೆ ಮರಳಿ ಬರಲಿದೆಯೇ ʼನವಯುಗʼ?! ಕರಾವಳಿ ಜನರ ಒಕ್ಕೊರಲ ಕೂಗಿಗೆ ಒಲಿದೀತೆ ರೈಲು ಭಾಗ್ಯ? | Mangalore Jammu Navayuga Express Restart Demand

Railway Update: ಮಂಗಳೂರಿಗೆ ಮರಳಿ ಬರಲಿದೆಯೇ ʼನವಯುಗʼ?! ಕರಾವಳಿ ಜನರ ಒಕ್ಕೊರಲ ಕೂಗಿಗೆ ಒಲಿದೀತೆ ರೈಲು ಭಾಗ್ಯ? | Mangalore Jammu Navayuga Express Restart Demand

Last Updated:

ಮಂಗಳೂರು-ಜಮ್ಮು ನವಯುಗ ಎಕ್ಸ್‌ಪ್ರೆಸ್ ರೈಲು ಪುನರಾರಂಭಕ್ಕೆ ಜನರ ಒತ್ತಾಯ. 12 ರಾಜ್ಯಗಳ ಮೂಲಕ 3686 ಕಿ.ಮೀ. ಪ್ರಯಾಣ. ಆನ್‌ಲೈನ್ ಸಹಿ ಸಂಗ್ರಹ ಅಭಿಯಾನ ಯಶಸ್ವಿ. ಹೊಸ ಮಾರ್ಗದ ಬೇಡಿಕೆ.

+

ಇಲ್ಲಿ ವಿಡಿಯೋ ನೋಡಿ

ಮಂಗಳೂರು: ಕಡಲನಗರಿಯ ಬಿಸಿಯ ಹೊಡೆತಕ್ಕೆ ಜನ ಜಮ್ಮುಗೆ (Jammu) ಹಾರಲು ಹಕ್ಕೊತ್ತಾಯ ಮಾಡುತ್ತಿದ್ದಾರೆ! ಅರೇ, ಅದು ಹೇಗೆ? ಅಂತೀರಾ ಇಲ್ಲಿದೆ ನೋಡಿ ವಿಶೇಷ ವರದಿ. ಹಿಂದೆ ಮಂಗಳೂರಿಂದ ಜಮ್ಮು ವರೆಗೂ ಒಂದು ರೈಲು (Train) ಓಡುತ್ತಿತ್ತು, ಕೋವಿಡ್ (Covid-19) ಅದಕ್ಕೆ ಸಡನ್ ಬ್ರೇಕ್ ಹಾಕಿದ ಕಾರಣ ಜನ ಈಗ ಮತ್ತೊಮ್ಮೆ ರೈಲನ್ನು ಪುನಃ ಟ್ರ್ಯಾಕ್ ಗೆ ತಗೊಂಡು ಬನ್ನಿ ಎಂದು ಒತ್ತಾಯಿಸುತ್ತಿದ್ದಾರೆ.  ಐದು ವರ್ಷಗಳ ಹಿಂದೆ  ನಿಂತು ಹೋದ, ದೇಶದ ಅತಿ ದೀರ್ಘ ಪ್ರಯಾಣದ ರೈಲುಗಳ ಪೈಕಿ 4 ನೇ ಸ್ಥಾನ ಪಡೆದಿದ್ದ ನವಯುಗ ಎಕ್ಸ್‌ಪ್ರೆಸ್ (Navayuga Express) ರೈಲನ್ನು ಮತ್ತೆ ಮಂಗಳೂರು ಸೆಂಟ್ರಲ್‌ ನಿಂದ ಜಮ್ಮು ಕತ್ರಾಕ್ಕೆ ಪುನರಾರಂಭಿಸಬೇಕೆಂಬ ರೈಲು ಬಳಕೆದಾರರ ಆಗ್ರಹ ಮುಗಿಲು ಮುಟ್ಟಿದೆ.

 ಮತ್ತೆ ಶುರುವಾಗಲಿದೆಯೇ ʼನವಯುಗʼ?

ಈ ಸಂಬಂಧ ಜೂನ್ 6 ರಿಂದ ಜುಲೈ 6 ರವರೆಗೆ ನಡೆಸಲಾದ ಆನ್‌ಲೈನ್ ಸಹಿ ಸಂಗ್ರಹ ಅಭಿಯಾನ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಕರಾವಳಿಯ ಗುರುತರ ಬೇಡಿಕೆಯೊಂದು ಗಟ್ಟಿಯಾಗಿಯೇ ಸ್ಥಾಪಿತವಾಗಿದೆ. ಕೆಲವೇ ದಿನಗಳಲ್ಲಿ ರೈಲ್ವೆ ವಲಯಗಳ ಜಂಟಿ ಸಭೆ ನಡೆಯಲಿದ್ದು, ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಈ ಬಗ್ಗೆ  ಪ್ರಬಲ ಹಕ್ಕೊತ್ತಾಯ ಮಾಡಲಿರುವ ಕಾರಣ ನವಯುಗ ರೈಲಿನ ಬೇಡಿಕೆ ಈಡೇರುವ ಸಾಧ್ಯತೆ ದಟ್ಟವಾಗಿದೆ.

ಕನ್ನಡ ಕರಾವಳಿಯಿಂದ ಉತ್ತರ ಭಾರತಕ್ಕೆ  ಮೊದಲ ರೈಲಿನ ಸಾಧ್ಯತೆ

ಮಂಗಳೂರು – ಜಮ್ಮು ನವಯುಗ ಎಕ್ಸ್ ಪ್ರೆಸ್ ರೈಲು 1990 ರಲ್ಲಿ  ಆರಂಭಗೊಂಡಿತ್ತು. 2015 ರಲ್ಲಿ  ಜಮ್ಮುವಿನ ಕತ್ರ ತನಕ ವಿಸ್ತರಣೆಯಾಯಿತು. ಕೋವಿಡ್ ಸಂದರ್ಭ ಎಲ್ಲ  ರೈಲು ಸೇವೆಗಳು ನಿಂತಿದ್ದು, ಬಳಿಕ ಒಂದೊಂದೇ ಪುನರಾರಂಭಗೊಂಡರೂ ಮಂಗಳೂರು ಸೆಂಟ್ರಲ್- ಕತ್ರಾ ನವಯುಗ ಎಕ್ಸ್ಪ್ರೆಸ್ ಮಾತ್ರ ಆರಂಭಗೊಂಡಿರಲಿಲ್ಲ. ಇದರಿಂದಾಗಿ ಕರಾವಳಿಯಿಂದ ವೈಷ್ಣೋದೇವಿ ಸೇರಿದಂತೆ  ದೇಶದ ಪ್ರಮುಖ ಯಾತ್ರಾಸ್ಥಳಗಳಿಗೆ ಹೋಗುತ್ತಿದ್ದ  ಯಾತ್ರಿಗಳಿಗೆ ದೊಡ್ಡ ನಷ್ಟವಾಗಿದೆ. ಮಂಗಳೂರಿನಿಂದ ಉತ್ತರ ಭಾರತಕ್ಕೆ ಹೋಗುವ ಒಂದೇ ಒಂದು ರೈಲು ಇಲ್ಲದಿರುವ ಕಾರಣ ನವಯುಗ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ಸಿಗುವ ಸಾಧ್ಯತೆ ಹೆಚ್ಚಾಗಿದೆ.

12 ರಾಜ್ಯ ಸುತ್ತಿ ಬರುತ್ತಿದ್ದ ರೈಲು!

12 ರಾಜ್ಯಗಳನ್ನು ಕ್ರಮಿಸುತ್ತಿದ್ದ ಈ  ರೈಲು ಪ್ರತೀ ಸೋಮವಾರ ಸಂಜೆ 5 ಗಂಟೆಗೆ ಮಂಗಳೂರು ಸೆಂಟ್ರಲ್ ನಿಂದ ಹೊರಟು ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ, ಹರಿಯಾಣ, ಪಂಜಾಬ್ ಮೂಲಕ ಜಮ್ಮು ಮತ್ತು ಕಾಶ್ಮೀರದ ಕತ್ರಕ್ಕೆ   ತಲುಪುತ್ತಿತ್ತು. 3686 ಕಿ.ಮಿ.  ಕ್ರಮಿಸಲು  70 ಗಂಟೆ 5 ನಿಮಿಷ ಅವಧಿ ತೆಗೆದುಕೊಳ್ಳುತ್ತಿತ್ತು.

ಮಾರ್ಗ ಬದಲಿಸುವಂತೆಯೂ ಮನವಿ

ಇದನ್ನೂ ಓದಿ: Train Profit: ಮಂಗಳೂರು-ಪುತ್ತೂರು ಪ್ಯಾಸೆಂಜರ್ ರೈಲು ವಿಸ್ತರಣೆ, ಭರ್ಜರಿ ಆದಾಯ ಗಳಿಸಿದ ಈ ನಿಲ್ದಾಣಗಳು!

ಈ ಹಿಂದೆ ಮಂಗಳೂರು ಸೆಂಟ್ರಲ್‌ ನಿಂದ ಕಾಸರಗೋಡು -ಪಾಲಕ್ಕಾಡ್ ಮೂಲಕ ನವಯುಗ ಎಕ್ಸ್ ಪ್ರೆಸ್ ಸಂಚರಿಸುತ್ತಿತ್ತು. ಪ್ರಸ್ತುತ ರೈಲು ಸೇವೆ ಪುನರಾರಂಭಿಸುವ ಸಂದರ್ಭ  ರೂಟ್ ಬದಲಾಯಿಸಬೇಕು. ಮಂಗಳೂರು ಸೆಂಟ್ರಲ್- ಕಬಕ ಪುತ್ತೂರು- ಸುಬ್ರಹ್ಮಣ್ಯ ರೋಡ್-ಹಾಸನ- ಅರಸಿಕೆರೆ- ಹುಬ್ಬಳ್ಳಿ- ಬೆಳಗಾವಿ- ಮೀರಜ್- ಪುಣೆ- ದೆಹಲಿ ಮಾರ್ಗದಲ್ಲಿ  ಓಡಿಸಬೇಕೆಂದು ಒತ್ತಾಯಿಸಿ ಪುತ್ತೂರು- ಸುಬ್ರಹ್ಮಣ್ಯ ರೈಲು ಬಳಕೆದಾರರ ಸಮಿತಿ ವತಿಯಿಂದ ಸಂಸದ ಕ್ಯಾö.ಬ್ರಿಜೇಶ್ ಚೌಟ ಅವರಿಗೆ ಕಳೆದ ಜೂನ್ 12 ರಂದು ಮನವಿ ಸಲ್ಲಿಲಾಗಿದೆ. ಒಟ್ಟಾರೆ ಕಡಲನಗರಿಯ ಜನರಿಗೆ ಹಿಮದೂರಿನ ಪಯಣದ ಭಾಗ್ಯ ಒದಗಿ ಬರಲಿದೆಯೇ ಕಾದು ನೋಡಬೇಕಿದೆ.