Last Updated:
ಸ್ಟಾರ್ ಫ್ರೂಟ್ ಅಥವಾ ಧಾರೆ ಹುಳಿ ಆಗ್ನೇಯ ಏಷ್ಯಾ ಮೂಲದ ಹಣ್ಣು, ಆಯುರ್ವೇದದಲ್ಲಿ ಬಳಸಲಾಗುತ್ತಿದ್ದು, ಜೀರ್ಣಕ್ರಿಯೆ ಹಾಗೂ ದೇಹಕ್ಕೆ ನೀರಿನಾಂಶ ನೀಡುವ ಔಷಧೀಯ ಗುಣಗಳಿದೆ.
ದಕ್ಷಿಣ ಕನ್ನಡ: ಧಾರೆ ಹುಳಿ ಹಣ್ಣು (Star Fruit) ಸಾಮಾನ್ಯವಾಗಿ ಎಲ್ಲಾ ಹವಾಗುಣದಲ್ಲೂ ಬೆಳೆಯುವ ಹಣ್ಣಾಗಿದ್ದು, ಅತ್ಯಂತ ಹೆಚ್ಚು ಔಷಧೀಯ ಗುಣಗಳನ್ನು (Medicinal Value) ಹೊಂದಿರುವ ಹಣ್ಣಾಗಿಯೂ ಇದು ಗುರುತಿಸಲ್ಪಟ್ಟಿದೆ. ಆಯುರ್ವೇದದಲ್ಲಿ ಈ ಹಣ್ಣನ್ನು ಬಳಸಲಾಗುತ್ತಿದ್ದು, ಈ ಹಣ್ಣನ್ನು ಸ್ಟಾರ್‌ಫ್ರೂಟ್ ಎಂದೂ ಕರೆಯಲಾಗುತ್ತದೆ.
ಐದು ಅಥವಾ ಅದಕ್ಕಿಂತ ಹೆಚ್ಚು ಕೋನಗಳನ್ನು ಹೊಂದಿರುವುದರಿಂದ ಇದಕ್ಕೆ ಧಾರೆ ಹಣ್ಣು ಎನ್ನುವ ಹೆಸರು ಬಂದಿದೆ. ಇದನ್ನು ಕರಂಬಳ ಹಣ್ಣು, ನಕ್ಷತ್ರ ಹುಳಿ, ಕಮರದ್ರಾಕ್ಷಿ ಮುಂತಾದ ಹೆಸರುಗಳಿಂದಲೂ ಕರೆಯಲಾಗುತ್ತದೆ. ಇದು ಹುಳಿ-ಸಿಹಿ ಮಿಶ್ರಿತ ರುಚಿಯಾಗಿದ್ದು, ದೇಹಕ್ಕೆ ನೀರಿನಾಂಶ ನೀಡುವುದಲ್ಲದೆ, ಜೀರ್ಣಕ್ರಿಯೆ ಮತ್ತು ಅತಿಸಾರದಂತಹ ಹೊಟ್ಟೆ ನೋವಿಗೆ ಆಯುರ್ವೇದದಲ್ಲಿ ಬಳಸಲಾಗುತ್ತದೆ. ಬೇಸಿಗೆ ಕಾಲದಲ್ಲಿ ಈ ಹಣ್ಣನ್ನು ತಿನ್ನೋದ್ರಿಂದ ದೇಹದಲ್ಲಿ ನೀರಿನ ಅಂಶ ಸಿಗುವಂತಾಗುತ್ತದೆ.
ಆಗ್ನೇಯ ಏಷ್ಯಾ ಮೂಲದ ಈ ಹುಳಿಮಿಶ್ರಿತ ಸಿಹಿ ಹಣ್ಣನ್ನು ಕರಾವಳಿ ಭಾಗದಲ್ಲೂ ಬೆಳೆಯಲಾಗುತ್ತಿದೆ. ಮಾರುಕಟ್ಟೆಯ ದೃಷ್ಟಿಯಿಂದ ಈ ಹಣ್ಣನ್ನು ಬೆಳೆಯಲಾಗುತ್ತಿಲ್ಲವಾದರೂ, ಅಗತ್ಯದ ಸಂದರ್ಭದಲ್ಲಿ ಮಾತ್ರ ಈ ಹಣ್ಣನ್ನು ಬಳಸಲಾಗುತ್ತಿದೆ.
ಕ್ಯಾರಂಬೋಲಾ ಅಥವಾ ಸ್ಟಾರ್ ಫ್ರೂಟ್ ಎಂಬ ಹುಳಿಮಿಶ್ರಿತ ಸಿಹಿ ಹಣ್ಣು ಬಾದಾಮಿಯ ಆಕಾರದಲ್ಲಿರುವ ಅಡ್ಡಲಾಗಿ ಕತ್ತರಿಸಿದರೆ ಐದು ಬಾಹುಗಳ ಅಥವಾ ಆರು ಬಾಹುಗಳ ನಕ್ಷತ್ರದಂತೆ ಕಾಣುವ ಹಣ್ಣಾಗಿದೆ. ಈ ಕಾರಣಕ್ಕೇ ಇದನ್ನು ಸ್ಟಾರ್ ಫ್ರೂಟ್ ಎಂಬ ಅನ್ವರ್ಥನಾಮದಿಂದಲೇ ಗುರುತಿಸಲಾಗುತ್ತದೆ.
ನಾನಾ ಭಾಷೆಯಲ್ಲಿ ನಾನಾ ಹೆಸರು
ಕನ್ನಡದಲ್ಲಿ ಈ ಹಣ್ಣಿಗೆ ಕಂಬರ ಹಣ್ಣು ಅಥವಾ ಧಾರೆ ಹುಳಿ ಎಂದೂ ಕರೆಯಲಾಗುತ್ತದೆ. ಕ್ಯಾರಂಬೋಲಾ ಎಂಬ ಪದವೂ ಈ ಹಣ್ಣಿಗಿದೆ. ಕರ್ಮರಂಗ ಎಂಬ ಪದ ಸಂಸ್ಕೃತದಿಂದ ಬಂದಿದೆ. ನಕ್ಷತ್ರದ ಹಣ್ಣನ್ನು ಮಲಯಾಳಂ ಭಾಷೆಯಲ್ಲಿ ಕ್ಯಾರಂಬೋಲಾ ಎಂದು ಕರೆಯಲಾಗುತ್ತಿತ್ತು ಮತ್ತು ಪೋರ್ಚುಗೀಸರು ಅದನ್ನು ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾಕ್ಕೆ ಕರೆದೊಯ್ಯುವಾಗ ಅವರು ಇದೇ ಮೂಲ ಹೆಸರನ್ನೇ ಮುಂದುವರೆಸಿಕೊಂಡು ಜಗತ್ತಿಗೆ ಪರಿಚಯಿಸಿದರು ಎನ್ನುವುದು ಈ ಹಣ್ಣಿನ ಹೆಸರಿನ ಹಿಂದಿರುವ ಇತಿಹಾಸವೂ ಆಗಿದೆ.
Dakshina Kannada,Karnataka