ಮನೆಮಂದಿಗೆಲ್ಲಾ ಸಂಭ್ರಮ!
ಮನೆ ಹುಡುಗಿ ದೊಡ್ಡವಳಾದಳೆಂದು ಮನೆಯವರೆಲ್ಲಾ ಸಂಭ್ರಮಿಸುವುದು, ಮದುಮಗಳಾಗಿ ಮದುವೆ ಮಾಡಿಸಿ ಊರವರನ್ನೆಲ್ಲಾ ಕರೆದು ಪುಟ್ಟ ಮಗಳಿಗೆ ಸೀರೆ ಉಡಿಸಿ ಹರ್ಷ ಪಡೋದು ತುಳುನಾಡಿನ ವಾಡಿಕೆ. ಕುಡಿಯಲು ಎಳನೀರು ಕೊಟ್ಟು ತಂಪು ಮಾಡಿ, ಪ್ರೀತಿಪಾತ್ರರಿಗೆ ಸಿಹಿತಿಂಡಿ ನೀಡಿ ಬಾಯಿ ಸಿಹಿಮಾಡಿ, ಮತ್ತೆ ಅರಿಶಿನ, ಕುಂಕುಮ, ತಲೆಗೆ ತೆಂಗಿನ ಎಣ್ಣೆ , ಸ್ನಾನದ ನೀರಿಗೆ ಹಲಸಿನ ಎಲೆ, ಮಾವಿನ ಎಲೆ ಹಾಕಿ ಸ್ನಾನ ಮಾಡಿಸಿ, ಹೊಸ ಕಾಜಿ, ಹೊಸ ಬಟ್ಟೆ ಹಾಕಿಸಿ ಮದುಮಗಳಾಗಿ ಮಾಡುವುದೆಂದರೆ ಮನೆಮಂದಿಗೆಲ್ಲ ಅದೇನೋ ಖುಷಿಯೋ ಖುಷಿ. ಮನೆ ಹುಡುಗಿ ದೊಡ್ಡವಳಾದಳು ಅಂದರೆ ಸೃಷ್ಟಿಸುವ ಕಾರ್ಯಕ್ಕೆ ಅನುವಾದಳು ಎಂಬರ್ಥ. ಅದೇ ಖುಷಿಯನ್ನು ಪ್ರಕೃತಿಯಾದ ಭೂಮಾತೆಯಲ್ಲೂ ನೋಡುವಂತಹ ತುಳುವರ ವಿಶೇಷ ಆಚರಣೆಯೇ ಕೆಡ್ಡಸ.
ಕೆಡ್ಡಸ ಆಚರಣೆ
ವರ್ಷದಲ್ಲೊಮ್ಮೆ ಭೂಮಿಯು ಮುಟ್ಟಾಗುತ್ತಾಳೆ ಎಂಬ ಪ್ರತೀತಿ ತುಳುವರದ್ದಾಗಿದ್ದು, ಜಗದಲ್ಲಾಗುವ ಹಗಲು – ರಾತ್ರಿ, ಋತು ಬಿಸಿಲು, ಮಳೆ, ಚಳಿ, ಹಾಗೆಯೇ ಹುಣ್ಣಿಮೆ – ಅಮಾವಾಸ್ಯೆಗಳು ನಮ್ಮ ಬಾಹ್ಯ ಅನುಭವಕ್ಕೆ ಬರುವಂತಹುದು. ಆದರೆ ಸಂಕ್ರಮಣ, ಉತ್ತರಾಯಣಗಳು ನಮ್ಮ ಯೋಚನೆಗೆ ನಿಲುಕದ್ದು. ಅದೇ ಪ್ರಕೃತಿಯ ಋತುಚಕ್ರ. ಈ ವ್ಯತ್ಯಯಗಳ ಕಾಲವನ್ನೇ ತುಳುವರು ಒಂದೊಂದು ಆಚರಣೆಯ ರೂಪದಲ್ಲಿ ಆರಾಧಿಸುತ್ತಿರುವುದು. ಕೆಡ್ಡಸ ಆಚರಣೆಯ ಸಂದರ್ಭದಲ್ಲಿ ಮರಗಳಲ್ಲಿ ಹೂ ಬಿಡುವುದು ಸೇರಿದಂತೆ ಪ್ರಕೃತಿಯಲ್ಲಿ ವಿಶೇಷ ಬದಲಾವಣೆ ಕಂಡು ಬರುತ್ತದೆ.
ಇದನ್ನೂ ಓದಿ: Job Fair: ಚಿಕ್ಕಮಗಳೂರಿನಲ್ಲಿ ಮಿನಿ ಉದ್ಯೋಗ ಮೇಳ- ಆಸಕ್ತರು ಭಾಗವಹಿಸಿ
ಕೆಡ್ಡಸ ಅಂದ್ರೇನು?
ಕೆಡ್ಡಸ ಅಂದರೆ ಕನ್ನಡದಲ್ಲಿ ನೆಲ ಅಗೆಯುವುದು ನಿಷೇಧ ಎನ್ನುವ ಅರ್ಥವನ್ನು ಕೊಡುತ್ತದೆ. ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ದಿವಸ ಇದರ ಆಚರಣೆ ಇರುತ್ತದೆ. ಮಕರ ಮಾಸದ ಇಪ್ಪತ್ತೇಳನೇ ದಿನ ಸಂಜೆಯಿಂದ ಕುಂಭ ಸಂಕ್ರಮಣದವರೆಗೆ ಅಂದರೆ ಫೆಬ್ರವರಿ ತಿಂಗಳಲ್ಲಿ ನಡೆಯುವ ಈ ಮೂರು ದಿನದ ಆಚರಣೆಯಲ್ಲಿ ಮೊದಲ ದಿನ ಮೊದಲ ಕೆಡ್ಡಸ, ಮರುದಿನ ನಡು ಕೆಡ್ಡಸ, ಮೂರನೆ ದಿನ ಕಡೆ ಕೆಡ್ಡಸ ಎಂದು ಆಚರಣೆ ಮಾಡಲಾಗುತ್ತದೆ. ಈ ಸಮಯಕ್ಕೆ ಮಳೆ ಸರಿದು ಫಲ ಗಾಳಿ ಬೀಸುತ್ತಿರುತ್ತದೆ. ಮಾವು, ಗೇರು, ಹಲಸುಗಳೆಲ್ಲ ಎಳೆಕಾಯಿ ಬಿಟ್ಟು ತೆನೆಗೆ ಸಜ್ಜಾಗಿರುತ್ತದೆ. ಈ ಬೆಳವಣಿಗೆ ಭೂತಾಯಿ ಖುತುಮತಿಯಾದ ಕಾರಣಕ್ಕೆ ಎನ್ನುವ ನಂಬಿಕೆಯ ಹಿನ್ನೆಲೆಯಲ್ಲೇ ಕೆಡ್ಡಸ ಎನ್ನುವ ಆಚರಣೆ ತುಳುನಾಡಿನಲ್ಲಿ ನಡೆದು ಬಂದಿದೆ.
ಕೆಡ್ಡಸ ಆಚರಣೆ ಹೇಗೆ ಮಾಡ್ತಾರೆ?
ಪ್ರತಿ ಮನೆಯ ತುಳಸಿ ಕಟ್ಟೆಯ ಎದುರು ಗೋಮಯದಿಂದ ಶುದ್ಧಿಗೊಳಿಸಿ ಕ್ರಮವಾಗಿ ಮಾವಿನ ಎಲೆ, ಹಲಸಿನ ಎಲೆ, ಎಣ್ಣೆ, ಅರಿಶಿನ, ಸ್ನಾನದ ನೀರಿಗೆ ಹಾಕಲು ಸೀಗೆ, ಬಾಗೆ ಹೀಗೆ ಎಲ್ಲವನ್ನೂ ಸಾಲಾಗಿ ಜೋಡಿಸಿ ಇಟ್ಟು ಭೂ ತಾಯಿಯನ್ನು ಸ್ನಾನಕ್ಕೆ ಕಳುಹಿಸುವ ಸಂಪ್ರದಾಯವೂ ಕೆಡ್ಡಸ ಆಚರಣೆಯ ಭಾಗವಾಗಿದೆ. ಮೂರು ದಿನಗಳ ಕಾಲ ಆಚರಿಸುವ ಈ ಕೆಡ್ಡಸ ಆಚರಣೆಯಲ್ಲಿ ಪ್ರಕೃತಿಯನ್ನು ಯಾವುದೇ ಕಾರಣಕ್ಕೂ ನೋಯಿಸುವುದು ನಿಷಿದ್ಧವಾಗಿದೆ. ಈ ದಿನಗಳಲ್ಲಿ ಪ್ರತೀ ಮನೆಯಲ್ಲೂ ವಿಶೇಷ ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಮೂರು ದಿನಗಳಲ್ಲಿ ಭೂಮಿಯನ್ನು ಉಳುವುದು, ಮರ ಕಡಿಯುವುದು ಹೀಗೆ ಪ್ರಕೃತಿಗೆ ಯಾವುದೇ ರೀತಿಯಲ್ಲೂ ಹಾನಿ ಮಾಡಬಾರದು ಎನ್ನುವ ನಂಬಿಕೆಯಿದೆ.
ತುಳುನಾಡಿನ ಹಲವು ಭಾಗಗಳಲ್ಲಿ ಇಂದಿಗೂ ಈ ಅಚರಣೆಯನ್ನು ಚಾಚೂ ತಪ್ಪದೆ ಆಚರಿಸಿಕೊಂಡು ಬರಲಾಗುತ್ತಿದೆ. ಇದೇ ಕಾರಣಕ್ಕಾಗಿ ಕೃಷಿಕರು ಈ ಮೂರು ದಿನ ಕೃಷಿ ಚಟುವಟಿಕೆಯನ್ನು ನಿಲ್ಲಿಸುತ್ತಾರೆ. ಪ್ರಕೃತಿಯ ಮೇಲೆ ಈ ಮೂಲಕವಾದರೂ ಶೋಷಣೆ ನಿಲ್ಲಲಿ ಎನ್ನುವ ಮುಂದಾಲೋಚನೆಯೇ ಈ ಆಚರಣೆಯ ಹಿಂದಿರುವ ಸಾರವೂ ಆಗಿದೆ.
Dakshina Kannada,Karnataka
February 13, 2025 11:39 AM IST