Last Updated:
ಹಿಂದಿನ ಕಂಪ್ಯೂಟರ್ ನ ವಿಂಡೋಸ್ ನಲ್ಲಿ ಕಾಣಸಿಗುತ್ತಿದ್ದ ಪ್ರಕೃತಿಯ ಚಿತ್ರದಂತೆಯೇ ಈ ಕೊಯಿಲಾ ಫಾರ್ಮ್ ಕಾಣುತ್ತದೆ. 704 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ಸರಕಾರದ ಈ ಫಾರ್ಮ್ ನಲ್ಲಿ ಜಾನುವಾರುಗಳ ತಳಿಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
ದಕ್ಷಿಣಕನ್ನಡ: ಪ್ರಕೃತಿಯ ಸೌಂದರ್ಯವನ್ನು(Beauty of Nature) ವರ್ಣಿಸಲು ಪದಗಳೇ ಸಾಕಾಗುವುದಿಲ್ಲ. ಹೌದು ಪ್ರಕೃತಿಯು ರಮಣೀಯ ದೃಶ್ಯಕಾವ್ಯವನ್ನು ಬರೆದ ತಾಣವೊಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಯ ಕೊಯಿಲಾ ಜಾನುವಾರು ಸಂವರ್ಧನಾ ಕೇಂದ್ರದ ಸುಂದರ ದೃಶ್ಯಗಳನ್ನು ಆಸ್ವಾದಿಸಲು ಇಲ್ಲಿಗೆ ನೂರಾರು ಸಂಖ್ಯೆಯ ಪ್ರಕೃತಿ ಪ್ರೇಮಿಗಳು(Nature Lovers) ಭೇಟಿ ನೀಡುತ್ತಾರೆ.
ಗಗನ ಚುಂಬಿಸುವ ಬೆಟ್ಟಗಳ ನಡುವೆ ಹಸಿರ ಹೊದಿಕೆಯಂತೆ ಕಂಗೊಳಿಸುವ ಈ ಪ್ರದೇಶ ಸಾವಿರಾರು ಸಂಖ್ಯೆಯ ಜಾನುವಾರುಗಳಿಗೆ ಮೇವನ್ನು ಉಣಿಸುತ್ತದೆ. ಹಿಂದಿನ ಕಂಪ್ಯೂಟರ್ ನ ವಿಂಡೋಸ್ ನಲ್ಲಿ ಕಾಣಸಿಗುತ್ತಿದ್ದ ಪ್ರಕೃತಿಯ ಚಿತ್ರದಂತೆಯೇ ಈ ಕೊಯಿಲಾ ಫಾರ್ಮ್ ಕಾಣುತ್ತದೆ. 704 ಎಕರೆ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ಸರಕಾರದ ಈ ಫಾರ್ಮ್ ನಲ್ಲಿ ಜಾನುವಾರುಗಳ ತಳಿಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
ಪಶು ಸಂಗೋಪನಾ ಇಲಾಖೆಯ ಅಡಿಗೆ ಬರುವ ಈ ಫಾರ್ಮ್ ನಲ್ಲಿ 700 ರಿಂದ 800 ಸಂಖ್ಯೆಯಲ್ಲಿ ವಿವಿಧ ತಳಿಯ ಜಾನುವಾರುಗಳಿವೆ. ಈ ಎಲ್ಲಾ ಜಾನುವಾರುಗಳನ್ನು ಬೆಳಗ್ಗಿನ ಸಮಯದಲ್ಲಿ ಒಮ್ಮೆಗೆ ಮೇಯಲು ಬಿಡಲಾಗುತ್ತಿದ್ದು, ಮೇಯಲು ಬರುವ ಈ ಜಾನುವಾರುಗಳ ಗುಂಪುಗಳು ಬೆಟ್ಟದ ತುಂಬಾ ಹರಡಿ ಹಸಿರು ಬಣ್ಣದಲ್ಲಿದ್ದ ಪ್ರದೇಶ ಜಾನುವಾರುಗಳ ಕಪ್ಪು,ಕಂದು ಬಣ್ಣಗಳಿಂದ ಆವರಿಸಿದಂತೆ ಕಾಣುತ್ತದೆ.
ಇದನ್ನೂ ಓದಿ: Jobs in Bengaluru: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್‌ನಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನ
ಕೊಯಿಲಾ ಜಾನುವಾರು ಕೇಂದ್ರದ ಈ ಸೌಂದರ್ಯವನ್ನು ಸವಿಯುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಈ ಫಾರ್ಮ್ ಒಳಗೆ ಪ್ರವೇಶಕ್ಕೆ ಅನುಮತಿಯನ್ನು ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ಕೆಲವು ದಿನಗಳಲ್ಲಿ ಈ ಫಾರ್ಮ್ ಒಳಗೆ ಪ್ರಕೃತಿ ಸೌಂದರ್ಯವನ್ನು ನೋಡಲು ಬರುವ ಪ್ರವಾಸಿಗರ ಅತಿಯಾದ ಚೇಷ್ಟೆಗಳಿಂದ ಬೇಸತ್ತ ಜಾನುವಾರು ಸಂವರ್ಧನಾ ಕೇಂದ್ರದ ಅಧಿಕಾರಿಗಳು ಇದೀಗ ಈ ಫಾರ್ಮ್ ಒಳಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಿದ್ಧಾರೆ.
ಜಾನುವಾರುಗಳು ಮೇಯುವ ಈ ಫಾರ್ಮ್ ಮಳೆಗಾಲದ ಸಂದರ್ಭದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರಕೃತಿ ಪ್ರಿಯರನ್ನು ತನ್ನತ್ತ ಆಕರ್ಷಿಸುತ್ತಿತ್ತು. ಆದರೆ ಪ್ರಕೃತಿಯ ಸೌಂದರ್ಯವನ್ನು ಸವಿಯುವ ಬದಲು ಮೋಜು-ಮಸ್ತಿಯಲ್ಲಿ ತೊಡಗಿರುವುದರಿಂದ ಜಾನುವಾರುಗಳ ಜೀವಕ್ಕೂ ಸಂಕಷ್ಟ ಎದುರಾಗುತ್ತಿತ್ತು. ಪ್ರವಾಸಿಗರು ತಂದು ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳನ್ನು ತಿಂದು ಜಾನುವಾರುಗಳು ಸಾವನ್ನಪ್ಪುವ ಘಟನೆಯೂ ನಡೆಯುತ್ತಿತ್ತು. ಈ ಸಂಬಂಧ ಫಾರ್ಮ್‌ನ ಸುತ್ತ 10 ಕಡೆಗಳಲ್ಲಿ ಬೋರ್ಡ್ ಅಳವಡಿಸಲಾಗಿದ್ದು, ಅಕ್ರಮವಾಗಿ ಫಾರ್ಮ್ ಒಳಗೆ ಪ್ರವೇಶಿಸುವುದು, ಫೋಟೋ ತೆಗೆಯುವುದು ಮಾಡಿದಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.
ಅಲ್ಲದೆ ಫಾರ್ಮ್ ರಸ್ತೆಯ ಪ್ರವೇಶ ದ್ವಾರದಲ್ಲಿ ಸಿ.ಸಿ. ಕ್ಯಾಮೆರಾವನ್ನೂ ಅಳವಡಿಸಲಾಗಿದ್ದು, ರಸ್ತೆಯ ಮೂಲಕ ಸಂಚರಿಸುವ ಪ್ರತಿಯೊಬ್ಬರ ದಾಖಲೆಗಳನ್ನೂ ಪರಿಶೀಲನೆ ನಡೆಸಲು ಪ್ರಾರಂಭಿಸಲಾಗಿದೆ.
Dakshina Kannada,Karnataka
November 23, 2024 11:11 AM IST